ವರಮಹಾಲಕ್ಷ್ಮೀ ಮುನಿದಲ್ಲಿ ಮರು ನಿರ್ಮಾಣ ವ್ರತ
ಉತ್ತು ಬಿತ್ತಿದವನಿಗಷ್ಟೇ ಗೊತ್ತು ಭತ್ತ ಕಾಳಿನ ಬೆಲೆ!
Team Udayavani, Aug 20, 2019, 5:50 AM IST
ನೀರಿನ ಹೊಡೆತಕ್ಕೆ ನೆಲಸಮವಾದ ಕೃಷ್ಣಪ್ಪ ಪೂಜಾರಿ ಅವರ ಗದ್ದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್ ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ -ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ ಜತೆಗೂಡೋಣ.
ಬೆಳ್ತಂಗಡಿ: ಬೆವರು ಸುರಿಸಿ ಗದ್ದೆ ಹದ ಮಾಡಿ, ಉತ್ತು ಬಿತ್ತಿ ಬೆಳೆದು ಮಳೆಗಾಲಕ್ಕಾಗಿ ಕೂಡಿಟ್ಟ ಭತ್ತದ ಮೂಟೆ ಗಳನ್ನು ಉಕ್ಕೇರಿದ ನೇತ್ರಾವತಿ ತನ್ನ ಮಡಿಲಿಗೆ ಹಾಕಿಕೊಂಡು ಹೊರಟೇ ಹೋಗಿದ್ದಳು. 9 ಕ್ವಿಂಟಾಲ್‌ನಷ್ಟಿದ್ದ ಮೂಟೆಗಳಲ್ಲಿ ಬೊಗಸೆಯಷ್ಟು ಅಕ್ಕಿ ಕೂಡ ಅನ್ನವಾಗಿ ಹೊಟ್ಟೆ ಸೇರಿಲ್ಲ…
ಇದು ಬೆಳ್ತಂಗಡಿಯ ಪ್ರವಾಹಕ್ಕೆ ನಲುಗಿದ ಮನೆಗಳ ಕಥನ…
ಇಂದಬೆಟ್ಟು ಗ್ರಾಮದ ಕಟ್ನಡ್ಕ ಸಮೀಪ ಕೃಷ್ಣಪ್ಪ ಪೂಜಾರಿ ತನ್ನ ಒಂದು ಎಕ್ರೆ ಗದ್ದೆಯಲ್ಲಿ ಸಮೃದ್ಧಿಯ ಪೈರು ಬೆಳೆದಿದ್ದರು. ಆ.9ರಂದು ಎರಗಿದ ನೆರೆ ಗದ್ದೆಯನ್ನೂ ಮಳೆಗಾಲಕ್ಕಾಗಿ ಮನೆಯೊಳಗೆ ಕೂಡಿಟ್ಟಿದ್ದ ಭತ್ತವನ್ನೂ ಸೆಳೆದೊಯ್ದಿದೆ.
“”ಮಧ್ಯಾಹ್ನ 3.30ರ ಸಮಯಕ್ಕೆ ನೀರು ಏರುತ್ತಿರುವುದು ಕಂಡಿತು. ಮನೆಯೊಳಗಿದ್ದ ವಸ್ತುಗಳನ್ನು ಒಯ್ಯಲು ಸಮಯವೇ ನೀಡಲಿಲ್ಲ. ನಾನು, ಹೆಂಡತಿ ಮತ್ತು ಮಗ ಮನೆಯಲ್ಲಿ ಇದ್ದೆವು. ಮನೆ ಮುಂಭಾಗದ ತೋಟಕ್ಕೆ ನುಗ್ಗಿದ ನೀರು ಇದ್ದಕ್ಕಿದ್ದಂತೆ ಪ್ರವಾಹದ ರೂಪ ಪಡೆದು ಮನೆಯನ್ನು ನುಂಗಿಹಾಕಲು ಹವಣಿಸುತ್ತಿರುವುದು ಕಾಣಿಸಿತು. ಮನೆಯಾಕೆಯನ್ನು ಮಗನನ್ನು ಕರೆದು ಕೊಂಡು ಓಡಲು ಹೇಳಿದೆ. ಹಟ್ಟಿಯಲ್ಲಿದ್ದ ದನ- ಕರು ಬಿಚ್ಚಿ ನಾನೂ ಮೇಲಕ್ಕೆ ಓಡಿದೆ. ನೋಡ ನೋಡುತ್ತಲೆ ಮನೆ ಹಿಂಬದಿಯ ಕೊಟ್ಟಿಗೆ ಜರಿದು ಬಿತ್ತು.
ನನಗೆ ಮನೆಗಿಂತಲೂ ಮೊದಲು ನೆನಪಾದದ್ದು ಬೆವರು ಸುರಿಸಿ ಬೆಳೆದು ಕೂಡಿಟ್ಟ ಭತ್ತ. ಮತ್ತೂಂದೆಡೆ ಒಂದು ತಿಂಗಳಷ್ಟೇ ಹಿಂದೆ ನೆಟ್ಟಿದ್ದ ನೇಜಿ. ಎರಡೂ ಕೊಚ್ಚಿ ಹೋಗಿದ್ದವು. ನನ್ನಲ್ಲಿದ್ದದ್ದು ಏನೂ ಮಾಡಲಾಗದ ಅಸಹಾಯಕತೆ ಮಾತ್ರ. ಪ್ರಾಣ ಉಳಿಸಿಕೊಂಡೆವು ಎಂಬು ದೊಂದೇ ಸಮಾಧಾನ ಎಂದರು ಕೃಷ್ಣಪ್ಪ. ಕೃಷ್ಣಪ್ಪ ಎಷ್ಟೋ ಮಳೆಗಾಲಗಳನ್ನು ಕಂಡ ಗಟ್ಟಿಮುಟ್ಟಿನ ಮನುಷ್ಯ. ಆದರೆ ಮೊನ್ನೆಯ ದುರಂತದೆದುರು ಮೆದುವಾಗಿದ್ದಾರೆ.
ಹಬ್ಬದ ಖುಷಿ ನೀಡದ ವರಮಹಾಲಕ್ಷ್ಮೀ
ವರಮಹಾಲಕ್ಷ್ಮೀ ಹಬ್ಬದ ಸಂತೋಷದಲ್ಲಿದ್ದ ನಮಗೆ ನೇತ್ರಾವತಿ ನೀಡಿದ ಆಘಾತ ಯಾವ ಕಾಲಕ್ಕೂ ಮರೆಯಲಾಗದಂಥದ್ದು. ವರವ ತರಬೇಕಿದ್ದ ಮಹಾಲಕ್ಷ್ಮೀ ಆಸರೆಯನ್ನೇ ಕಸಿದೊಯ್ದಿದಿದ್ದಾಳೆ. ಉಕ್ಕೇರಿದ ನದಿ ನೀರಿನಲ್ಲಿ ಸ್ಥಿರ-ಚರ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ಭಾವುಕರಾದರು ಜಯಶ್ರೀ ನಂದೇರಿಮಾರು.
“”ಆಗತಾನೇ ಊಟ ಮಾಡಿ ಒಂದಷ್ಟು ವಿಶ್ರಮಿಸಿಕೊಳ್ಳಲೆಂದು ಕುಳಿತಿದ್ದೆವು. ನನ್ನ ಜತೆ ತಾಯಿ, ಎರಡು ವರ್ಷ ಎಂಟು ತಿಂಗಳ ಮಗು ಇದ್ದರು. ಅವರನ್ನು ಜೀವದ ಹಂಗು ತೊರೆದು ರಕ್ಷಿಸಿದೆ. ಕೊಟ್ಟಿಗೆಯಲ್ಲಿ ಐದು ದನ, ನಾಯಿಗಳನ್ನು ಬಿಡದೆ ಪಾರು ಮಾಡಿದ್ದೇನೆ. ಉಟ್ಟ ಬಟ್ಟೆಯಲ್ಲೇ ಓಡಿದೆವು. ಸ್ಥಳೀಯರು ಸಹಕರಿಸಿದ್ದರಿಂದ ಜೀವ ಉಳಿದಿದೆ. ಮನೆ ಹಿಂಬದಿಯ ಎತ್ತರ ಪ್ರದೇಶ ತಲುಪಿ ಹಿಂದಿರುಗಿ ನೋಡಿದಾಗ ಹುಟ್ಟಿ ಬೆಳೆದ ಮನೆ ಕಣ್ಣಮುಂದೆಯೇ ಮಣ್ಣಿನ ಮುದ್ದೆಯಂತೆ ಉದುರಿತು. ಇದೆಲ್ಲವೂ ನಡೆದದ್ದು ಕೇವಲ ಹತ್ತು ನಿಮಿಷಗಳಲ್ಲಿ” ಎನ್ನುತ್ತಲೇ ಕಣ್ಣೀರಿಟ್ಟರು ಜಯಶ್ರೀ.
ಮೂರು ಹಸು ಕಳೆದುಕೊಂಡ ಮೂಕ ವೇದನೆ
ಇಂದಬೆಟ್ಟು ಸಮೀಪದ ಹೊಳೆಯ ಮತ್ತೂಂದು ಬದಿಯಲ್ಲಿರುವ ನೂಜಿ ನಿವಾಸಿ ಫ್ರಾನ್ಸಿಸ್ ಟಿ.ಪಿ. ಅವರ ಹಸುಗಳು ನೆರೆಯ ನೀರಿನಲ್ಲಿ ಕೊಚ್ಚಿಹೋದ ಘಟನೆ ಹೃದಯ ವಿದ್ರಾವಕ. “”ನಾನು, ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿದ್ದೆವು, ಅದು ಆ.9ರ ಸಂಜೆ 3.30ರ ಸಮಯ. ಮಳೆ ಜೋರಾಗಿತ್ತು. ಮನೆಯ ಹೊರ ಬಂದು ನೋಡಿದರೆ ಎಲ್ಲೆಲ್ಲೂ ಕೆಂಬಣ್ಣದ ನೆರೆಯ ರೌದ್ರ ನರ್ತನ. ಹೆಂಡತಿ ಮಕ್ಕಳಲ್ಲಿ ಓಡಲು ಹೇಳಿದೆ. ನಾನೂ ಓಡಿ ಇನ್ನೇನು ಎತ್ತರದ ಸ್ಥಳ ಮುಟ್ಟಿ ಪಾರಾದೆವು ಎನ್ನುವಷ್ಟರಲ್ಲಿ ನಮ್ಮನ್ನು ಕೈಬಿಟ್ಟಿರಾ ಎಂದು ಕರೆದಂತೆ ಹಸುಗಳ ರೋದನ ಕೇಳಿಸಿತು. ಓಡೋಡಿ ಹೋಗಿ ಬಿಡಿಸಬೇಕೆಂದರೆ ನನ್ನನ್ನೇ ನುಂಗುವಂತೆ ನೀರು ಏರಿಬಂತು. ಏನೂ ಮಾಡಲಾಗದೆ ಮೂಕನಾದೆ. ಒಂದು ಹಸು ಕಣ್ಣೆದುರೇ ನೆರೆಯಲ್ಲಿ ಕೊಚ್ಚಿ ಹೋಯಿತು. ಮತ್ತೆರಡು ಕಟ್ಟಿದ ಸ್ಥಳದಲ್ಲೇ ಅಸುನೀಗಿದವು.
ಮರುದಿನ ಹೋಗಿ ನೋಡಿದರೆ ಮಗಳ ನಿಶ್ಚಿತಾರ್ಥಕ್ಕೆ ಖರೀದಿಸಿದ್ದ ಬಟ್ಟೆ ಸಹಿತ ಮನೆಯೊಳಗಿದ್ದ ಎಲ್ಲವೂ ನೀರುಪಾಲಾಗಿದ್ದವು” ಎಂದು ವಿವರಿಸಿದರು ಫ್ರಾನ್ಸಿಸ್. ಅವರ ಕುಟುಂಬ 70 ವರ್ಷಗಳಿಂದ ಇಲ್ಲಿ ನೆಲೆಸಿದೆ. ಈವರೆಗೆ ಹೊಳೆ ತುಂಬಿ ಹರಿದಿದ್ದರೂ ಈ ಮಟ್ಟಕ್ಕೆ ನೆರೆ ಏರಿದ್ದು ಕಂಡಿರಲಿಲ್ಲ ಎಂದು ಹೇಳುವಾಗ ಅಂದು ಕಂಡ ದೃಶ್ಯಗಳ ಭಯಾನಕತೆ ಅವರ ಕಣ್ಣುಗಳಲ್ಲಿ ತುಯ್ಯುತ್ತಿತ್ತು.
ಮತ್ತೆ ಸಹಜತೆಯತ್ತ
ಪ್ರಕೋಪದ ಭೀತಿ ಎದುರಿಸಿದ್ದ ಮನೆ ಮಂದಿ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಮನೆ ಕಳೆದುಕೊಂಡ ಜಯಶ್ರೀ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಶಾಸಕರು ಮನೆ ಕಟ್ಟಿಕೊಡುವ ಭರವಸೆ ನೀಡಿರುವುದು ಕುಟುಂಬಕ್ಕೆ ತುಸು ಸಮಾಧಾನ ತಂದಿದೆ. ಕೃಷ್ಣಪ್ಪ ಪೂಜಾರಿ ತನ್ನ ಮನೆಯೊಳಗೆ ಮೊಣಕಾಲೆತ್ತರಕ್ಕೆ ತುಂಬಿದ್ದ ಕೆಸರನ್ನು ಸ್ವತ್ಛಗೊಳಿಸಿ ವಾಸ್ತವ್ಯಕ್ಕೆ ಅಣಿಯಾಗಿದ್ದಾರೆ. ಫ್ರಾನ್ಸಿಸ್ ತನ್ನ ಪುತ್ರಿಯ ನಿಶ್ಚಿತಾರ್ತಕ್ಕೆ ಸಿದ್ಧತೆ ಪೂರ್ಣಗೊಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಎಲ್ಲರೂ ಮತ್ತೆ ಬದುಕು ಕಟ್ಟುವ ಕನಸಿನ ಜತೆಗೆ ಸಾಗುತ್ತಿದ್ದಾರೆ.
ಬದುಕಿದ್ದೇ ಹೆಚ್ಚು
ಮನೆಗೆ ಆಸರೆಯಾಗಿದ್ದ ದನಗಳನ್ನು ರಕ್ಷಿಸಲು ನನ್ನಿಂದ ಆಗಲಿಲ್ಲ. ಏಕಾಏಕಿ ನುಗ್ಗಿದ ನೀರಿನಲ್ಲಿ ನಾವು ಬದುಕಿದ್ದೇ ಹೆಚ್ಚು. ಪಂಪ್‌ಸೆಟ್ ಛಿದ್ರವಾಗಿದೆ. ನಾವು, ನಮ್ಮ ಕುಟುಂಬ 70 ವರ್ಷದಿಂದ ಇಲ್ಲಿ ವಾಸವಿದ್ದೆವು. ಇಂತಹ ನೆರೆ ಕಂಡಿರಲಿಲ್ಲ.
– ಫ್ರಾನ್ಸಿಸ್ ಟಿ.ಪಿ.
ಅಕ್ಕಿ ಮಣ್ಣುಪಾಲು
ಮನೆಯಲ್ಲಿದ್ದ 9 ಕ್ವಿಂಟಾಲ್ ಅಕ್ಕಿ ಮಣ್ಣು ಪಾಲಾಗಿದೆ. ಏರಿದ ನೆರೆ ಇಳಿಯುವುದ ರೊಂದಿಗೆ ವರ್ಷಾನುಗಟ್ಟಲೆಯಿಂದ ಕಟ್ಟಿ ಬೆಳೆಸಿದ ಬದುಕೂ ಇಳಿದುಹೋಗಿದೆ. ಮನೆಯೊಳಗಿದ್ದ ಯಾವುದೇ ಸೊತ್ತು ಮತ್ತೆ ಬಳಸುವಂತಿಲ್ಲ. ಎರಡು ತಿಂಗಳ ಹಿಂದೆ 1.80 ಸೆಂಟ್ಸ್ ಗದ್ದೆಯಲ್ಲಿ 32 ಸಾವಿರ ರೂ. ಖರ್ಚು ಮಾಡಿ ನೇಜಿ ನೆಟ್ಟಿದ್ದೆ. ಅಲ್ಲೆಲ್ಲ ಮಣ್ಣುತುಂಬಿದೆ. ಮನೆಯ ವಿದ್ಯುತ್ ಸಂಪರ್ಕ ಮತ್ತೆ ಹೊಸದೇ ಆಗಬೇಕಿದೆ.
– ಕೃಷ್ಣಪ್ಪ ಪೂಜಾರಿ, ಕಟ್ನಡ್ಕ
ಯಾವುದೂ ಇಲ್ಲ
ಮನೆ ಕಳೆದುಕೊಂಡ ನಮಗೆ 10 ಸಾವಿರ ರೂಪಾಯಿ ನೀಡಿದ್ದಾರೆ. 5 ಸೆಂಟ್ಸ್ ಜಾಗ ಮನೆ ಕೊಡಿಸುವುದಾಗಿ ಶಾಸಕರು ಭರವಸೆ ಕೊಟ್ಟಿದ್ದಾರೆ. ಸದ್ಯ ಕುವೆತ್ಯಾರು ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. 25 ಸೆಂಟ್ಸ್ ಜಾಗ ನಮ್ಮದಾಗಿತ್ತು. ಈಗ ಮತ್ತೆ ಯಾವಾಗ ಪ್ರವಾಹ ಬರುತ್ತದೋ ಎಂಬ ಭಯದಿಂದ ಮತ್ತೆ ಅಲ್ಲೇ ಹೋಗಿರಲು ಭಯವಾಗುತ್ತಿದೆ. ಮನೆ, ಟಿವಿ, ಕಪಾಟು, ಬಟ್ಟೆ ಯಾವುದೂ ಇಲ್ಲ.
– ಜಯಶ್ರಿ, ನಂದೇರಿಮಾರು
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.