ಇನೋಳಿಪದವು: ನೀರಲ್ಲಿ ಮುಳುಗಿ 3 ವಿದ್ಯಾರ್ಥಿಗಳ ಸಾವು
Team Udayavani, Sep 5, 2017, 8:50 AM IST
ಮಂಗಳೂರು/ ಉಳ್ಳಾಲ: ನೇತ್ರಾವತಿ ನದಿಯಲ್ಲಿ ಪಾವೂರು ಗ್ರಾಮದ ಇನೋಳಿ ಪದವಿನಲ್ಲಿ ಸೋಮವಾರ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಐವರು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಸಾವನ್ನಪ್ಪಿದ ಎಲ್ಲ ಮೂರು ಮಂದಿಯ ದೇಹಗಳು ಪತ್ತೆಯಾಗಿದ್ದು, ನೀರಿನಿಂದ ಮೇಲಕ್ಕೆತ್ತಲಾಗಿದೆ.
ವಳಚ್ಚಿಲ್ ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್‌ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಬೆಳ್ತಂಗಡಿಯ ವಿಕಿಲ್ (21), ಬಿಹಾರದ ಶುಭಂ ರಾಜ್ (22) ಮತ್ತು ಚಿತ್ರದುರ್ಗದ ಶ್ರೀರಾಮ್ (23) ಸಾವನ್ನಪ್ಪಿದವರು.
ಮಧ್ಯಾಹ್ನ 1.30ರಿಂದ 2.30ರ ಅವಧಿಯಲ್ಲಿ ಘಟನೆ ಸಂಭವಿಸಿದ್ದು, ಸಂಜೆ 6.30ರ ವೇಳೆಗೆ ಎಲ್ಲ ಮೂರು ಮಂದಿಯ ಮೃತ ದೇಹಗಳು ಪತ್ತೆಯಾಗಿವೆ.
8 ಮಂದಿ ವಿದ್ಯಾರ್ಥಿಗಳು ಹೋಗಿದ್ದರು
ಓಣಂ ಹಬ್ಬದ ಪ್ರಯುಕ್ತ ಸೋಮವಾರ ಶ್ರೀನಿವಾಸ್ ಕಾಲೇಜಿಗೆ ರಜೆ ಇತ್ತು. ಹಾಗಾಗಿ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಬೆಳಗಾವಿಯ ರೋಹಿತ್ (21) ಮತ್ತು ಆತನ ಸಹೋದರ ಅಭಿಜಯ್ (20), ಮಂಗಳೂರು ತಾಲೂಕು ಮಾಡೂರು ಬೀರಿಯ ವಿಖ್ಯಾತ್ (21), ಸುಳ್ಯ ಗುತ್ತಿಗಾರ್‌ನ ಇಂದ್ರೇಶ್ (20), ಸುಳ್ಯ ಬೀರಮಂಗಲದ ರಾಯ್ಸನ್ ಗೋವಿಯಸ್ ಹಾಗೂ ಸಾವನ್ನಪ್ಪಿದ ಮೂವರು ಸಹಿತ 8 ಮಂದಿ ಮಧ್ಯಾಹ್ನ 12.30ಕ್ಕೆ ಅರ್ಕುಳದಿಂದ ಫೆರಿ ಬೋಟ್ ಮೂಲಕ ಇನೋಳಿ ಪದವು ತೆರಳಿದ್ದರು.
ನದಿ ದಾಟಿ ಹೋಗಬೇಕು
ಇನೋಳಿ ಪ್ರದೇಶವು ವಳಚ್ಚಿಲ್‌ನ ದಕ್ಷಿಣ ದಿಕ್ಕಿನಲ್ಲಿ ನದಿಯ ಆಚೆ ದಡದಲ್ಲಿದೆ. ಇನೋಳಿಗೆ ಹೋಗಬೇಕಾದರೆ ಶ್ರೀನಿವಾಸ್ ಕಾಲೇಜಿನಿಂದ ಕೆಳಗಿನ ರಾಷ್ಟ್ರಿಯ ಹೆದ್ದಾರಿ ದಾಟಿ, ಅರ್ಧ ಕಿ.ಮೀ. ದೂರ ಇರುವ ಅರ್ಕುಳಕ್ಕೆ ತೆರಳಿ ಅಲ್ಲಿಂದ ನದಿ ದಡಕ್ಕೆ ಹೋಗಿ ಫೆರಿ ಬೋಟ್ ಮೂಲಕ ನೇತ್ರಾವತಿ ನದಿ ದಾಟಬೇಕು.
ಓಣಂ ರಜೆ ಇದ್ದ ಕಾರಣ ಸೋಮವಾರ ಈ 8 ಮಂದಿ ವಿದ್ಯಾರ್ಥಿಗಳು ಇನೋಳಿ ಪದವು ದೇವಂದಬೆಟ್ಟದ ಶ್ರೀ ಸೋಮನಾಥ ದೇಗುಲಕ್ಕೆ ಹೋಗುವ ಯೋಚನೆ ಹಾಕಿ ಕೊಂಡಿ ದ್ದರು. ಎಂಟು ಜನರಲ್ಲಿ ವಿಖ್ಯಾತ್ ಪ್ರತಿ ದಿನ ಮಾಡೂರಿನ ಮನೆಯಿಂದಲೇ ಕಾಲೇಜಿಗೆ ಬಂದು ಹೋಗುತ್ತಿದ್ದನು. ಉಳಿದ ವಿದ್ಯಾರ್ಥಿ ಗಳಲ್ಲಿ ಕೆಲವರು ಹಾಸ್ಟೆಲ್‌ನಲ್ಲಿ ಹಾಗೂ ಇನ್ನೂ ಕೆಲವರು ಪೇಯಿಂಗ್ ಗೆಸ್ಟ್ ಆಗಿ ವಾಸ್ತವ್ಯ ಮಾಡುತ್ತಿದ್ದರು. ವಿದ್ಯಾರ್ಥಿ ವಿಖ್ಯಾತ್ ಸೋಮವಾರ ಬೆಳಗ್ಗೆ ಮನೆಯಿಂದ ಹೊರಟು ವಳಚ್ಚಿಲ್‌ಗೆ ಬಂದಿದ್ದು, 10 ಗಂಟೆ ತನಕ ಅಲ್ಲಿನ ಬಸ್ ತಂಗುದಾಣದಲ್ಲಿ ಉಳಿದ ವಿದ್ಯಾರ್ಥಿಗಳಿಗಾಗಿ ಕಾದಿದ್ದನು. 10 ಗಂಟೆ ತನಕವೂ ಯಾರೂ ಬಾರದೆ ಇದ್ದಾಗ ಆತ ಉಳಿದ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಕಾಲೇಜಿಗೆ ಹೋಗಿದ್ದನು. ಅಲ್ಲಿ ಎಲ್ಲ 8 ಮಂದಿ ಒಟ್ಟಾಗಿ 12 ಗಂಟೆ ವೇಳೆಗೆ ಅಲ್ಲಿಂದ ಹೊರಟು 12.30ಕ್ಕೆ ಅರ್ಕುಳ ನದಿ ತೀರಕ್ಕೆ ಬಂದಿದ್ದರು. ಅಲ್ಲಿಂದ ಬೋಟ್‌ನಲ್ಲಿ ನದಿ ದಾಟಿ ಇನೋಳಿಗೆ ಹೋಗಿದ್ದಾರೆ.
ದೇವಸ್ಥಾನಕ್ಕೆ ಹೋಗಿಲ್ಲ
ಇನೋಳಿಗೆ ತಲುಪಿದಾಗ ಎಲ್ಲರಿಗೂ ಹಸಿವಾಗಿತ್ತು. ಆದರೆ ಊಟ ಮಾಡಲು ಬೇಕಾದಷ್ಟು ಹಣ ಇರಲಿಲ್ಲ. ಕುಡಿಯುವ ನೀರು ಕೂಡ ಖಾಲಿಯಾಗಿತ್ತು. ಇನೋಳಿ ದೇವಸ್ಥಾನವು ಮೇಲ್ಗಡೆ ಇದ್ದು, ಅಲ್ಲಿ ನಡೆದುಕೊಂಡು ಹೋಗಬೇಕಾದರೆ ಬಹಳಷ್ಟು ದೂರ ಇದೆ. ಹಾಗಾಗಿ ದೇವಸ್ಥಾನಕ್ಕೆ ಹೋಗುವುದನ್ನು ಕೈಬಿಟ್ಟು, ಅಲ್ಲಿಯೇ ನದಿ ನೀರಿನಲ್ಲಿ ಸುಮಾರು ಒಂದು ಗಂಟೆ ಕಾಲ ಆಡಿದರು. ಬಳಿಕ ನದಿ ದಡದಲ್ಲಿರುವ ಬಂಡೆ ಕಲ್ಲಿನ ಮೇಲೆ ಕುಳಿತರು. ಶ್ರೀರಾಂ, ವಿಕಿಲ್ ಮತ್ತು ಶುಭಂ ಇನ್ನೊಂದು ಬಂಡೆಕಲ್ಲಿನ ಮೇಲೆ ಕುಳಿತಿದ್ದರು. ಶ್ರೀರಾಂ ತನ್ನ ಕಾಲುಗಳನ್ನು ಕೆಳಗಿನ ಇನ್ನೊಂದು ಸಣ್ಣ ಬಂಡೆ ಕಲ್ಲಿನ ಮೇಲಿಟ್ಟು ನೀರಾಟ ಆಡುತ್ತಿದ್ದನು. ಒಂದೂವರೆ ಗಂಟೆ ಆಗುತ್ತಿದ್ದಂತೆ ಇನ್ನು ವಾಪಸ್ ಹೋಗೋಣ ಎಂದ ಎಲ್ಲರೂ ಕುಳಿತಲ್ಲಿಂದ ಎದ್ದಿದ್ದರು.
ಹೊರಡಲನುವಾದಾಗ…
ಇನ್ನು ವಾಪಸ್ ಹೋಗಲೆಂದು ಏಳುವಾಗ ಶ್ರೀರಾಂ ಕಾಲಿರಿಸಿದ್ದ ಸಣ್ಣ ಬಂಡೆ ಕಲ್ಲಿನಿಂದ (ಬಂಡೆ ಕಲ್ಲು ಪಾಚಿ ಗಟ್ಟಿತ್ತು) ಜಾರಿ ನೀರಿಗೆ ಬಿದ್ದ. ಆಗ ವಿಕಿಲ್ ಓಡಿ ಬಂದು ಆತನ ಕೈ ಹಿಡಿದು ಮೇಲಕ್ಕೆತ್ತಲು ಪ್ರಯತ್ನಿಸಿದ. ಅದೇ ವೇಳೆ ಶುಭಂ ಕೂಡ ಬಂದು ವಿಕಿಲ್‌ನ ಕೈ ಹಿಡಿದ. ಮೂವರೂ ನೀರಿನಲ್ಲಿ ಮುಳುಗುತ್ತಿದ್ದಾಗ ಈಜು ಬಲ್ಲವರಾಗಿದ್ದ ರೋಹಿತ್ ಮತ್ತು ಅಭಿಜಯ್ ಹಾಗೂ ವಿಖ್ಯಾತ್ ನೀರಿಗೆ ಹಾರಿ ನೀರಲ್ಲಿದ್ದವರನ್ನು ರಕ್ಷಿಸಲು ಯತ್ನಿಸಿದರು. ಅಷ್ಟರಲ್ಲಿ ನೀರಿನ ರಭಸಕ್ಕೆ ಮೂವರೂ ಕೊಚ್ಚಿ ಕೊಂಡು ಹೋದರು. ಈಜು ಬಲ್ಲವರಾಗಿದ್ದರಿಂದ ರೋಹಿತ್, ಅಭಿಜಯ್ ಮತ್ತು ವಿಖ್ಯಾತ್ ನೀರಿನಿಂದ ಮೇಲಕ್ಕೆ ಬಂದಿದ್ದು, ಉಳಿದ ಮೂವರು ನೀರಿನಲ್ಲಿ ಮುಳುಗಿ ನಾಪತ್ತೆಯಾದರು. ಬಳಿಕ ಮೇಲಿದ್ದ ವಿದ್ಯಾರ್ಥಿಗಳು ಅಲ್ಲಿದ್ದ ಸ್ಥಳೀಯ ಜನರಿಗೆ ವಿಷಯ ತಿಳಿಸಿದ್ದು, ಜನರು ಬಂದು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಆ ಬಳಿಕ ವಿದ್ಯಾರ್ಥಿ ಇಂದ್ರೇಶ್ ಪೊಲೀಸ್ ಕಂಟ್ರೋಲ್ ರೂಮ್‌ಗೆ ಫೋನ್ ಮಾಡಿ ವಿಷಯ ತಿಳಿಸಿದ. ಕಂಟ್ರೋಲ್ ರೂಂನವರು ಮಂಗಳೂರು ಗ್ರಾಮಾಂತರ ಮತ್ತು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದರು. 3.15ರ ವೇಳೆಗೆ ಮಂಗಳೂರಿನ ಪಾಂಡೇಶ್ವರ ಮತ್ತು ಬಂಟ್ವಾಳದ ಅಗ್ನಿ ಶಾಮಕ ಠಾಣೆಗಳಿಗೂ ಮಾಹಿತಿ ಲಭಿಸಿದ್ದು, ಎರಡು ಅಗ್ನಿ ಶಾಮಕ ವಾಹನಗಳಲ್ಲಿ ಸಿಬಂದಿ ಘಟನ ಸ್ಥಳಕ್ಕೆ ಧಾವಿಸಿದರು.
ಅಗ್ನಿ ಶಾಮಕ ದಳದ ಎರಡು ದೋಣಿಗಳು ಮತ್ತು ಸ್ಥಳೀಯರ ಎರಡು ದೋಣಿಗಳಲ್ಲಿ ಅಗ್ನಿ ಶಾಮಕ ಸಿಬಂದಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಪರಮೇಶ್ವರ ಅವರ ನೇತೃತ್ವದಲ್ಲಿ ಹಾಗೂ ಪಾವೂರು- ಹರೇಕಳದ ಮುಳುಗು ತಜ್ಞರಾದ ಸಾಹಿಲ್ ಮಾರಿಪಳ್ಳ,ಇಮ್ರಾನ್ ಅರ್ಕುಳ, ಆಸಿಫ್, ಅರಾಫ್, ತೌಸೀಫ್ ಬೈತಾರ್ ಮುಂತಾದವರು ಶೋಧ ಕಾರ್ಯ ನಡೆಸಿದರು. ಉತ್ತರ ಪ್ರದೇಶದ ಮರಳುಗಾರಿಕೆ ಕಾರ್ಮಿಕರು ಸಹಕರಿ ಸಿದರು. 3.45ರ ವೇಳೆಗೆ ವಿಕಿಲ್, 5 ಗಂಟೆಗೆ ಶುಭಂ ಹಾಗೂ 6.30ಕ್ಕೆ ಶ್ರೀರಾಂ ದೇಹ ಪತ್ತೆಯಾಯಿತು.
ಎಸಿಪಿ ರಾಮ ರಾವ್, ಕೊಣಾಜೆ ಠಾಣೆಯ ಇನ್ಸ್‌ಪೆಕ್ಟರ್ ಮಹಮದ್ ಶರೀಫ್, ಪಿಎಸ್‌ಐ ಸುಕುಮಾರ್, ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವ ಪ್ರಕಾಶ್, ಪಿಎಸ್‌ಐಗಳಾದ ಸುಧಾಕರ ಮತ್ತು ವೆಂಕಟೇಶ್ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಸ್ಥಳಕ್ಕೆ ಭೇಟಿ ನೀಡಿದರು.
2 ವರ್ಷಗಳ ಹಿಂದೆ
ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಇದೇ ರೀತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ನೆನಪಿಸಿದರು.
ಏಕೈಕ ಪುತ್ರ
ಮೃತ ವಿಕಿಲ್ ಬೆಳ್ತಂಗಡಿ ತಾಲೂಕು ಮುಂಡೂರು ಗ್ರಾಮದ ಕೃಷಿಕ ಲಾಲ್‌ಚಂದ್ರ ಮತ್ತು ವನಿತಾ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯವನಾಗಿದ್ದಾನೆ. ಉಳಿ ದಿಬ್ಬರು ಪುತ್ರಿಯರು. ಒಬ್ಟಾಕೆ ಬಿಸಿಎ ಮತ್ತು ಇನ್ನೊಬ್ಬಳು ಪಿಯುಸಿ ಓದು ತ್ತಿದ್ದಾಳೆ. ವಿಕಿಲ್ ಪ್ರತಿಭಾವಂತ ವಿದ್ಯಾರ್ಥಿ ಯಾಗಿದ್ದು ಕಳೆದ ಸೆಮಿಸ್ಟರ್ ಪರೀಕ್ಷೆ ಯಲ್ಲಿ ಶೇ. 76 ಅಂಕ ಗಳಿಸಿದ್ದ.
ಮೃತ ಶುಭಂರಾಜ್‌ನಿಗೆ ಓರ್ವ ತಂಗಿ ಹಾಗೂ ಶ್ರೀರಾಮ್‌ನಿಗೆ ಓರ್ವ ಅಕ್ಕ ಮಾತ್ರ ಇದ್ದಾರೆ.
ಎಚ್ಚರಿಸಿದರೂ ಕೇಳಲಿಲ್ಲ
ವಿದ್ಯಾರ್ಥಿಗಳು ಅರ್ಕುಳದಲ್ಲಿ ದೋಣಿ ಹತ್ತುವಾಗ ಫೆರಿ ದೋಣಿಯ ಚಾಲಕ ಸಮದ್ ಎಲ್ಲಿಗೆ ಹೋಗುತ್ತೀರಿ ಎಂದು ಕೇಳಿದ್ದಾರೆ. ಆಗ ವಿದ್ಯಾರ್ಥಿಗಳು ತಾವು ದೇವಸ್ಥಾನಕ್ಕೆ ಹೋಗುತ್ತೇವೆ ಎಂದಿದ್ದರು. ನೀರಿಗಿಳಿಯುವುದು ಅಪಾಯಕಾರಿ; ನೀರು ಜಾಸ್ತಿ ಇದೆ ಎಂದು ಸಮದ್ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ಈ ಎಚ್ಚರಿಕೆಯನ್ನು ಕಡೆಗಣಿಸಿ ವಿದ್ಯಾರ್ಥಿಗಳು ನೀರಿಗಿಳಿದು ದುರಂತವನ್ನು ಅನುಭವಿಸಿದ್ದು ವಿಪರ್ಯಾಸ.
ದುರಂತ ಸಂಭವಿಸಿದ ಸ್ಥಳದಲ್ಲಿ ಬಹಳಷ್ಟು ಆಳವಿದ್ದು ಹೂಳು ತುಂಬಿ ಕೊಂಡಿದೆ. ವಿಕಿಲ್ ಮತ್ತು ಶ್ರೀರಾಂ ಪೇಯಿಂಗ್ ಗೆಸ್ಟ್ ಆಗಿ ಹಾಗೂ ಶುಭಂ ರಾಜ್ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡುತ್ತಿದ್ದರು.
ತಂದೆಗೆ ಕೊನೆಯ ಕರೆ
ವಿಕಿಲ್ ಮಧ್ಯಾಹ್ನ 12.30ಕ್ಕೆ ತನ್ನ ತಂದೆ ಲಾಲ್‌ಚಂದ್ ಅವರಿಗೆ ಫೋನ್ ಕರೆ ಮಾಡಿ ಪಿಜಿ ರೂಂ ಬಾಡಿಗೆ ಬಗ್ಗೆ ಮಾತನಾಡಿದ್ದನು. ಅದು ಆತನ ಕೊನೆಯ ಕರೆಯಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.