ಮಂಗಳೂರಿನಲ್ಲಿ ಪ್ರಾರಂಭವಾಗುತ್ತಿದೆ “ಡಿಸೆಂಟ್ರಲೈಸ್ಡ್ ಟ್ರಯೇಜ್ ಸೆಂಟರ್’
Team Udayavani, May 21, 2021, 4:00 AM IST
ಮಹಾನಗರ: ಕೋವಿಡ್ ಪಾಸಿಟಿವ್ ಬಂದು ಹೋಂ ಐಸೊಲೇಶನ್‌ನಲ್ಲಿರುವ ಸೋಂಕಿತರ ಬಗ್ಗೆ ನಿಗಾ ವಹಿಸಿ ಆಗಿಂದಾಗ್ಗೆ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಸೂಕ್ತ ಸಲಹೆ, ಅಗತ್ಯ ಬಿದ್ದರೆ ಅವರನ್ನು ಆಸ್ಪತ್ರೆಗೆ ದಾಖಲಿಸಲು ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವಿಕೇಂದ್ರೀಕೃತ ಟ್ರಯೇಜ್ ಸೆಂಟರ್ (ಚಿಕಿತ್ಸೆಯ ಸರದಿ ನಿರ್ಧಾರ ಕೇಂದ್ರ)ಗಳೆಂಬುದಾಗಿ ಘೋಷಿಸಲಾಗಿದೆ.
ಈ ಹತ್ತು ಪ್ರಾ.ಆ. ಕೇಂದ್ರಗಳ ವ್ಯಾಪ್ತಿ ಯಲ್ಲಿ ಹೋಂ ಐಸೊಲೇಶನ್‌ನಲ್ಲಿ ಇರುವವರ ಆರೋಗ್ಯ ವಿಚಾರಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ಮೂರು ಮೆಡಿಕಲ್ ಕಾಲೇಜುಗಳ ವೈದ್ಯರು, ಇಂಟರ್ನಿಗಳು, ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಒಳಗೊಂಡ ತಂಡಕ್ಕೆ ವಹಿಸಿ ಕೊಡಲಾಗಿದೆ. ಪ್ರಾ.ಆ. ಕೇಂದ್ರಗಳ ವೈದ್ಯಾಧಿಕಾರಿ, ಸಿಬಂದಿ, ಆಶಾ ಕಾರ್ಯಕರ್ತೆಯರು ಇವರಿಗೆ ಸಹಕರಿಸಲಿರುವರು.
ಬಿಜೈ, ಬಂದರು, ಜೆಪ್ಪು, ಲೇಡಿಹಿಲ್/ ಕೆಎಎಸ್‌ಬಿಎ ಬೆಂಗ್ರೆ ಪ್ರಾ.ಆ. ಕೇಂದ್ರಗಳ ವ್ಯಾಪ್ತಿಯಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ತಂಡ; ಎಕ್ಕೂರು, ಪಡೀಲ್, ಶಕ್ತಿನಗರ ಪ್ರಾ.ಆ. ಕೇಂದ್ರಗಳ ವ್ಯಾಪ್ತಿಯಲ್ಲಿ ಕಣಚೂರು ಮೆಡಿಕಲ್ ಕಾಲೇಜಿನ ವೈದ್ಯಕೀಯ ತಂಡ, ಕುಳಾಯಿ, ಕುಂಜತ್ತಬೈಲ್, ಸುರತ್ಕಲ್ ಪ್ರಾ.ಆ. ಕೇಂದ್ರ ಗಳ ವ್ಯಾಪ್ತಿಯಲ್ಲಿ ಶ್ರೀನಿವಾಸ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ತಂಡ ಈ ಕಾರ್ಯವನ್ನು ನಿರ್ವಹಿಸಲಿದೆ.
ಈ ಮೂರು ಮೆಡಿಕಲ್ ಕಾಲೇಜುಗಳ ವೈದ್ಯಕೀಯ ತಂಡದವರು ಪಲ್ಸ್ ಆಕ್ಸಿಮೀಟರ್, ಥರ್ಮೋ ಮೀಟರ್, ಗ್ಲುಕೋ ಮೀಟರ್, ರಕ್ತದೊತ್ತಡ ತಪಾಸಣೆ ಕಿಟ್ ಇತ್ಯಾದಿ ವೈದ್ಯಕೀಯ ಉಪಕರಣಗಳೊಂದಿಗೆ ಸಂಬಂಧ ಪಟ್ಟ ಪ್ರಾ.ಆ. ಕೇಂದ್ರಕ್ಕೆ ತೆರಳಿ ಅಲ್ಲಿಂದ ಮಾಹಿತಿಯನ್ನು ಪಡೆದುಕೊಂಡು ಹೋಂ ಐಸೊಲೇಶನ್‌ನಲ್ಲಿರುವ ಸೋಂಕಿತರ ಮನೆಗಳಿಗೆ ತೆರಳಿ ಅವರ ಆರೋಗ್ಯವನ್ನು ವಿಚಾರಿಸಿ, ತಪಾಸಣೆಯನ್ನು ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ, ವಹಿಸ ಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಮನೆಗಳಲ್ಲಿ ಐಸೊಲೇಶನ್‌ನಲ್ಲಿ ಇರಲು ಸೂಕ್ತ ವ್ಯವಸ್ಥೆ ಇಲ್ಲದವರಿಗೆ ಕೊರೊನಾ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿಸಲು, ಆರೋಗ್ಯ ಸ್ಥಿತಿ ತೀವ್ರ ಬಿಗಡಾಯಿಸಿದವರನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡುತ್ತಾರೆ.
ಪ್ರಸ್ತುತ ಮೊದಲ ಹಂತದಲ್ಲಿ ಈ ವೈದ್ಯಕೀಯ ತಂಡಗಳು ಹೋಂ ಐಸೊಲೇಶನ್‌ನಲ್ಲಿರುವ 60 ವರ್ಷ ಮೇಲ್ಪಟ್ಟ ರೋಗಿಗಳ ಮನೆಗೆ ಭೇಟಿ ನೀಡುತ್ತಿದ್ದು, 2ನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಸೋಂಕಿತರ ಮನೆ ಭೇಟಿಯನ್ನು ಹಮ್ಮಿಕೊಳ್ಳಲಿದೆ.
ಬೆಂಗಳೂರು, ಮಂಗಳೂರು ಸಹಿತ ರಾಜ್ಯದ ಎಲ್ಲ ಪಾಲಿಕೆ ವ್ಯಾಪ್ತಿಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ನಗರ ಪಾಲಿಕೆ ಸರಹದ್ದಿನಲ್ಲಿ ಡಿಸೆಂಟ್ರಲೈಸ್‌ಡ್ ಟ್ರಯೇಜ್ ಸೆಂಟರ್‌ಗಳನ್ನು (ಡಿಟಿಸಿ) ಆರಂಭಿಸುವಂತೆ ರಾಜ್ಯ ಸರಕಾರವು ಮೇ 15ರಂದು ಆದೇಶ ಹೊರಡಿಸಿತ್ತು. ಅದರಂತೆ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಡಿಟಿಸಿ ಸ್ಥಾಪನೆ ಕುರಿತಂತೆ ಮೇ 18ರಂದು ಸುತ್ತೋಲೆ ಹೊರಡಿಸಿದ್ದು, ಅದೇ ದಿನದಿಂದ ಈ ವ್ಯವಸ್ಥೆ ಜಾರಿಗೆ ಬಂದಿದೆ.
ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ , ಆಯುಕ್ತ ಅಕ್ಷಯ್ ಶ್ರೀಧರ್ ಅವರು ಡಿಟಸಿ ಸ್ಥಾಪಿಸಿರುವ ಕೆಲವು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರು.
2,748 ಮಂದಿ ಹೋಂ ಐಸೊಲೇಶನ್‌ನಲ್ಲಿ :
ಮನಪಾ ವ್ಯಾಪ್ತಿಯ 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರದೇಶ (ಮೇ 18ರ ಅಂಕಿ ಅಂಶದ ಪ್ರಕಾರ)ದಲ್ಲಿ 3,036 ಮಂದಿ ಕೊರೊನಾ ಸೋಂಕಿತರಿದ್ದು, ಈ ಪೈಕಿ 2,748 ಮಂದಿ ಹೋಂ ಐಸೊಲೇಶನ್‌ನಲ್ಲಿ ಇದ್ದಾರೆ. 288 ಮಂದಿ ವಿವಿಧ ಆಸ್ಪತ್ರೆಗಳಲ್ಲಿ (42 ಮಂದಿ ಸರಕಾರಿ ಆಸ್ಪತ್ರೆ ಯಲ್ಲಿ, 246 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ) ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ಸೋಂಕಿತರ ಪೈಕಿ ಶೇ.93 ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ. ಅವರು ಆರೋಗ್ಯದಲ್ಲಿ ಕೊಂಚ ಏರು ಪೇರು ಆದಾಗ ಮನೆಯಿಂದ ನೇರವಾಗಿ ಐಸಿಯು ಬೆಡ್‌ಗೆ ಹೋಗಲು ಬಯಸುತ್ತಾರೆ. ಎಲ್ಲರಿಗೂ ಐಸಿಯು ಬೆಡ್ ಸಿಗುವ ಬಗ್ಗೆ ಖಾತರಿ ಇಲ್ಲ. ಐಸೊಲೇಶನ್‌ನಲ್ಲಿ ಇರಲು ಅವರಿಗೆ ಮನೆಯಲ್ಲಿ ಸೂಕ್ತ ವ್ಯವಸ್ಥೆಗಳು ಇವೆಯೇ, ಕಾಲ ಕಾಲಕ್ಕೆ ತೆಗೆದುಕೊಳ್ಳ ಬೇಕಾದ ಮಾತ್ರೆಗಳು, ಪೌಷ್ಟಿಕ ಆಹಾರ ಇತ್ಯಾದಿ ಮುಂಜಾಗ್ರತೆ ವಹಿಸುತ್ತಾರೆಯೇ ಎಂಬುದರ ಬಗ್ಗೆ ಖಾತರಿ ಇಲ್ಲ. ಈ ದಿಶೆಯಲ್ಲಿ ಈ ಡಿಟಿಸಿ ವ್ಯವಸ್ಥೆ ಒಂದು ಉತ್ತಮ ಹೆಜ್ಜೆ. –ಪ್ರೇಮಾನಂದ ಶೆಟ್ಟಿ, ಮೇಯರ್, ಮನಪಾ
ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.