ದುರಸ್ತಿಯಾದ ತಿಂಗಳಲ್ಲೇ ಕಿತ್ತು ಹೋಯ್ತು
Team Udayavani, Sep 19, 2018, 10:09 AM IST
ಜಾಲ್ಸೂರು: ಮಾಣಿ – ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಪೈಚಾರು ಸೇತುವೆ ರಸ್ತೆ ಶಾಶ್ವತ ಪರಿಹಾರ ಕಂಡಿಲ್ಲ. ದುರಸ್ತಿ ಕಾಮಗಾರಿ ಹೆಸರಿಗಷ್ಟೆ ಸೀಮಿತವಾಗಿದೆ. ಸುಳ್ಯ- ಮಂಗಳೂರು- ಸುಬ್ರಹ್ಮಣ್ಯ ಸಂಪರ್ಕ ಮಾರ್ಗವಾದ ಪೈಚಾರು ಸೇತುವೆ ಮಾರ್ಗ ಶಿಥಿಲಗೊಂಡಿದೆ. ತೇಪೆ ಹಚ್ಚಿದ ಸೇತುವೆ ರಸ್ತೆಯಲ್ಲಿ ಡಾಮರು ಕಿತ್ತು ಹೋಗಿ ವಾಹನಗಳ ಸಂಚಾರಕ್ಕೆ ತುಂಬ ತೊಂದರೆಯಾಗುತ್ತಿದೆ. ಅವ್ಯವಸ್ಥಿತ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಿಂಗಳ ಹಿಂದೆಯಷ್ಟೆ ಸುಳ್ಯ ತಹಶೀಲ್ದಾರರ ನೇತೃತ್ವದಲ್ಲಿ ರಸ್ತೆಯ ದುರಸ್ತಿ ಕಾರ್ಯ ನಡೆದಿತ್ತು. ಸ್ವತಃ ತಹಶೀಲ್ದಾರರೆ ಕಾಮಗಾರಿಯ ಪರಿಶೀಲನೆ ನಡೆಸಿದ್ದರು.
ಧೂಳಿಗೆ ಬೇಸತ್ತ ಸ್ಥಳೀಯರು
ಅತೀ ಹೆಚ್ಚು ವಾಹನಗಳ ಸಂಚಾರ ಇರುವುದರಿಂದ ರಸ್ತೆಗಳು ಬೇಗನೆ ಹಾಳಾಗಿ ಧೂಳು ಎಲ್ಲ ಕಡೆ ಪಸರಿಸುತ್ತಿದೆ. ಸನಿಹದಲ್ಲೇ ಇರುವ ಪೆಟ್ರೋಲ್ ಬಂಕ್, ಇತರ ಅಂಗಡಿಯವರಿಗೆ ಧೂಳಿನಿಂದ ತೀವ್ರ ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ಡಾಮರು ಮಾಯವಾಗಿ, ಜಲ್ಲಿ ಕಲ್ಲುಗಳು ಎದ್ದು ನಿಂತಿವೆ. ದ್ವಿಚಕ್ರ ವಾಹನ ಸವಾರರಂತೂ ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ದೂರು ನೀಡಿದ್ದೇವೆ
ರಸ್ತೆ ದುರಸ್ತಿ ಅವ್ಯವಸ್ಥೆಯ ಬಗ್ಗೆ ದೂರು ಕೊಡಲಾಗಿದೆ. ಆದಷ್ಟು ಬೇಗ ಸೇತುವೆ ರಸ್ತೆಯನ್ನು ಸರಿಪಡಿಸಿಕೊಡಬೇಕು.
– ರಿಫಾಯಿ ಸ್ಥಳೀಯರು