ಕರಾವಳಿಯ ಅಪರಾಧ ಸುದ್ದಿಗಳು
Team Udayavani, Jul 1, 2018, 10:32 AM IST
ಕೊಯ್ಯೂರು: ಅಕ್ರಮ ಗಣಿಗಾರಿಕೆಗೆ ಕಂದಾಯ ಅಧಿಕಾರಿಗಳಿಂದ ದಾಳಿ
ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಕುಲೆಂಜಿರೋಡಿಯ ಸರಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೆಳ್ತಂಗಡಿ ಕಂದಾಯ ನಿರೀಕ್ಷಕ ರವಿಕುಮಾರ್, ಕೊಯ್ಯೂರು ಗ್ರಾಮ ಕರಣಿಕ ಸಿದ್ದೇಶ್ ನೇತೃತ್ವದ ತಂಡ ದಾಳಿ ನಡೆಸಿದೆ.
ಆರೋಪಿತ ವ್ಯಕ್ತಿ ಥೋಮಸ್ ಸ್ಥಳೀಯವಾಗಿ 94ಸಿ ಯೋಜನೆಯಲ್ಲಿ ಮನೆ ಕಟ್ಟಿಕೊಂಡಿದ್ದು, ಅದರ ಮುಂದಿನ ನಿವೇಶನ ಬಂಡೆಕಲ್ಲು ಹುಡಿ ಮಾಡುವುದಕ್ಕಾಗಿ ರಾಸಾಯನಿಕಗಳನ್ನು ಬಳಸಿದ್ದಾರೆ. ಇದರ ಪರಿಣಾಮ ಅವರ ಮನೆ ಸಹಿತ ಸ್ಥಳೀಯ ಮನೆಗಳಿಗೆ ಕಲ್ಲಿನ ಪುಡಿ ಎರಚಿ ತೊಂದರೆಯಾಗಿದೆ ಎಂದು ಸ್ಥಳೀಯರು ದೂರು ನೀಡಿದ್ದರು.
ಈ ಸಂಬಂಧ ಸ್ಥಳೀಯರೊಬ್ಬರು ದೂರು ನೀಡಿದ್ದು, ಮುಂದಿನ ತನಿಖೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಬರೆಯಲಾಗಿದೆ ಎಂದು ತಹಶೀಲ್ದಾರ್ ಮದನ್ ಮೋಹನ್ ತಿಳಿಸಿದ್ದಾರೆ.
11,42,280 ರೂ. ಅವ್ಯವಹಾರ ಆರೋಪ
ವೆನ್ಲ್ಯಾಕ್ ಮಾಜಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ,ಇಬ್ಬರು ಸಿಬಂದಿ ವಿರುದ್ಧ ಕೇಸು ದಾಖಲು
ಮಂಗಳೂರು: ಜಿಲ್ಲಾ ವೆನ್ಲ್ಯಾಕ್ ಆಸ್ಪತ್ರೆಯ ಮಾಜಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಮತ್ತು ಇತರ ಇಬ್ಬರು ಮಹಿಳಾ ಸಿಬಂದಿ ಭಾಗಿಯಾಗಿದ್ದಾರೆ ಎನ್ನಲಾದ 11,42,280 ರೂ. ಮೊತ್ತದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿಕೊಂಡಿದೆ.
ಈ ಹಿಂದೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿದ್ದ ಡಾ| ಸರೋಜಾ ಹಾಗೂ ಪ್ರಥಮ ದರ್ಜೆ ಸಹಾಯಕರಾದ ಬಿ.ಜಿ ಯಶೋದಾ ಮತ್ತು ಕೆ.ಬಿ. ಸುಮಾ ಅವರು 2011-12 ಮತ್ತು 2012-13ನೇ ಸಾಲಿನಲ್ಲಿ ಸರ್ಜಿಕಲ್ ಗ್ಲೌಸ್‌ಗಳ ಖರೀದಿಯಲ್ಲಿ 10,86,780 ರೂ. ಮತ್ತು ಲಿನನ್ ಬಟ್ಟೆ ಖರೀದಿಯಲ್ಲಿ 45,500 ರೂ. ಹಾಗೂ ಬೆಡ್ಡಿಂಗ್ ಸಾಮಗ್ರಿ ಖರೀದಿಯಲ್ಲಿ 10,000 ರೂ. ಸಹಿತ ಒಟ್ಟು 11,42,280 ರೂ. ಗಳಿಗೂ ಮೇಲ್ಪಟ್ಟ ಅವ್ಯವಹಾರ ನಡೆಸಿರುತ್ತಾರೆ ಎಂಬ ದೂರಿನನ್ವಯ ಭ್ರಷ್ಟಾಚಾರ ಪ್ರತಿ ಬಂಧಕ ಕಾಯ್ದೆ-1988 ರಡಿಯಲ್ಲಿ ಪ್ರಕರಣ ದಾಖಲಾಗಿದೆ.
ಎಸಿಬಿ ಪೊಲೀಸ್ ಅಧೀಕ್ಷಖೀ ಶ್ರುತಿ ಎನ್.ಎಸ್. ಅವರ ಮಾರ್ಗ ದರ್ಶನದಲ್ಲಿ ಡಿವೈಎಸ್‌ಪಿ ಸುಧೀರ್ ಎಂ. ಹೆಗಡೆ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪ್ರಕಟನೆ ತಿಳಿಸಿದೆ.
ಡಾ| ಸರೋಜಾ ಈಗ ನಿವೃತ್ತ ರಾಗಿದ್ದು, ಯಶೋದಾ ಮತ್ತು ಸುಮಾ ಅವರು ಈಗಲೂ ಕರ್ತವ್ಯದಲ್ಲಿದ್ದಾರೆ.
ಸೇವೆಯಿಂದ ನಿವೃತ್ತಿ ಹೊಂದಿ ನಾಲ್ಕು ವರ್ಷ ದಾಟಿರದಿದ್ದರೆ ಪ್ರಕರಣ ದಾಖಲಿಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಅವಕಾಶ ಇದೆ.
ಕಾರ್ಕಳದ ತೆಳ್ಳಾರಿನ ಪ್ರಕರಣ;ಮಾನಭಂಗ ಯತ್ನ: ಶಿಕ್ಷೆ ಪ್ರಕಟ
ಕಾರ್ಕಳ: 2015ರ ಮಾರ್ಚ್ 8ರಂದು ತೆಳ್ಳಾರು 20ನೇ ಕ್ರಾಸ್ ನಟ್ಯಾಲ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದ ತೆಳ್ಳಾರು ನಿವಾಸಿ ಪ್ರವೀಣ್ ಶೆಟ್ಟಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ಕೈಗೆತ್ತಿ ಕೊಂಡಿದ್ದ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಪುಟ್ಟರಾಜು ಅವರು, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ವಿವಿಧ ಕಲಂಗಳಡಿಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.
ತಪ್ಪಿತಸ್ಥನಿಗೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 341ರ ಅಡಿಯಲ್ಲಿ 1 ತಿಂಗಳ ಕಾರಾಗೃಹ ವಾಸ ಮತ್ತು ಕಲಂ 354(ಎ) ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ 1 ವರ್ಷ 4 ತಿಂಗಳು 19 ದಿನಗಳ ಸಾದಾ ಕಾರಾಗೃಹ ವಾಸ ಶಿಕ್ಷೆ ವಿಧಿ ಸಲಾಗಿದೆ.ಅಂದಿನ ನಗರ ಠಾಣಾಧಿಕಾರಿ ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಅವರು ವಾದಿಸಿದ್ದರು.
ಬೈಕ್ ಅಪಘಾತ: ಪಾದಚಾರಿ, ಸಹಸವಾರನಿಗೆ ಗಾಯ
ಮಂಗಳೂರು: ಬೈಕ್ ಸವಾರನೊಬ್ಬ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಉಂಟಾದ ಅಪಘಾತದಲ್ಲಿ ಪಾದಚಾರಿ ಹಾಗೂ ಸಹಸವಾರ ಗಾಯಗೊಂಡ ಘಟನೆ ನಗರದ ಹೊರವಲಯದ ವಳಚ್ಚಿಲ್‌ನಲ್ಲಿ ಶುಕ್ರವಾರ ಸಂಭವಿಸಿದೆ. ವಳಚ್ಚಿಲ್ ನಿವಾಸಿ ವಿ.ಎಚ್. ಮಹಮ್ಮದ್ ಹುಸೇನ್ ಹಾಗೂ ಸಹಸವಾರ ಮಹಮ್ಮದ್ ಸಾಹಿದ್ ಗಾಯಗೊಂಡವರು. ಪಾದಚಾರಿ ಹುಸೇನ್ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಅಂಗಡಿ ಕಡೆಗೆ ನಡೆದುಕೊಂಡು ವಳಚ್ಚಿಲ್ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬೈಕ್‌ನಲ್ಲಿ ಮಹಮ್ಮದ್ ಸಾಹಿದ್ ಅವರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದ ಉಮರ್ ಫಾರೂಕ್ ವಳಚ್ಚಿಲ್ ತಲುಪಿದಾಗ ರಸ್ತೆ ದಾಟುತ್ತಿದ್ದ ಹುಸೇನ್‌ಗೆ ಢಿಕ್ಕಿ ಹೊಡೆದಿದ್ದಾರೆ. ಪರಿಣಾಮ ಹುಸೇನ್ ರಸ್ತೆಗೆ ಬಿದ್ದು ಎಡಕೈಯ ಮೂಳೆ ಮುರಿತ ಮತ್ತು ಬಲಕಾಲಿಗೆ ರಕ್ತಗಾಯವಾಗಿದೆ. ಇದೇ ವೇಳೆ ಸಹಸವಾರ ಮಹಮ್ಮದ್ ಸಾಹಿದ್ ಅವರಿಗೂ ಕೈ ಹಾಗೂ ಕಾಲುಗಳಿಗೆ ತರಚಿದ ಗಾಯವಾಗಿದೆ. ಬಳಿಕ ಈರ್ವರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಈ ಬಗ್ಗೆ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು: ಕಲಬೆರಕೆಯಾದ 5000 ಲೀ.ತೆಂಗಿನ ಎಣ್ಣೆ ವಶ
ಕಾಸರಗೋಡು: ಚೆಂಗಳ ಬೇರ್ಕದ ಖಾಸಗಿ ತೆಂಗಿನ ಎಣ್ಣೆ ಗೋದಾಮಿಗೆ ದಾಳಿ ನಡೆಸಿದ ಆಹಾರ ಸುರಕ್ಷಾ ಅಧಿಕಾರಿಗಳು, ಅಲ್ಲಿಂದ ಕಲಬೆರಕೆಯಾಗಿದ್ದ 5000 ಲೀ. ತೆಂಗಿನ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ.
ಆಹಾರ ಸುರಕ್ಷಾ ಕಚೇರಿಯ ಅಸಿಸ್ಟೆಂಟ್ ಕಮಿಷನರ್ ಸಿ.ಎ. ಜನಾರ್ದನನ್, ಫುಡ್ ಸೇಫ್ಟಿ ಆಫೀಸರ್ ನಿತ್ಯ ಚಾಕೋ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ನಿಷೇಧಿಸಿದ ಪಾಲಾಟ್‌ನ ಅಫಿಯಾ ಕೋಕನಟ್ ಆಯಿಲ್ ಅನ್ನು “ಕೇರ ವ್ಯಾಲಿಸ್ ಆಗ್‌ಮಾರ್ಕ್ ಸರ್ಟಿಫೈಡ್ ಪ್ರೊಡೆಕ್ಟ್’ ಎಂದು ಹೆಸರು ಬದಲಾಯಿಸಿ ಮಾರುಕಟ್ಟೆಗೆ ಇಳಿಸಲಾಗಿತ್ತು.
ಬೇರ್ಕದ ಮಹಮ್ಮದ್ ನವಾಸ್ ಮಾಲಕತ್ವದ ಈ ಗೋದಾಮಿನಿಂದ ವಶಪಡಿಸಿಕೊಂಡ ತೆಂಗಿನ ಎಣ್ಣೆಯ ಪೈಕಿ ಎರಡು ಲೀಟರ್‌ನ ಪ್ಯಾಕೆಟ್ ಅನ್ನು ಲ್ಯಾಬ್‌ಗ ಕಳುಹಿಸಲಾಗುವುದು. ವರದಿ ಲಭಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವು ಅಂಗಡಿಗಳಲ್ಲಿ ಪತ್ತೆ
ವಾರದ ಹಿಂದೆ ಕಾಸರಗೋಡು ನಗರದ ಕೆಲವು ಅಂಗಡಿಗಳಿಂದ ಇಂಥದ್ದೇ ಕಲಬೆರಕೆಯಾಗಿದ್ದ ತೆಂಗಿನ ಎಣ್ಣೆಯನ್ನು ವಶಪಡಿಸಲಾಗಿತ್ತು.
ಉಪ್ಪಿನಕೋಟೆ ಕಸಾಯಿಗೆ ತಂದಿದ್ದ ಜಾನುವಾರುಗಳ ರಕ್ಷಣೆ, ಓರ್ವನ ಸೆರೆ
ಬ್ರಹ್ಮಾವರ: ಉಪ್ಪಿನ ಕೋಟೆಯಲ್ಲಿ ಕಸಾಯಿ ಗಾಗಿ ತಂದು ಅಕ್ರಮವಾಗಿ ಜಾನುವಾರುಗಳನ್ನು ಕೂಡಿ ಹಾಕಿದ್ದ ಅಡ್ಡೆಗೆ ಶುಕ್ರವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ.ಅಸ್ಲಾಂನ ಮನೆಯಲ್ಲಿ 1 ದನ ಹಾಗೂ 4 ಗಂಡು ಕರುಗಳನ್ನು ಅಕ್ರಮವಾಗಿ ಕೂಡಿ ಹಾಕಿದ ಕುರಿತು ಸ್ಥಳೀಯರಿಂದ ಬಂದ ಖಚಿತ ಮಾಹಿತಿ ಮೇರೆಗೆ ರಾತ್ರಿ 1 ಗಂಟೆ ಸುಮಾರಿಗೆ ಪೊಲೀಸರು ದಾಳಿ ನಡೆಸಿದರು. ಆಗ ಜಾನುವಾರುಗಳನ್ನು ಉಸಿರಾಡಲು ತೊಂದರೆಯಾಗುವಂತೆ ಹಗ್ಗದಿಂದ ಹಿಂಸಾತ್ಮಾಕ ರೀತಿಯಲ್ಲಿ ಕಟ್ಟಿ ಹಾಕಿದ್ದು ಬೆಳಕಿಗೆ ಬಂದಿದೆ ಮತ್ತು ಈ ಕುರಿತು ವಿಚಾರಿಸಿದಾಗ ಆರೋಪಿ ಸರಿಯಾದ ಉತ್ತರ ನೀಡಿರುವುದಿಲ್ಲ. ಆದ್ದರಿಂದ ಜಾನುವಾರುಗಳನ್ನು ರಕ್ಷಿಸಿ ಅಸ್ಲಾಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನಿಗೆ ಹಲ್ಲೆ :ಮೂವರ ಬಂಧನ
ಸೀತಾಂಗೋಳಿ: ಕುದ್ರೆಪ್ಪಾಡಿ ನಿವಾಸಿ ಕೆ.ಮಹೇಶ್(25) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಸೀತಾಂಗೋಳಿ ನಿವಾಸಿ ಅಬ್ದುಲ್ ಅನ್ಸಾರ್ (26), ಮುಗು ಬಳಿಯ ಉರ್ಮಿ ನಿವಾಸಿ ಮಹಮ್ಮದ್ ಅಫಲ್(30), ಮುಗುರೋಡ್ ನಿವಾಸಿ ಸಮ್ಮಾಸ್(25)ನನ್ನು ಬಂಧಿಸಲಾಗಿದೆ. ಜೂ.10 ರಂದು ರಾತ್ರಿ ಸೀತಾಂಗೋಳಿ ಪೇಟೆಯಲ್ಲಿ ಮಹೇಶ್‌ಗೆ ಸೋಡಾ ಬಾಟಿÉಯಿಂದ ಆಕ್ರಮಿಸಿ ಹಲೆ ಮಾಡಿದ್ದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಇನ್ನೂ ಮೂವರನ್ನು ಬಂಧಿಸಲು ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಡುಬಿದ್ರಿ: ಅಪರಿಚಿತ ವೃದ್ಧನನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು
ಪಡುಬಿದ್ರಿ: ಮಾರ್ಕೆಟ್ ಪ್ರದೇಶದಲ್ಲಿ ತೀರಾ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಅಪರಿಚಿತ ವೃದ್ಧರೋರ್ವರನ್ನು ಇಲ್ಲಿನ ಪೊಲೀಸರು ಉಡುಪಿಯ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ವಿಪರೀತ ಜ್ವರದಿಂದ ಬಳಲುತ್ತಿದ್ದ ಈ ವೃದ್ಧ ನೀರು, ಆಹಾರ ಸೇವಿಸಲೂ ನಿರಾಕರಿಸಿದ್ದು, ಮಾತನಾಡಲಾಗದಷ್ಟು ಅಶಕ್ತರಾಗಿದ್ದರು. ಇವರ ಪರಿಚಯವಿರುವವರು ಪಡುಬಿದ್ರಿ ಪೊಲೀಸ್ ಠಾಣೆ(0820 2555452)ಯನ್ನು ಅಥವಾ ಉಡುಪಿಯ ಅಜ್ಜರಕಾಡು ಆಸ್ಪತ್ರೆಯನ್ನು ಸಂಪರ್ಕಿಸಬಹುದು.
ವಿವಿಧೆಡೆಯ ಮಟ್ಕಾ ಅಡ್ಡೆಗಳಿಗೆ ದಾಳಿ: 7 ಮಂದಿಯ ಬಂಧನ
ಉಡುಪಿ: ಉಡುಪಿಯಲ್ಲಿ 5 ಕಡೆ ಹಾಗೂ ಹೆಬ್ರಿಯಲ್ಲಿ ಒಂದು ಕಡೆ ಮಟ್ಕಾ ಚೀಟಿ ಬರೆಯುವ ಪ್ರತ್ಯೇಕ ಅಡ್ಡೆಗಳಿಗೆ ಪೊಲೀಸರು ಜೂ. 29ರಂದು ದಾಳಿ ನಡೆಸಿದ್ದು, ಒಟ್ಟು 9,036 ರೂ. ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೀತಾರಾಮ ಪಿ. ಅವರು ಸರ್ವಿಸ್ ಬಸ್ ನಿಲ್ದಾಣದ ಬಳಿಯಿಂದ ಉಮೇಶ್ ಮೈಂದನ್ (32) ನನ್ನು 1,350 ರೂ. ಸಹಿತ ವಶಕ್ಕೆ ಪಡೆದಿದ್ದಾರೆ. ನಗರ ಠಾಣೆಯ ಎಎಸ್‌ಐ ಸುಧಾಕರ ಎಸ್. ಮೂಲ್ಯ ಅವರು ಸರ್ವಿಸ್ ಬಸ್ ನಿಲ್ದಾಣ ಸಮೀಪದ ಶೌಚಾಲಯದ ಬಳಿಯಿಂದ ನಿತಿನ್ ಪೂಜಾರಿ (24) ಯನ್ನು 830 ರೂ. ಸಹಿತ ವಶಕ್ಕೆ ಪಡೆದಿದ್ದಾರೆ. ಡಿಸಿಐಬಿ ಇನ್ಸ್‌ಪೆಕ್ಟರ್ ಸಂಪತ್ ಕುಮಾರ್ ಎ. ಅವರು ಸಿಟಿ ಬಸ್ ನಿಲ್ದಾಣದ ಬಳಿಯಿಂದ ಪ್ರಶಾಂತ ಸೊಣಗಾರ (29)ನನ್ನು 2,180 ರೂ. ಸಹಿತ ಬಂಧಿಸಿದ್ದಾರೆ.
ಡಿಸಿಐಬಿ ಎಎಸ್‌ಐ ರವಿಚಂದ್ರ ಅವರು ಸಿಟಿ ಬಸ್ ನಿಲ್ದಾಣದ ಬಳಿಯಿಂದ ಸದಾಶಿವ (30)ನನ್ನು 1,170 ರೂ. ಸಹಿತ ಬಂಧಿಸಿದ್ದಾರೆ.ಡಿಸಿಐಬಿ ಹೆಡ್‌ಕಾನ್ಸ್‌ಟೆಬಲ್ ರಾಮು ಹೆಗ್ಡೆ ಅವರು ಸಿಟಿ ಬಸ್ ನಿಲ್ದಾಣದ ಸಮೀಪದಿಂದ ಸಂತೋಷ್ (41)ನನ್ನು 1,680 ರೂ. ಸಹಿತ ವಶಕ್ಕೆ ಪಡೆದು ಕೊಂಡಿದ್ದಾರೆ. ಹೆಬ್ರಿ ಪೊಲೀಸ್ ಠಾಣೆ ಎಸ್‌ಐ ಮಹಾಬಲ ಶೆಟ್ಟಿ ಅವರು ಕಳೂರು ಗ್ರಾಮದ ಸಂತೆಕಟ್ಟೆ ಬಳಿಗೆ ದಾಳಿ ನಡೆಸಿ ಹರಿಶ್ಚಂದ್ರ (46) ಮತ್ತು ಜಗನ್ನಾಥ (62) ಅವರನ್ನು 1,310 ರೂ. ಸಹಿತ ವಶಕ್ಕೆ ಪಡೆದು ಕೊಂಡಿದ್ದಾರೆ.
ಗಾಂಜಾ ಸಹಿತ ಯುವಕನ ಸೆರೆ
ಉಳ್ಳಾಲ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮುಡಿಪು ದರ್ಖಾಸು ಮನೆ ಮಹಮ್ಮದ್ ಇಕ್ಬಾಲ್ (25)ನನ್ನು ಮುಡಿಪು ಸಮೀಪ ಬಂಧಿಸಲಾಗಿದ್ದು, ಆತನಿಂದ ಗಾಂಜಾ ಮತ್ತು ಸ್ಕೂಟರ್ ಅನ್ನು ವಶಪಡಿಸಲಾಗಿದೆ.
ಜೂ. 28ರಂದು ಬಾಳೆಪುಣಿ ಗ್ರಾಮದ ಮುಡಿಪು ನವಗ್ರಾಮದಲ್ಲಿ ಸ್ಕೂಟರ್‌ನಲ್ಲಿ ಬರುತ್ತಿದ್ದ ಈತನು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದ. ಆತನನ್ನು ತಡೆದು ನಿಲ್ಲಿಸಿ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 680 ಗ್ರಾಂ ಗಾಂಜಾ ಪತ್ತೆಯಾಗಿದೆ. ಆತನನ್ನು ವಿಚಾರಣೆ ನಡೆಸಿದಾಗ, ಗಾಂಜಾ ವನ್ನು ಮೀಯಪದವಿನ ಅರ್ಷಾದ್‌ನಿಂದ ಖರೀದಿಸಿ ಯುವಕರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದೇನೆ ಎಂದು ಆರೋಪಿ ತಿಳಿಸಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ರಶೀದ್ ಮಲ್ಬಾರಿ ಬಂಧನ ಮಾಹಿತಿ ಇಲ್ಲ: ಕಮಿಷನರ್
ಮಂಗಳೂರು: ಭೂಗತ ಪಾತಕಿ ರಶೀದ್ ಮಲ್ಬಾರಿ (47) ಅಬುಧಾಬಿಯಲ್ಲಿ ಬಂಧಿತನಾಗಿದ್ದಾನೆ ಎಂಬ ಬಗ್ಗೆ ದೃಢೀಕರಣ ಆಗಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ. ಇದರ ಸತ್ಯಾಸತ್ಯತೆ ತಿಳಿಯಲು ಪ್ರಯತ್ನ ಮುಂದುವರಿದಿದೆ. ಈ ತನಕ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ. ಬಾಂಗ್ಲಾ ದೇಶದ ಪಾಸ್‌ಪೋರ್ಟ್ ಹೊಂದಿರುವ ರಶೀದ್ ಮಲ್ಬಾರಿಯನ್ನು ಮೇ ತಿಂಗಳಲ್ಲಿ ಅಬುಧಾಬಿ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ವದಂತಿ ಹರಡಿದೆ.
ಮಹಿಳೆಗೆ ಹಲ್ಲೆ, ಮಾನಭಂಗ ಯತ್ನ
ಪುತ್ತೂರು: ಇಲ್ಲಿನ ಪುರುಷರಕಟ್ಟೆಯಲ್ಲಿ ಮಹಿಳೆ ಯೋರ್ವರಿಗೆ ಹಲ್ಲೆ ಮಾಡಿ, ಮಾನಭಂಗಕ್ಕೆ ಯತ್ನಿಸಿದ ಘಟನೆ ಶನಿವಾರ ಸಂಭವಿಸಿದೆ.ಪುರುಷರಕಟ್ಟೆಯಲ್ಲಿ ಮಹಿಳೆ ತಮ್ಮ ದ್ವಿಚಕ್ರ ವಾಹನದಲ್ಲಿ ಬಂದು, ವಾಪಸ್ ಹೊರಡುವ ವೇಳೆ, ಯುವಕನೊಬ್ಬ ಕೀಟಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆತನು ಮಹಿಳೆಯ ಶಾಲು ಹಿಡಿದು ಎಳೆದಿದ್ದು, ಆಕ್ಷೇಪಿಸಿದಾಗ ಹಲ್ಲೆ ನಡೆಸಿದ್ದಾನೆ. ಮಹಿಳೆ ಈ ಬಗ್ಗೆ ಮನೆಯವರಿಗೆ ತಿಳಿಸಿದ್ದು, ಬಳಿಕ ನಗರ ಠಾಣೆಗೆ ದೂರು ನೀಡಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಚಲಿಸುವ ರೈಲು ತಾಗಿ ಯುವಕನ ಸಾವು
ಪಡುಬಿದ್ರಿ: ಪಲಿಮಾರು ರೈಲ್ವೇ ಕ್ರಾಸಿಂಗ್ ಬಳಿ 200 ಅಡಿ ದೂರದಲ್ಲಿ ಶನಿವಾರ ಸಂಜೆ ವೇಳೆ ಯಾವುದೋ ರೈಲು ತಾಗಿ ಪಲಿಮಾರು ರಾಜೀವ ನಗರ ನಿವಾಸಿ ಹರೀಶ್ ಪೂಜಾರಿ (35) ಸಾವನ್ನಪ್ಪಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಯೂರು : ಯುವಕ ಆತ್ಮಹತ್ಯೆ
ಕಾಣಿಯೂರು: ಇಲ್ಲಿನ ಮರಕಡದ ನಿವಾಸಿ ಐತ್ತಪ್ಪ ಅವರ ಪುತ್ರ, ಕೂಲಿ ಕಾರ್ಮಿಕ ಚಂದ್ರಶೇಖರ್ (26) ಜೂ.29ರಂದು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು 1 ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ 2 ಬೈರಾಸು ಜೋಡಿಸಿ ನೇಣು ಬಿಗಿದುಕೊಂಡಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಗ್ಲೆಗುಡ್ಡೆ: ಯುವತಿ ನಾಪತ್ತೆ
ಕಾರ್ಕಳ: ಕಾರ್ಕಳ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ನಿವಾಸಿ ಸಮೀರಾ ಬಾನು (19) ಜೂ. 23ರಂದು ಸಂಜೆ 4 ಗಂಟೆಗೆ ಮನೆಯಿಂದ ಹೊರ ಹೋದ ವರು ವಾಪಸ್ ಬಂದಿಲ್ಲ ಎಂದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ಗಳು ಢಿಕ್ಕಿ : ಇಬ್ಬರಿಗೆ ಗಾಯ
ಕುಂದಾಪುರ: ಕರ್ಕುಂಜಿ ಗ್ರಾಮದ ನೇರಳಕಟ್ಟೆ ಬೊಳನಕೆರೆ ತಿರುವಿನಲ್ಲಿ ಎರಡು ಬೈಕ್‌ಗಳು ಪರಸ್ಪರರ ಢಿಕ್ಕಿಯಾದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಜೂ. 29ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಭವಿಸಿದೆ. ಗಾಯಗೊಂಡಿರುವ ಸವಾರರಾದ ಸಂದೀಪ ಎಂ.ಜಿ. ಮತ್ತು ಅಣ್ಣಪ್ಪ ಪೂಜಾರಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ
ಕಿನ್ನಿಗೋಳಿ: ಐಕಳ ಕಮ್ಮಾಜೆ ಜೆಸನ್ ಗ್ಯಾರೇಜ್‌ಬಳಿ ಬುಧವಾರ ರಾತ್ರಿ ಇನ್ನೋವಾ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಚಾಲಕ ಪವಾಡಸದೃಶ ಪಾರಾಗಿದ್ದಾರೆ. ಕಾರು ಮೂಡಬಿದಿರೆ ಕಡೆಯಿಂದ ಬಜಪೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿತ್ತು.
ಹೊಡೆದಾಟ: ಪ್ರಕರಣ ದಾಖಲು
ಬೆಳ್ತಂಗಡಿ: ಹುಡುಗಿಗೆ ಸಂದೇಶ ಕಳುಹಿಸುವ ವಿಚಾರವಾಗಿ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಐವರು ಯುವಕರು ಹೊಡೆದಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣಾಧಿಕಾರಿಗಳು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಿಲೀಪ್, ಸಂತೋಷ್ ಹಾಗೂ ಅಖೀಲ್, ನಿಸಾರ್, ಅಲ್ತಾಫ್ ಅವರ ತಂಡಗಳು ಹೊಡೆದಾಡಿಕೊಂಡಿದ್ದಾರೆ ಎಂದು ಕೇಸ್ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ: ಮಹಿಳೆಯಿಂದ ದೂರು ದಾಖಲು
ಉಡುಪಿ: ಪತಿ ಮತ್ತು ಅವರ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಜೀವಬೆದರಿಕೆ ಒಡ್ಡುತ್ತಿದ್ದಾರೆ ಎಂದು ಗುರುಪುರ-ಕೈಕಂಬ ಉಳಾಯಿಬೆಟ್ಟು ನಿವಾಸಿ ಉಮ್ಮರ್ ಫಾರೂಕ್ ಅವರ ಪತ್ನಿ ಜೀನತ್ ಅವರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಂಡ ಉಮ್ಮರ್ ಫಾರೂಕ್, ಅತ್ತೆ ಜೊಹಾರಾ, ನಾದಿನಿಯರಾದ ಆಸ್ಮಾ, ಸಮೀರ ಹಾಗೂ ನಸೀಮಾ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಮದುವೆಯ ಸಂದರ್ಭ 20 ಪವನ್ ಚಿನ್ನಾಭರಣ, 2.50 ಲ.ರೂ. ವರದಕ್ಷಿಣೆ ಪಡೆದುಕೊಂಡಿದ್ದು, ಮದುವೆ ಬಳಿಕ ಮತ್ತಷ್ಟು ವರದಕ್ಷಿಣೆಗಾಗಿ ಆರೋಪಿಗಳು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಜೀನತ್ ದೂರಿನಲ್ಲಿ ತಿಳಿಸಿದ್ದಾರೆ.
ಬೈಕಿಗೆ ಕಾರು ಢಿಕ್ಕಿ: ದಂಪತಿಗೆ ಗಾಯ
ಉಡುಪಿ: ಮಣಿಪಾಲ ಈಶ್ವರನಗರದ ಬಿಗ್‌ಬಾಸ್ ಹೊಟೇಲಿನ ಸಮೀಪ ಜೂ. 28ರ ಸಂಜೆ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಹೆರ್ಗ ಗ್ರಾಮದ ರಾಘವೇಂದ್ರ ಆಚಾರ್ಯ ಹಾಗೂ ಅವರ ಪತ್ನಿ ವಿದ್ಯಾ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.