ಜಲಾಂತರ್ಗಾಮಿಯಾಗಿ ದೇಶ ಕಾಯುವ ಕಮಾಂಡರ್
Team Udayavani, Feb 28, 2018, 5:08 PM IST
ಜಲಾಂತರ್ಗಾಮಿ ದಳದ ಸುವರ್ಣ ಮಹೋತ್ಸವದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಮ್ಮುಖ ಸಾಂಸ್ಕೃತಿಕ ಚಟುವಟಿಕೆ ಸಂಯೋಜಿಸಿದ್ದು ಮಧುರ ಕ್ಷಣ ಎನ್ನುತ್ತಾರೆ ಪ್ರಮೋದ್.
ಪುತ್ತೂರು: ಜಲಾಂತರ್ಗಾಮಿ ಆಧುನಿಕ ಜಗತ್ತಿನ ಸೇನಾ ಚಮತ್ಕಾರ. ಸಮುದ್ರದಡಿಯಿಂದಲೇ ನುಗ್ಗಿ, ದುರಾಳಿಗಳಿಂದ ಮಾಹಿತಿ ಕಸಿದು, ಕ್ಷಣಾರ್ಧದಲ್ಲಿ ದಾಳಿ ನಡೆಸಲು ಸಿದ್ಧವಾಗುವ ನೌಕಾದಳವಿದು. ಸ್ವದೇಶಿ ನಿರ್ಮಿತ ಪ್ರಥಮ ಜಲಾಂತರ್ಗಾಮಿ ಐಎನ್‌ಎಸ್ ಅರಿಹಂತ್ ನಿರ್ಮಾಣದಲ್ಲಿ ಕೈಜೋಡಿಸಿ, ಯುದ್ಧಗಳಲ್ಲಿ ಭಾಗಿಯಾದ ಹೆಮ್ಮೆ ಪುತ್ತೂರಿನ ಕಮಾಂಡರ್ ಪ್ರಮೋದ್ ಕುಮಾರ್ ತೆಂಕಿಲ ಅವರದು.
ಪತ್ನಿ, ಮಕ್ಕಳ ಜತೆ ಕಮಾಂಡರ್ ಪ್ರಮೋದ್.
ಐಎನ್‌ಎಸ್ ಅರಿಹಂತ್ ಭಾರತೀಯ ಸೇನೆಗೆ ಸೇರ್ಪಡೆಗೊಂಡದ್ದು 2016ರಲ್ಲಿ. ರಷ್ಯಾದ ಮಾರ್ಗದರ್ಶನ ಪಡೆದು ಭಾರತೀಯ ಸೇನೆ ಹೊಸ ಜಲಾಂತರ್ಗಾಮಿಯನ್ನು ನಿರ್ಮಿಸಿತು. ತಪ್ಪುಗಳನ್ನು ತಿದ್ದುಕೊಂಡು ಪುನರ್‌ನಿರ್ಮಾಣ ಮಾಡಿತು. ಸ್ವತಂತ್ರ ಜಲಾಂತರ್ಗಾಮಿಗಳಿರುವ ಬ್ರಿಟನ್, ಫ್ರಾನ್ಸ್, ಚೀನ, ರಷ್ಯಾ, ಅಮೆರಿಕದ ಸಾಲಿಗೆ 6ನೇ ದೇಶವಾಗಿ ಭಾರತ ಪ್ರವೇಶ ಪಡೆಯಿತು ಎನ್ನುತ್ತಾರೆ, ಪ್ರಮೋದ್. 1998ರಲ್ಲಿ ಶಾರ್ಟ್ ಕಮಿಷನ್ಡ್ ನೇಮಕಗೊಂಡು, ಬಳಿಕ ಪರ್ಮನೆಂಟ್ ಕಮಿಷನ್ ಆಯ್ಕೆ ಮಾಡಿಕೊಂಡರು. ತಮ್ಮ 20 ವರ್ಷಗಳ ಸೇವಾವಧಿಯಲ್ಲಿ ಹಲವು ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.
ಡಾಲ್ಫಿನ್ ಬ್ಯಾಡ್ಜ್
ತಿಂಗಳುಗಟ್ಟಲೇ ಸಮುದ್ರದೊಳಗೆ ಇರಬೇಕು. ಸೀಮಿತ ಗಾಳಿ, ಬೆಳಕು, ಆಹಾರದಲ್ಲಿ ಬದುಕಬೇಕು. ಅಣು ವಿಕಿರಣದ ಅಪಾಯ ಬೇರೆ. ದೇಹದಲ್ಲಿ ವಿಶೇಷ ಶಕ್ತಿ, ಚೈತನ್ಯ ಇದ್ದರೆ ಮಾತ್ರ ಸಾಧ್ಯ. ಸೇನೆಗೆ ಸೇರಿದ ಬಳಿಕ ಒಂದು ವರ್ಷ ವಿಶೇಷ ತರಬೇತಿ, 6 ತಿಂಗಳು ಬೋರ್ಡ್‌ನಲ್ಲಿ ಕೆಲಸ. ಇಂತಹ ಕಠಿನ ಸವಾಲನ್ನು ಜಯಿಸಿ ಡಾಲ್ಫಿನ್ ಬ್ಯಾಡ್ಜ್ ಪಡೆದ ಬೆರಳೆಣಿಕೆಯ ಅಧಿಕಾರಿಗಳ ಪೈಕಿ ಪ್ರಮೋದ್ ಒಬ್ಬರು.
ಕಾರ್ಗಿಲ್ ಯುದ್ಧ
ಸೇನೆಗೆ ಸೇರಿ ವರ್ಷ ಸರಿಯುತ್ತಿತ್ತಷ್ಟೇ. ಕಾರ್ಗಿಲ್ ಯುದ್ಧದ ಸುಳಿವು ರವಾನೆಯಾಯಿತು. ಕ್ಷಣಾರ್ಧದಲ್ಲಿ ನಮ್ಮ ಜಲಾಂತರ್ಗಾಮಿ ಪಡೆ ಶತ್ರು ನೆಲದತ್ತ ದೌಡಾಯಿಸಿತು. ತೀರದಿಂದ ಸ್ವಲ್ಪವೇ ದೂರದಲ್ಲಿ ಸಮುದ್ರದಡಿ ಹೊಂಚು ಹಾಕಿ ಕುಳಿತು ಪಾಕ್ ಸೈನಿಕರ ಚಲನವಲನದ ಮೇಲೆ ಕಣ್ಣಿಟ್ಟಿದ್ದೆವು. ಒಂದು ಆದೇಶ ಸಿಕ್ಕರೆ ಸಾಕಿತ್ತು, ಏನು ಬೇಕಾದರೂ ಮಾಡಲು. 60 ದಿನ ಕಳೆದ ಮೇಲೆ ಕಾರ್ಗಿಲ್ ಯುದ್ಧ ಜಯಿಸಿದ ಸಂದೇಶ ಸಿಕ್ಕಿತು. ನಾವು ಮರಳಿದೆವು. ಆ ದಿನಗಳಲ್ಲಿ ರಾತ್ರಿ ಹೊತ್ತು ಮಾತ್ರ ಸಾಧಾರಣ ಮೇಲೆ ಬರುತ್ತಿದ್ದೆವು. ಹಗಲು ಸಮುದ್ರದ ಆಳದಲ್ಲೇ ಇರಬೇಕಾಗಿತ್ತು. ಶುದ್ಧ ಗಾಳಿ ಸೇವಿಸಲು ರಾತ್ರಿ ಮಾತ್ರ ಅವಕಾಶ. ಮೀನುಗಾರಿಕಾ ದೋಣಿ ಅಥವಾ ಇನ್ನಾವುದೇ ಹಡಗು ಹತ್ತಿರ ಬಾರದಂತೆ ಎಚ್ಚರ ವಹಿಸಬೇಕಾಗಿತ್ತು ಎಂದು ನಿಡುಸುಯ್ದರು ಪ್ರಮೋದ್.
ಪ್ರಮೋದ್ ಬಗ್ಗೆ ಒಂದಿಷ್ಟು
1975 ಜು. 6ರಂದು ಪುತ್ತೂರಿನಲ್ಲಿ ಜನನ. ತಂದೆ ನಿವೃತ್ತ ಶಾಲಾ ಮುಖ್ಯ ಗುರು ಅಣ್ಣಪ್ಪಯ್ಯ. ತಾಯಿ ಬಿಇಒ ಕಚೇರಿಯ ನಿವೃತ್ತ ವ್ಯವಸ್ಥಾಪಕಿ ಎರಟಾಡಿ ಶಾರದಾ. ಎಂ.ಕಾಂ. ಪದವೀಧರೆ ಅನಾರು ಸ್ಮಿತಾ ಪ್ರಮೋದ್ ಪತ್ನಿ. ಅದ್ವಿಕಾ ತೆಂಕಿಲ ಪುತ್ರಿ, ಅಶ್ವಿಕ್ ತೆಂಕಿಲ ಪುತ್ರ. ಉಪನ್ಯಾಸಕ ಕೃಷ್ಣಪ್ರಸಾದ್ ತೆಂಕಿಲ ಅಣ್ಣ. ಪ್ರಮೋದ್ ಅವರು ಪುತ್ತೂರು ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ, ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಕಾಲೇಜು, ಬಳಿಕ 1993-97ರಲ್ಲಿ ಸುಳ್ಯ ಕೆವಿಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. 1998ರಲ್ಲಿ ಸಬ್‌ಲೆಫ್ಟಿನೆಂಟ್ ಆಗಿ ಆಯ್ಕೆ. ಗೋವಾ, ಕೇರಳ ನೌಕಾನೆಲೆಯಲ್ಲಿ ತರಬೇತಿ. ವಿಶಾಖಪಟ್ಟಣದಲ್ಲಿ ಜಲಾಂತರ್ಗಾಮಿ ದಳದ ತರಬೇತಿ. ಜಲಾಂತರ್ಗಾಮಿಯಲ್ಲಿ ಡೆಪ್ಯುಟಿ ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಅಧಿಕಾರಿಯಾಗಿ ಸೇವೆ.
ಪರಮಾಣು ಚಾಲಿತ ಜಲಾಂತರ್ಗಾಮಿ ನಿರ್ಮಾಣ ತಂಡದಲ್ಲಿ ಕೆಲಸ. ವಿಕಿರಣ ಸುರಕ್ಷತಾ ತಜ್ಞತೆ ದೃಢೀಕರಣ ಪತ್ರ. ಪ್ರಸ್ತುತ ವಿಶಾಖಪಟ್ಟಣದ ಜಲಾಂತರ್ಗಾಮಿ ನಿರ್ಮಾಣ/ ನಿರ್ವಹಣ ಘಟಕದ ಕಮಾಂಡಿಂಗ್ ಆಫೀಸರ್. 2012-13ರಲ್ಲಿ ರಕ್ಷಣಾ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹೈಸ್ಕೂಲ್‌ನಲ್ಲಿದ್ದಾಗ ಎನ್‌ಸಿಸಿ ಕೆಡೆಟ್ ಆಗಿದ್ದರು.
ಜಲಾಂತರ್ಗಾಮಿ ಕಾರ್ಯವೈಖರಿ
ಯುದ್ಧದಲ್ಲಿ ವಿರೋಧಿ ಪಾಳಯಕ್ಕೆ ಆಶ್ಚರ್ಯ ಮೂಡಿಸುವುದೇ ಪ್ರಮುಖ. ನಮ್ಮಲ್ಲಿ ದತ್ತಾಂಶಗಳ ಸಂಗ್ರಹ ಹೆಚ್ಚಿದ್ದಷ್ಟು ಸಂಘಟಿತ ದಾಳಿ ನಡೆಸಲು ಅನುಕೂಲ. ಈ ನಿಟ್ಟಿನಲ್ಲಿ ಗೂಢಚರ್ಯೆ ಮಹತ್ವ ಪಡೆಯುತ್ತದೆ. ಕೆಲ ಸಂದರ್ಭ ನಾವೆಲ್ಲಿದ್ದೇವೆ ಎಂದು ನಮ್ಮ ಸೇನೆಗೇ ತಿಳಿದಿರುವುದಿಲ್ಲ. ಜಲಾಂತರ್ಗಾಮಿ ನೀರಿನಡಿಗೆ ಹೋಗಲು ಭಾರ ಬೇಕು. ಇದಕ್ಕಾಗಿಯೇ ನೀರಿನ ಟ್ಯಾಂಕ್ ಇದೆ. ವೇಗವಾಗಿ ಕೆಳ ಹೋದರೆ, ಸಮುದ್ರದೊಳಗಿನ ಭೂಮಿಗೆ ಬಡಿದು ಹಾನಿ ಆಗಬಹುದು. ಇದನ್ನು ನಿಯಂತ್ರಿಸಲು ವೇಗವಾಗಿ ಗಾಳಿಯನ್ನು ಕೆಳ ಬಿಡಲಾಗುತ್ತದೆ. ಗಾಳಿ- ನೀರನ್ನು ಸಮತೋಲನವಾಗಿ ಬಳಸಿಕೊಂಡು, ಜಲಾಂತರ್ಗಾಮಿ ಕೆಲಸ ಮಾಡುತ್ತದೆ.
ಸುಮಾರು 9 ಮೀಟರ್‌ನಷ್ಟು ಸಮುದ್ರದಡಿ ನಿಂತುಕೊಂಡು, ಮೇಲ್ಭಾಗದ ಚಲನವಲನ ಗಮನಿಸಬಹುದು. ಇದಕ್ಕೆ ಸ್ನೊರ್ಟಿಂಗ್ ಎನ್ನುತ್ತಾರೆ. ಒಂದು ಪೈಪ್ ವೀಕ್ಷಣೆಗೆ, ಇನ್ನೊಂದು ಸ್ವತ್ಛ ಗಾಳಿ ಪಡೆದುಕೊಳ್ಳಲು ನೆರವಾಗುತ್ತದೆ. ಅಣು ಶಕ್ತಿಯಿಂದ ಕಾರ್ಯನಿರ್ವಹಿಸುವ ಜಲಾಂತರ್ಗಾಮಿಯಲ್ಲಿ, 2 ಟನ್‌ನ 240 ಬ್ಯಾಟರಿಗಳಿರುತ್ತವೆ.
ನಾವಿಕರ ರಕ್ಷಣೆ
ಶತ್ರು ರಾಷ್ಟ್ರದ ಹಡಗೇ ಆದರೂ ಅಪಾಯಕಾರಿ ಸನ್ನಿವೇಶದಲ್ಲಿ ಜೀವ ರಕ್ಷಣೆ ಸೇನೆಯ ಧರ್ಮ. ಅದು 2015ರ ಜೂನ್. ಫಿಲಿಪ್ಪಿನೋ ಸರಕು ಸಾಗಣೆ ಹಡಗು ಚಂಡಮಾರುತದ ಹೊಡೆತಕ್ಕೆ ನಿಯಂತ್ರಣ ಕಳೆದುಕೊಂಡು ಮುಳುಗತೊಡಗಿತು. ನಮಗೆ ಸಂದೇಶ ಸಿಗುವಾಗ, ನಾವಿದ್ದ ಸಾಮ್ರಾಟ್ ಹಡಗಿನ ಎರಡು ಎಂಜಿನ್‌ಗಳ ಪೈಕಿ ಒಂದು ದುರಸ್ತಿಯಲ್ಲಿತ್ತು. ಕೇವಲ ಒಂದೇ ಎಂಜಿನ್ ಮೂಲಕ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆ. ಇದು ಸವಾಲಿನ ಕೆಲಸ. ಆದರೂ 3 ಹೆಲಿಕಾಪ್ಟರ್‌ಗಳ ಸಹಾಯ ಪಡೆದು, ಮುಳುಗುತ್ತಿದ್ದ ಹಡಗಿನಲ್ಲಿದ್ದ ಎಲ್ಲ 16 ಮಂದಿಯನ್ನು ರಕ್ಷಿಸಿದೆವು ಎಂದು ಪ್ರಮೋದ್ ನೆನಪು ಬಿಚ್ಚಿಟ್ಟರು.
ಒಡನಾಟ ಹೆಚ್ಚಬೇಕು
ನಾನು ಎಸೆಸೆಲ್ಸಿಯಲ್ಲಿದ್ದಾಗ ಕೊಡಗು ಮೂಲದ ಕಮಾಂಡರ್ ಎನ್. ಆರ್. ಪ್ರಕಾಶ್ ಅವರ ಬಳಿ ಅರ್ಧ ಗಂಟೆ ಮಾತನಾಡಿ, ಸೇನೆಯ ಬಗ್ಗೆ ತಿಳಿದುಕೊಂಡೆ. ಸೇನೆಗೆ ಸೇರಲು ಇದೇ ಪ್ರೇರಣೆ ಆಯಿತು. ಸೈನಿಕರಿಗೆ ಸಾಮಾನ್ಯ ಜನರ ಒಡನಾಟವಿಲ್ಲದೆ, ಸೇನೆಯ ಅವಕಾಶಗಳ ಪರಿಚಯ ಇರುವುದಿಲ್ಲ. ಐದು ವರ್ಷಗಳಿಂದ ದಕ್ಷಿಣ ಕನ್ನಡದ ಜನರು ಸೇನೆಯ ದೊಡ್ಡ ಹುದ್ದೆಗಳಲ್ಲಿ ಕಾಣಸಿಗುತ್ತಿದ್ದಾರೆ. ಜನರ ಜತೆ ಹೆಚ್ಚಿನ ಒಡನಾಟದ ಅವಕಾಶ ಸಿಕ್ಕಿದರೆ, ಇನ್ನಷ್ಟು ತಿಳಿವಳಿಕೆ ಮೂಡುತ್ತದೆ ಎನ್ನುತ್ತಾರೆ ಪ್ರಮೋದ್.
ಪುತ್ರಕ ನೌಕಾಪಡೆ ಸೇರುವ ವೇಳೆ ಕೊಂಚ ಆತಂಕಗೊಂಡಿದ್ದೆ. ದಿನ ಸರಿದಂತೆ ಕಳವಳ ದೂರವಾಯಿತು. ವೃತ್ತಿ ಮೇಲಿನ ಪುತ್ರನ ಗೌರವ, ಸ್ಥಾನಮಾನ, ಪಡೆದ ಸವಲತ್ತು, ನಿಸ್ವಾರ್ಥದಿಂದ ದೇಶ ಕಾಯುವ ಹಿರಿಮೆ ನನ್ನಲ್ಲಿ ಈಗ ಧನ್ಯತಾ ಭಾವ ಮೂಡಿಸಿದೆ.
-ಶಾರದಾ(ಪ್ರಮೋದ್ ತಾಯಿ)
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.