Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Team Udayavani, Apr 24, 2024, 9:12 AM IST
ಮಂಗಳೂರು: ಭಾರತ ಅಮೃತಕಾಲಕ್ಕೆ ಪಾದಾರ್ಪಣೆ ಮಾಡುವ ಸಮಯದಲ್ಲೇ ವಿಕಸಿತ ಭಾರತಕ್ಕೆ ವಿಕಸಿತ ದಕ್ಷಿಣ ಕನ್ನಡ ಪರಿಕಲ್ಪನೆಗೆ ಪೂರಕವಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ “ನವಯುಗ ನವಪಥ’ ಎನ್ನುವ ಕಾರ್ಯಸೂಚಿಯನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಗಳವಾರ ಬಿಡುಗಡೆ ಮಾಡಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ಆಯೋಜಿಸಿದ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೈ ಅವರು ಈ ಪ್ರಣಾಳಿಕೆಯನ್ನು ಅನಾವರಣಗೊಳಿಸಿದರು.
ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಾಪುಗಾಲು, ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ, ಸ್ಟಾರ್ಟ್ ಅಪ್ ಮತ್ತು ಉದ್ಯಮಶೀಲತೆ, ಪ್ರವಾಸೋದ್ಯಮ, ನಾರಿಶಕ್ತಿ, ಸಂಸ್ಕೃತಿ ಹಾಗೂ ಪರಂಪರೆ, ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಯುವಜನತೆ ಮತ್ತು ಸಂವಹನ, ಕರಾವಳಿ ಅಭಿವೃದ್ಧಿ ಮತ್ತು ಭದ್ರತೆ ಅಂಶಗಳು ಇದರಲ್ಲಿವೆ.
ಈ ವೇಳೆ ಪ್ರತಿಕ್ರಿಯಿಸಿದ ಕ್ಯಾ| ಚೌಟ ಅವರು, 9 ಅಂಶಗಳನ್ನು ಮುಂದಿಟ್ಟು 2047ರ ವೇಳೆಗೆ ವಿಕಸಿತ ಭಾರತವನ್ನು ರೂಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಗೆ ಪೂರಕವಾಗಿ ವಿಕಸಿತ “ದಕ್ಷಿಣ ಕನ್ನಡ’ವನ್ನು ಸಾಕಾರ ಗೊಳಿಸಲು ಈ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿದೆ. ಕಳೆದ 10 ವರ್ಷದ ಮೋದಿಯವರ ಅವಧಿಯಲ್ಲಿ ನಮ್ಮ ಸಂಸದ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದ್ದು, ಮತ್ತೆ ಕೆಲವು ಪ್ರಗತಿಯಲ್ಲಿವೆ. ಅವುಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿ ಪೂರ್ಣಗೊಳಿಸುವುದರ ಜತೆಗೆ ಇನ್ನಷ್ಟು ಅಭಿವೃದ್ಧಿ ಸಾಧಿಸುವುದು ಈ ಕಾರ್ಯಸೂಚಿಯ ಉದ್ದೇಶ ಎಂದರು.
ಹೆದ್ದಾರಿ ಕಾಮಗಾರಿಗೆ ಆದ್ಯತೆ
ಬಿ.ಸಿ.ರೋಡ್-ಅಡ್ಡಹೊಳೆ ನಡು ವಿನ ರಾಷ್ಟ್ರೀಯ ಹೆದ್ದಾರಿ ಕಾಮ ಗಾರಿಯನ್ನು ಪೂರ್ತಿಗೊಳಿಸುವುದು ನಮ್ಮ ಆದ್ಯತೆ. ಅದೇ ರೀತಿ ಪ್ರಗತಿಯಲ್ಲಿರುವ ಬಿ.ಸಿ.ರೋಡ್-ಪುಂಜಾಲಕಟ್ಟೆ- ಚಾರ್ಮಾಡಿ ಹೆದ್ದಾರಿ, ಕುಲಶೇಖರದಿಂದ ಮೂಡುಬಿದಿರೆಯಾಗಿ ಸಾಂಗ್ಲಿ ವರೆಗಿನ ಹೆದ್ದಾರಿ, ಸಂಪಾಜೆಯಿಂದ ಮಾಣಿ ವರೆಗಿನ ಹೆದ್ದಾರಿ ಕಾಮಗಾರಿ, ಅಂತೆಯೇ ಪ್ರಾರಂಭಗೊಳ್ಳಲಿರುವ ಉಜಿರೆಯಿಂದ ಪೆರಿಯಶಾಂತಿ ವರೆಗಿನ ಹೆದ್ದಾರಿ ಕಾಮಗಾರಿ ಗಳನ್ನು ಆದ್ಯತೆ ಮೇರೆಗೆ ಪೂರ್ಣ ಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ದೇಯಿ ಬೈದ್ಯೇತಿ ಹೆಸರಿನಲ್ಲಿ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆ, ಸಂಸ್ಕೃತಿ ಮತ್ತು ಪರಂಪರೆ, ಕೃಷಿ ಸಂಗೋಪನೆ, ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ಶಾಲೆ ಸ್ಥಾಪನೆ, ಭಯೋತ್ಪಾದನೆ ಚಟುವಟಿಕೆಗಳ ನಿಗ್ರಹಕ್ಕೆ ಹಾಗೂ ಜಾಲವನ್ನು ಕಿತ್ತು ಹಾಕುವ ದೃಷ್ಟಿಯಿಂದ ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆ ಮತ್ತು ವಿಧಿ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆಯ ಉದ್ದೇಶವಿದೆ ಎಂದು ಕ್ಯಾ| ಬ್ರಿಜೇಶ್ ಚೌಟ ಅವರು ವಿವರಿಸಿದರು.
ಹೊಸ ರೈಲು ಮಾರ್ಗ, ಕಾರಿಡಾರ್
ಮಂಗಳೂರು-ಬೆಂಗಳೂರು ನಡುವೆ ಒಂದು ಹೊಸ ರೈಲು ಮಾರ್ಗದ ಕಲ್ಪನೆಯಿದೆ. ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಒಂದು ವೇಗದ ಕಾರಿಡಾರ್ ನಿರ್ಮಾಣ ಮಾಡುವ ಚಿಂತನೆಯಿದೆ. ಇದರಿಂದ ಮಂಗಳೂರು ಬಂದರಿನ ಅಭಿವೃದ್ಧಿಗೆ ಹೊಸ ವೇಗ ಸಿಗಬಹುದು.
ಪ್ರವಾಸೋದ್ಯಮ ದೃಷ್ಟಿಯಿಂದ ಸಸಿಹಿತ್ಲು ಬೀಚನ್ನು ಸಾಹಸ ಕ್ರೀಡಾ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು, ದೇಗುಲ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ; ನಾರೀ ಶಕ್ತಿ ಅಭಿವೃದ್ಧಿಗೆ, ಮಹಿಳಾ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮ ಯೋಜನೆಯಲ್ಲಿದೆ. ಎಂದು ಕ್ಯಾ| ಚೌಟ ತಿಳಿಸಿದ್ದಾರೆ.
ಬ್ಯಾಕ್ ಟು ಊರು!
ನಮ್ಮ ಜಿಲ್ಲೆಯ ಜನರು ದೇಶದ ಬೇರೆ ಬೇರೆ ಭಾಗಗಳಿಗೆ ಹೋಗಿ ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಯಶಸ್ಸು ಕಂಡಿದ್ದಾರೆ. ಅಂಥವರನ್ನು “ಬ್ಯಾಕ್ ಟು ಊರು’ ಎಂಬ ಚಿಂತನೆಯಲ್ಲಿ ಮರಳಿ ಊರಿಗೆ ಕರೆಸಿಕೊಳ್ಳುವ ಕಲ್ಪನೆಯಿದೆ. ಅವರನ್ನೆಲ್ಲ ಸಕಾರಾತ್ಮಕವಾಗಿ ತೊಡಗಿಸಿಕೊಂಡು ಈ ಜಿಲ್ಲೆಯ ಅಭಿವೃದ್ಧಿಗೆ ಹೇಗೆ ಕೆಲಸ ಮಾಡಬಹುದು ಎಂದು ಚಿಂತಿಸಿ ಅವರಿಗೆ ಪೂರಕವಾಗುವ ಸನ್ನಿವೇಶ ರೂಪಿಸುವ ಯೋಜನೆಯಿದೆ. “ಬಿ ಯುವರ್ ಓನ್ ಬಾಸ್’ ಎನ್ನುವ ಕಲ್ಪನೆಯಡಿ ಉದ್ಯಮಶೀಲರಾಗಲು ಯುವಕರಿಗೆ ಪ್ರೋತ್ಸಾಹ, ಗೇಮಿಂಗ್, ಆ್ಯನಿಮೇಶನ್, ಡಿಸೈನ್ ಮುಂತಾದ ಸೃಜನಶೀಲ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ನೀಡುವುದು, ದ.ಕ. ಜಿಲ್ಲೆ ಹಿಮ ಒಂದನ್ನು ಬಿಟ್ಟರೆ ಬೇರೆಲ್ಲ ಸಿಗುವ ಒಂದು ಪ್ರದೇಶ. ಹಾಗಾಗಿ ಇಲ್ಲಿ ಒಂದು ಫಿಲ್ಮ್ ಸಿಟಿ ನಿರ್ಮಿಸಲು ಪೂರಕ ಪ್ರಯತ್ನಗಳನ್ನು ಮಾಡಬೇಕೆಂಬ ಚಿಂತನೆಯಿದೆ ಎಂದು ಚೌಟ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.