ಪಾಲಿಕೆ ಮೀಸಲಿಗೆ ಅಸಮಾಧಾನ ನ್ಯಾಯಾಲಯಕ್ಕೆ ಮೊರೆ-ಚಿಂತನೆ
Team Udayavani, Jun 30, 2018, 10:35 AM IST
ಮಹಾನಗರ: ಮಹಾನಗರ ಪಾಲಿಕೆಯ ಮುಂದಿನ ವಾರ್ಡ್‌ವಾರು ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆಯೇ, ಹಾಲಿ ಸದಸ್ಯರಲ್ಲಿ ಭಾರೀ ಅಸಮಾಧಾನ ಭುಗಿಲೆದ್ದಿದೆ. ಈ ನಡುವೆ ಜಿಲ್ಲಾಧಿಕಾರಿಗಳ ಮೂಲಕ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೆಟ್ಟಿಲೇರಲು ಕೆಲವು ಸದಸ್ಯರು ಚಿಂತಿಸಿದ್ದಾರೆ. ಹಾಲಿ 60 ಸದಸ್ಯರ ಪೈಕಿ ಸುಮಾರು ಅರ್ಧದಷ್ಟು ಸದಸ್ಯರಿಗೆ ಮಾತ್ರ ಮುಂದಿನ ಮೀಸಲಾತಿಯಂತೆ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ದೊರೆಯಲಿದ್ದು, ಉಳಿದರ್ಧ ಕ್ಷೇತ್ರಗಳಲ್ಲಿ ಹೊಸಬರ ಎಂಟ್ರಿ ಆಗುವುದು ಬಹುತೇಕ ಖಚಿತ.
ಈಗ ಪಾಲಿಕೆಯ ಒಟ್ಟು 60 ಸ್ಥಾನಗಳ ಪೈಕಿ ಈಗ ಕಾಂಗ್ರೆಸ್ 35 ಸ್ಥಾನಗಳನ್ನು ಪಡೆದುಕೊಂಡಿದ್ದು, ಈ ಪೈಕಿ ಶೇ.60ರಷ್ಟು ಹಾಲಿ ಸದಸ್ಯರಿಗೆ ಹೊಸ ಮೀಸಲಾತಿಯನ್ವಯ ಸ್ಪರ್ಧೆಗೆ ಅವಕಾಶ ಸಿಗಲಿದೆ. ಉಳಿದ ಶೇ.30ರಷ್ಟು ಸದಸ್ಯರ ಕ್ಷೇತ್ರವು ಹೊಸ ಮೀಸಲಾತಿಯಡಿ ಅದಲು- ಬದಲಾಗಿವೆ. ಆದರೆ, ಬಿಜೆಪಿಯ ಹಾಲಿ 20 ಸದಸ್ಯರ ಪೈಕಿ ಹೊಸ ಮೀಸಲಾತಿಯನ್ವಯ ಕೇವಲ 6-7ಸದಸ್ಯರಿಗೆ ಮಾತ್ರ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು. ಈ ಮೂಲಕ ಬಿಜೆಪಿಯ ಹಾಲಿ ಸುಮಾರು 14ರಷ್ಟು ಸದಸ್ಯರು (ಉಳಿದ ಕ್ಷೇತ್ರ ಹೊರತುಪಡಿಸಿ)ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೇ ಕಳೆದು ಕೊಂಡಿದ್ದಾರೆ. 2013 ಮಾ. 7ರಂದು
ಪಾಲಿಕೆ ಚುನಾವಣೆ ನಡೆದಿದ್ದು, ಮುಂದಿನ ಚುನಾವಣೆ 2019ರ ಮಾರ್ಚ್ ವೇಳೆಗೆ ನಡೆಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಯಾವ ಪಕ್ಷ ಆಡಳಿತದಲ್ಲಿ ಇರುತ್ತದೆಯೋ ಅದೇ ಸೂತ್ರದಂತೆ ಮೀಸಲಾತಿ ಹೊರಡಿಸಲಾಗುತ್ತದೆ ಎಂಬ ಆರೋಪ ಈ ಹಿಂದೆಯೂ ಕೇಳಿಬಂದಿತ್ತು. ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಕೆಲವರು ಆಕ್ಷೇಪಣೆಗಳನ್ನು ಸಲ್ಲಿಸಿದ ಅನಂತರ ಮೀಸಲಾತಿ ಪಟ್ಟಿಯಲ್ಲಿ ಬೆರಳೆಣಿಕೆ ಬದಲಾವಣೆ ಆಗಿತ್ತು. ಆದರೆ, ಇದನ್ನು ಪ್ರಶ್ನಿಸಿ (ಮೇಯರ್ ಸ್ಥಾನದ ಮೀಸಲಾತಿ ಹೊರತುಪಡಿಸಿ) ನ್ಯಾಯಾಲಯಕ್ಕೆ ಯಾರೂ ಹೋಗಿರಲಿಲ್ಲ.
ಪ್ರಮುಖರ ಕ್ಷೇತ್ರ ಬದಲು
ಕಾಂಗ್ರೆಸ್‌ನಿಂದ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಕವಿತಾ ಸನಿಲ್, ನವೀನ್ ಡಿ’ಸೋಜಾ, ದೀಪಕ್ ಪೂಜಾರಿ, ಲ್ಯಾನ್ಸಿ ಲಾಟ್ ಪಿಂಟೋ, ಅಶೋಕ್ ಡಿ.ಕೆ., ಅಬ್ದುಲ್ ರವೂಫ್, ಪುರುಷೋತ್ತಮ ಸೇರಿದಂತೆ ಬಹುತೇಕ ಹಾಲಿ ಸದಸ್ಯರಿರುವ ಕ್ಷೇತ್ರದ ಮೀಸಲಾತಿಯಲ್ಲಿ ಬದಲಾವಣೆಯಾಗಿದೆ.
ಬಿಜೆಪಿಯ ಗಣೇಶ್ ಹೊಸಬೆಟ್ಟು, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ತಿಲಕ್‌ರಾಜ್, ಮಧುಕಿರಣ್, ನವೀನ್‌ಚಂದ್ರ ಸೇರಿದಂತೆ ಇನ್ನೂ ಹಲವರ ಕ್ಷೇತ್ರಗಳು ಕೂಡ ಅದಲು ಬದಲಾಗಿವೆ. ಆದರೆ, ಕ್ಷೇತ್ರ ಬದಲಾದರೂ, ತಮ್ಮ ರಾಜಕೀಯ ಪ್ರಭಾವದಿಂದ ಇತರ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಅಲ್ಲಿ ಹಾಲಿ ಸದಸ್ಯರು ಸ್ಪರ್ಧಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಸಾಧ್ಯವಾಗದಿದ್ದರೆ, ‘ಮಹಿಳಾ ಮೀಸಲಾತಿ’ಯಡಿ ಹಾಲಿ ಕಾರ್ಪೊರೇಟರ್ ಅವರ ಪತ್ನಿಯನ್ನೇ ಸ್ಪರ್ಧಾಕಣಕ್ಕೆ ತರುವ ಸಾಧ್ಯತೆಯೂ ಇದೆ!
ಲೆಕ್ಕಾಚಾರ ಆರಂಭ
ಮೀಸಲಾತಿ ಪ್ರಕಟವಾಗುತ್ತಲೇ ಮನಪಾದಲ್ಲಿ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿದೆ. ಯಾರಿಗೆ ಸ್ಪರ್ಧಿಸುವ ಅವಕಾಶ ಇದೆ ಹಾಗೂ ಇಲ್ಲ. ತಮ್ಮ ವಾರ್ಡ್‌ಗಳಲ್ಲಿ ಈ ಬಾರಿಯ ಮೀಸಲಾತಿಯಂತೆ ಯಾರು ಸ್ಪರ್ಧೆ ನಡೆಸಬಹುದು ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ವಿಶೇಷವಾಗಿ ಈ ಬಾರಿ ಶೇ.50ರಷ್ಟು ಮಹಿಳಾ ಮೀಸಲಾತಿ ಘೋಷಣೆಯಾದ ಕಾರಣ ಎಲ್ಲ ವಾರ್ಡ್‌ಗಳಲ್ಲೂ ಸ್ಪರ್ಧೆಯ ಉತ್ಸಾಹ ಕೆಲವರಲ್ಲಿ ಮೂಡುವಂತಾಗಿದೆ.
ಈ ಮಧ್ಯೆ, ಹಾಲಿ ಸದಸ್ಯರ ಕ್ಷೇತ್ರಕ್ಕೆ ಹೊಸ ಮೀಸಲಾತಿ ಬಂದಿರುವುದರ ಹಿಂದೆ ಯಾರ ‘ಹಸ್ತಕ್ಷೇಪ’ ಇದೆ ಎಂಬುದು ಇದೀಗ ಕುತೂಹಲ ತರಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಇರುವಾಗಲೇ ಮಂಗಳೂರು ಪಾಲಿಕೆಯ ಕಾಂಗ್ರೆಸ್‌ನ ಘಟಾನುಘಟಿ ಕಾರ್ಪೊರೇಟರ್‌ನವರ ಕ್ಷೇತ್ರಗಳೇ ಅವರಿಗೆ ಕೈತಪ್ಪಿ ಹೋಗಲು ಕಾರಣವೇನು ಎಂಬುದು ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಬಿಜೆಪಿಯ ಪ್ರಮುಖ ಕಾರ್ಪೊರೇಟರ್ ನವರು ಕೂಡ ಮೀಸಲಾತಿಯಿಂದ ಕ್ಷೇತ್ರ ಬಿಡುವಂತಾಗಿದೆ.
ಒಟ್ಟು 60 ಸ್ಥಾನ
ಈಗ ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಕಾಂಗ್ರೆಸ್ 35 ಸ್ಥಾನಗಳನ್ನು ಪಡೆದು ಬಹುಮತ ಪಡೆದುಕೊಂಡಿದೆ. ಉಳಿದಂತೆ ಬಿಜೆಪಿ 20, ಜೆಡಿಎಸ್ 2, ಸಿಪಿಎಂ 1, ಪಕ್ಷೇತರ 1, ಎಸ್‌ಡಿಪಿಐ 1 ಸದಸ್ಯರನ್ನು ಹೊಂದಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 38, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 22 ಪಾಲಿಕೆಯ ವಾರ್ಡ್‌ಗಳಿವೆ. ಕಾಂಗ್ರೆಸ್‌ನ ಮಹಾಬಲ ಮಾರ್ಲ (2014-15), ಜೆಸಿಂತಾ ವಿಜಯ ಆಲ್ಫ್ರೆಡ್ (2015 -16), ಕೆ. ಹರಿನಾಥ್ (2016-17), ಕವಿತಾ ಸನಿಲ್ (2017-18) ಹಾಗೂ ಈಗ ಭಾಸ್ಕರ್ ಕೆ. ಮೇಯರ್ ಆಗಿ ಅಧಿಕಾರದಲ್ಲಿದ್ದಾರೆ.
ನ್ಯಾಯಾಲಯದ ಮೆಟ್ಟಿಲೇರಲು ಚಿಂತನೆ
ಸರಕಾರ ರಾಜಕೀಯ ಹಸ್ತಕ್ಷೇಪವಿರಿಸಿಕೊಂಡು ಈ ಬಾರಿ ಪಾಲಿಕೆ ಮೀಸಲಾತಿ ಪ್ರಕಟಿಸಿದಂತಿದೆ. ಇದಕ್ಕೆ ಆಕ್ಷೇಪಗಳನ್ನು ದ. ಕ. ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವುದು. ಬಳಿಕ ನ್ಯಾಯಸಮ್ಮತ ಮೀಸಲಾತಿ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇರಿಸಲಾಗಿದೆ. ಒಂದು ವೇಳೆ ಇದು ನಡೆಯದಿದ್ದರೆ ನಾವು ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ಚಿಂತನೆ ನಡೆಸಿದ್ದೇವೆ.
– ಪ್ರೇಮಾನಂದ ಶೆಟ್ಟಿ,
ಮನಪಾ ವಿಪಕ್ಷ ನಾಯಕರು
ಪಾಲಿಕೆ ಎದುರಿಸಿದ ಚುನಾವಣೆಗಳು
ನಗರಸಭೆಯಿಂದ ನಗರಪಾಲಿಕೆಯಾಗಿ ಮಂಗಳೂರು ವಿಸ್ತಾರಗೊಂಡು ಮೊದಲ ಚುನಾವಣೆ ನಡೆದು 1984ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆ ಬಳಿಕ 1990ರಲ್ಲಿ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಧಿಕಾರ ಪಡೆದಿತ್ತು. 1995ರಿಂದ 1997ರವರೆಗೆ ಮಂಗಳೂರು ಪಾಲಿಕೆ ಆಡಳಿತ ಆಡಳಿತಾಧಿಕಾರಿ ಕೈಯಲ್ಲಿತ್ತು. 1997 ಚುನಾವಣೆಯಲ್ಲಿ ಪೂರ್ಣ ಬಹುಮತ ಯಾರಿಗೂ ಸಿಗದಿದ್ದಾಗ (ಬಿಜೆಪಿ 24, ಜೆಡಿಎಸ್ 6, ಕಾಂಗ್ರೆಸ್ 30) ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾಗಿತ್ತು. 2002ರಲ್ಲಿ ಬಿಜೆಪಿ 12 ಹಾಗೂ ಕಾಂಗ್ರೆಸ್ 40 ಸ್ಥಾನ ಪಡೆದ ಕಾರಣದಿಂದ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆದುಕೊಂಡಿತ್ತು. ಆದರೆ, 2007ರಲ್ಲಿ ಬಿಜೆಪಿ ಇಲ್ಲಿ ಜಯಿಸಿತ್ತು. ಬಿಜೆಪಿಗೆ 35 ಹಾಗೂ ಕಾಂಗ್ರೆಸ್‌ಗೆ 20 ಸ್ಥಾನ ದೊರಕಿತ್ತು. ವಿಪರ್ಯಾಸವೆಂದರೆ, ಈ ಅವಧಿಯ ಕೊನೆಯ ವರ್ಷ ಬಹುಮತವಿದ್ದರೂ ಬಿಜೆಪಿಯ ಲೋಪದಿಂದಾಗಿ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಲಭಿಸಿತ್ತು. ಆದರೆ, 2007ರಲ್ಲಿ ಬಿಜೆಪಿ ಕೈಯಲ್ಲಿದ್ದ ಪಾಲಿಕೆಯನ್ನು 2013ರಲ್ಲಿ ಕಾಂಗ್ರೆಸ್ ತನ್ನ ಕೈವಶ ಮಾಡಿಕೊಂಡಿತ್ತು.
ವಿಶೇಷ ವರದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.