ಸುರತ್ಕಲ್ ಬಾಕಿಮಾರು ಗದ್ದೆಯಲ್ಲಿ ಸಾಂಪ್ರದಾಯಿಕ ನೇಜಿ ನಾಟಿ
Team Udayavani, Jul 2, 2018, 3:20 AM IST
ಸುರತ್ಕಲ್ : ಇಲ್ಲಿ ನವರಾತ್ರಿಯ ಕದಿರ ಹಬ್ಬಕ್ಕೆ ದೇವರ ಗದ್ದೆಯಿಂದಲೇ ತೆನೆ. ಭಕ್ತರಿಂದಲೇ ನೇಜಿ ನಾಟಿ. ರವಿವಾರ ಸಾಲಾಗಿ ನೇಜಿ ನೆಡುತ್ತಿರುವ ಮಹಿಳೆಯರು, ಯುವಕರು, ಸಹಾಯ ಮಾಡುತ್ತಿರುವ ಮಕ್ಕಳು, ಇನ್ನೊಂದೆಡೆ ಭೂಮಿ ಹದ ಮಾಡುತ್ತಿರುವ ಜೋಡಿ ಎತ್ತುಗಳು. ಇದು ರಥಬೀದಿಯ ಶ್ರೀ ಪುರಾತನ ಮಾರಿಯಮ್ಮ ದೇವಸ್ಥಾನದ ಬಾಕಿ ಮಾರುಗದ್ದೆಯಲ್ಲಿ ಕಂಡು ಬಂದ ವಿಶೇಷ. ಊರಿನ ಭಕ್ತರು, ನವದುರ್ಗಾಫ್ರೆಂಡ್ಸ್ ಸರ್ಕಲ್, ತ್ತೈರೂಪಿಣಿ ಮಹಿಳಾ ಮಂಡಳಿ ಸೇರಿ ಕದಿರ ಹಬ್ಬಕ್ಕೆ ತೆನೆ ನಾಟಿ ಮಾಡುವ ಕಾರ್ಯ ಜರಗಿತು.
ಸುಮಾರು ಇಪ್ಪತ್ತು ಮಹಿಳೆಯರು ಐವತ್ತಕ್ಕೂ ಹೆಚ್ಚು ಯುವಕರ ದಂಡು ನೇಜಿ ನಾಟಿ ಮಾಡುವ ಕಾಯಕದಲ್ಲಿ ಕೈ ಜೋಡಿಸಿದರು. ಐದು ಮಾಗಣೆಯ ಶ್ರೀ ಪುರಾತನ ಮಾರಿಯಮ್ಮ ದೇವಸ್ಥಾನದಲ್ಲಿ ಕದಿರ ಹಬ್ಬಕ್ಕೆ ಸಾವಿರಾರು ಭಕ್ತರು ಆಗಮಿಸಿ ತೆನೆ ಕೊಂಡೊಯ್ಯತ್ತಾರೆ. ಸಾಂಪ್ರದಾಯಿಕವಾಗಿ ದೇವರ ಮುಂದೆ ತೆನಿಯಿಟ್ಟು ಪೂಜೆ ಸಲ್ಲಿಸಿದ ಬಳಿಕ ಭಕ್ತರು ದೇವರ ಗದ್ದೆಯಿಂದ ತೆನೆಯನ್ನು ತಾವೆ ಕೊಯ್ದು ಮನೆಯಲ್ಲಿ ಕಟ್ಟಿ ವರ್ಷ ಪೂರ್ತಿ ದವಸ ಧಾನ್ಯಗಳಿಂದ ಮನೆ ತುಂಬಿರಲಿ ಎಂದು ಪ್ರಾರ್ಥಿಸುತ್ತಾರೆ. ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಶೆಟ್ಟಿಗಾರ್, ನವ ದುರ್ಗಾ ಫ್ರೆಂಡ್ಸ್ ಗೌರವಾಧ್ಯಕ್ಷ ಮಹಾಬಲ ಪೂಜಾರಿ, ಅಧ್ಯಕ್ಷ ವರುಣ್ ಶೆಟ್ಟಿಗಾರ್, ಉಪಾಧ್ಯಕ್ಷ ಸುರೇಶ್ ಪಿ., ಮಹಿಳಾ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡರು.
ಭಕ್ತರಿಂದ ನಾಟಿ ಸೇವೆ
ವರ್ಷದಿಂದ ವರ್ಷಕ್ಕೆ ಎಲ್ಲೆಡೆ ನಾಟಿ ಕಾರ್ಯ ಕ್ಷೀಣಿಸುತ್ತಾ ಬರುತ್ತಿದೆ. ಆದರೆ ಬಾಕಿಮಾರು ಗದ್ದೆಯಲ್ಲಿ ಕದಿರ ಹಬ್ಬಕ್ಕೆ ತೆನೆಯ ಕೊರತೆಯಾಗಿಲ್ಲ. ರಥಬೀದಿಯ ಪುರಾತನ ಮಾರಿಯಮ್ಮ ದೇವಸ್ಥಾನದಲ್ಲಿನ ಕೊರಳ ಹಬ್ಬಕ್ಕೆ ಇಲ್ಲಿನ ಬಾಕಿಮಾರು ಗದ್ದೆಯ ತೆನೆ ಬಳಸಿ ದೇವಸ್ಥಾನ, ಮನೆಗಳಲ್ಲಿ ಕಟ್ಟಲಾಗುತ್ತದೆ. ಈ ವಿಶೇಷ ನಾಟಿ ಕಾಯಕದಲ್ಲಿ ಭಕ್ತರು, ಸಂಘ – ಸಂಸ್ಥೆ ಸದಸ್ಯರು ಒಟ್ಟಾಗಿ ದೇವರ ಸೇವೆ ಮಾಡುತ್ತಾ ಬಂದಿದ್ದಾರೆ.
– ಕೇಶವ ಶೆಟ್ಟಿಗಾರ್, ಆಡಳಿತ ಮಂಡಳಿ ಅಧ್ಯಕ್ಷ