ಮನೆ, ವಸತಿ ಸಮುಚ್ಚಯಗಳಲ್ಲಿ ಹಬ್ಬದ ಕಳೆ
Team Udayavani, Nov 5, 2021, 3:40 AM IST
ಮಹಾನಗರ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಹೆಚ್ಚಿಸಿದ್ದು, ಮಂಗಳೂರಿನಲ್ಲಿ ಮನೆಮಂದಿ ಕೂಡಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಬಹುತೇಕ ಮನೆಗಳಲ್ಲಿ-ವಸತಿ ಸಮುಚ್ಚಯಗಳಲ್ಲಿ ಹಬ್ಬದ ಕಳೆ ಹೆಚ್ಚಿದೆ.
ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಗುರುವಾರ ರಾತ್ರಿ ತುಳಸಿ ಪೂಜೆ, ಬಲೀಂದ್ರ ಪೂಜೆ, ರಂಗಪೂಜೆ ನಡೆದವು. ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ಬಲೀಂದ್ರ ಪೂಜೆ, ಮಂಟಪ ಪೂಜೆ ನಡೆದು, ಪಾಲಕ್ಕಿ ಉತ್ಸವ ಆರಂಭಗೊಂಡಿತು. ಶುಕ್ರವಾರ ಬೆಳಗ್ಗೆ 8.30ಕ್ಕೆ ಸಾರ್ವಜನಿಕ ಗೋಪೂಜೆ ನಡೆಯಲಿದೆ. ದೀಪಾವಳಿ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳಿಗೆ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು.
ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಹೂವು, ಹಣ್ಣು ಖರೀದಿ ಭರಾಟೆಯೂ ಜೋರಾಗಿದೆ. ನಗರದ ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್, ರಥಬೀದಿ, ಸೆಂಟ್ರಲ್ ಮಾರುಕಟ್ಟೆ, ಬಿಜೈ ಸಹಿತ ವಿವಿಧ ಕಡೆಗಳಲ್ಲಿ ರಸ್ತೆ ಬದಿ ಹೂವು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಸಾರ್ವಜನಿಕರು ಕೂಡ ಖರೀದಿಯಲ್ಲಿ ತೊಡಗಿದ್ದರು. ಇನ್ನು, ನಗರದ ಪಟಾಕಿ, ಗೂಡು ದೀಪ, ಹಣತೆ ಖರೀದಿಯೂ ಗುರುವಾರ ಜೋರಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು ವಿದ್ಯು ದ್ದೀಪದಿಂದ ಕಂಗೊಳಿಸುತ್ತಿದೆ. ಮನೆಮಂದಿ ಸಾಂಪ್ರದಾಯಿಕ ಉಡುಗೆಯ ಮುಖೇನ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದರು.
ಹಲವೆಡೆ ಟ್ರಾಫಿಕ್ ಜಾಮ್:
ಹಬ್ಬದ ಖರೀದಿ ಹಿನ್ನೆಲೆ ನಗರದಲ್ಲಿ ಗುರುವಾರ ಟ್ರಾಫಿಕ್ ಜಾಮ್ ಉಂಟಾ ಗಿತ್ತು. ನಗರದ ಹಂಪನಕಟ್ಟೆ, ಕೆ.ಎಸ್. ರಾವ್ ರಸ್ತೆ, ಪಿವಿಎಸ್, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಬಲ್ಮಠ, ಪಂಪ್‌ವೆಲ್, ಬಿಜೈ, ಸ್ಟೇಟ್‌ಬ್ಯಾಂಕ್, ಬಂದರು ರಸ್ತೆ ಸಹಿತ ವಿವಿಧೆಡೆ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಇನ್ನು, ವಿವಿಧ ಕಡೆಗಳಲ್ಲಿ ಒಳಚರಂಡಿ, ರಸ್ತೆ ಸಹಿತ ವಿವಿಧ ಕಾಮಗಾರಿ ನಡೆಯುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಇಂದು ಗೋಪೂಜೆ :
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶುಕ್ರವಾರ ಗೋಪೂಜೆ ನಡೆಯಲಿದೆ. ಮುಜರಾಯಿ ಇಲಾಖೆಗೆ ಸೇರಿದ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಸಂಜೆ 5.30ರಿಂದ 6.30ರ ವರೆಗೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ನೆರವೇರಲಿದೆ. ಅದೇ ರೀತಿ, ಗೋಪೂಜೆಯ ದಿನ ಸಾರ್ವಜನಿಕರು ತಮ್ಮ ಮನೆಗಳಲ್ಲಿಯೂ ಗೋವಿಗೆ ಪೂಜೆ ನಡೆಸುವ ಸಂಪ್ರದಾಯವಿದೆ. ವಿವಿಧ ಸಂಘ-ಸಂಸ್ಥೆಗಳು ಕೂಡ ಗೋಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕೊರೊನಾ; ಮೈಮರೆಯದಿರೋಣ:
ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದಲೇ ಆಚರಿಸೋಣ. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಹಬ್ಬ ಆಚರಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ದಿನದ ಪ್ರಕರಣ ದಿನದಿಂದ ದಿನಕ್ಕೆ ಕಡಿಮೆ ಯಾಗುತ್ತಿದ್ದರೂ ಪ್ರತಿಯೊಬ್ಬರಲ್ಲೂ ಜಾಗ್ರತೆ ಅತೀ ಅವಶ್ಯ. ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್, ಮಾಸ್ಕ್ ಬಳಸಿ. ಪ್ರತಿಯೊಬ್ಬರೂ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿಕೊಂಡು ಹಬ್ಬವನ್ನು ಆಚರಿಸೋಣ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.