ಡಿ.10ರಿಂದ 6 ದಿನ ಆಳ್ವಾ ಸ್ ವಿರಾಸತ್: ಸಾಂಸ್ಕೃತಿಕ ರಸದೌತಣ ಬಡಿಸಲು ವಿದ್ಯಾಗಿರಿ ಸಜ್ಜು
Team Udayavani, Dec 9, 2024, 6:45 AM IST
ಮಂಗಳೂರು: ಸಾಂಸ್ಕೃತಿಕ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು, ಎಲ್ಲರಲ್ಲೂ ಸಾಂಸ್ಕೃತಿಕ ಉಲ್ಲಾಸ ಮೂಡಿಸುವ ಸದುದ್ದೇಶದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ “ಆಳ್ವಾಸ್ ವಿರಾಸತ್’ 30ನೇ ವರ್ಷದ ಹೊಸ್ತಿಲಲ್ಲಿದ್ದು, ಸುಮನಸರ ಸ್ವಾಗತಕ್ಕಾಗಿ ವಿದ್ಯಾಗಿರಿ ಕ್ಯಾಂಪಸ್ ಸಜ್ಜಾಗುತ್ತಿದೆ. ಈ ವರ್ಷದ “ವಿರಾಸತ್’ ಸಂಭ್ರಮವು ಡಿ.10ರಿಂದ 15ರ ವರೆಗೆ ನಡೆಯಲಿದೆ.
ಡಿ.10ರಿಂದ ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ಮುಖ್ಯ ಕಾರ್ಯ ಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉಳಿದಂತೆ ಕೃಷಿ ಮೇಳ, ಆಹಾರ ಮೇಳ, ಕರಕುಶಲ ಮೇಳ, ಫಲಪುಷ್ಪ ಮೇಳ, ಚಿತ್ರಕಲಾ ಮೇಳ, ಕೈಮಗ್ಗ ಸೀರೆಗಳ ಪ್ರದರ್ಶನ ಮುಂತಾದ ವೈಶಿಷ್ಟéಪೂರ್ಣ ಮೇಳಗಳೂ ಇರಲಿವೆ.
ದೇಶದ ವಿವಿಧೆಡೆಗಳ ಖ್ಯಾತ ತಂಡ, ವ್ಯಕ್ತಿಗಳಿಂದ ನಡೆಯಲಿರುವ ಸಾಂಸ್ಕೃತಿಕ ಸಂಜೆಯು ಭರಪೂರ ಮನರಂಜನೆ ಒದಗಿಸಲಿದೆ. ಪಂಡಿತ್ ವೆಂಕಟೇಶ್ ಕುಮಾರ್ ಹಿಂದೂ ಸ್ಥಾನಿ ಗಾಯನಸಂಜೆ, ಒಸ್ಮಾನ್ ಮೀರ್ ಸಂಗೀತ ಲಹರಿ, ನೀಲಾದ್ರಿ ಕುಮಾರ್ ಅವರ ಸೌಂಡ್ ಆಫ್ ಇಂಡಿಯಾ, ಭರತ ನಾಟ್ಯ-ಒಡಿಸ್ಸಿ-ಕಥಕ್ ನೃತ್ಯ ಸಂಗಮ, ಸ್ಟೆಕೆಟೊ ಚೆನ್ನೈ ಅವರ ಸಂಗೀತ ಸಂಜೆ ಹೀಗೆ ಪ್ರತಿದಿನವೂ ಒಂದಿಲ್ಲೊಂದು ಆಕರ್ಷಣೆ ಇರಲಿದೆ.
ಕೃಷಿ ಮೇಳದ ಅಂಗಳ
ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣವನ್ನು ಕೃಷಿ ಮೇಳ ನೀಡಲಿದೆ. ಕೇವಲ ಪ್ರದರ್ಶನವಲ್ಲದೆ ಮಾರಾಟ ಮಳಿಗೆ ಗಳು, ಪ್ರಾತ್ಯಕ್ಷಿಕೆಗಳೂ ಇರಲಿವೆ. ಕೃಷಿ ಮೇಳದ ಮೈದಾನಕ್ಕೆ ಜಲ್ಲಿಕಲ್ಲು ಹರಡಿ ನೆಲವನ್ನು ಹದಗೊಳಿಸಲಾಗುತ್ತಿದೆ. ಪ್ರದರ್ಶನಕ್ಕೆ ಬೇಕಾದ ವಿವಿಧ ಮಳಿಗೆ ಗಳು ಸಜ್ಜಾಗಿವೆ. ಕ್ಯಾಂಪಸ್‌ನ ವಿವಿಧೆಡೆ ಬೆದರುಬೊಂಬೆ ನಿಲ್ಲಿಸಲಾಗಿದೆ.
ಹಣ್ಣು ತರಕಾರಿ ಬೀಜಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಸಸ್ಯ ಪ್ರಭೇದಗಳು, ಕೃಷಿ ಉಪಕರಣ- ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ.
“ರೈತರ ಸಂತೆ’ ಈ ಬಾರಿಯ ಆಕರ್ಷಣೆ ಯಾಗಿದ್ದು, ಇದಕ್ಕೆ ರೈತರು ಮೊದಲೇ ಹೆಸರು ನೋಂದಾಯಿಸ ಬೇಕು. ರೈತರೇ ತಾವು ಬೆಳೆದ ತರಕಾರಿ, ಹಣ್ಣು, ಪುಷ್ಪಗಳನ್ನು ನೇರ ವಾಗಿ ಇಲ್ಲಿ ಮಾರಾಟ ಮಾಡಬಹುದು.
ಒಟ್ಟಾರೆ ಈ ಮಹಾಮೇಳದಲ್ಲಿ 500ರಿಂದ 600 ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇಸ್ರೇಲ್ ತಂತ್ರಜ್ಞಾನ ಬಳಸಿ ಬೆಳೆದ ತರಕಾರಿ, ಹಣ್ಣು-ಹಂಪಲು, ಹೂವು- ಆಲಂಕಾರಿಕ ಗಿಡಗಳು ಈ ಬಾರಿಯ ಪ್ರಮುಖ ಆಕರ್ಷಣೆ.
ಬೊಂಬೆಗಳ ಸಾಮ್ರಾಜ್ಯ
ಹುಲಿ, ಜಿರಾಫೆ, ಕರಡಿ, ಆನೆ ಇತ್ಯಾದಿ ಕಾಡು ಮೃಗಗಳು,ಹದ್ದು, ಗೂಬೆ ಯಂತಹ ಪಕ್ಷಿಗಳು, ಎತ್ತು, ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳೇ ಜೀವಂತವಾಗಿವೆಯೇನೋ ಎಂದು ಭಾಸವಾಗುವಂತಹ ಪ್ರತಿಕೃತಿಗಳನ್ನು ಅಲ್ಲಲ್ಲಿ ಜೋಡಿಸಲಾಗುತ್ತಿದೆ.
ಭರ್ಜರಿ ತಯಾರಿ
ಕೆಲವು ದಿನಗಳಿಂದ ಸುರಿದ ಮಳೆಯ ನಡುವೆಯೂ ವಿದ್ಯಾಗಿರಿಯಲ್ಲಿ ವಿರಾಸತ್‌ಗೆ ತಯಾರಿ ಭರ್ಜರಿಯಾಗಿ ನಡೆದಿದೆ. ದೇಶದ ಹಲವು ಕಡೆಗಳ ನರ್ಸರಿಗಳಿಂದ ಆಕರ್ಷಕ ಹೂಗಿಡಗಳನ್ನು ತರಲಾಗಿದ್ದು, ಅವುಗಳನ್ನು ಮುಖ್ಯ ದ್ವಾರ, ಮಾರ್ಗದ ಇಕ್ಕೆಲಗಳಲ್ಲಿ, ಮುಖ್ಯವೇದಿಕೆಯ ಹತ್ತಿರದ ಬಸವೇಶ್ವರ ವೃತ್ತದ ಸುತ್ತಲಿನ ಪ್ರದೇಶಗಳಲ್ಲಿ ಇರಿಸಲಾಗುತ್ತಿದೆ. ಇವು ಪ್ರೇಕ್ಷಕರ ಕಣ್ಮನ ಸೆಳೆಯುವಂತಿವೆ.
ಆಧುನಿಕ ಕಾರ್ಟೂನ್ ಪ್ರತಿಕೃತಿಗಳು, ರೈತ, ರೈತ ಮಹಿಳೆ, ಭಾರತೀಯ ಸಾಂಪ್ರದಾಯಿಕ ದಿರಿಸು ಧರಿಸಿದ ಬೊಂಬೆಗಳು ಕೃಷಿ ಮೇಳದ ಸುತ್ತ ಕಾಣಿಸಿಕೊಳ್ಳಲಿವೆ. ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ, ತುಳಸಿ ಬೊಮ್ಮನಗೌಡ ಅವರೇ ಬಂದು ಕುಳಿತಂತೆ ತೋರುವ ಪ್ರತಿಕೃತಿಗಳೂ ಇಲ್ಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.