ಕೋವಿಡ್ 19 ಲಾಕ್‌ಡೌನ್: ಮೂರನೇ ದಿನವೂ ಜಿಲ್ಲೆ ಬಹುತೇಕ ಸ್ತಬ್ಧ
Team Udayavani, Mar 27, 2020, 5:55 AM IST
ಮಂಗಳೂರು/ಮಣಿಪಾಲ: ಕೋವಿಡ್ 19 ಆತಂಕದಿಂದಾಗಿ “ದ.ಕ. ಲಾಕ್‌ಡೌನ್’ ಹಿನ್ನೆಲೆ ಯಲ್ಲಿ ಗುರುವಾರ ಜಿಲ್ಲಾ ದ್ಯಂತ ಜನ ಸಂಚಾರ ವಿರಳವಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರು ತಾಳ್ಮೆ ಯಿಂದ ವರ್ತಿಸುತ್ತಿದ್ದುದು ಕಂಡು ಬಂದಿತು.
ಕೆಲವು ತಾಲೂಕುಗಳಲ್ಲಿ 144 ಸೆಕ್ಷನ್ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗ ಬೇಕಿದೆ. ಹಾಗಾಗಿ ಕೆಲವೆಡೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಜನರನ್ನು ಪೊಲೀಸರು ಬೆದರಿಸಿ ಕಳಿಸಿದರು. ಮಂಗಳೂರು ನಗರವಲ್ಲದೇ, ಗ್ರಾಮೀಣ ಪ್ರದೇಶ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ಬೆಳಗಿನ ಹೊತ್ತು ತರಕಾರಿ ಅಂಗಡಿ, ದಿನಸಿ ಅಂಗಡಿ ಹಾಗೂ ಮೆಡಿಕಲ್ ಶಾಪ್‌ಗ್ಳ ಎದುರು ಸ್ವಲ್ಪ ಜನರು ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಉಳಿದಂತೆ ಜನಸಂಚಾರ ವಿರಳವಾಗಿತ್ತು.
ಮಂಗಳೂರು ವರದಿ
ನಗರದ ಕೆಲವು ದಿನಸಿ ಅಂಗಡಿಗಳಲ್ಲಿ, ಮೆಡಿಕಲ್ ಶಾಪ್‌ಗಳ ಮುಂಭಾಗ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆಲದ ಮೇಲೆ ಗುರುತು ಮಾಡಲಾಗಿತ್ತು. ಈ ಗುರುತು ಮಾಡಿದ್ದಲ್ಲೇ ಸಾರ್ವಜನಿಕರು ಸಾಲಿನಲ್ಲಿ ನಿಂತಿದ್ದರು. ಕೆಲವೇ ಅಂಗಡಿ ಗಳಲ್ಲಿ ಎಂದಿನಂತೆ ನೂಕು ನುಗ್ಗಲು ಕಂಡು ಬಂತು. ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದರೂ ಕೆಲವು ಅಂಗಡಿಗಳಲ್ಲಿ ಅಗತ್ಯ ಕ್ರಮ ಕೈಗೊಂಡಂತೆ ಕಾಣಿಸಲಿಲ್ಲ.
ಬೆಳಗ್ಗೆ 6ರಿಂದ 10ರ ವರೆಗೆ ಸೆಂಟ್ರಲ್ ಮಾರುಕಟ್ಟೆಯಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರಿ ಗಳಿಗೆ ಮಾತ್ರ ದಿನಸಿ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ದೃಶ್ಯ ಕಂಡುಬಂದಿಲ್ಲ. ತರ ಕಾರಿ ಕೊಂಡುಕೊಳ್ಳಲು ವ್ಯಾಪಾರಿಗಳು ಮುಗಿಬೀಳುತ್ತಿದ್ದರು.
ಕೆಲವು ಅಂಗಡಿಗಳಲ್ಲಿ ಅಗತ್ಯ ಸಾಮಗ್ರಿಗಳ ಸಂಗ್ರಹ ಖಾಲಿಯಾಗಿ ಜನರು ತೊಂದರೆ ಅನುಭವಿಸುವಂತಾಯಿತು. ಗೋಧಿ ಹಿಟ್ಟು, ಬೇಳೆ ಕಾಳುಗಳು, ಕೆಲವು ತರಕಾರಿಗಳ ಕೊರತೆ ಇತ್ತು. ಮಧ್ಯಾಹ್ನ 12ರ ವರೆಗೆ ಮಾತ್ರ ಅಗತ್ಯ ಸಾಮಗ್ರಿಗಳ ಅಂಗಡಿಗಳು ತೆರೆದಿರಲು ಅವಕಾಶ ನೀಡಲಾಗಿತ್ತು. ಆ ಬಳಿಕವೂ ತೆರೆದಿದ್ದ ಕೆಲವು ಅಂಗಡಿ ಗಳನ್ನು ಪೊಲೀಸರು ಮುಚ್ಚಿಸಿದರು. ನಗರ ದಲ್ಲಿ ಮಧ್ಯಾಹ್ನದವರೆಗೆ ವಾಹನ ಸಂಚಾರ ಕೊಂಚ ಹೆಚ್ಚಿದ್ದರೆ ಬಳಿಕ ಕಡಿಮೆಯಾಯಿತು. ಪೊಲೀಸ್ ವಾಹನಗಳು ಗಸ್ತು ತಿರುಗುತ್ತಿದ್ದವು.
ಬೆಳಗ್ಗೆ 6.30 ಹೊತ್ತಿಗೆ ಸಾಮಾನ್ಯವಾಗಿ ವಾಕಿಂಗ್ ಹೋಗುವವರು ಹೆಚ್ಚು. ಅದೀಗ ಬದಲಾಗಿದ್ದು, ಬೆಳಗ್ಗೆ 5.30ರಿಂದಲೇ ವಾಹನ-ಜನ ಸಂಚಾರ ಇತ್ತು. ದಿನಪತ್ರಿಕೆ, ಹಾಲು, ದಿನಸಿ ವಸ್ತುಗಳ ಸಹಿತ ಅಗತ್ಯ ವಸ್ತುಗಳ ಮಾರಾಟ ಬೆಳಗ್ಗೆಯಿಂದಲೇ ಆರಂಭವಾಗಿತ್ತು. ಪಾಂಡೇಶ್ವರ,ಆರ್‌ಟಿಒ, ರೈಲು ನಿಲ್ದಾಣ, ಸ್ಟೇಟ್‌ಬ್ಯಾಂಕ್ ಇನ್ನಿತರ ಕಡೆ ನಿರ್ಗತಿಕರಿಗೆ ಕೆಲ ವು ಸಂಘಟನೆಗಳು ಉಚಿತ ಆಹಾರ ವಿತರಿಸಿದವು.
ಔಷಧ ಸಿಂಪಡಣೆ
ಪಾಲಿಕೆಯ ವತಿಯಿಂದ ಎರಡು ಜೆಟ್ಟಿಂಗ್ ಮಶಿನ್ ಮೂಲಕ ಔಷಧವನ್ನು ಕೆಎಸ್ಸಾರ್ಟಿಸಿ ಮತ್ತಿತರ ಪರಿಸರಗಳಲ್ಲಿ ಸಿಂಪಡಿಸಲಾಯಿತು.
400 ಟ್ಯಾಕ್ಸಿಗಳು ಅಲರ್ಟ್
ಮುಂಜಾಗ್ರತೆಯ ದೃಷ್ಟಿಯಿಂದ ಅಗತ್ಯ ಬಿದ್ದರೆ ಬಳಸುವುದಕ್ಕಾಗಿ ದ.ಕ. ಜಿಲ್ಲೆಯಲ್ಲಿ ಓಡಾಟ ನಡೆಸುವ 400 ಟ್ಯಾಕ್ಸಿಗಳ ಮಾಹಿತಿಯನ್ನು ಜಿಲ್ಲಾಡಳಿತ ಕೇಳಿದೆ. ಟ್ಯಾಕ್ಸಿಗಳ ಚಾಲಕರ ದೂರವಾಣಿ ಸಂಖ್ಯೆ ಸಹಿತ ವಿವರಗಳನ್ನು ಸಾರಿಗೆ ಇಲಾಖೆಗೆ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಟ್ಯಾಕ್ಸಿ , ಮ್ಯಾಕ್ಸಿ ಕ್ಲಬ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಕುಂಪಲ “ಉದಯವಾಣಿ’ಗೆ ತಿಳಿಸಿದ್ದಾರೆ.
ಧ್ವನಿವರ್ಧಕ
ಬಳಸಿ ಪ್ರಚಾರ
ಸಾರ್ವಜನಿಕರಲ್ಲಿ ಅರಿವು, ಮುಂಜಾಗ್ರತೆ ಹೆಚ್ಚಿಸುವುದಕ್ಕಾಗಿ ಗುರುವಾರವೂ ಧ್ವನಿವರ್ಧಕ ಬಳಸಿ ಪ್ರಚಾರ ನಡೆಸಲಾಯಿತು. ಕೋವಿಡ್ 19 ವೈರಸ್ ಹರಡುವ ಬಗೆ, ರೋಗ ಲಕ್ಷಣ, ಅವು ಕಂಡುಬಂದರೆ ಏನು ಮಾಡಬೇಕು ಇತ್ಯಾದಿಗಳ ಬಗ್ಗೆ ವಿವರಿಸಲಾಗುತ್ತಿದೆ.
ಗಡಿಭಾಗ: ರಸ್ತೆಗೆ ಮಣ್ಣು ಹಾಕಿ ತಡೆ
ಉಳ್ಳಾಲ: ಕೇರಳ ಗಡಿ ಭಾಗ ಸಂಪರ್ಕಿಸುವ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳದಿಂದ ಬರುವ ಅನೇಕ ಒಳದಾರಿಗಳಿದ್ದು, ಅಲ್ಲಿ ಪೊಲೀಸರಿದ್ದರೂ ಕಣ್ತಪ್ಪಿಸಿ ವಾಹನಗಳು ನಿರಂತರವಾಗಿ ಬರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಪೊಲೀಸರು ತುರ್ತು ಕ್ರಮಗೊಂಡು, ರಸ್ತೆಗೆ ಮಣ್ಣು ಹಾಕಿ ಮೂರು ಒಳರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದಾರೆ.
ನಾಲ್ಕು ದಿನಗಳಿಂದ ಗಡಿಭಾಗ ತಲಪಾಡಿ ಸಹಿತ ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯ ಪೊಲೀಸರು ಒಳರಸ್ತೆಗಳಲ್ಲಿ ಕಾವಲು ಕಾಯುತ್ತಾ, ಕೇರಳದ ವಾಹನ ಗಳನ್ನು ಕರ್ನಾಟಕ ಪ್ರವೇಶಿಸದಂತೆ ತಡೆ ಯೊಡ್ಡುತ್ತಿದ್ದಾರೆ. ಆದರೂ ಕೆಲವು ವಾಹನಗಳು ಹಲವು ಕಾರಣಗಳನ್ನು ನೀಡಿ, ಪೊಲೀಸರ ಕಣ್ತಪ್ಪಿಸಿ ನುಸುಳುವ ಪ್ರಯತ್ನ ಮಾಡುತ್ತಿದೆ. ಇದರಿಂದ ಕೇರಳದ ಪೊಲೀಸರು, ಗ್ರಾಮಸ್ಥರು ರಸ್ತೆಗೇ ಜೇಸಿಬಿ ಮೂಲಕ ಬುಧವಾರ ಬೆಳಗ್ಗೆ ಮಣ್ಣು ಹಾಕಿ ಮುಚ್ಚಿದ್ದಾರೆ. ಮಂಗಳೂರು -ವಿಟ್ಲ ಸಂಪರ್ಕಿಸುವ ರಸ್ತೆ ಮಧ್ಯೆ ಸಿಗುವ ಬಾಕ್ರಬೈಲು ಪಾತೂರು ಭಾಗದಲ್ಲಿ, ಮುಡಿಪು ಹೊಸಂಗಡಿ ಹೋಗುವ ಒಳರಸ್ತೆ ಸುಳ್ಯಮೆಯಲ್ಲಿ ಮತ್ತು ಮುಡಿಪುವಿನಿಂದ ದೈಗೋಳಿಗೆ ಹೋಗುವ ಪೊಯ್ಯತ್ತಬೈಲ್ ರಸ್ತೆಗೆ ಮಣ್ಣು ಹಾಕಿ ಮುಚ್ಚಿದ್ದಾರೆ.
ಕಾಸರಗೋಡಿನಲ್ಲಿ ಕೋವಿಡ್ 19 ಸೋಂಕಿತರ ಪಟ್ಟಿ ಜಾಸ್ತಿಯಾಗುತ್ತಲೇ ಇದ್ದು, ಇದರಿಂದ ಆತಂಕಗೊಂಡು ಗಡಿಭಾಗದ ಜನ ಈ ಕ್ರಮಕೈಗೊಂಡಿದ್ದಾರೆ.
ಕೇರಳ ಗಡಿ ಭಾಗ ಇನ್ನಷ್ಟು ಕಟ್ಟೆಚ್ಚರ
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತಲಪಾಡಿ ರಾಷ್ಟ್ರೀಯ ಹೆದ್ದಾರಿ, ದೇವಿಪುರ, ತಚ್ಛಾಣಿ ಸಹಿತ ವಿವಿಧೆಡೆ ಪೊಲೀಸರು ಕಟ್ಟೆಚ್ಚರ ನಡೆಸುತ್ತಿದ್ದು, ಕೇರಳದಿಂದ ನಡೆದುಕೊಂಡು ಮುಖ್ಯ ರಸ್ತೆಯಿಂದ ತಪ್ಪಿಸಿಕೊಂಡು ರೈಲ್ವೇ ಹಳಿ ಮೂಲಕ ಮಂಗಳೂರಿಗೆ ಆಗಮಿಸುವವರನ್ನು ಪೊಲೀ ಸರು ತಡೆದಿದ್ದು ಕೆಲವೊಂದು ತುರ್ತು ಆವಶ್ಯಕತೆಯಿಂದ ತೆರಳುವ ಜನರಿಗೆ ಮಾತ್ರ ಈ ರಸ್ತೆಯ ಮೂಲಕ ಸಂಚರಿಸಲು ಅವಕಾಶ ಮಾಡಿದ್ದಾರೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಐದು ಕಡೆ ಕಟ್ಟೆಚ್ಚರ ವಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.