![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 25, 2023, 11:39 PM IST
ಬಂಟ್ವಾಳ: ಕ್ರಿಸ್ಮಸ್ ಹಬ್ಬ, ವಾರಾಂತ್ಯದ ರಜೆಗಳು ಜತೆ ಯಾಗಿ ಬಂದ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲ ಪ್ರಮುಖ ರಸ್ತೆಗ ಳಲ್ಲಿ ಪ್ರವಾಸಿಗರ ವಾಹನಗಳ ಓಡಾಟ ತೀರಾ ಹೆಚ್ಚಿತ್ತು. ಜತೆಗೆ ಸೋಮವಾರ ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳು ಹೆಚ್ಚಿದ್ದು, ವಾಹನ ಹಾಗೂ ಜನ ದಟ್ಟ ಣೆಗೆ ಕಾರಣವಾಯಿತು. ಕೆಲವೆಡೆ ವಾಹನಗಳು ಕೆಲ ಹೊತ್ತು ಹೆದ್ದಾರಿಯಲ್ಲೇ ಸಾಲುಗಟ್ಟಿ ನಿಲ್ಲಬೇಕಾಯಿತು.
ರಾ.ಹೆ.75ರ ಬಿ.ಸಿ.ರೋಡು, ಮಾಣಿ, ದಾಸಕೋಡಿ, ಕಲ್ಲಡ್ಕ, ಮೆಲ್ಕಾರ್, ಪಾಣೆ ಮಂಗಳೂರು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಪೊಲೀಸರು ಕೆಲವು ವಾಹನಗಳನ್ನು ದಾಸಕೋಡಿ- ಶಂಭೂರು-ಪಾಣೆಮಂಗಳೂರು ರಸ್ತೆಯ ಮೂಲಕ ಕಳುಹಿಸಿದರು.
ಉಪ್ಪಿನಂಗಡಿಯಲ್ಲೂ ಟ್ರಾಫಿಕ್ ಜಾಮ್ ಇದ್ದು, ಹೆದ್ದಾರಿಯ ಉದ್ದಿನಂ ಗಡಿ-ಸಕಲೇಶಪುರ ಮಧ್ಯೆ ಹೆಚ್ಚಿನ ವಾಹನದೊತ್ತಡ ಕಂಡುಬಂತು.
ಬಿ.ಸಿ.ರೋಡು-ಮಾಣಿ ಮಧ್ಯೆ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ನಿತ್ಯವೂ ಟ್ರಾಫಿಕ್ ಜಾಮ್ ಇದ್ದದ್ದೇ, ಜತೆಗೆ ಸಣ್ಣ ಪುಟ್ಟ ಅಪಘಾತ ಘಟಿ ಸಿದರೂ 2-3 ತಾಸು ಸಂಚಾರ ವ್ಯತ್ಯ ಯವಾಗುತ್ತಿದೆ.
ಬೆಳ್ತಂಗಡಿ: ಕ್ರಿಸ್ಮಸ್, ಮತ್ತೊಂದೆಡೆ ಸೋಮವಾರ ಸಂತೆಯಾದ್ದರಿಂದ ಬೆಳ್ತಂಗಡಿ ತಾಲೂಕಿನ ಮುಖ್ಯ ರಸ್ತೆ ಯಲ್ಲಿ ಮುಂಜಾನೆಯಿಂದ ಸಂಜೆ ವರೆಗೆ ಟ್ರಾಫಿಕ್ ಸಮಸ್ಯೆ ಉಂಟಾಯಿತು.
ಕಟೀಲು: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇಗುಲದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮಧ್ಯಾಹ್ನ 4 ಸಾವಿರಕ್ಕೂ ಹೆಚ್ಚು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಶ್ರೀಕೃಷ್ಣ ಮಠ: ಉಡುಪಿಯ ಶ್ರೀಕೃಷ್ಣ ಮಠಕ್ಕೂ ಕಳೆದ ಮೂರು ದಿನಗಳಲ್ಲಿ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಕುಕ್ಕೆಯಲ್ಲಿ ಮುಂದುವರಿದ ಭಕ್ತ ಸಾಗರ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರ ಹರಿವು ಸೋಮವಾರವೂ ಮುಂದುವರಿಯಿತು.
ದೇವರ ದರುಶನಕ್ಕಾಗಿ ರಥಬೀದಿ ಜಂಕ್ಷನ್ ಬಳಿಯಿಂಲೇ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ಷಣ್ಮುಖ ಪ್ರಸಾದ ಬೋಜನ ಶಾಲೆ ಮಾತ್ರವಲ್ಲದೆ ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬಫೆ ಮಾದರಿಯಲ್ಲಿ ಭೋಜನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿತ್ತು. ಸುಬ್ರಹ್ಮಣ್ಯ ಪೇಟೆಯಲ್ಲಿ ವಾಹನ ಹಾಗೂ ಜನಸಂಚಾರ ಅಧಿಕವಾಗಿತ್ತು. ಪಾರ್ಕಿಂಗ್‌ಗಳು ವಾಹನಗಳಿಂದ ತುಂಬಿತ್ತು. ಕುಮಾರಧಾರಾ ನದಿಯಲ್ಲಿ ತೀರ್ಥಸ್ನಾನ ನೆರವೇರಿಸಲು ಬಾರೀ ದಟ್ಟಣೆ ಕಂಡುಬಂತು.
ಬಹುತೇಕ ಹೆಚ್ಚಿನ ವಸತಿಗೃಹಗಳು ಭರ್ತಿಯಾದ ಪರಿಣಾಮ ಭಕ್ತರಿಗೆ ತಂಗಲು ವಸತಿ ಸಮಸ್ಯೆಯಾಯಿತು.
ಉಪ್ಪಿನಂಗಡಿ: 4 ತಾಸು ಬ್ಲಾಕ್!
ಉಪ್ಪಿನಂಗಡಿ: ಪಟ್ಟಣದಲ್ಲಿ ಸತತ 4 ಗಂಟೆ ಕಾಲ ಟ್ರಾಫಿಕ್ ಜಾಮ್‌ಗೆ ವಾಹನಗಳು ಸಿಲುಕಿದವು. ಪೊಲೀಸ್ ಠಾಣೆಯಿಂದ ಕೂಗಳೆತ ದೂರದಲ್ಲಿದ್ದರೂ 2 ಗಂಟೆಗಳ ಬಳಿಕ ಪೊಲೀಸರಾರೂ ಅತ್ತ ಸುಳಿಯದ ಕಾರಣ ರಿûಾ ಚಾಲಕರೇ ಸಂಚಾರ ಸುಗಮಗೊಳಿಸಲು ಮುಂದಾದರು. ಬೆಂಗಳೂರು ಕಡೆಗೆ ತೆರಳುವ ಬಸ್‌ಗಳು ನಿಲ್ದಾಣಕ್ಕೆ ಬಾರದೇ ನೇರವಾಗಿ ಹೋಗಿದ್ದು ಪ್ರಯಾಣಿಕರು ತಂಗು ದಾಣದಲ್ಲಿ ಉಳಿಯುವಂತಾಯಿತು.
ಈ ಮಧ್ಯೆ ಸತತ ಎರಡು ಗಂಟೆ ಕಳೆದ ಬಳಿಕ ಕರ್ತವ್ಯಕ್ಕೆ ತೆರಳಿ ಠಾಣೆಗೆ ಹಿಂತಿರುಗುತ್ತಿದ್ದ ಎಸ್‌ಐ ಅವರಿಗೂ ಟ್ರಾಫಿಕ್ ಜಾಮ್ ಬಿಸಿತಟ್ಟಿದ್ದು, ಅವರು ತಮ್ಮ ವಾಹನದಿಂದ ಇಳಿದು ಬಂದು ವಾಹನ ಸಂಚಾರಕ್ಕೆ ಸುಗಮಗೊಳಿಸಲು ಹರಸಾಹಸ ಪಡಬೇಕಾಯಿತು.
ಧರ್ಮಸ್ಥಳದಲ್ಲಿ ಭಕ್ತಸಂದೋಹ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರು ಆಗಮಿಸಿದ್ದಾರೆ.ವಾರಗಳ ಹಿಂದೆ ಲಕ್ಷದೀಪೋತ್ಸವದ ವೇಳೆ ಲಕ್ಷ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಇದಾದ ಬಳಿಕ ಮತ್ತೆ ಭಕ್ತರು ರಜೆಯ ಹಿನ್ನೆಲೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಸೋಮವಾರ ಮಂಜುನಾಥ ಸ್ವಾಮಿಯ ದರ್ಶನ ಮಾಡುವುದು ವಿಶೇಷವಾದ್ದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಧರ್ಮಸ್ಥಳ, ನೇತ್ರಾವತಿ, ಕನ್ಯಾಡಿ ಸೇರಿದಂತೆ ಬೆಳ್ತಂಗಡಿವರೆಗೆ ವಸತಿಗೃಹಗಳು ಸಂಪೂರ್ಣ ತುಂಬಿವೆ. ಕೆಲವೆಡೆ ಶಾಲಾ, ಕಾಲೇಜುಗಳಿಗೆ ಕ್ರಿಸ್ಮಸ್ ರಜೆ ಹೆಚ್ಚುವರಿ ಇರುವುದರಿಂದ ಈ ವಾರಾಂತ್ಯವರೆಗೆ ಭಕ್ತರ ಸಂಖ್ಯೆ ಹೆಚ್ಚೇ ಇರುವ ಸಾಧ್ಯತೆಯಿದೆ.
ಕೊಲ್ಲೂರಿನಲ್ಲಿ ದಾಖಲೆ ಸಂಖ್ಯೆಯ ಭಕ್ತರು
ಕೊಲ್ಲೂರು: ವಾರಾಂತ್ಯದ ರಜೆ ಹಾಗೂ ಕ್ರಿಸ್ಮಸ್ ಹಬ್ಬದ ರಜೆಯ ಪ್ರಯುಕ್ತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಕಳೆದ ಮೂರು ದಿನಗಳಿಂದ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವಿಯ ದರ್ಶನಕ್ಕೆ ಆಗಮಿಸಿದ್ದರು. ಕರ್ನಾಟಕ ಸಹಿತ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಕಳೆದ 2 ದಿನಗಳಿಂದ 30 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರು.
ವಾಹನ ನಿಲುಗಡೆ ಸಮಸ್ಯೆ
ವಿವಿಧೆಡೆ ವಾಹನ ನಿಲುಗಡೆಗೆ ಸಾಕಷ್ಟು ವ್ಯವಸ್ಥೆಗೊಳಿಸಲಾಗಿದ್ದರೂ ನಿರೀಕ್ಷೆ ಮೀರಿ ವಾಹನಗಳಲ್ಲಿ ಭಕ್ತರು ಕೊಲ್ಲೂರಿಗೆ ಬಂದಿರುವುದರಿಂದ ಪೊಲೀಸರು, ದೇಗುಲದ ಭದ್ರತಾ ಸಿಬಂದಿ ಹರಸಾಹಸಪಟ್ಟು ನಿಯಂತ್ರಿಸಬೇಕಾಯಿತು.
ವಸತಿಗೃಹಗಳು ಭರ್ತಿ
ದೇಗುಲದ ವಸತಿಗೃಹ ಸಹಿತ ಖಾಸಗಿ ವಸತಿಗೃಹಗಳು ಭರ್ತಿಯಾಗಿದ್ದವು. ಬಹುತೇಕ ಮಂದಿ ಹೆಮ್ಮಾಡಿ, ಕುಂದಾಪುರವನ್ನು ಆಶ್ರಯಿಸಬೇಕಾಯಿತು.
ಮಲ್ಪೆ ಕಡಲತೀರದಲ್ಲಿ ಜನಜಾತ್ರೆ
ಮಲ್ಪೆ: ಹೊಸ ವರ್ಷಾಚರಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಕಲರವ ಆರಂಭಗೊಂಡಿದೆ. ಕಡಲತೀರಗಳಲ್ಲಂತೂ ಕಳೆದ 3 ದಿನ ಗಳಿಂದ ಜನಜಾತ್ರೆಯೇ ಸೇರುತ್ತಿದೆ.
ಮಲ್ಪೆ ಮಾತ್ರವಲ್ಲ ಮರವಂತೆ, ಕಾಪು, ಪಡುಬಿದ್ರಿ, ಪಣಂಬೂರು, ಗೋಕರ್ಣ, ಕಾರವಾರ ಕಡಲತೀರಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಕಡಲತೀರದಲ್ಲಿ ಕಿಕ್ಕಿರಿದು ತುಂಬಿರುವ ಪ್ರವಾಸಿಗರು ಜಲಸಾಹಸ ಕ್ರಿಡೆಗಳಲ್ಲೂ ತೊಡಗುತ್ತಿದ್ದಾರೆ.
ಯಾವುದೇ ಅವಘಡ ಸಂಭವಿಸದಂತೆ ಕಡಲ ತೀರಗಳಲ್ಲಿಯೂ ಲೈಫ್‌ಗಾರ್ಡ್‌ಗಳು ಹಾಗೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಕ್ರಿಸ್ಮಸ್ ದಿನವಾದ ಸೋಮವಾರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿತ್ತು. ವಾಹನ ನಿಲುಗಡೆ, ಶೌಚಾಲಯ, ಸ್ನಾನಗೃಹ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಕಾಡಿತು. ಹೋಂಸ್ಟೇ, ರೆಸಾರ್ಟ್ ಹಾಗೂ ಹೊಟೇಲ್‌ಗಳ ಬಾಡಿಗೆ ದರವು ದುಪ್ಪಟ್ಟಾಗಿದೆ. ಬಹುತೇಕ ಹೊಟೇಲ್, ರೆಸಾರ್ಟ್‌ಗಳು ಭರ್ತಿಯಾಗಿವೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.