ಕಠಿನ ಕಾಯ್ದೆ ಜಾರಿಗೊಂಡರೂ ನಿಲ್ಲದ ಗೋ ಕಳವು
ಅಸಹಾಯಕರಾದ ಹೈನುಗಾರರು; ಹೈನುಗಾರಿಕೆಗೆ ಹಿನ್ನಡೆ ಆತಂಕ
Team Udayavani, Jan 30, 2022, 7:10 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ಗೋ ಕಳವು ಅವ್ಯಾಹತವಾಗಿ ನಡೆಯುತ್ತಿದ್ದರೂ ಕರಾವಳಿ ಭಾಗದ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳು ಮಾತ್ರ ಬೆರಳೆಣಿಕೆಯಷ್ಟು. ಕಳ್ಳರ ಬಂಧನ, ದನಗಳ ರಕ್ಷಣೆ ಕೂಡ ಕನಿಷ್ಠ.
ಗೋವು ಕಳವಾದರೆ ಹೈನುಗಾರರಿಗೆ ಸರಕಾರದಿಂದ ಬಿಡಿಗಾಸು ಪರಿಹಾರವೂ ಸಿಗುವುದಿಲ್ಲ. ಹಾಗಾಗಿ ಪ್ರಕರಣಗಳು ಕೂಡ ಕಡಿಮೆ ಪ್ರಮಾಣದಲ್ಲಿಯೇ ದಾಖಲಾಗುತ್ತಿವೆ ಎನ್ನಲಾಗಿದೆ. “ಅಕ್ಕಪಕ್ಕದ ಹಲವೆಡೆ ಈ ಹಿಂದೆ ಗೋ ಕಳವು ನಡೆದಿದ್ದಾಗ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪದೇ ಪದೇ ಕೃತ್ಯಗಳು ಮರುಕಳಿಸುತ್ತಿವೆ. ಹಾಗಾಗಿ ನಾವು ದೂರು ನೀಡಿಲ್ಲ’ ಎನ್ನುವುದು ಅನೇಕ ಹೈನುಗಾರರ ಅಳಲು. “ಗೋವು ಕಳ್ಳತನವಾದ ಬಗ್ಗೆ ಮಾಹಿತಿ ದೊರೆತ ಕೂಡಲೇ ಕಾರ್ಯಾಚರಣೆ ನಡೆಸಿ ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಗೋವುಗಳನ್ನು ರಕ್ಷಿಸಲಾಗಿದೆ. ಆದರೆ ಪೊಲೀಸರಿಗೆ ಮಾಹಿತಿ, ದೂರು ನೀಡಲು ಕೆಲವರು ಮುಂದೆ ಬಂದಿಲ್ಲ’ ಎನ್ನುತ್ತಾರೆ ಪೊಲೀಸರು.
59 ಪ್ರಕರಣಗಳು
ಇಲಾಖೆಗಳ ಪ್ರಕಾರ, ಗೋವು ಕಳವು/ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯಲ್ಲಿ 2021ರ ಇಡೀ ವರ್ಷ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 56. ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಹೊಸ ಗೋ ಹತ್ಯೆ ನಿಷೇಧ ಕಾಯ್ದೆ ಯನ್ವಯ 2021ರಲ್ಲಿ 28 ಹಾಗೂ 2022ರಲ್ಲಿ ಇದುವರೆಗೆ 3 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2019ರಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಡಿ 13 ಪ್ರಕರಣಗಳನ್ನು ದಾಖಲಿಸಿ 21 ಮಂದಿಯನ್ನು ಬಂಧಿಸಿ 32 ಗೋವುಗಳನ್ನು ರಕ್ಷಿಸಲಾಗಿತ್ತು. 2020ರಲ್ಲಿ 27 ಪ್ರಕರಣಗಳನ್ನು ದಾಖಲಿಸಿ 54 ಮಂದಿಯನ್ನು ಬಂಧಿಸಿ 49 ಗೋವುಗಳನ್ನು ರಕ್ಷಿಸಲಾಗಿತ್ತು. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2021ರಲ್ಲಿ ನೂತನ ಗೋ ಹತ್ಯೆ ನಿಷೇಧ ಕಾಯ್ದೆಯಡಿ 28 ಪ್ರಕರಣಗಳು ದಾಖಲಾಗಿದ್ದು 59 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 30ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಉಡುಪಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ಪ್ರಕರಣ: ನಗರಸಭೆಯಿಂದ ಯಾತ್ರಿ ನಿವಾಸಕ್ಕೆ ನೋಟಿಸ್
ನೂತನ ಕಾಯ್ದೆ ಬಂದರೂ ಕೃತ್ಯ ನಿಂತಿಲ್ಲ
“ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ -2020′ ಕಳೆದ ವರ್ಷ ಫೆಬ್ರವರಿಯಲ್ಲಿ ಜಾರಿಗೆ ಬಂದಿದೆ. ಜಾನುವಾರು ಗಳನ್ನು ಹತ್ಯೆಗಾಗಿ ಮಾರಾಟ, ಖರೀದಿ ಅಥವಾ ವಿಕ್ರಯವನ್ನು ಈ ಕಾಯ್ದೆ ನಿಷೇಧಿಸಿದ್ದು ತಪ್ಪಿತಸ್ಥರಿಗೆ 3 ವರ್ಷಗಳಿಗೆ ಕಡಿಮೆ ಇಲ್ಲದ, 7 ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶ ನೀಡಿದೆ. ಅಲ್ಲದೆ ಒಂದು ಜಾನುವಾರು ಅಕ್ರಮ ಸಾಗಾಟಕ್ಕೆ 50,000 ರೂ.ಗಳಿಂದ 5 ಲ.ರೂ.ಗಳವರೆಗೆ ದಂಡ ವಿಧಿಸಲು ಕೂಡ ಕಾಯ್ದೆ ಅವಕಾಶ ಮಾಡಿಕೊಟ್ಟಿದೆ. 2ನೇ ಬಾರಿ ಅಥವಾ ಹೆಚ್ಚು ಬಾರಿ ಅಪರಾಧ ಮಾಡಿದರೆ 1 ಲ.ರೂ.ಗಳಿಂದ 10 ಲ.ರೂ.ಗಳವರೆಗೆ ದಂಡ, 7 ವರ್ಷಗಳವರೆಗಿನ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ. ಆದರೆ ಹೊಸ ಕಾಯ್ದೆ ಜಾರಿಗೊಂಡರೂ ಗೋ ಕಳವು ನಿಂತಿಲ್ಲ.
ವಿಎಚ್‌ಪಿ ಪ್ರಮುಖರ ಭೇಟಿ
ನಿರಂತರ ಗೋ ಕಳವು ನಡೆದಿರುವ ಮಂಗಳೂರಿನ ಬೊಲ್ಪುಗುಡ್ಡೆ, ಪಚ್ಚನಾಡಿ, ಬೋಂದೆಲ್ ಪರಿಸರದ ಹೈನುಗಾರರಾದ ಡೊಮಿನಿಕ್ ಸಲ್ದಾನ, ಪ್ರಣಮ್ ಶೆಟ್ಟಿ ಮೊದಲಾದ ವರ ಮನೆಗೆ ಶನಿವಾರ ವಿಶ್ವಹಿಂದೂ ಪರಿಷತ್ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿದರು. ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಗೋರಕ್ಷಾ ಪ್ರಮುಖರಾದ ದಿನೇಶ್ ಪೈ, ಬಜರಂಗದಳ ಪ್ರಮುಖರಾದ ಪವಿತ್ರ ಕೆರೆಬೈಲ್, ಪ್ರದೀಪ್ ಪಂಪ್‌ವೆಲ್, ಶೈಲೇಶ್ ಅಡ್ಕ, ನವೀನ ಕೊಣಾಜೆ, ಶಿವಪ್ರಸಾದ್ ಕೊಣಾಜೆ, ಅಜಿತ್ ಕಾವೂರು ಉಪಸ್ಥಿತರಿದ್ದರು. ಬೊಲ್ಪುಗುಡ್ಡೆ ಮತ್ತು ಸುತ್ತಲಿನ ಪರಿಸರದಲ್ಲಿ ನಿರಂತರವಾಗಿ ಗೋ ಕಳವು ನಡೆದ ಬಗ್ಗೆ “ಉದಯವಾಣಿ’ ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು.
ಸೂಕ್ತ ಪರಿಹಾರಕ್ಕೆ ಒತ್ತಾಯ
ಗೋ ಕಳವು ನಿರಂತರವಾಗಿ ನಡೆಯುತ್ತಿದ್ದು ಹೈನುಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಗೋ ಕಳ್ಳತನ, ಅಕ್ರಮ ಕಸಾಯಿಖಾನೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ದನಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ಒದಗಿಸಬೇಕು ಎಂದು ಶರಣ್ ಪಂಪ್‌ವೆಲ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಗೋವುಗಳ ಕಳವು, ಹತ್ಯೆಯಾದರೆ ಇಲಾಖೆ ಯಿಂದ ಪರಿಹಾರ ನೀಡಲು ಅವಕಾಶವಿಲ್ಲ. ಒಂದು ವೇಳೆ ಜಾನು ವಾರುಗಳು ಕಾಯಿಲೆ ಅಥವಾ ಅಪಘಾತ ದಿಂದ ಮೃತಪಟ್ಟರೆ ಜಾನುವಾರು ವಿಮೆ ಯೋಜನೆಯಡಿ ವಿಮೆ ಮೊತ್ತ ದೊರೆ ಯುತ್ತದೆ.
-ಡಾ| ಪ್ರಸನ್ನ ಕುಮಾರ್,
ಉಪನಿರ್ದೇಶಕರು,
ಪಶುಸಂಗೋಪನ ಇಲಾಖೆ ದ.ಕ. ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ
ಡಿ. 31: ಸಾಸ್ತಾನ ಟೋಲ್ ವಿರುದ್ಧ ಬೃಹತ್ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.