ಸುಳ್ಯ-ಅಜ್ಜಾವರ ರಸ್ತೆ ದುರಸ್ತಿ ಕಾರ್ಯ ಮತ್ತಷ್ಟು ವಿಳಂಬ
Team Udayavani, Nov 28, 2018, 12:10 PM IST
ಅಜ್ಜಾವರ: ಸುಳ್ಯ-ಮಂಡೆಕೋಲು ಸಂಪರ್ಕ ಮಾರ್ಗವಾದ ಅಜ್ಜಾವರ ರಸ್ತೆ ಶಿಥಿಲಗೊಂಡು ವರ್ಷಗಳು ಹಲವು ಕಳೆ ದರೂ ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ. ಹೊಂಡ- ಗುಂಡಿಗಳಿಂದ ತುಂಬಿ ಹೋಗಿರುವ ಈ ರಸ್ತೆಯ ದುರಸ್ತಿಗೆ 8 ಕೋಟಿ ರೂ. ಟೆಂಡರ್ ಆಗಿದ್ದರೂ ಯಾವುದೇ ರೀತಿಯ ದುರಸ್ತಿ ಕಾರ್ಯ ಪ್ರಾರಂಭವಾಗಿಲ್ಲ.
ಅಜ್ಜಾವರ ರಸ್ತೆ ಸುಮಾರು 6.5 ಕಿಮೀ ಉದ್ದವಿದೆ. ಈ ರಸ್ತೆ ನಿರ್ಮಾಣವಾಗಿ 20 ವರ್ಷಗಳಿಗೂ ಹೆಚ್ಚು ಕಾಲ ಸಂದಿದೆ. ರಸ್ತೆಗೆ ಡಾಮರು ಹಾಕಿ ಐದು ವರ್ಷಗಳು ಕಳೆದಿವೆ. ಆ ಬಳಿಕ ದುರಸ್ತಿ ಕಂಡಿಲ್ಲ. ಡಾಮರು ಸಂಪೂರ್ಣ ಕಿತ್ತು ಹೋಗಿ ಗುಂಡಿ ಬಿದ್ದಿದೆ. ಮಳೆಗಾಲದ ಬಳಿಕ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ಭರವಸೆಯಿತ್ತ ಅಧಿಕಾರಿಗಳು, ಈಗ ಮೌನವಹಿಸಿದ್ದಾರೆ.
ಟೆಂಡರು ವಾಪಸ್
ಸುಳ್ಯ-ಕಾಂತಮಂಗಲ-ಅಜ್ಜಾವರ ಹಾಗೂ ಉಬರಡ್ಕ ರಸ್ತೆ ದುರಸ್ತಿಗಾಗಿ ಒಟ್ಟು 8 ಕೋಟಿ ರೂ. ಮಂಜೂರಾಗಿತ್ತು. ಅಜ್ಜಾವರ ರಸ್ತೆ ಜಿ.ಪಂ. ವತಿಯಿಂದ ನಿರ್ಮಾಣಗೊಂಡರೂ ನಿರ್ವಹಣೆ ಟೆಂಡರ್ ಅನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ವಹಿಸಲಾಗಿದೆ. ಕಳೆದ ವರ್ಷ ಅನುದಾನ ಮಂಜೂರಾಗಿ ತಾಂತ್ರಿಕ ಇಲಾಖೆಗೆ ವರದಿ ಸಲ್ಲಿಸಲಾಗಿತ್ತು. ಅನಂತರ ಹಣಕಾಸು ವಿಭಾಗಕ್ಕೆ ಕಡತ ಹೋದ ಕೊನೆ ಹಂತದಲ್ಲಿ ರಾಜ್ಯ ಸರಕಾರ ಚಾಲ್ತಿಯಲ್ಲಿರುವ ಟೆಂಡರ್‌ಗಳನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಿತು. ಈ ಕಾರಣದಿಂದ ಪೆಂಡಿಂಗ್‌ನಲ್ಲಿದ್ದ ಟೆಂಡರ್ ಅವಧಿ ಸದ್ಯ ಕೊನೆಗೊಂಡಿದೆ.
ಇನ್ನು ಟೆಂಡರ್ ಅವಧಿಯನ್ನು ಹೊಸದಾಗಿ ರಿವ್ಯಾಲಿಡಿಟಿ ಮಾಡಿಸಬೇಕು. ಸರಕಾರದಿಂದ ಸುತ್ತೋಲೆ ಬಂದಿದೆ. ಟೆಂಡರ್ ಪ್ರಕ್ರಿಯೆ ಸದ್ಯದಲ್ಲೆ ಮುಗಿಯಲಿದೆ. 2019ರ ಫೆಬ್ರವರಿ ತಿಂಗಳಲ್ಲಿ ದುರಸ್ತಿ ಕಾರ್ಯ ಪ್ರಾರಂಭ ಮಾಡುವ ಯೋಜನೆ ಹಾಕಿದ್ದೇವೆ. ಮುಂದಿನ ಮಳೆಗಾಲಕ್ಕೆ ಮೊದಲು ರಸ್ತೆ ದುರಸ್ತಿ ಪೂರ್ಣಗೊಳಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ದೊಡ್ಡ ಗಾತ್ರದ ಹೊಂಡಗಳಿಗೆ ಕೆಂಪು ಕಲ್ಲು ಜೆಸಿಬಿ ಸಹಾಯದಿಂದ ಮಣ್ಣು ಹಾಕಿ ಮುಚ್ಚಲಾಗಿದೆ. ಮನವಿಗೆ ಸ್ಪಂದಿಸದ ಅಧಿಕಾರಿಗಳ ಜಾಣ ಮೌನಕ್ಕೆ ಶ್ರಮದಾನವೇ ಸೂಕ್ತವೆಂದು ತಿರ್ಮಾನಿಸಿ ಗ್ರಾಮಸ್ಥರು ಒಟ್ಟುಗೂಡಿ ರಸ್ತೆಗಳನ್ನು ತಕ್ಕಮಟ್ಟಿಗೆ ವಾಹನ ಸಂಚರಿಸುವಂತೆ ವ್ಯವಸ್ಥೆ ಮಾಡಿದರು.
ದುರಸ್ತಿ ವಿಳಂಬ: ಜನರಿಂದ ಶ್ರಮದಾನ
ರಸ್ತೆಗಳು ಶಿಥಿಲಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ನಾಗರಿಕರು ಒಂದು ದಿನದ ಶ್ರಮದಾನ ಮೂಲಕ ರಸ್ತೆ ಹೊಂಡ-ಗುಂಡಿಗಳನ್ನು ಮುಚ್ಚಿದ್ದಾರೆ. ತುರ್ತು ಸ್ಥಿತಿಯಲ್ಲಿ ನಗರಕ್ಕೆ ಸಂಚರಿಸಲು ಆಟೋ ಚಾಲಕರು ಒಪ್ಪುತ್ತಿಲ್ಲ. ಬೇರೆ ವಾಹನಗಳೂ ಬರುತ್ತಿಲ್ಲ. ಸುಳ್ಯ-ಅಜ್ಜಾವರ ರಸ್ತೆಯಲ್ಲಿ ಬಸ್ಸುಗಳ ಓಡಾಟವೂ ವಿರಳ. ಹಾನಿಯಾದ ರಸ್ತೆಯಲ್ಲಿ ವಾಹನಗಳು ಸಂಚರಿಸುವುದಕ್ಕಿಂತ ರಿಪೇರಿಗೆ ಅಲೆಯುವುದೇ ಜಾಸ್ತಿ. ಹೀಗಾಗಿ ಅನಿವಾರ್ಯವಾಗಿ ರಸ್ತೆಗಳಲ್ಲಿರುವ ಹೊಂಡ- ಗುಂಡಿಗಳನ್ನು ಮುಚ್ಚಲಾಯಿತು ಎಂದು ಅಜ್ಜಾವರ ಗ್ರಾಮಸ್ಥರು ಹೇಳಿದ್ದಾರೆ.
ಶೀಘ್ರ ದುರಸ್ತಿ ನಡೆಸಲಾಗುವುದು
ಟೆಂಡರ್ ಪ್ರಕ್ರಿಯೆ ನಡೆಯುತ್ತಲಿದೆ. ಎಂಟು ಕೋಟಿ ರೂ ಮಂಜೂರಾಗಿದೆ. ಮುಂದಿನ ಮಳೆಗಾಲಕ್ಕೂ ಮೊದಲು ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಉದ್ದೇಶ ಹೊಂದಿದ್ದೇವೆ.
– ಎಂಜಿನಿಯರ್,
ರಾಷ್ಟ್ರೀಯ ಹೆದ್ದಾರಿ ಇಲಾಖೆ
ಜನಪ್ರತಿನಿಧಿಗಳ ನಿರ್ಲಕ್ಷ್ಯ
ಅಜ್ಜಾವರ ರಸ್ತೆ ದುರಸ್ತಿ ಕಾರ್ಯ ದಿನೇ ದಿನೇ ಮುಂದೂಡಲಾಗುತ್ತಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ವಿಳಂಬಕ್ಕೆ ಕಾರಣ. ಮುಂಬರುವ ಮಳೆಗಾಲಕ್ಕೆ ಮೊದಲು ದುರಸ್ತಿಯಾದರೆ ಅನುಕೂಲ.
- ಮಿಥುನ್ ಕರ್ಲಪ್ಪಾಡಿ ಸ್ಥಳೀಯರು
ಶಿವಪ್ರಸಾದ್ ಮಣಿಯೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.