ಕೋವಿಡ್ 19 ಹಠಾವೋ: ಜನತಾ ಕರ್ಫ್ಯೂಗೆ ಜನ ಬೆಂಬಲ
Team Udayavani, Mar 23, 2020, 5:15 AM IST
ಕೋವಿಡ್ 19 ವೈರಸ್ ಹರಡುವುದನ್ನು ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ ಹಿನ್ನೆಲೆಯಲ್ಲಿ ರವಿವಾರ ಎಲ್ಲೆಡೆ ಬಂದ್ ವಾತಾವರಣ ಕಂಡು ಬಂತು. ಸಾರ್ವಜನಿಕರು ಮನೆಯಿಂದ ಹೊರಗೆ ಬಾರದೆ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ನೀಡಿದರು. ಪುತ್ತೂರು, ಸುಳ್ಯ, ಕಡಬ ತಾಲೂಕುಗಳ ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಜನಜೀವನ ಸ್ತಬ್ಧವಾಗಿತ್ತು. ವಾಹನಗಳ ಓಡಾಟ ವಿರಳವಾಗಿತ್ತು.ಅಗತ್ಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿದ್ದವು. ಸಂಜೆ ವಿವಿಧೆಡೆ ಚಪ್ಪಾಳೆ ತಟ್ಟುವ, ಗಂಟೆ ಬಾರಿಸುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ಧನ್ಯವಾದ ಅರ್ಪಿಸಲಾಯಿತು.
ಪುತ್ತೂರಿನಲ್ಲಿ “ಸ್ವಯಂ ಬಂದ್’
ಪುತ್ತೂರು : ಕೋವಿಡ್ 19 ವೈರಸ್ ನಿಯಂತ್ರಣ ಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಜನತಾ ಕರ್ಫ್ಯೂವಿಗೆ ತಾಲೂಕಿನಾದ್ಯಂತ ಜನತೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗುವ ಮೂಲಕ ಪುತ್ತೂರು ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಜನಜೀವನ ಸ್ತಬ್ಧಗೊಂಡಿತು.
ದಿನವಿಡೀ ಗಿಜಿಗಿಡುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಅತಿ ವಿರಳ ವಾಹನಗಳ ಸಂಚಾರ ಕಂಡುಬಂತು. ಪುತ್ತೂರು ನಗರವಂತೂ ಸಂಪೂರ್ಣ ಸ್ತಬ್ಧಗೊಂಡು ಹಿಂದೆಂದೂ ಕಂಡಿರದ ಬಂದ್ ಆಚರಣೆಗೆ ಸಾಕ್ಷಿಯಾಯಿತು. ಗ್ರಾಮಾಂತರ ಭಾಗಗಳಲ್ಲೂ ಅಂಗಡಿ ಮುಂಗಟ್ಟುಗಳು ಮುಚ್ಚಿ ಜನರು ದಿನವಿಡೀ ಮನೆಯಲ್ಲಿಯೇ ಕಾಲ ಕಳೆದರು.
ಸ್ವಯಂ ಜಾಗೃತಿ
ಕೋವಿಡ್ 19 ಭೀತಿಯ ಮಧ್ಯೆ ಅನಿವಾರ್ಯ ಕರ್ತವ್ಯದಲ್ಲಿರುವ ಆರೋಗ್ಯ ಇಲಾಖೆ ಸಿಬಂದಿ, ಇಲಾಖೆಗಳ ಅಧಿಕಾರಿಗಳು, ಆಸ್ಪತ್ರೆಯ ವೈದ್ಯರು ಮತ್ತು ಸಿಬಂದಿ, ಪತ್ರಕರ್ತರನ್ನು ಹೊರತುಪಡಿಸಿ ಉಳಿಕೆ ಜನ ಸಮುದಾಯ ಕೊರೊನಾ ಜಾಗೃತಿ ಪ್ರಕ್ರಿಯೆಯ ಸ್ವಯಂ ಕರ್ಫ್ಯೂಗೆ ಒಳಪಟ್ಟು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರು. ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲೂ ಜನ, ವಾಹನಗಳ ಸಂಚಾರ ವಿರಳವಾಗಿತ್ತು.
ಎಲ್ಲವೂ ಬಂದ್
ದೇವಾಲಯಗಳು, ಚರ್ಚ್, ಮಸೀದಿ, ಆಸ್ಪತ್ರೆಗಳು, ಪೆಟ್ರೋಲ್ ಬಂಕ್, ಹೊಟೇಲ್, ಮೆಡಿಕಲ್ ಶಾಪ್‌ಗ್ಳು, ಚಿತ್ರಮಂದಿರ, ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು, ವಸ್ತ್ರ ಮಳಿಗೆಗಳು, ತೆರೆದ ಸಂತೆ ವ್ಯಾಪಾರ, ವಿವಾಹ ಸಭಾ ಮಂಟಪಗಳು, ಸಾರಿಗೆ ವ್ಯವಸ್ಥೆ, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್‌ಗ್ಳು, ಸರಕಾರಿ ಹಾಗೂ ಖಾಸಗಿ ಕಚೇರಿಗಳು ಸಂಪೂರ್ಣ ಬಂದ್ ಆಗಿದ್ದವು.
ಬಸ್ ನಿಲ್ದಾಣ ಖಾಲಿ
ಪುತ್ತೂರಿನ ಬಸ್ ನಿಲ್ದಾಣ ರವಿವಾರ ಸಂಪೂರ್ಣ ಬಂದ್ ಆಗಿತ್ತು. ಅಧಿಕಾರಿಗಳು ಮಾತ್ರ ನಿಲ್ದಾಣದಲ್ಲಿದ್ದರು. ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಪ್ರಯಾಣಿಕರು ಕಂಡುಬರಲಿಲ್ಲ. ಬಸ್ ಸಂಚಾರದ ಮಾಹಿತಿ ಉದ್ಘೋಷದ ಬದಲು ಕೊರೊನಾ ಜಾಗೃತಿ ವಾಣಿ ಮೈಕ್ ಮೂಲಕ ಪ್ರಸಾರವಾಗುತ್ತಿತ್ತು. ಬಸ್‌ಗಳ ಆಗಮನ ಮತ್ತು ನಿರ್ಗಮನವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಶನಿವಾರ ರಾತ್ರಿ ತೆರಳಿದ ಬಸ್ಸುಗಳು ಅಂತಿಮ ಸ್ಟಾಪ್‌ನಲ್ಲಿ ನಿಲುಗಡೆಗೊಂಡು ಸೋಮವಾರ ಬೆಳಗ್ಗಿನಿಂದ ಸಂಚಾರ ಆರಂಭಿಸಲಿವೆ. ಉಳಿದ ಬಸ್ಸುಗಳನ್ನು ಮುಕ್ರಂಪಾಡಿಯ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು.
ಖಾಸಗಿಯೂ ಇಲ್ಲ
ಖಾಸಗಿ ಬಸ್ಸುಗಳು, ಟೂರಿಸ್ಟ್ ವಾಹನಗಳು, ಆಟೋ ರಿಕ್ಷಾಗಳೂ ರವಿವಾರ ಸಂಚಾರ ನಡೆಸಲಿಲ್ಲ. ಆಟೋ ರಿಕ್ಷಾಗಳು ಪುತ್ತೂರು ನಗರದ ಪ್ರಧಾನ ಸಂಚಾರ ವ್ಯವಸ್ಥೆ ಆಗಿದ್ದರೂ ಸಂಘಟನೆಗಳು ನೀಡಿದ ಕರೆ ಹಾಗೂ ಸ್ವಯಂ ಪ್ರೇರಣೆಯಿಂದ ರಸ್ತೆಗೆ ಇಳಿಯಲಿಲ್ಲ.
ಪೊಲೀಸ್ ಇಲ್ಲದ ಬಂದ್!
ಸಾಮಾನ್ಯವಾಗಿ ಕೋಮು ಗಲಭೆ ಅಥವಾ ಪ್ರತಿಭಟನೆಯ ಉದ್ದೇಶದಿಂದ ಬಂದ್ ಆಚರಣೆ ನಡೆಯುವ ಸಂದರ್ಭದಲ್ಲಿ ಜನರು ಇಲ್ಲದಿದ್ದರೂ ಕಾನೂನು ಸುವ್ಯವಸ್ಥೆಗೆ ಶ್ರಮಿಸುವ ಪೊಲೀಸ್ ಪಡೆ ಅಲ್ಲಲ್ಲಿ ಕಾಣಸಿಗುತ್ತಿತ್ತು. ಆದರೆ ರವಿವಾರ ಸ್ವಯಂ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸ್ ಹೆಚ್ಚುವರಿ ಶ್ರಮದ ಆವಶ್ಯಕತೆಯೇ ಕಂಡುಬಂದಿಲ್ಲ. ಪೊಲೀಸ್ ಅಧಿಕಾರಿಗಳು ತಾಲೂಕಿನಾದ್ಯಂತ ತೆರಳಿ ಗಸ್ತು ನಡೆಸಿರುವುದು ಮಾತ್ರ ಕಂಡುಬಂತು.
ಸಂತೆ ವ್ಯಾಪಾರಿಗಳು ಇಲ್ಲ
ರವಿವಾರ ಘಟ್ಟದ ಊರುಗಳ ಸಂತೆ ವ್ಯಾಪಾರಿಗಳು ಆಗಮಿಸಿಲ್ಲ. ಸೋಮವಾರ ಪುತ್ತೂರು ಸಂತೆಯಲ್ಲಿ ವ್ಯಾಪಾರ ನಡೆಸುವವರು ರವಿವಾರವೇ ಆಗಮಿಸುತ್ತಾರೆ. ಆದರೆ ಕಳೆದ ಸೋಮವಾರದಿಂದ ಸಂತೆಯನ್ನು ಸ್ಥಗಿತಗೊಳಿಸಿರುವುದರಿಂದ ಮತ್ತು ಈ ಸೋಮವಾರವೂ ಸಂತೆ ನಡೆಸದಂತೆ ಸೂಚನೆ ಇರುವುದರಿಂದ ರವಿವಾರ ಯಾವುದೇ ಸಂತೆ ವ್ಯಾಪಾರಿಗಳು ಆಗಮಿಸಿಲ್ಲ.
ಖಾಸಗಿ ಆಸ್ಪತ್ರೆಗಳು ಬಂದ್
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸೂಚನೆಯಂತೆ ರವಿವಾರ ತಾಲೂಕಿನಾದ್ಯಂತ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಬಂದ್ ಆಗಿದ್ದವು. ತುರ್ತು ಚಿಕಿತ್ಸೆ ಹಾಗೂ ಒಳರೋಗಿಗಳ ಪರೀಕ್ಷೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೊರ ರೋಗಿಗಳ ವಿಭಾಗಗಳು ಬಂದ್ ಆಗಿದ್ದವು. ಪುತ್ತೂರು ಸರಕಾರಿ ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಅತಿ ವಿರಳವಾಗಿತ್ತು. ತುರ್ತು ಆ್ಯಂಬುಲೆನ್ಸ್ ಸೇವೆ ಇತ್ತು.
ಒಂದು ಬಂಕ್, ಮೆಡಿಕಲ್ ಶಾಪ್
ಇಡೀ ಪುತ್ತೂರು ನಗರದಲ್ಲಿ ರವಿವಾರ ಒಂದು ಪೆಟ್ರೋಲ್ ಬಂಕ್ ಹಾಗೂ ಒಂದು ಮೆಡಿಕಲ್ ಶಾಪ್ ಮಾತ್ರ ತೆರೆದಿದ್ದವು. ಪೆಟ್ರೋಲ್ ಬಂಕ್ ಗ್ರಾಹಕರಿಗೆ ಮುಕ್ತವಾಗಿರದೆ ತುರ್ತು ಸಂದರ್ಭ ಮಾತ್ರ ಬಳಕೆಗೆ ಒದಗುವಂತೆ ಓರ್ವ ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಹಾಲು ಬೇಗ
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಹಾಲಿನ ಡಿಪೋಗಳಲ್ಲಿ ಬೆಳಗ್ಗೆ 7.30ಕ್ಕೆ ಮೊದಲು ಹಾಲು ಪೂರೈಕೆ ಮಾಡುವಂತೆ ಸೂಚಿಸಲಾಗಿತ್ತು. ಹೀಗಾಗಿ, ಹಾಲು ಪೂರೈಕೆ ವಾಹನಗಳು ಬೇಗನೆ ಡಿಪೋಗೆ ಆಗಮಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ಸುಬ್ರಹ್ಮಣ್ಯ: ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ
ಸುಬ್ರಹ್ಮಣ್ಯ: ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಪ್ರಧಾನಿಗಳು ಘೋಷಿಸಿರುವ ಜನತಾ ಕರ್ಫ್ಯೂಗೆ ಸುಬ್ರಹ್ಮಣ್ಯದಲ್ಲಿ ಜನತೆ ಸ್ವಯಂಪ್ರೇರಿತವಾಗಿ ಬೆಂಬಲ ನೀಡಿದ್ದಾರೆ.
ಸುಬ್ರಹ್ಮಣ್ಯ ಪೇಟೆಯಲ್ಲಿ ಸಂಪೂರ್ಣ ಅಂಗಡಿ ಮುಂಗಟ್ಟುಗಳನ್ನು ಮುಚ್ಚ ಲಾಗಿತ್ತು. ಜನರು ಹೊರಗೆ ಬಾರದೆ ಮನೆಯಲ್ಲಿ ಕಾಲ ಕಳೆದರು. ವಾಹನ ಸಂಚರವು ಸ್ಥಗಿತಗೊಂಡಿತ್ತು. ಸರಕಾರಿ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಸುಬ್ರಹ್ಮಣ್ಯದ ಏನೆಕಲ್, ಪಂಜ, ಬಳ್ಪ, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರ, ಬಿಳಿನೆಲೆ, ನೆಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿಯೂ ಜನತಾ ಕರ್ಫ್ಯೂ ಬೆಂಬಲಿಸಿ ಜನತೆ ಹೊರಗೆ ಬಂದಿರಲಿಲ್ಲ.
ಸುಳ್ಯ: ಚಟುವಟಿಕೆ ಸಂಪೂರ್ಣ ಸ್ತಬ್ಧ
ಸುಳ್ಯ : ಕೋವಿಡ್ 19 ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜನತಾ ಕರ್ಫ್ಯೂವಿಗೆ ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ದೊರೆತಿದೆ.
ವಾಹನ, ಜನ ಓಡಾಟವಿಲ್ಲದೆ ಇಡೀ ತಾಲೂಕಿನಲ್ಲಿ ನಿಶ್ಶಬ್ದ ವಾತಾವರಣ ಮನೆ ಮಾಡಿತು. ಈ ತನಕ ಕಂಡು ಕೇಳರಿಯದ ರೀತಿಯಲ್ಲಿ ಜನರು ಸ್ವಯಂ ಸ್ಫೂರ್ತಿಯಿಂದ ಬೆಂಬಲ ವ್ಯಕ್ತಪಡಿಸುವ ಮೂಲಕ ಅಭೂತಪೂರ್ವ ಸ್ಪಂದನೆ ನೀಡಿದರು. ನಗರ ಮತ್ತು ಗ್ರಾಮಾಂತರ ಪ್ರದೇಶ ಸುಮಾರು 14 ತಾಸು ಯಾವುದೇ ಚಟುವಟಿಕೆ ಇಲ್ಲದೆ ಸ್ತಬ್ಧವಾಗಿತ್ತು.
ಮನೆಗಳಲ್ಲಿ ಉಳಿದರು
ಜನರು ಇಡೀ ದಿನ ತಮ್ಮ ವಾಸ ಸ್ಥಳದಿಂದ ಹೊರ ಬರಲಿಲ್ಲ. ಜನಸಂದಣಿ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ಅಂಗಡಿ ಮುಂಗಟ್ಟು ಬಂದ್ ಆಗಿದ್ದವು. ಬೆರಳೆಣಿಕೆಯ ಪೆಟ್ರೋಲ್ ಬಂಕ್‌ಗಳು, ಪತ್ರಿಕಾ ಕಚೇರಿಗಳು ಹೊರತುಪಡಿಸಿ ಉಳಿದೆಲ್ಲವೂ ಕಾರ್ಯ ನಿರ್ವಹಿಸಲಿಲ್ಲ. ಇಡೀ ಸುಳ್ಯ ನಗರ ಜನ, ವಾಹನ ಸಂಚಾರದ ಓಡಾಟ ಇಲ್ಲದೆ ಬೋಳು ಪ್ರದೇಶದಂತೆ ಕಂಡಿತು.
ಹೊಟೇಲ್, ಬಸ್ ಓಡಾಟವಿಲ್ಲ
ನಗರದ ಎಲ್ಲ ಹೊಟೇಲ್‌ಗಳು ಬಂದ್ ಆಗಿದ್ದವು. ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಸದಾ ಜನಜಂಗುಳಿ ತುಂಬಿರುತ್ತಿದ್ದ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ದಾಣಗಳಲ್ಲಿ ಯಾರೊಬ್ಬರು ಇರಲಿಲ್ಲ. ರಿಕ್ಷಾ ಹಾಗೂ ಟೂರಿಸ್ಟ್ ವಾಹನಗಳು ಬಂದ್‌ಗೆ ಬೆಂಬಲ ಸೂಚಿಸಿದವು. ಹೂವಿನ ಮಾರುಕಟ್ಟೆ, ಮೀನು ಮಾರುಕಟ್ಟೆಗಳು ಮುಚ್ಚಿದ್ದವು. ದೇವಾಲಯ, ಮಸೀದಿ, ಚರ್ಚ್‌ಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಎಪಿಎಂಸಿ ಅಂಗಣದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದುಮಾಡಿ, ಫಲಕ ಅಳವಡಿಸಲಾಗಿತ್ತು.
ಜನಸಂದಣಿ ಪ್ರದೇಶಗಳೂ ಖಾಲಿ
ಜನಸಂದಣಿ ಪ್ರದೇಶಗಳೆಲ್ಲ ಬಿಕೋ ಎನ್ನುತ್ತಿದ್ದವು. ಬೆಳ್ಳಾರೆ, ಸುಬ್ರಹ್ಮಣ್ಯ, ಪಂಜ, ಜಾಲೂÕರು, ಗುತ್ತಿಗಾರು, ಸಂಪಾಜೆ, ಅರಂತೋಡು, ಚೊಕ್ಕಾಡಿ, ಕುಕ್ಕುಜಡ್ಕ, ಕಲ್ಲುಗುಂಡಿ ಮೊದಲಾದ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ಆಗಿತ್ತು. ನಗರದ ಪೈಚಾರು, ಹಳೆಗೇಟು, ಜ್ಯೋತಿ ಸರ್ಕಲ್, ಶ್ರೀರಾಮಪೇಟೆ, ರಥಬೀದಿ, ಗಾಂಧಿನಗರ, ಕೆವಿಜಿ ವೃತ್ತಗಳಲ್ಲಿ ಜನ, ವಾಹನ ಓಡಾವೇ ಕಂಡುಬರಲಿಲ್ಲ. ಪ್ರತಿದಿನ ಟ್ರಾಫಿಕ್ ಜಾಮ್ ಆಗುವಷ್ಟರ ಮಟ್ಟಿಗೆ ವಾಹನ ಸಂಚಾರವಿರುತ್ತಿತ್ತು. ರವಿವಾರದ ಚಿತ್ರಣ ತದ್ವಿರುದ್ಧವಾಗಿತ್ತು.
ಕಲ್ಲುಗುಡ್ಡೆ; ತೆರೆದಿದ್ದ ವೈನ್‌ಶಾಪ್; ಆಕ್ರೋಶದ ಬಳಿಕ ಬಂದ್!
ಕಲ್ಲುಗುಡ್ಡೆ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಕಾರ್ಯಾಚರಿಸುತ್ತಿರುವ ವೈನ್‌ಶಾಪ್ ರವಿವಾರ ಸಾರ್ವಜನಿಕರ ಆಕ್ರೋಶದ ಬಳಿಕ ಬಾಗಿಲು ಹಾಕಿತು. ಕೋವಿಡ್ 19 ನಿಯಂತ್ರಣಕ್ಕೆ ರವಿವಾರ ಘೋಷಿಸಲಾಗಿದ್ದ ಜನತಾ ಕರ್ಫ್ಯೂ ನಡುವೆ ಪೇಟೆಯಲ್ಲಿ ಎಲ್ಲ ಅಂಗಡಿಗಳನ್ನು ಮುಚ್ಚಿದ್ದರು, ವೈನ್‌ಶಾಪ್‌ನ್ನು ತೆರೆದು ವ್ಯವಹಾರ ನಡೆಸಲಾಗುತ್ತಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಮುಚ್ಚಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಕಾರ್ಯಪ್ರವೃತ್ತರಾದ ಅಬಕಾರಿ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ ಮೇರೆಗೆ ವೈನ್ ಶಾಪ್ ಬಂದ್ ಮಾಡಲಾಯಿತು ಎನ್ನಲಾಗಿದೆ.
ಚರ್ಚ್‌ಗಳೂ ಬಂದ್!
ಪುತ್ತೂರು: ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಕ್ರೈಸ್ತ ಬಾಂಧವರ ಪ್ರಾರ್ಥನಾ ದಿನವಾದ ರವಿವಾರ ಚರ್ಚ್‌ಗಳನ್ನು ಬಂದ್ ಮಾಡಲಾಗಿತ್ತು. ನಗರದ ಮಾçದೆ ದೇವುಸ್ ಚರ್ಚ್ ಸಹಿತ ತಾಲೂಕಿನ ವಿವಿಧ ಚರ್ಚ್‌ಗಳಲ್ಲಿ ಪ್ರಾರ್ಥನೆ ಇರಲಿಲ್ಲ.
ಗೌರವ ಸೂಚನೆ
ಪುತ್ತೂರು: ಪ್ರಧಾನಿ ಸೂಚನೆಯಂತೆ ರವಿವಾರ ಸ್ವಯಂ ನಿಯಂತ್ರಣಕ್ಕಾಗಿ ಮನೆಗಳಲ್ಲಿ ಉಳಿದುಕೊಂಡು ಬಹುತೇಕ ಜನರು ಸಂಜೆ 5 ನಿಮಿಷಗಳ ಕಾಲ ಚಪ್ಪಾಳೆ ತಟ್ಟುವ ಮೂಲಕ ಕೋವಿಡ್ 19 ನಿಯಂತ್ರಣಕ್ಕಾಗಿ ಶ್ರಮವಹಿಸಿ ಕೆಲಸ ಮಾಡುತ್ತಿರುವವರಿಗೆ ಗೌರವ ಸೂಚಿಸಿದರು.
ಮಾಸ್ಕ್ ವಿತರಣೆ
ಕೋವಿಡ್ 19 ಜಾಗೃತಿಯ ದೃಷ್ಟಿಯಿಂದ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸ್ ಸಿಬಂದಿಗೆ ಮಾಸ್ಕ್ ವಿತರಣೆ ಮಾಡಲಾಗಿದ್ದು, ಠಾಣೆಯಿಂದ ತೆರಳುವಾಗ ಹಾಗೂ ಬರುವಾಗ ಕೈ ಮತ್ತು ಮುಖ ತೊಳೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸರು ರಿಲ್ಯಾಕ್ಸ್
ಸುಳ್ಯ: ಬಂದ್, ಕರ್ಫ್ಯೂ ಸಂದರ್ಭ ಒತ್ತಡದಲ್ಲೇ ಇರುವ ಪೊಲೀಸರು ರವಿವಾರದ ಸ್ವಯಂ ಸ್ಫೂರ್ತಿಯ ಕರ್ಫ್ಯೂ ಕಾರಣ ರಿಲ್ಯಾಕ್ಸ್ ಆಗಿದ್ದರು. ಯಾವುದೇ ಒತ್ತಡ ಇಲ್ಲದೆ ಕರ್ತವ್ಯ ನಿರ್ವಹಿಸಿದರು.
ಕಬಕ: ಕರ್ಫ್ಯೂಗೆ ಕೈಜೋಡಿಸಿದ ಜನತೆ
ಕಬಕ : ಕಬಕ, ಕುಳ, ಕೊಡಿಪ್ಪಾಡಿ ಮುಂತಾದ ಕಡೆಗಳಲ್ಲಿ ರವಿವಾರ ಅಂಗಡಿ – ಮುಂಗಟ್ಟುಗಳನ್ನು ಬಂದ್ ಮಾಡಿ, ಜನತಾ ಕರ್ಫ್ಯೂಗೆ ಜನರು ಬೆಂಬಲ ನೀಡಿದರು. ಕಬಕ ಮಸೀದಿ ಹಿಂದೆ ನಿಗದಿಯಾಗಿದ್ದ ಮದುವೆಯನ್ನೂ ಮುಂದೂಡಲಾಯಿತು. ಬಂದ್ ಅವಧಿಯಲ್ಲೂ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಮಿತ್ತೂರಿನ ಮನೆಯೊಂದರಲ್ಲಿ ಶೇಂದಿ ಹಾಗೂ ಮದ್ಯ ಸಿಗುತ್ತಿತ್ತೆಂಬ ಸುದ್ದಿ ಹರಡಿತ್ತು. ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ಮಹಿಳೆಯೊಬ್ಬರು ನಿಧನ ಹೊಂದಿದ್ದು, ಅಲ್ಲಿಯೂ ಬಹಳ ಕಡಿಮೆ ಪ್ರಮಾಣದಲ್ಲಿ ಜನ ಸೇರಿದ್ದರು. ಪಾಟ್ರಕೋಡಿಯಲ್ಲಿ ಬಂದ್ ವೇಳೆಯೂ ಕೆಲವು ಅಂಗಡಿಗಳು ತೆರೆದಿದ್ದವು.
ಜನಸಂಚಾರವಿಲ್ಲ; ಅಂಗಡಿ-ಮುಂಗಟ್ಟುಗಳೂ ಬಂದ್
ಕಡಬ : ಕೋವಿಡ್ 19 ವೈರಸ್ ಹರಡುವುದನ್ನು ನಿಯಂತ್ರಿಸಲು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂ ಕರೆಗೆ ಕಡಬ ಭಾಗದಲ್ಲಿಯೂ ಅಭೂತಪೂರ್ವ ಜನಸ್ಪಂದನೆ ದೊರೆತಿದೆ.
ಬೆಳಗ್ಗೆಯಿಂದಲೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಯಾವುದೇ ಅಂಗಡಿಗಳು ತೆರೆಯಲಿಲ್ಲ, ಮೆಡಿಕಲ್ ಶಾಪ್‌ಗ್ಳೂ ಬಂದ್ ಆಗಿರುವುದು ವಿಶೇಷವಾಗಿತ್ತು, ಪೆಟ್ರೋಲ್ ಬಂಕ್‌ಗಳಲ್ಲಿ ತುರ್ತು ಅಗತ್ಯದ ವಾಹನಗಳಿಗೆ ಮಾತ್ರ ಇಂಧನ ತುಂಬಿಸಲಾಗುತ್ತಿತ್ತು.
ಜನತಾ ಕರ್ಫ್ಯೂ ಸ್ವಯಂಪ್ರೇರಿತವಾಗಿತ್ತು. ಇತರ ಯಾವುದೇ ಬಂದ್‌ಗಳ ವೇಳೆ ಒಂದೆರಡು ಅಂಗಡಿಗಳು ತೆರೆದು ವ್ಯಾಪಾರ ನಡೆಸುತ್ತಿದ್ದವು. ಈ ಬಾರಿ ಅಂತಹ ಯಾವುದೇ ದೃಶ್ಯಗಳು ಕಂಡುಬರಲಿಲ್ಲ. ಮರ್ದಾಳ, ನೆಟ್ಟಣ, ಬಿಳಿನೆಲೆ, ಕೋಡಿಂಬಾಳ, ರಾಮಕುಂಜ ಮುಂತಾದ ಪ್ರದೇಶಗಳಲ್ಲಿಯೂ ಜನತಾ ಕರ್ಫ್ಯೂ ಕರೆಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ನೆಲ್ಯಾಡಿ ಪೇಟೆಯಲ್ಲಿಯೂ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.