ಕೋರಿಯರ್ ಸೇತುವೆ ಬೇಡಿಕೆ ಮುನ್ನೆಲೆಗೆ
ಸಚಿವರಿಂದ ಪೂರಕ ಸ್ಪಂದನೆ
Team Udayavani, May 31, 2022, 10:07 AM IST
ಕಡಬ: ಕುಮಾರಧಾರಾ ನದಿಗೆ ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮ ಹಾಗೂ ಸಂಸದರ ಆದರ್ಶ ಗ್ರಾಮ ಬಳ್ಪವನ್ನು ಸಂಪರ್ಕಿಸುವ ಕೋರಿಯಾರ್‌ನಲ್ಲಿ ಸರ್ವಋತು ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಸೇತುವೆ ಅನುಷ್ಠಾನ ಸಮಿತಿ ರಚಿಸಿಕೊಂಡಿರುವ ಸ್ಥಳೀಯರು ಸಚಿವ ಎಸ್. ಅಂಗಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ಸಲ್ಲಿಸಿದ್ದು, ಇಬ್ಬರೂ ಪೂರಕವಾಗಿ ಸ್ಪಂದಿಸಿದ್ದಾರೆ.
ಈಗಾಗಲೇ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 9 ಕೋಟಿ ರೂ. ಅನುದಾನದಲ್ಲಿ ಸುಮಾರು 9 ಕಿ.ಮೀ. ಉದ್ದದ ಕೋಡಿಂಬಾಳ, ಕೋರಿಯಾರ್, ಕರ್ಮಾಯಿ, ಪಾದೆ ಮಜಲು, ಬ್ರಾಂತಿಕಟ್ಟೆ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾರ್ಯ ನಡೆದಿದ್ದು, ಹೊಳೆಯ ಇನ್ನೊಂದು ಬದಿಯ ಬಳ್ಪ ಕೇನ್ಯ ಭಾಗದ ರಸ್ತೆಯೂ ಅಭಿವೃದ್ಧಿಯಾಗುತ್ತಿದೆ. ಕೋರಿಯಾರ್ ಬಳಿ ಕುಮಾರಧಾರ ಹೊಳೆಯನ್ನು ದಾಟಿ ಕೇನ್ಯ ಹಾಗೂ ಬಳ್ಪ ಗ್ರಾಮವನ್ನು ಸಂಪರ್ಕಿಸುವುದಕ್ಕಾಗಿ ಸೇತುವೆ ನಿರ್ಮಾಣವಾಗಬೇಕೆನ್ನುವುದು ಜನರ ಬೇಡಿಕೆ.
ತಾಲೂಕು ಕೇಂದ್ರಕ್ಕೆ ಸುಲಭ ಸಂಪರ್ಕ
ಸುಳ್ಯ ತಾಲೂಕಿನಿಂದ ಬೇರ್ಪಟ್ಟು ನೂತನ ಕಡಬ ತಾಲೂಕಿಗೆ ಸೇರ್ಪಡೆಯಾಗಿರುವ ಕೇನ್ಯ ಹಾಗೂ ಬಳ್ಪ ಗ್ರಾಮಗಳ ಜನರು ಕೋರಿಯಾರ್ ನಲ್ಲಿ ಸೇತುವೆ ನಿರ್ಮಾಣವಾದರೆ ಸುಲಭವಾಗಿ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸಬಹುದು. ಹೊಳೆಯ ಇನ್ನೊಂದು ಬದಿಯಲ್ಲಿ ಕೇನ್ಯ ಗ್ರಾಮಕ್ಕೆ ಹೊಂದಿ ಕೊಂಡಂತೆ ಐತ್ತೂರು ಗ್ರಾಮದ ವ್ಯಾಪ್ತಿಗೆ ಸೇರಿದ 6 ಮನೆಗಳಿದ್ದು, ಸುಮಾರು 32 ಎಕರೆ ಜಮೀನು ಇದೆ. ಅಲ್ಲಿನವರು ಗ್ರಾ.ಪಂ., ಕಂದಾಯ ಕಚೇರಿ ಕೆಲಸಗಳು ಹಾಗೂ ಪಡಿತರ ಪಡೆಯಲು ಹೊಳೆ ದಾಟಿ ಐತ್ತೂರಿಗೆ ಬರಬೇಕಿದೆ. ಬೇಸಗೆಯ ಕೆಲವು ಸಮಯ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾದಾಗ ತ್ರಾಸಪಟ್ಟು ಹೊಳೆದಾಟಿ ಗ್ರಾಮ ಕೇಂದ್ರಕ್ಕೆ ಬರುವ ಅವರು ಮಳೆಗಾಲದಲ್ಲಿ ಪಂಜ, ಕೋಡಿಂಬಾಳ, ಕಡಬ ಮೂಲಕ ಸುಮಾರು 25 ಕಿ.ಮೀ. ಸುತ್ತುಬಳಸಿ ಐತ್ತೂರು ತಲುಪಬೇಕಾದ ಅನಿವಾರ್ಯತೆ ಇದೆ.
ಕೋರಿಯಾರ್ ಸೇತುವೆ ನಿರ್ಮಾಣವಾದಲ್ಲಿ ಮಡಿಕೇರಿಯಿಂದ ಧರ್ಮಸ್ಥಳಕ್ಕೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಮಡಿಕೇರಿ, ಸಂಪಾಜೆ, ಮರ್ಕಂಜ, ಎಲಿಮಲೆ, ಗುತ್ತಿಗಾರು, ಬಳ್ಪ, ಕೋರಿಯಾರ್, ಮರ್ದಾಳ, ಪೆರಿಯಶಾಂತಿ ಮುಖಾಂತರ ಧರ್ಮಸ್ಥಳ ಸಂಪರ್ಕಿಸಲು ಯಾತ್ರಾರ್ಥಿಗಳಿಗೆ ಸುಮಾರು 45 ಕಿ.ಮೀ. ದೂರ ಕಡಿಮೆಯಾಗಲಿದೆ. ಕೇನ್ಯ, ಬಳ್ಪ, ಏನೆಕಲ್ಲು, ಗುತ್ತಿಗಾರು, ದೊಡ್ಡ ತೋಟ, ಮರ್ಕಂಜ, ಸಂಪಾಜೆ, ಮಡಿಕೇರಿ, 102 ನೆಕ್ಕಿಲಾಡಿ, ಐತ್ತೂರು, ಕುಟ್ರಾಪ್ಪಾಡಿ, ಬಂಟ್ರ, ರೆಂಜಿಲಾಡಿ, ನೂಜಿಬಾಳ್ತಿಲ, ಕೊಣಾಜೆ ಹಾಗೂ ಇಚ್ಲಂಪಾಡಿ ಗ್ರಾಮಗಳ ಸಾವಿರಾರು ಜನರಿಗೆ ಸೇತುವೆ ನಿರ್ಮಾಣವಾದರೆ ಅನುಕೂಲವಾಗಲಿದೆ. ಜನರ ಬೇಡಿಯ ಹಿನ್ನೆಲೆಯಲ್ಲಿ ಸಚಿವ. ಅಂಗಾರ ಅಧಿಕಾರಿಗಳೊಂದಿಗೆ ಚರ್ಚಿಸಿ ದೂರದೃಷ್ಟಿಯ ಯೋಜನೆಯೊಂದನ್ನು ರೂಪಿಸಲು ಚಿಂತನೆ ನಡೆಸಿದ್ದು, ಬಹು ಕೋಟಿ ರೂ. ವೆಚ್ಚದಲ್ಲಿ ನೀರಾವರಿಗಾಗಿ ಅಣೆಕಟ್ಟು ನಿರ್ಮಿಸು ವುದರೊಂದಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸರ್ವಋತು ಸೇತುವೆ ನಿರ್ಮಾಣಕ್ಕೆ ನೀಲ ನಕಾಶೆಯನ್ನು ಸಿದ್ಧಪಡಿಸಿದ್ದಾರೆ.
ಪ್ರಯತ್ನ ನಡೆಯುತ್ತಿದೆ
ಕೋರಿಯಾರ್‌ನಲ್ಲಿ ಕುಮಾರಾಧಾರಾ ನದಿಗೆ ನೀರಾವರಿ ಅಣೆಕಟ್ಟಿನೊಂದಿಗೆ ಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಈ ಬಗ್ಗೆ ಈಗಾಗಲೇ ಜಲ ಸಂಪನ್ಮೂಲ ಸಚಿವ ಮಾಧು ಸ್ವಾಮಿ ಅವರಿಗೆ ಮನವಿ ಮಾಡಲಾಗಿದ್ದು, ಅನುದಾನ ಮಂಜುರಾತಿಗಾಗಿ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ. –ಎಸ್.ಅಂಗಾರ, ಮೀನುಗಾರಿಕೆ, ಬಂದರು ಬಂದರು, ಒಳನಾಡು ಜಲಸಾರಿಗೆ ಸಚಿವರು
ಧರ್ಮಸ್ಥಳ ಕ್ಷೇತ್ರಕ್ಕೆ ಹತ್ತಿರ
ಕೋರಿಯಾರ್‌ನಲ್ಲಿ ಕುಮಾರಧಾರ ನದಿಗೆ ಸೇತುವೆ ನಿರ್ಮಿಸಿದರೆ ಪರಿಸರದ ಕೃಷಿಕರು, ವಿದ್ಯಾರ್ಥಿಗಳಿಗೆ ಅನುಕೂಲ ವಾಗುವುದು ಮಾತ್ರವಲ್ಲದೇ ಮಡಿಕೇರಿಯಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಹತ್ತಿರದ ದಾರಿಯಾಗಲಿದೆ. ನಳಿನ್ ಕುಮಾರ್ ಕಟೀಲು ಹಾಗೂ ಎಸ್.ಅಂಗಾರ ಅವರಿಗೆ ಸ್ಥಳೀಯ ಪ್ರಮುಖರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಪೂರಕ ಸ್ಪಂದನೆ ಲಭಿಸಿದೆ. –ಸರ್ವೋತ್ತಮ ಗೌಡ ಪಂಜೋಡಿ, ಉಪಾಧ್ಯಕ್ಷರು, ಕೋರಿಯಾರ್ ಸೇತುವೆ ಅನುಷ್ಠಾನ ಸಮಿತಿ
– ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.