D.K.ಗಡಿ ನಿರ್ಬಂಧ ಇಲ್ಲ; ಮುನ್ನೆಚ್ಚರಿಕೆ ಕ್ರಮ: ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ
Team Udayavani, Dec 20, 2023, 11:19 PM IST
ಮಂಗಳೂರು: ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸದ್ಯಕ್ಕೆ ನಿರ್ಬಂಧ ಹೇರುವ ಅಗತ್ಯವಿಲ್ಲ. ಆದರೆ ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಕೆಲಸವನ್ನು ವಿಶೇಷ ಆದ್ಯತೆಯಲ್ಲಿ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರಿನ ಸ್ವರ್ಗ, ಸುಳ್ಯಪದವು, ಸುಳ್ಯದ ಜಾಲ್ಸೂರು ಚೆಕ್‌ಪೋಸ್ಟ್ ಗಳಲ್ಲಿ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಜಾಗೃತಿ ಬಗ್ಗೆ ಪ್ರಚಾರ ಮಾಡಲು ಕ್ರಮ ಕೈಗೊಂಡಿದ್ದೇವೆ. ಮುನ್ನೆಚ್ಚರಿಕೆ ಉದ್ದೇಶಕ್ಕೆ ಈಗಾಗಲೇ ತಾಲೂಕುವಾರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ.
ಆಕ್ಸಿಜನ್ ಬೆಡ್, ಐಸಿಯು ಲಭ್ಯತೆ, ಆಕ್ಸಿಜನ್ ಘಟಕಗಳನ್ನು ಸನ್ನದ್ಧವಾಗಿಡುವಂತೆ ಸೂಚನೆ ನೀಡಿದ್ದೇವೆ. ಜಿಲ್ಲಾ
ವೆನ್ಲಾಕ್ ಆಸ್ಪತ್ರೆಯ ವೈರಾಲಜಿ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದರು.
ಈಗಾಗಲೇ ವಿಟಿಎಂ 300 ಕಿಟ್‌ಗಳು ಇದ್ದು, ಸದ್ಯದಲ್ಲೇ 1 ಸಾವಿರ ವಿಟಿಎಂ ಕಿಟ್‌ಗಳು ಜಿಲ್ಲೆಗೆ ಬರಲಿದೆ. ಆರ್‌ಟಿಪಿಸಿಆರ್ ಒಂದು ಲಕ್ಷ ಕಿಟ್‌ಗಳಿದ್ದು, ಪರೀಕ್ಷೆ ನಡೆಸಲು ಇರುವ ಸಮಸ್ಯೆಗಳು ಬಗೆಹರಿಯುತ್ತದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಒಟ್ಟು 10,986 ಬೆಡ್‌ಗಳು, 1,376 ಆಕ್ಸಿಜನ್ ಬೆಡ್, 722 ಐಸಿಯು ಬೆಡ್ ಮತ್ತು 336 ವೆಂಟಿಲೇಟರ್ ಹೊಂದಿದೆ ಎಂದು ತಿಳಿಸಿದರು.
ಪ್ರತೀ ದಿನ 321 ಮಂದಿಯ ಪರೀಕ್ಷೆ
ಜಿಲ್ಲೆಯಲ್ಲಿ ದಿನಕ್ಕೆ ಒಟ್ಟು 321 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ 100 ರ್ಯಾಪಿಡ್ ಟೆಸ್ಟ್ ಮತ್ತು 221 ಆರ್‌ಟಿಪಿಸಿಆರ್ ಪರೀಕ್ಷೆ ನಡೆಸುತ್ತೇವೆ. ಎಲ್ಲ ಸಾರಿ ಪ್ರಕರಣಗಳು ಹಾಗೂ 20 ಐಎಲ್‌ಐ ಪ್ರಕರಣಗಳ ಪೈಕಿ 1 ಐಎಲ್‌ಐ ಪ್ರಕರಣವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಐಎಲ್‌ಐ ಲಕ್ಷಣಗಳಿದ್ದರೆ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ, ಅಗತ್ಯ ಪರೀಕ್ಷೆ, ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗಲಕ್ಷಣವಿದ್ದರೆ ಮಾಸ್ಕ್ ಧರಿಸಬೇಕು, 60 ವರ್ಷ ಮೇಲ್ಪಟ್ಟವರು ಹಾಗೂ ಇತರ ರೋಗಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಮಾಸ್ಕ್ ಬಳಸಬೇಕು ಎಂದರು.
ಶಾಲಾ-ಕಾಲೇಜುಗಳಿಗೆ ಸೂಚನೆ
ಕೇರಳ ಭಾಗದಿಂದ ಆಗಮಿಸುವ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣ, ಐಎಲ್‌ಐ, ಸಾರಿ ಪ್ರಕರಣ ಕಂಡುಬಂದರೆ ಅವರನ್ನು ಐಸೊಲೇಶನ್‌ಗೆ ಒಳಪಡಿಸಿ, ಕೊವಿಡ್ ತಪಾಸಣೆ ನಡೆಸಬೇಕು ಎಂದು ಎಲ್ಲ ವಿದ್ಯಾಸಂಸ್ಥೆಗಳಿಗೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಸದಾಶಿವ ಶಾನಭಾಗ್, ಆರ್‌ಸಿಎಚ್ ಅಧಿಕಾರಿ ಡಾ| ರಾಜೇಶ್, ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಉಡುಪಿ ಜಿಲ್ಲೆಯಲ್ಲಿ ಪ್ರಕರಣ ಇಲ್ಲ
ಉಡುಪಿ: ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಪ್ರಕರಣ ವರದಿಯಾಗಿಲ್ಲ. ಕಳೆದ ಹಲವು ತಿಂಗಳಿನಿಂದ ಕೋವಿಡ್ ಪ್ರಕರಣ ಶೂನ್ಯವಿದ್ದು, ಕೇಂದ್ರ, ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಕೋವಿಡ್ ಬಗ್ಗೆ ಕಟ್ಟೆಚ್ಚರ, ಮುಂಜಾಗ್ರತೆ ವಹಿಸಲಾಗಿದೆ.
ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಒಬ್ಬರಿಗೆ ಕೋವಿಡ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ. 20ರಂದು ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಉಡುಪಿ ಮೂಲದ 82 ವರ್ಷದ ವ್ಯಕ್ತಿಯೊಬ್ಬರು ಬಹು ಅಂಗಾಂಗ ಕಾಯಿಲೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಕೋವಿಡ್ ದೃಢಪಟ್ಟಿದ್ದು, ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪ್ರಯಾಣ ಮಾಹಿತಿಯ ವಿವರವನ್ನು ಕಲೆ ಹಾಕಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಬರಿಮಲೆ ಯಾತ್ರಿಕರ ತಪಾಸಣೆ ಸದ್ಯಕ್ಕಿಲ್ಲ
ಶಬರಿಮಲೆಗೆ ಹೋದವರು ಮತ್ತೆ ಜಿಲ್ಲೆಗೆ ಆಗಮಿಸುವಾಗ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಚಿಂತನೆ ಸದ್ಯಕ್ಕಿಲ್ಲ. ಒಂದು ವೇಳೆ ಅವರಲ್ಲಿ ಕೋವಿಡ್ ಲಕ್ಷಣ ಕಂಡುಬಂದರೆ ತಪಾಸಣೆಗೆ ಒಳಪಡಬೇಕು ಎಂದು ಡಾ| ತಿಮ್ಮಯ ತಿಳಿಸಿದ್ದಾರೆ.
ಆತಂಕಪಡುವ ಅಗತ್ಯವಿಲ್ಲ
ದ.ಕ.ದಲ್ಲಿ ಕೋವಿಡ್ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಕಾಸರಗೋಡಿನಲ್ಲಿ ಸದ್ಯ 27 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 25 ಮಂದಿ ಹೋಂ ಐಸೋಲೇಶನ್‌ನಲ್ಲಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಒಂದೆರಡು ಪ್ರಕರಣ ಮಾತ್ರ ವರದಿಯಾಗುತ್ತಿದೆ ಎಂದು ಅಲ್ಲಿನ ಡಿಎಚ್‌ಒ ಮಾಹಿತಿ ನೀಡಿದ್ದಾರೆ’ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.