ಚುನಾವಣೆ ಕಾವಿನ ಜತೆ ಕೊರೊನಾ ಏರಿಕೆ ! ಬಿಸಿಲ ಬೇಗೆಯ ಮಧ್ಯೆ ಚುನಾವಣ ಹೊಸ್ತಿಲಲ್ಲಿ ಆತಂಕ
Team Udayavani, Apr 16, 2023, 1:47 PM IST
ಮಹಾನಗರ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕರಾವಳಿಯಲ್ಲಿ ಕೋವಿಡ್ ಕೂಡ ಏರಿಕೆ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಒಂದೆಡೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳ ತಂಡ ನಿಗಾ ವಹಿಸಿದರೆ ಇನ್ನೊಂದೆಡೆ ಚುನಾವಣೆ ಸಮಯ ಕೊರೊನಾ ಏರಿಕೆಯಾಗದಂತೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
ಒಮಿಕ್ರಾನ್ ರೂಪಾಂತರಿ ಎಕ್ಸ್‌ಬಿಬಿ 1.16 ತಳಿಯ ಪರಿಣಾಮ ಜಿಲ್ಲೆಯಲ್ಲಿ ಸೌಮ್ಯ ಕೋವಿಡ್ ಪ್ರಕರಣ (ಎ ಸಿಂಪ್ಟಮ್ಯಾಟಿಕ್) ಹೆಚ್ಚಾಗಿ ದೃಢಪಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 14 ದಿನಗಳಲ್ಲಿ 38 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಅದಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಕೂಡ ಹೆಚ್ಚಳ ಮಾಡಲಾಗಿದೆ. ಸದ್ಯ ದಿನಂಪ್ರತಿ ಸುಮಾರು 400ಕ್ಕೂ ಹೆಚ್ಚಿನ ಮಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೆಚ್ಚಾಗಿ ಹಿರಿಯ ನಾಗರಿಕರಲ್ಲಿ ಕೋವಿಡ್ ದೃಢಪಡುತ್ತಿದ್ದು, ಮುಖ್ಯವಾಗಿ ಜ್ವರ, ಭೇದಿ ಸಹಿತ ಹಾಸಿಗೆ ಹಿಡಿದವರು, ದೀರ್ಘಕಾಲದ ರೋಗಿಗಳನ್ನು, ಹಿರಿಯರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ದೇಶಾದ್ಯಂತ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಪರಿಶೀಲನ ಸಭೆ ಕೆಲ ವಾರದ ಹಿಂದೆಯಷ್ಟೇ ನಡೆದಿದೆ. ರಾಜ್ಯಗಳು ಜಾಗರೂಕರಾಗಿ, ನಿರ್ವಹಣೆಗೆ ಸಿದ್ಧರಾಗಿ ಎಂದು ಸಲಹೆಯನ್ನೂ ನೀಡಲಾಗಿದೆ. ತೀವ್ರ ಉಸಿರಾಟದ ತೊಂದರೆ (ಸಾರಿ ಪ್ರಕರಣ) ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕೋವಿಡ್ ತಪಾಸಣೆ, ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದು ರಾಜ್ಯಕ್ಕೆ ಸೂಚನೆ ನೀಡಲಾಗಿದೆ. ಅದೇ ಸೂಚನೆಯನ್ನು ರಾಜ್ಯ ಸರಕಾರವು ಎಲ್ಲ ಜಿಲ್ಲೆಗಳಿಗೂ ನೀಡಿದೆ.
ಆಸ್ಪತ್ರೆಗಳು ಸನ್ನದ್ಧ
ಕೋವಿಡ್ ನಿಧಾನವಾಗಿ ಏರಿಕೆ ಕಾಣುತ್ತಿರುವು ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಸೂಚನೆ ಮೇರೆಗೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಎರಡು ದಿನಗಳ ಕಾಲ ಅಣಕು ಕಸರತ್ತು (ಮಾಕ್‌ಡ್ರಿಲ್) ನಡೆಸಲಾಗಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲೆಯ 51 ಖಾಸಗಿ ಆಸ್ಪತ್ರೆಗಳು, 9 ಮೆಡಿಕಲ್ ಆಸ್ಪತ್ರೆಗಳಲ್ಲಿ ಮಾಕ್‌ಡ್ರಿಲ್ ನಡೆಸಲಾಗಿದೆ. ಭವಿಷ್ಯದಲ್ಲಿ ಕೋವಿಡ್ ಪ್ರಕರಣ ಏರಿಕೆ ಕಂಡರೆ ಆಸ್ಪತ್ರೆಗಳಲ್ಲಿ ಸಿದ್ಧತೆ, ಬೆಡ್ ವ್ಯವಸ್ಥೆ, ವೆಂಟಿಲೇಟರ್ ಸಹಿತ ಆಸ್ಪತ್ರೆಗಳನ್ನು ಯಾವ ರೀತಿ ಸನ್ನದ್ಧಗೊಳಿಸಲಾಗಿದೆ ಎಂಬ ಬಗ್ಗೆ ಅಣಕು ಕಾರ್ಯಾಚರಣೆ ನಡೆದಿದೆ.
ಲಸಿಕೆ ಕೊರತೆ
ಒಂದೆಡೆ ಕೋವಿಡ್ ದೈನಂದಿನ ಪ್ರಕರಣ ಏರಿಕೆಯಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಕೋವಿಡ್ ರೋಗ ನಿರೋಧಕ ಲಸಿಕೆ ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ ಇನ್ನೂ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಹೆಚ್ಚಿನ ಮಂದಿ ಅರ್ಹರು ಇನ್ನೂ ಬಾಕಿ ಇದ್ದಾರೆ. ಮೊದಲ ಡೋಸ್ ಯಾವ ಕೋವಿಡ್ ಲಸಿಕೆ ಪಡೆದಿದ್ದಾರೆಯೋ ಅವರು ಎರಡನೇ ಮತ್ತು ಬೂಸ್ಟರ್ ಡೋಸ್ ಅದೇ ಲಸಿಕೆ ಪಡೆದುಕೊಳ್ಳಬೇಕು. ಆದರೆ ಸದ್ಯ ಲಸಿಕೆಯ ಕೊರತೆ ಇದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ, ರಾಜ್ಯಾದ್ಯಂತ ಲಸಿಕೆ ಕೊರತೆ ಇದ್ದು, ಸದ್ಯದಲ್ಲೇ ಸಂಗ್ರಹ ಬರಲಿದೆ ಎಂದು ತಿಳಿಸಿದ್ದಾರೆ.
ಚುನಾವಣೆ ಕ್ಯಾಂಪೇನ್‌ಗೆ ಆತಂಕ
ರಾಜ್ಯದಲ್ಲಿ ಚುನಾವಣೆ ಕಾವು ಏರತೊಡಗಿದೆ. ಎಲ್ಲ ಪಕ್ಷಗಳು ಈಗಾಗಲೇ ಭರ್ಜರಿ ಸಿದ್ಧತೆಯಲ್ಲಿ ನಿರತವಾಗಿದೆ. ಇದೇ ವೇಳೆ ಕೋವಿಡ್ ಕೂಡ ಏರಿಕೆ ಕಾಣುತ್ತಿರುವುದು ಪಕ್ಷಗಳ ಪ್ರಮುಖರಿಗೆ ತಲೆನೋವಾಗಿ ಪರಿಣಮಿಸಿದೆ. ಕೆಲವೇ ದಿನಗಳ ನಾಮಪತ್ರ ಸಲ್ಲಿಕೆ ಬಳಿಕ ಮನೆ ಮನೆ ಕ್ಯಾಂಪೇನ್, ರ್ಯಾಲಿ, ಚುನಾವಣೆ ಸಭೆಗಳು ನಡೆಯಲಿದ್ದು, ಕೋವಿಡ್ ಏರಿಕೆ ಹಿನ್ನೆಲೆಯಲ್ಲಿ ಕೆಲವೊಂದು ನಿರ್ಬಂಧ ಹೇರಿಕೆಯಾದರೆ? ಎಂಬ ಆತಂಕ ಜನಪ್ರತಿನಿಧಿಗಳಲ್ಲಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಆ ರೀತಿಯ ಬೆಳವಣಿಗೆ ನಡೆಯುವುದು ಅನುಮಾನ.
ಕೋವಿಡ್ ಏರಿಕೆ: ಆತಂಕವಿಲ್ಲ
ಕೆಲವು ದಿನಗಳಿಂದ ಕೋವಿಡ್ ದೈನಂದಿನ ಪ್ರಕರಣ ತುಸು ಏರಿಕೆ ಕಾಣುತ್ತಿದೆ. ಒಮಿಕ್ರಾನ್ ರೂಪಾಂತರಿ ವೈರಸ್ ಪರಿಣಾಮ ದ.ಕ. ಜಿಲ್ಲೆಯಲ್ಲಿ ಕೆಲವು ವಾರ ಕೋವಿಡ್ ಏರುಗತಿಯಲ್ಲಿ ಸಾಗುವ ಸಾಧ್ಯತೆ ಇದೆ. ಆದರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಾದ್ಯಂತ ಕೋವಿಡ್ ಪತ್ತೆ ಪರೀಕ್ಷೆಯನ್ನೂ ಏರಿಕೆ ಮಾಡಿದ್ದೇವೆ. ಪ್ರತೀ ದಿನ ಸುಮಾರು 400 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
– ಡಾ| ಕಿಶೋರ್ ಕುಮಾರ್,
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.