ಮಳೆಗಾಲ ಸಿದ್ಧತಾ ಕೆಲಸಗಳಿಗೆ ಕೋವಿಡ್-19 ಹೊಡೆತ
ಕಾಮಗಾರಿಗಳ ಪ್ರಗತಿಗೆ ಹೊಡೆತ
Team Udayavani, Mar 25, 2020, 4:39 AM IST
ಮಹಾನಗರ: ಕೋವಿಡ್-19 ಸೋಂಕು ನಗರದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ಮಾತ್ರವಲ್ಲದೆ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳಿಗೆ ಹೊಡೆತ ನೀಡಿದೆ. ಮುಖ್ಯವಾಗಿ ಮಳೆಗಾಲಕ್ಕೆ ಸಿದ್ಧತೆಯಾಗಿ ನಡೆಯಬೇಕಾಗಿದ ಅಗತ್ಯ ಕೆಲಸಗಳಿಗೆ ಹಿನ್ನಡೆಯಾಗಿದೆ.
ಈ ಹಿಂದಿನ ಮಳೆಗಾಲದ ಸಂದರ್ಭ ಹಲವೆಡೆ ತೋಡುಗಳಲ್ಲಿ ಹೂಳು, ಕಸ ತುಂಬಿ ಕೃತಕ ನೆರೆಹಾವಳಿ ಉಂಟಾಗಿತ್ತು. ರಾಜಕಾಲುವೆಗಳು ಕೂಡ ತುಂಬಿ ಹರಿದು ಸಮಸ್ಯೆಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಮಹಾನಗರ ಪಾಲಿಕೆ ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ಮಳೆನೀರು ಹರಿಯುವ ಎಲ್ಲ ಚರಂಡಿಗಳ ಹೂಳೆತ್ತಲು ಯೋಜನೆ ರೂಪಿಸಿತ್ತು. ಅದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆಸಿ ಕೆಲವೆಡೆ ಕಾಮಗಾರಿ ಕೂಡ ಆರಂಭಗೊಂಡಿತ್ತು. ಆದರೆ ಕಳೆದ ಮೂರು ದಿನಗಳಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಪಾಲಿಕೆ ಪೌರ ಕಾರ್ಮಿಕರು ಕಸ ವಿಲೇವಾರಿ ಕೆಲಸವನ್ನು ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಔಷಧ ಸಿಂಪಡಣೆ, ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದಂತೆ ಪಾಲಿಕೆ ವತಿಯಿಂದ ನಡೆಯುವ ಬಹುತೇಕ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಹಾಗೂ ಪಾಲಿಕೆ ವತಿಯಿಂದ ನಗರದ ವಿವಿಧೆಡೆ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗೂ ಹೊಡೆತ ಬಿದ್ದಿದೆ. ರಸ್ತೆ ಕಾಮಗಾರಿಗಳು ಅರ್ಧದಲ್ಲೇ ಬಾಕಿಯಾಗಿವೆ. ಮಳೆಗಾಲಕ್ಕೆ ಮೊದಲು ಚರಂಡಿ ನಿರ್ಮಾಣ ಕಾಮಗಾರಿ ನಡೆಯಬೇಕಿದೆ. ಆದರೆ ಈಗಿನ ಸ್ಥಿತಿ ನೋಡಿದರೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಇತ್ತ ಪುರಭವನ ಬಳಿ ನಡೆಯುತ್ತಿರುವ ಅಂಡರ್‌ಪಾಸ್ ಕಾಮಗಾರಿಗೂ ಮಳೆಗಾಲದ ಭೀತಿ ಉಂಟಾಗಿದೆ.
ಕೂಳೂರು ಸೇತುವೆ ದುರಸ್ತಿಗೂ ಹಿನ್ನೆಡೆ
ಪ್ರಮುಖ ಕಾಮಗಾರಿಗಳಲ್ಲೊಂದಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಸೇತುವೆಯ ದುರಸ್ತಿ ನಾಲ್ಕು ದಿನಗಳ ಹಿಂದಷ್ಟೇ ಆರಂಭಗೊಂಡಿತ್ತು. ಇದಕ್ಕಾಗಿ ವಾಹನ ಸಂಚಾರ ಮಾರ್ಪಾಡು ಮಾಡಿ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಲಾರಿ, ಟ್ರಕ್ ಮೊದಲಾದ ಘನ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿತ್ತು. ಆದರೆ ಸೇತುವೆ ಕಾಮಗಾರಿಯೂ ಈಗ ನಿಂತು ಹೋಗಿದೆ. ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿರುವುದರಿಂದ ವಾಹನ ಸಂಚಾರವೂ ಕಡಿಮೆ ಇದೆ. ಆದರೆ ಮುಂದಿನ ಮಳೆಗಾಲದೊಳಗೆ ಸೇತುವೆ ದುರಸ್ತಿ ಪೂರ್ಣವಾಗದಿದ್ದರೆ ಮತ್ತಷ್ಟು ತೊಂದರೆಯಾಗುವ ಸಾಧ್ಯತೆ ಇದೆ.
ಮಳೆಗಾಲಕ್ಕೆ ಸಿದ್ಧವಾಗುವ ಸವಾಲು
ಮಳೆಗಾಲಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಚರಂಡಿ ಹೂಳೆತ್ತುವ, ಮತ್ತಿತರ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಕೆಲಸ ಆರಂಭವಾಗಿತ್ತು. ಆದರೆ ಕೊರೊನಾ ಸೋಂಕಿನಿಂದಾಗಿ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಪಾಲಿಕೆ ಕೂಡ ಪೂರ್ಣವಾಗಿ ತೊಡಗಿಸಿಕೊಂಡಿದೆ. ಮಳೆಗಾಲಕ್ಕೆ ಸಿದ್ಧಗೊಳ್ಳುವುದು ಕೂಡ ಸವಾಲು. ಎಲ್ಲವೂ ಸಹಜ ಸ್ಥಿತಿಗೆ ಬಂದ ಕೂಡಲೇ ಸಮರೋಪಾದಿ ಕೆಲಸಗಳು ನಡೆಯಲು ಕ್ರಮ ಕೈಗೊಳ್ಳಲಾಗುವುದು.
-ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಆಯುಕ್ತರು, ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.