ಕಿತ್ತುಹೋದ ಡಾಮರು: ಇನ್ನೂ ಶುರುವಾಗಿಲ್ಲ ಕಾಮಗಾರಿ
Team Udayavani, Jul 19, 2018, 11:03 AM IST
ಸುಬ್ರಹ್ಮಣ್ಯ : ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಹೊಂದುತ್ತಿದ್ದರೂ, ಗುತ್ತಿಗಾರು- ಮೆಟ್ಟಿನಡ್ಕ-ಕಂದ್ರಪ್ಪಾಡಿ ರಸ್ತೆಗೆ ಈ ಭಾಗ್ಯವಿಲ್ಲ. ರಸ್ತೆ ಅಭಿವೃದ್ಧಿಗೊಳಿಸಲು ಗುದ್ದಲಿ ಪೂಜೆ ನಡೆದಿದ್ದರೂ ಕಾಮಗಾರಿ ಭಾಗ್ಯ ಇನ್ನೂ ದಕ್ಕಿಲ್ಲ. ಇತರೆಡೆಗಳಿಗಿಂತ ಹೆಚ್ಚಿನ ಮಂದಿ ಜನಪ್ರತಿನಿಧಿಗಳು ಈ ಭಾಗದಲ್ಲಿ ಇದ್ದರೂ ಈ ರಸ್ತೆ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿದೆ.
ಸುಬ್ರಹ್ಮಣ್ಯ-ಜಾಲ್ಸೂರು ಪ್ರಮುಖ ಸಂಪರ್ಕ ರಸ್ತೆ ಗುತ್ತಿಗಾರು ತಲುಪುವ ಮುನ್ನ ಮೆಟ್ಟಿನಡ್ಕ ಬಳಿ ಕವಲೊಡೆಯುತ್ತದೆ. ಮೆಟ್ಟಿನಡ್ಕ ಕ್ರಾಸ್‌ನಿಂದ ಪೂಜಾರಿಕೋಡಿ ತನಕದ ರಸ್ತೆ ಸರಿಯಾಗಿಲ್ಲ. ಹದಗೆಟ್ಟಿರುವ ಈ ರಸ್ತೆ ಮೆಟ್ಟಿನಡ್ಕ, ಕಂದ್ರಪ್ಪಾಡಿ, ವಾಲ್ತಾಜೆ, ಕರಂಗಲ್ಲು, ದೊಡ್ಡಕಜೆ ಮತ್ತು ಮಡಪ್ಪಾಡಿ ಭಾಗದ ಜನರಿಗೆ ಪ್ರಯೋಜನಕ್ಕೆ ಬರುತ್ತದೆ.
ಡಾಮರು ಕಿತ್ತು ಹೋಗಿದೆ
ಮೆಟ್ಟಿನಡ್ಕ-ಕಂದ್ರಪ್ಪಾಡಿ ತನಕ ಇರುವ ಈ ರಸ್ತೆಗೆ ದಶಕಗಳ ಹಿಂದೆ ಹಾಕಿದ ಡಾಮರು ಸಂಪೂರ್ಣ ಕಿತ್ತುಹೋಗಿದೆ. ಒಂದೂವರೆ ಕಿ.ಮೀ. ದೂರದ ರಸ್ತೆಯಲ್ಲಿ ಪೂರ್ತಿ ಹೊಂಡಗಳೇ ಕಾಣುತ್ತಲಿವೆ. ರಸ್ತೆಯಲ್ಲಿ ಜಲ್ಲಿಕಲ್ಲುಗಳು ಹರಡಿವೆ. ಸತತವಾಗಿ ಸುರಿದ ಮಳೆಯಿಂದ ರಸ್ತೆ ಮಧ್ಯೆ ನಿರ್ಮಾಣವಾದ ಹೊಂಡಗಳಲ್ಲಿ ಕೆಸರು ನೀರು ತುಂಬಿಕೊಂಡಿದೆ.
ಜಿ.ಪಂ. ನಿರ್ವಹಣೆ
ಮಡಪ್ಪಾಡಿ, ಗುತ್ತಿಗಾರು, ನಾಲ್ಕೂರು, ದೇವಚಳ್ಳ ಈ ಗ್ರಾಮಗಳ ಊರುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿ ರಸ್ತೆ ಇದು. ಜಿ.ಪಂ.ಗೆ ಸೇರಿದ ಈ ರಸ್ತೆಯಲ್ಲಿ ಬಸ್ಸು, ದ್ವಿಚಕ್ರ ವಾಹನ, ಖಾಸಗಿ ಜೀಪು, ಆಟೋ, ಟೆಂಪೋ ನಿತ್ಯ ಸಂಚರಿಸುತ್ತವೆ. ಹದಗೆಟ್ಟ ರಸ್ತೆಯಲ್ಲಿ ಸಾಗುವ ವಾಹನಗಳ ತಳ ಭಾಗ ನೆಲಕ್ಕೆ ತಾಗಿ ಹಾನಿಯಾಗುತ್ತಲಿದೆ. ಮಡಪ್ಪಾಡಿ, ಕಂದ್ರಪ್ಪಾಡಿ ಭಾಗದವರು ಕೃಷಿ ಅವಲಂಬಿತರು. ಹೆಚ್ಚು ಚಟುವಟಿಕೆಗಳಿಂದ ನಿತ್ಯವೂ ಸುದ್ದಿಯಲ್ಲಿರುವ ಊರುಗಳಿವು. ಸಹಕಾರಿ ಬ್ಯಾಂಕು, ಅಂಚೆ ಕಚೇರಿಯಿದ್ದು, ಕಂದ್ರಪ್ಪಾಡಿ, ಮಡಪ್ಪಾಡಿ, ಬಲ್ಕಜೆಯಲ್ಲಿ ಸರಕಾರಿ ಶಾಲೆ ಇದೆ. ಎಲ್ಲ ಸೌಕರ್ಯ ಹೊಂದಿದ್ದರೂ ಈ ಭಾಗ ಸಂಪರ್ಕಿತ ರಸ್ತೆ ಸರಿ ಯಾಗಿಲ್ಲದೆ ಭಾರಿ ಸಮಸ್ಯೆಯಾಗಿದೆ.
ತಾಲೂಕು ಕೇಂದ್ರ ಸುಳ್ಯ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ತಲುಪಲು ಈ ಭಾಗದ ಜನತೆ ಇದೇ ಮಾರ್ಗವನ್ನು ಬಳಸುತ್ತಾರೆ. ಹೆಚ್ಚಿನ ಶಿಕ್ಷಣಕ್ಕೆ ದೂರದೂರಿಗೆ ತೆರ ಳುವ ವಿದ್ಯಾರ್ಥಿಗಳು ಈ ಮಾರ್ಗವಾಗಿಯೇ ಪ್ರಯಾಣ ಬೆಳೆಸುತ್ತಾರೆ.
ರಾಜಕೀಯ ಇಚ್ಛಾಶಕ್ತಿ ಇಲ್ಲ
ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡ ಅನೇಕ ಮಂದಿ ನಾಯಕರು ಈ ಭಾಗದಲ್ಲಿದ್ದಾರೆ. ಗ್ರಾ.ಪಂ.ನಿಂದ ಹಿಡಿದು ರಾಜ್ಯಮಟ್ಟದವರೆಗೆ ಪ್ರತಿನಿಧಿಸುವವರಿದ್ದಾರೆ. ಪ್ರತಿನಿತ್ಯ ಇದೇ ರಸ್ತೆ ಬಳಸಿ ತಮ್ಮ ಮನೆಗಳಿಗೆ ತೆರಳುತ್ತಾರೆ. ಆಗೆಲ್ಲ ರಸ್ತೆ ದುಃಸ್ಥಿತಿಯ ಅನುಭವವನ್ನು ಸ್ವತಃ ಪಡೆಯುತ್ತಾರೆ. ಹೀಗಿದ್ದರೂ ರಸ್ತೆ ಶಾಶ್ವತ ಅಭಿವೃದ್ಧಿ ಚಿಂತೆಯೇ ಅವರಿಗಿದ್ದಂತಿಲ್ಲ
ಎಂದು ಬೇಸರ ವ್ಯಕ್ತಪಡಿಸುತ್ತಾರೆ ಈ ಭಾಗದ ಜನರು.
ಚುನಾವಣೆ ವೇಳೆ ನೆನಪು
ಪ್ರತಿ ಚುನಾವಣೆಯ ಹೊತ್ತಲ್ಲಿ ರಾಜಕೀಯ ಪಕ್ಷಗಳಿಗೆ ಈ ರಸ್ತೆಯ ನೆನಪಾಗುತ್ತದೆ. ಚುನಾವಣೆಯ ಪೂರ್ವ ರಸ್ತೆ ಅಭಿವೃದ್ಧಿಗೆ ನಾಗರಿಕರ ಹೋರಾಟ ಸಮಿತಿ ರಚಿಸಲಾಗಿತ್ತು. ಈ ರಸ್ತೆಯನ್ನು 1.43 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದ್ದ ಇಲ್ಲಿನ ಶಾಸಕರು ಗುದ್ದಲಿ ಪೂಜೆಯನ್ನೂ ನಡೆಸಿದ್ದರು. ಬಳಿಕ ಕಾಮಗಾರಿ ನಡೆಯದೆ ರಸ್ತೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.
ಅನುದಾನ ಮೀಸಲು
ಶಾಸಕರು ಈ ರಸ್ತೆಗೆ ಅನುದಾನ ಮೀಸಲಿರಿಸಿರುವುದು ಸ್ವಾಗತಾರ್ಹ. ವ್ಯಾಪಕ ಮಳೆಯಿಂದ ರಸ್ತೆ ಈಗ ಸಂಪೂರ್ಣ ಹದಗೆಟ್ಟು ಸಂಚರಿಸಲು ಅಸಾಧ್ಯ ಸ್ಥಿತಿಗೆ ತಲುಪಿದೆ. ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳನ್ನು ಕೇಳಿಕೊಂಡಿದ್ದೇವೆ. ದುರಸ್ತಿ ಭರವಸೆ ದೊರಕಿದೆ. ಕಾಮಗಾರಿ ನಡೆಸುವ ವಿಶ್ವಾಸ ಹೊಂದಿದ್ದೇವೆ.
- ಚಂದ್ರಶೇಖರ ಕಡೋಡಿ,
ಸ್ಥಳೀಯರು
ಗಮನದಲ್ಲಿದೆ, ಸರಿಪಡಿಸುತ್ತೇವೆ
ಸಂಚಾರಕ್ಕೆ ಸೂಕ್ತವಾಗಿಲ್ಲದ ಈ ರಸ್ತೆ ಅಭಿವೃದ್ಧಿ ನಮ್ಮ ಗಮನದಲ್ಲಿದೆ. ಸಂಚಾರಕ್ಕೆ ಯೋಗ್ಯವನ್ನಾಗಿಸಲು ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗುವುದು.
– ಹನುಮಂತರಾಯಪ್ಪ, ಎಂಜಿನಿಯರ್
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.