Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
ಮೊಳಕೆಯಲ್ಲೇ ಬಾಡಿದವು ಅರಳಬೇಕಿದ್ದ 5 ಜೀವಗಳು !
Team Udayavani, Apr 18, 2024, 6:55 AM IST
ಮಂಗಳೂರು: ಕಳೆದೊಂದು ವಾರದಲ್ಲಿ ದ.ಕ. ಜಿಲ್ಲೆಯಲ್ಲಿ 5 ಮಂದಿ ಹದಿಹರೆಯದವರು ಪ್ರಾಣ ಕಳೆದುಕೊಂಡಿದ್ದು ಹೆತ್ತವರಲ್ಲಿ ನೋವು ಮಡುಗಟ್ಟಿದೆ. ಇಬ್ಬರು ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ಇಬ್ಬರು ವಿದ್ಯಾರ್ಥಿನಿಯರು, ಓರ್ವ ಯುವತಿ ದಿಢೀರ್ ಅಸೌಖ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಶಿರ್ತಾಡಿಯ ಹೈಸ್ಕೂಲ್‌ವೊಂದರ 10ನೇ ತರಗತಿ ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ (15) ಅಸೌಖ್ಯದಿಂದ ಎ.14ರಂದು ಮೃತಪಟ್ಟಿದ್ದಾರೆ. ಎ.16ರ ಮುಂಜಾವ ಮೂಲ್ಕಿಯ ಕಾಲೇಜೊಂದರ ವಿದ್ಯಾರ್ಥಿನಿ ಜುನಾ (19) ಹಾಸ್ಟೆಲ್‌ನಲ್ಲಿ ಅಸ್ವಸ್ಥಗೊಂಡು ಮೃತಪಟ್ಟರು. ಪಾಂಡೇಶ್ವರದ ಪಿಜಿಯಲ್ಲಿ ಉಳಿದುಕೊಂಡಿದ್ದ ದಂತ ವೈದ್ಯಕೀಯ ಪದವೀಧರೆ ಸ್ವಾತಿ ಶೆಟ್ಟಿ (24) ಅವರು ಎ.15ರಂದು ರಾತ್ರಿ ಮಲಗಿದ್ದವರು ಮರುದಿನ ಬೆಳಗ್ಗೆ ನೋಡುವಾಗ ಮೃತಪಟ್ಟಿದ್ದರು.
ಪ್ರಾಣ ಕಸಿದ ಅಪಘಾತಗಳು
ಎ. 11ರಂದು ಬೆಳ್ಳಾರೆ-ಸವಣೂರು ರಸ್ತೆಯ ಪೆರವಾಜೆ ಬೋರಡ್ಕದ ಬಳಿ ಸ್ಕೂಟಿಗೆ ಕಾಡು ಹಂದಿ ಅಡ್ಡ ಬಂದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಎಸ್ಸೆಸೆಲ್ಸಿ ವಿದ್ಯಾರ್ಥಿ ಮಹಮ್ಮದ್ ರಾಝೀಕ್ (16) ಮೃತಪಟ್ಟಿದ್ದರು. ಎ.15ರಂದು ರಾತ್ರಿ ಮಂಗಳೂರಿನ ಅಡ್ಯಾರ್‌ನಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವ್ಯೊ ಮಹೇಶ್ (20) ಮೃತಪಟ್ಟಿದ್ದಾರೆ.
ಕಳೆದ ಫೆ.28ರಂದು ಹಳೆಯಂಗಡಿ ಸಮೀಪ ನದಿಯಲ್ಲಿ ನಾಲ್ವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ದಾರುಣ ಘಟನೆಯ ಕಹಿ ನೆನಪು ಮಾಸುವ ಹೊತ್ತಿನಲ್ಲಿ ಜಿಲ್ಲೆಯ ವಿವಿಧೆಡೆ ನಡೆದಿರುವ ಐವರು ಯುವಜನರ ದಿಢೀರ್ ಸಾವು ಸಾರ್ವಜನಿಕರಲ್ಲಿ ಕಳವಳವನ್ನುಂಟು ಮಾಡಿದೆ.
ಸ್ಪಷ್ಟ ಕಾರಣ ತಿಳಿದುಕೊಳ್ಳುತ್ತೇವೆ; ಆತಂಕ ಬೇಡ
ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಓರ್ವ ಯುವ ವೈದ್ಯೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಈ ಪೈಕಿ ಶಿರ್ತಾಡಿಯ ಹೈಸ್ಕೂಲ್‌ನ ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ ಕೆಲವು ದಿನ ಚಿಕಿತ್ಸೆ ಪಡೆದಿದ್ದರು. ಅವರಿಗೆ “ಆಟೋ ಇಮ್ಯುನೋ ಡಿಸೀಸ್’ ಇರುವುದು ಗೊತ್ತಾಗಿದೆ. ಅಂದರೆ ಇದನ್ನು “ದೇಹದಲ್ಲಿ ನಿರ್ದಿಷ್ಟ ಜೀವಕೋಶದ ವಿರುದ್ಧವೇ ಆ್ಯಂಟಿ ಬಾಡಿ ಉತ್ಪಾದನೆಯಾಗುವ ಸ್ಥಿತಿ’ ಎಂದು ಹೇಳಲಾಗುತ್ತದೆ. ಇದರಲ್ಲಿಯೂ ಹಲವು ವಿಧಗಳಿವೆ. ಕೆಲವೇ ಕೆಲವು ವಿಧದ ಸಮಸ್ಯೆಗಳಿಗೆ ಚಿಕಿತ್ಸೆ ಫಲಕಾರಿಯಾಗದೇ ಇರಬಹುದು. ಇದು ಅಪರೂಪದ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ವೈದ್ಯೆ ಸ್ವಾತಿ ಶೆಟ್ಟಿ ಅವರು ರಾತ್ರಿ ವಿಪರೀತ ತಲೆನೋವು ಎಂದು ಮನೆಯವರಿಗೆ ತಿಳಿಸಿದ್ದರು. ಮರುದಿನ ಮೃತಪಟ್ಟಿದ್ದರು. ಅವರಿಗೆ ಬೇರೇನಾದರೂ ಆರೋಗ್ಯ ಸಮಸ್ಯೆ ಇತ್ತೆ ಎಂಬ ಬಗ್ಗೆಯೂ ಮನೆಯವರಿಂದ ಪೂರ್ಣ ಮಾಹಿತಿ ಪಡೆಯುತ್ತೇವೆ. ಮುಲ್ಕಿಯ ಕಾಲೇಜಿನ ವಿದ್ಯಾರ್ಥಿನಿ ಜುನಾ ಅವರ ಸಾವಿಗೆ ಸ್ಪಷ್ಟ ಕಾರಣವೇನೆಂಬುದರ ಬಗ್ಗೆಯೂ ವರದಿ ಪಡೆದುಕೊಳ್ಳುತ್ತೇವೆ. ಹದಿಹರೆಯದವರು ಮೃತಪಟ್ಟಿರುವ ಘಟನೆ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ.
– ಡಾ| ತಿಮ್ಮಯ್ಯ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ,
ದ.ಕ. ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.