ಎರಡು ಸಾವಿರ ಮೀನುಗಾರಿಕಾ ಬೋಟುಗಳಿಗೆ ಸಂಚಕಾರ
Team Udayavani, Aug 4, 2017, 8:30 AM IST
ಮುಳುಗಿದ ಬೋಟ್‌ನಿಂದ ಅಪಾಯ
ಮಹಾನಗರ: ಎರಡು ತಿಂಗಳ ಹಿಂದೆ ಆಳ ಸಮುದ್ರ ಮೀನುಗಾರಿಕೆಗೆ (ಮೇ 25ರಂದು)ತೆರಳಿದ್ದ ಗಿಲ್ಗೆಟ್ ಬೋಟೊಂದು ಮಂಗಳೂರು ಅಳಿವೆ ಬಾಗಿಲು ಸಮೀಪ ಅವಘಡಕ್ಕೀಡಾಗಿದ್ದು, ಇನ್ನೂ ಅದರ ತೆರವು ಕಾರ್ಯಾಚರಣೆ ನಡೆಯದ ಹಿನ್ನೆಲೆಯಲ್ಲಿ, ಎರಡು ತಿಂಗಳುಗಳ ಸುದೀರ್ಘ ರಜೆಯ ಬಳಿಕ ಹೊಸ ನಿರೀಕ್ಷೆಯೊಂದಿಗೆ ಆ. 1ರಿಂದ ಸಮುದ್ರಕ್ಕೆ ಇಳಿದಿರುವ ಮೀನುಗಾರಿಕಾ ದೋಣಿಗಳು ನಿತ್ಯ ಅಪಾಯ ಎದುರಿಸುತ್ತಿವೆ.
ಪ್ರತೀ ವರ್ಷವೂ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಬೋಟುಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈ ಬಾರಿಯೂ ಈ ಸಮಸ್ಯೆ ಬೋಟುಗಳ ಸುಗಮ ಸಂಚಾರಕ್ಕೆ ತೊಂದರೆ ತಂದಿತ್ತು. ಇದರ ಜತೆಗೆ ಈಗ ಮುಳುಗಡೆಯಾದ ಗಿಲ್ಗೆಟ್ ಬೋಟು ಇನ್ನಷ್ಟು ಸಂಚಕಾರ ಸೃಷ್ಟಿಸುತ್ತಿವೆ. ಬೋಟು ಪಲ್ಟಿಯಾದ ಪ್ರದೇಶದಲ್ಲಿ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳುವಂತಿಲ್ಲ. ಒಂದು ವೇಳೆ ಗೊತ್ತಾಗದೆ ತೆರಳಿದರೆ ಮತ್ತೂಂದು ಅವಘಡವಾಗುವ ಸಾಧ್ಯತೆ ಇದೆ!
ಅಳಿವೆಬಾಗಿಲಿನಲ್ಲಿ ದುರ್ಘಟನೆಗೀಡಾದ ಬೋಟು ಮಾಲಕರು ಮತ್ತೂಂದು ಬೋಟನ್ನು ಬಳಸಿ ಒಳಗೆ ತರುವ ಪ್ರಯತ್ನ ಮಾಡಿದರು. ಆದರೆ ಸ್ವಲ್ಪ ದೂರಕ್ಕೆ ತರುವಾಗಲೇ ಆ ದೋಣಿ ಪಲ್ಟಿಯಾಗಿ ಅಳಿವೆ ಬಾಗಿಲಿನ ಒಳಭಾಗದಲ್ಲಿ ಕಡಲಿನ ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡಿದೆ. ಈ ದೋಣಿ ಮೀನುಗಾರಿಕೆಗೆ ತೆರಳುವ ವೇಳೆ 12,000 ಲೀ. ಡೀಸೆಲ್ ಹಾಕಲಾಗಿತ್ತು. ಪ್ರಸ್ತುತ ಅದರಲ್ಲಿದ್ದ ಡೀಸೆಲ್ ತೆಗೆಯುವ ಪ್ರಯತ್ನ ಮಾಡಲಾಗಿದೆ. ಒಂದು ವೇಳೆ ಡೀಸೆಲ್ ನೀರಿಗೆ ಸೇರಿದರೆ ಯಾವುದೇ ಅಪಾಯ ಉಂಟಾಗುವುದಿಲ್ಲ ಎನ್ನುತ್ತಾರೆ ಬೋಟು ಮಾಲಕರಾದ ಲೋಕನಾಥ್ ಬೋಳಾರ್.
ಮೇ 25ರಂದು ಅವಘಡಕ್ಕೀಡಾದ ಬೋಟ್ ಅನ್ನು ಸಂಪೂರ್ಣವಾಗಿ ತೆರವಿಗೆ ಮುಂಬಯಿ/ಗೋವಾದ ತಜ್ಞರ ತಂಡ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿ ಬೋಟು ತೆರವಿಗೆ ಶ್ರಮಿಸಿದೆ. ನೀರಿನೊಳಗೆ ತೆರಳಿ ಮುಳುಗಿರುವ ಬೋಟ್ ತೆರವಿಗೆ ಪ್ರಯತ್ನಿಸಿದ್ದರು. ಆದರೆ, ತಾಂತ್ರಿಕ ಉಪಕರಣಗಳಾದ ಕಂಪ್ರೈಸರ್ ಸಹಿತ ಇನ್ನೂ ಕೆಲವು ಉಪಕರಣಗಳು ಅಗತ್ಯವಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಅದನ್ನು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಇದರ ಮೂಲಕ 15 ದಿನಗಳ ಒಳಗೆ ಈ ಬೋಟ್ ತೆರವು ಮಾಡಲಾಗುವುದು ಎನ್ನುತ್ತಾರೆ ಅವರು.
ಜೂ.1ರಿಂದ ಆ.1ರ ವರೆಗೆ ಮೀನು ಸಂತತಿ ವೃದ್ಧಿಗಾಗಿ ಆಳಸಮುದ್ರ ಮೀನುಗಾರಿಕೆಗೆ ರಜೆ ನೀಡಲಾಗುತ್ತದೆ. ಇದೇ ಸಮಯದಲ್ಲಿ ಬೋಟ್‌ನಿಂದ ಇಂಧನ ಸೋರಿಕೆಯಾದರೆ ಕಡಲ ತಟಕ್ಕೆ ಬಂದು ಮೊಟ್ಟೆ ಇಡುವ ಮೀನುಗಳ ಸಂತತಿಗೂ ಕಂಟಕ ಇರುತ್ತದೆ. ಹೀಗಾಗಿ ಆದಷ್ಟು ಶೀಘ್ರ ಬೋಟು ತೆರವಿಗೆ ಗಂಭೀರ ಚಿಂತನೆ ಮಾಡಬೇಕಾಗಿದೆ ಎಂಬ ಆಗ್ರಹ ಮೀನುಗಾರರದ್ದು.
2,000 ಮೀನುಗಾರಿಕಾ ಬೋಟುಗಳ ಸಂಚಾರ
ಮಂಗಳೂರು ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಒಟ್ಟು ಸುಮಾರು 2,000 ಮೀನುಗಾರಿಕಾ ಬೋಟುಗಳಿವೆ. 35,875 ಮಂದಿ ನೇರವಾಗಿ ಮತ್ತು ಸುಮಾರು 70,000ಕ್ಕಿಂತಲೂ ಅಧಿಕ ಮಂದಿ ಪರೋಕ್ಷವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. 2016-17ನೇ ಸಾಲಿನಲ್ಲಿ 16,603 ಮೆಟ್ರಿಕ್ ಟನ್‌ಗಳಷ್ಟು ಮೀನುಗಳು ದೊರೆತಿವೆ.
ಪ್ರಸ್ತುತ ಕರ್ನಾಟಕದ ಕರಾವಳಿಯಲ್ಲಿ ಮೀನುಗಾರ ಕಾರ್ಮಿಕರಲ್ಲಿ ಹೊರರಾಜ್ಯಗಳ ಮಂದಿ ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಇವರು ಮೀನುಗಾರಿಕಾ ರಜೆ ಪ್ರಾರಂಭವಾದ ಬಳಿಕ ತಮ್ಮ ಊರಿಗೆ ಹೋಗುತ್ತಾರೆ. ಈಗ ಅವರೆಲ್ಲರೂ ಮರಳಿ ಆಗಮಿಸುತ್ತಿದ್ದು ಮತ್ತೇ ಮೀನುಗಾರಿಕೆ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆ. 1ರಿಂದ ಟ್ರಾಲ್ ಹಾಗೂ ಪರ್ಸಿನ್ ಬೋಟುಗಳು ಮೀನುಗಾರಿಕೆಗೆ ತೆರಳಲು ಆರಂಭವಾಗಿದ್ದು, ಆ. 7ರಂದು ಸಮುದ್ರಪೂಜೆ ನೆರವೇರುವ ಮೂಲಕ ಪೂರ್ಣಪ್ರಮಾಣದಲ್ಲಿ ಸಮುದ್ರಕ್ಕಿಳಿಯಲಿವೆ.
ರಾತ್ರಿ ಬೋಟ್ ಸಂಚಾರ ಅಪಾಯ
ಅಳಿವೆ ಪ್ರದೇಶವೇ ಅತ್ಯಂತ ಅಪಾಯಕಾರಿ ಪ್ರದೇಶ. ಇಲ್ಲಿ ನೀರಿನ ತೀವ್ರತೆಯನ್ನು ಗಮನಿಸಿ ಬೋಟ್‌ಗಳು ಸಂಚರಿಸುತ್ತವೆ. ಅಳಿವೆ ಮಧ್ಯಭಾಗದಲ್ಲಿಯೇ ಬೋಟ್ ಮುಳುಗಡೆಯಾಗಿ ಇತರ ಬೋಟುಗಳ ಸಂಚಾರಕ್ಕೆ ತಡೆಯಾಗುತ್ತಿದೆ. ರಾತ್ರಿ ವೇಳೆಗೆ ಬೋಟ್‌ಗಳು ಇಲ್ಲಿ ಸಂಚರಿಸುವುದರಿಂದ ಮುಳುಗಿರುವ ಬೋಟ್ ಗೊತ್ತಾಗದೆ, ಇನ್ನೊಂದು ಅವಘಡ ಎದುರಾಗುವ ಅಪಾಯ ಇದೆ. ಹೀಗಾಗಿ ಜಿಲ್ಲಾಡಳಿತ ಇದನ್ನು ತತ್‌ಕ್ಷಣ ತೆರವು ಮಾಡಬೇಕು.
– ನಿತಿನ್ ಕುಮಾರ್, ಅಧ್ಯಕ್ಷರು, ಟ್ರಾಲ್ ಬೋಟ್ ಮೀನುಗಾರರ ಸಂಘ, ಮಂಗಳೂರು
ಬೋಟ್ ಮಾಲಕರಿಂದಲೇ ತೆರವು
ಮುಳುಗಡೆಯಾದ ಬೋಟ್ ತೆರವು ಮಾಡುವುದು ಮೀನುಗಾರಿಕೆಯ ಎಂಎಸ್ ನಿಯಮ ಪ್ರಕಾರ ಬೋಟ್ ಮಾಲಕರ ಕರ್ತವ್ಯ. ಈ ಸಂಬಂಧ ಮೊದಲಿಗೆ ಬೋಟ್ ಮಾಲಕರಿಗೆ ನೋಟಿಸ್ ನೀಡಲಾಗಿತ್ತು. ಆ ಬಳಿಕ ಇನ್ಸ್ಯುರೆನ್ಸ್ ಕೊಟೇಶನ್ ಸಂಬಂಧ ಮಾಲಕರು ನಮಗೆ ತಿಳಿಸಿದ್ದು, ಇನ್ಸ್ಯುರೆನ್ಸ್ ಸಂಸ್ಥೆಯನ್ನು ಸಂಪರ್ಕಿಸಲಾಗಿದೆ. ಈಗ ಬೋಟ್ ತೆರವು ಸಂಬಂಧ ಎಲ್ಲ ರೀತಿಯ ಪ್ರಕ್ರಿಯೆಗಳು ನಡೆಯುತ್ತಿವೆ. ಶೀಘ್ರದಲ್ಲಿ ತೆರವಾಗಲಿದೆ. ಇಂಧನ ಸೋರಿಕೆ ಬಗ್ಗೆ ಯಾವುದೇ ದೂರು ಬಂದಿಲ್ಲ.
– ಮಹೇಶ್ ಕುಮಾರ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ
– ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.