ಭೂ ದಾಖಲೆಗಳ ಕಿರಿಕಿರಿಯಿಂದ ಮುಕ್ತಿ
Team Udayavani, Nov 16, 2018, 10:00 AM IST
ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡಿಸೆಂಬರ್ 1ರಿಂದ ಪ್ರಾಪರ್ಟಿ ಕಾರ್ಡ್ (ನಗರ ಆಸ್ತಿ ಮಾಲಕತ್ವದ ದಾಖಲೆ-ಯುಪಿಒಆರ್) ಕಡ್ಡಾಯಗೊಳ್ಳುತ್ತಿದ್ದು, ಈ ಕಾರ್ಡ್ ಹೊಂದಿರುವ ಆಸ್ತಿ ಮಾಲಕರು ಯಾವುದೇ ರೀತಿಯ ಆಸ್ತಿ ದಾಖಲಾತಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಆಸ್ತಿ ಮಾರಾಟ, ನೋಂದಣಿ ಅಥವಾ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಸಂದರ್ಭ ಪದೇ ಪದೆ ಆರ್‌ಟಿಸಿ ಅಥವಾ ಇನ್ಯಾವುದೇ ಭೂ ದಾಖಲಾತಿಗಳನ್ನು ನೀಡುವ ಅಗತ್ಯವಿಲ್ಲ.
ಏಕೆಂದರೆ, ಪ್ರಾಪರ್ಟಿ ಕಾರ್ಡ್ ಹೊಂದಿದ್ದರೆ ಅದರಲ್ಲಿ ಈ ಎಲ್ಲ ಮಾಹಿತಿ ಒಳಗೊಂಡಿದ್ದು, ಯಾವುದೇ ಭೂ ದಾಖಲಾತಿ ಒದಗಿಸುವ ಅಗತ್ಯ ಬಂದಾಗ ಕೇವಲ ಪ್ರಾಪರ್ಟಿ ಕಾರ್ಡ್‌ನಲ್ಲಿ ನಮೂದಿಸಿರುವ ಯುಪಿಒಆರ್ ನಂಬರ್ ಕೊಟ್ಟರೆ ಸಾಕು. ಹೀಗಾಗಿ, ಆಸ್ತಿ ಮಾಲಕರಿಗೆ ಈ ಪ್ರಾಪರ್ಟಿ ಕಾರ್ಡ್ ಮಾಡಿಸುವುದರಿಂದ ಭವಿಷ್ಯದಲ್ಲಿ ಸಾಕಷ್ಟು ಲಾಭ-ಅನುಕೂಲ ಆಗಲಿದೆ. ಆದರೆ, ನಗರವಾಸಿಗಳಿಗೆ ಈ ಪ್ರಾಪರ್ಟಿ ಕಾರ್ಡ್ ಬಗ್ಗೆ ಇಲ್ಲಿಯವರೆಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.
ಮತ್ತೊಂದೆಡೆ, ಸಂಬಂಧಪಟ್ಟ ಅಧಿಕಾರಿಗಳು ಕೂಡ ಈ ಕಾರ್ಡ್‌ನ ಮಹತ್ವ ಹಾಗೂ ನಗರವಾಸಿಗಳಿಗೆ ಕಾರ್ಡ್ ಮಾಡಿಸುವ ಬಗ್ಗೆ ಎದುರಾಗಿರುವ ಗೊಂದಲ-ಸಂಶಯಗಳಿಗೆ ಸೂಕ್ತ ಸಮರ್ಥನೆ ನೀಡುವಲ್ಲಿ ವಿಫಲರಾಗಿದ್ದಾರೆ. ಅದಕ್ಕೆ ಮುಖ್ಯ ಕಾರಣ, ಡಿಸೆಂಬರ್ 1ರಿಂದ ನಗರ ವ್ಯಾಪ್ತಿಯಲ್ಲಿ ಈ ಪ್ರಾಪರ್ಟಿ ಕಾರ್ಡ್ ಬಳಕೆಯನ್ನು ಕಡ್ಡಾಯಗೊಳಿಸಲು ಹೊರಟಿರುವ ಜಿಲ್ಲಾಡಳಿತವು ಅದಕ್ಕೆ ಪೂರಕ ಸಿದ್ಧತೆ ಅಥವಾ ಮೂಲ ಸೌಕರ್ಯಗಳನ್ನು ಮಾಡಿಕೊಂಡಿಲ್ಲ. ಈ ಕಾರಣದಿಂದ ಜನರಿಗೂ ಪ್ರಾಪರ್ಟಿ ಕಾರ್ಡ್ ಮಾಡಿಸುವ ವಿಚಾರದಲ್ಲಿ ಹಲವು ರೀತಿಯ ಸಂಶಯ, ಆತಂಕ ಉಂಟಾಗಿರುವುದು ನಿಜ. ಅಂದರೆ, ‘ಸುದಿನ’ವು ‘ನಿಮ್ಮ ಆಸ್ತಿ-ನಿಮ್ಮ ಕಾರ್ಡ್’ ಕುರಿತಂತೆ ಮೂರು ದಿನಗಳಿಂದ ಮಾಹಿತಿ ನೀಡುವ ಸರಣಿ ವರದಿಗಳನ್ನು ಪ್ರಕಟಿಸುತ್ತಿದೆ. ವಿಶೇಷ ಅಂದರೆ, ಸುದಿನ ವರದಿ ಆಧರಿಸಿ ನಮ್ಮ ವಾಟ್ಸಾಪ್ ನಂಬರ್ ಗೆ ನಿರೀಕ್ಷೆಗೂ ಮೀರಿದಂತೆ ಓದುಗರಿಂದ ಪ್ರಾಪರ್ಟಿ ಕಾರ್ಡ್ ಬಗ್ಗೆ ಅಗತ್ಯ ಮಾಹಿತಿ ಕೋರಿ ಕರೆಗಳು ಬಂದಿವೆ. ಬಹುತೇಕ ಕರೆಗಳಲ್ಲಿ ಜನ ಕಾರ್ಡ್ ಮಾಡಿಸುವುದು ಹೇಗೆ? ಏನೆಲ್ಲ ದಾಖಲೆ ನೀಡಬೇಕು? ಅದರಿಂದ ಏನು ಲಾಭ? ಎಂಬಿತ್ಯಾದಿ ಪ್ರಶ್ನೆಗಳನ್ನೇ ಕೇಳುತ್ತಿದ್ದಾರೆ. ವಾಸ್ತವದಲ್ಲಿ ಈ ಪ್ರಾಪರ್ಟಿ ಕಾರ್ಡ್ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯೇ ಇಲ್ಲ. ಡಿಸೆಂಬರ್ 1ರಿಂದ ನಗರದ ಎಲ್ಲ ಆಸ್ತಿ ಮಾಲಕರು ಪ್ರಾಪರ್ಟಿ ಕಾರ್ಡ್ ಕಡ್ಡಾಯ ವಾಗಿ ಹೊಂದಿರಬೇಕು ಎನ್ನುವ ತಪ್ಪು ಕಲ್ಪನೆಯಿದೆ.
ಇದರಿಂದ ಕೆಲವರು ಆತಂಕಗೊಂಡಿದ್ದು, ತುರ್ತಾಗಿ ಪ್ರಾಪರ್ಟಿ ಕಾರ್ಡ್ ಮಾಡಿಸುವುದಕ್ಕೆ ತಾಲೂಕು ಕಚೇರಿ ಆವರಣದಲ್ಲಿರುವ ಯುಪಿಒಆರ್ ಯೋಜನ ಘಟಕಕ್ಕೆ ಧಾವಿಸುತ್ತಿದ್ದಾರೆ. ಆಸ್ತಿ ಮಾಲಕರು ಈ ರೀತಿ ಗಾಬರಿಗೊಂಡು ತರಾತುರಿಯಲ್ಲಿ ಪ್ರಾಪರ್ಟಿ ಕಾರ್ಡ್ ಮಾಡಿಸುವುದಕ್ಕೆ ಮುಂದಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಯಾವ ಮಾಲಕರು ತಮ್ಮ ಆಸ್ತಿಗಳನ್ನು ಮಾರಾಟ ಅಥವಾ ಪರಭಾರೆಗೆ ಮುಂದಾಗುತ್ತಾರೆಯೊ ಅಂಥವರು ಮಾತ್ರ ಕಡ್ಡಾಯವಾಗಿ ಪ್ರಾಪರ್ಟಿ ಕಾರ್ಡ್ ಹೊಂದಿರಬೇಕಾಗುತ್ತದೆ. ಉಳಿದ ಮಾಲಕರು ತಮ್ಮ ಸಮಯಾವಕಾಶ ನೋಡಿಕೊಂಡು ಪ್ರಾಪರ್ಟಿ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಂಡರೆ ಸಾಕಾಗುತ್ತದೆ.
ಸರಿಯಾದ ಮಾಹಿತಿ ಕೊಟ್ಟಿಲ್ಲ
ಪ್ರಾಪರ್ಟಿ ಕಾರ್ಡ್ ಮಾಡಿಸಲು ಗಡುವು ನಿಗದಿಪಡಿಸುವಾಗ ಸಾರ್ವಜನಿಕರಿಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ಕೊಡಬೇಕಾಗಿತ್ತು. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ವರ್ಷಾಂತ್ಯದ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ದೀಪಾವಳಿ, ಕ್ರಿಸ್ಮಸ್, ಹೊಸ ವರ್ಷಾಚರಣೆಗೆಂದು ಬಹಳಷ್ಟು ಮಂದಿ ಅನಿವಾಸಿ ಭಾರತೀಯರು ಮತ್ತು ಸೈನಿಕರು ಮಂಗಳೂರಿಗೆ ಬರುತ್ತಿದ್ದು, ಹಾಗಾಗಿ ಈ ಸಂದರ್ಭದಲ್ಲಿಯೇ ಅವರು ಆಸ್ತಿ ಪಾಸ್ತಿ ಖರೀದಿ ಕುರಿತಂತೆ ಆಸ್ತಿಗಳನ್ನು ಗುರುತಿಸಿ ಅವುಗಳ ನೋಂದಣಿ ದಿನಾಂಕವನ್ನು ನಿಗದಿಪಡಿಸಿರುತ್ತಾರೆ. ಇಂತಹ ಸಂದರ್ಭ ಸರಕಾರ ಪ್ರಾಪರ್ಟಿ ಕಾರ್ಡ್ ಹೊಂದುವುದನ್ನು ಕಡ್ಡಾಯ ಮಾಡಿರುವುದರಿಂದ ಆಸ್ತಿ ನೋಂದಣಿ ಪ್ರಕ್ರಿಯೆಗೆ ಅಡಚಣೆಯಾಗುತ್ತದೆ ಎನ್ನುವುದು ಹಿರಿಯ ವಕೀಲ ವಿವೇಕಾನಂದ ಪನೆಯಾಲ ಆರೋಪ.
ಹೆಚ್ಚಿದ ನೋಂದಣಿದಾರರ ಸಂಖ್ಯೆ
ಪ್ರಾಪರ್ಟಿ ಕಾರ್ಡ್ ಮಾಡಿಸುವ ಬಗ್ಗೆ ನಗರದ ಹಂಪನಕಟ್ಟೆಯ ಹಳೆ ತಾ| ಕಚೇರಿ ಆವರಣದಲ್ಲಿರುವ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಯು.ಪಿ. ಒ.ಆರ್. ಯೋಜನ ಘಟಕದಲ್ಲಿ ಇದೀಗ ಜನ ದಟ್ಟಣೆ ಜಾಸ್ತಿಯಾಗಿದೆ. ಆಸ್ತಿಗೆ ಸಂಬಂಧಿಸಿದ ಸೂಕ್ತ ದಾಖಲೆ ಪತ್ರಗಳನ್ನು ಹಾಜರುಪಡಿಸುವವರು ಒಂದೇ ಭೇಟಿಯಲ್ಲಿ ತಮ್ಮ ಕೆಲಸವನ್ನು ಮುಗಿಸಿ ನಿಶ್ಚಿಂತೆಯಿಂದ ಮರಳ ಬಹುದು. ಸರಿಯಾದ ದಾಖಲೆ ಪತ್ರ ಹೊಂದಿಲ್ಲ ದವರು ಅವುಗಳನ್ನು ಪಡೆದು ಹಾಜರು ಪಡಿಸಬೇಕಾಗುತ್ತದೆ. ಹಾಗಾಗಿ ಅಂಥವರು ಇನ್ನೊಂದು ಬಾರಿ ಭೇಟಿ ನೀಡಬೇಕಾಗುತ್ತದೆ. ನೋಂದಣಿ ಕೇಂದ್ರದಲ್ಲಿ ಯಾವ ರೀತಿಯ ವ್ಯವಸ್ಥೆ ಒದಗಿಸಲಾಗಿದೆ ಎಂಬ ಬಗ್ಗೆ ಕೂಡ ‘ಸುದಿನ’ ವತಿಯಿಂದ ವಸ್ತುಸ್ಥಿತಿಯನ್ನು ಪರಿಶೀಲಿಸಲಾಗಿದೆ. ಕೇಂದ್ರಕ್ಕೆ ಬಂದವರನ್ನು ಮಾತನಾಡಿಸಿದಾಗ, ಬಹುತೇಕರು, ನೋಂದಣಿ ಕೇಂದ್ರದಲ್ಲಿ ಕಲ್ಪಿಸಲಾಗಿರುವ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು ಈ ಕೇಂದ್ರಕ್ಕೆ ಪ್ರಾಪರ್ಟಿ ಕಾರ್ಡ್ ಮಾಡಿಸುವುದಕ್ಕೆ ಆಗಮಿ ಸುತ್ತಿದ್ದು, ಅವರಲ್ಲಿ ಅನೇಕರಿಗೆ ಏನೆಲ್ಲ ದಾಖಲೆ ತರಬೇಕು ಎಂಬ ಮಾಹಿತಿ ಗೊತ್ತಿಲ್ಲ. ಬಂದವರು, ಬರಿಗೈಯಲ್ಲಿ ವಾಪಾಸ್ ಹೋಗುತ್ತಿರುವ ದೃಶ್ಯ ಕೂಡ ಕಂಡುಬಂತು. ಇನ್ನು ಕೆಲವರು ಪ್ರಾಪರ್ಟಿ ಕಾರ್ಡ್ ಬಗ್ಗೆ ಮಾಹಿತಿ ಪಡೆದುಕೊಂಡು ಹಿಂದಿರುಗುತ್ತಿದ್ದಾರೆ.
ಇಂದಿನಿಂದ ಸರ್ವೆಯರ್‌ಗಳಿಂದ ಮನೆಮನೆ ಭೇಟಿ
ನ. 16ರಿಂದ ನಗರದಲ್ಲಿ 26 ಸರ್ವೆಯರ್ ಗಳು ಮನೆ ಮನೆಗಳಿಗೆ ಭೇಟಿ ನೀಡಿ ಆಸ್ತಿಯ ದಾಖಲೆಗಳನ್ನು ಸಂಗ್ರಹ ಮಾಡಲಿದ್ದಾರೆ. ಸರ್ವೆಯರ್‌ಗಳು ಮನೆಗಳಿಗೆ ಬಂದಾಗ ಮನೆಯವರು ಅವರಿಗೆ ಖಾತಾ, ಆಸ್ತಿ ದಸ್ತಾವೇಜು ಹಾಗೂ ಇನ್ನಿತರ ದಾಖಲೆಗಳ ಪ್ರತಿಗಳನ್ನು ನೀಡಬೇಕು ಎಂದು ಪ್ರಾಪರ್ಟಿ ಕಾರ್ಡ್ ಯೋಜನಾಧಿಕಾರಿ ಬಿ.ಕೆ. ಕುಸುಮಾಧರ್ ಪ್ರಕಟನೆಯಲ್ಲಿ ಕೋರಿದ್ದಾರೆ.
ಪ್ರಾಪರ್ಟಿ ಕಾರ್ಡ್ ಸಾಧಕ-ಬಾಧಕ
ನಗರ ಪ್ರದೇಶದಲ್ಲಿ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸುವುದರಿಂದ ಮುಂದಿನ ದಿನಗಳಲ್ಲಿ ಬೇನಾಮಿ ಆಸ್ತಿ ಪತ್ತೆ ಮಾಡಲು, ಬೇನಾಮಿ ಆಸ್ತಿ ಪರಭಾರೆಯಿಂದ ಖರೀದಿದಾರರು ಮೋಸ ಹೋಗುವುದನ್ನು ತಡೆಯಲು ಸಹಕಾರಿಯಾಗಲಿದೆ. ಅಲ್ಲದೆ, ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ, ಮೂಲ ನಿವೇಶನದಾರರ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿ ಕಬಳಿಕೆ ಮಾಡಿಕೊಂಡು ಅಕ್ರಮವಾಗಿ ನೋಂದಣಿ ಅಥವಾ ಪರಭಾರೆಗೆ ಯತ್ನಿಸದರೆ ಅದನ್ನು ಕೂಡ ಪತ್ತೆ ಹಚ್ಚುವುದಕ್ಕೆ ಈ ಪ್ರಾಪರ್ಟಿ ಕಾರ್ಡ್ ನೆರವಾಗಲಿದೆ. ಅದೆಲ್ಲಕ್ಕಿಂತಲೂ ಮುಖ್ಯವಾಗಿ ಸಾಮಾನ್ಯವಾಗಿ ಬ್ಯಾಂಕ್ ಗಳಿಂದ ಸಾಲ ಪಡೆಯಲು ಹೋದಾಗ ಅಥವಾ ಹಳೆ ಸಾಲ ಮರುಪಾವತಿ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಬ್ಯಾಂಕ್‌ನವರು ಪದೇಪದೇ ಆರ್‌ಟಿಸಿ, ಆಸ್ತಿಯ ಋಣ ಭಾರ ಪತ್ರ ಮುಂತಾದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸುತ್ತಾರೆ. ಆಗ, ಅಗತ್ಯಬಂದಾಗೆಲ್ಲ ಆರ್‌ಟಿಸಿ ಪಡೆಯುವುದಕ್ಕೆ ತಾಲೂಕು ಕಚೇರಿಗೆ ಅಲೆದಾಡಬೇಕಾಗುತ್ತದೆ. ಆದರೆ, ಇನ್ನುಮುಂದೆ, ಆಸ್ತಿ ಮಾಲಕರಿಗೆ ಇಂಥ ಕಿರಿಕಿರಿ ಇರುವುದಿಲ್ಲ. ಪ್ರಾಪರ್ಟಿ ಕಾರ್ಡ್ ಮಾಹಿತಿಗಳನ್ನು ಬ್ಯಾಂಕ್‌ನೊಂದಿಗೆ ಲಿಂಕ್ ಮಾಡುವುದಕ್ಕೆ ಅವಕಾಶವಿರುವುದರಿಂದ ಕೇವಲ ಕಾರ್ಡ್ ಸಂಖ್ಯೆಯನ್ನಷ್ಟೇ ಸಲ್ಲಿಸಿದರೆ ಸಾಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಪ್ರಾಪರ್ಟಿ ಕಾರ್ಡ್ ಹೆಚ್ಚಿನ ಅನುಕೂಲವಾಗಲಿದೆ.
ಮೂರನೇ ಬಾರಿ ಹೇಳುತ್ತಿದ್ದಾರೆ
2013ರಲ್ಲಿ ನಮಗೆ ಪ್ರಾಪರ್ಟಿ ಕಾರ್ಡ್ ಮಾಡಿಸುವ ಬಗ್ಗೆ ನೋಟಿಸ್ ನೀಡಿದ್ದರು. ಆ ಬಳಿಕ 2016ರಲ್ಲಿ ಮತ್ತೊಮ್ಮೆ ಈ ಬಗ್ಗೆ ನೆನಪಿಸಿದ್ದರು. ಇದೀಗ 2018ರಲ್ಲಿ ಪುನಃ ಪ್ರಾಪರ್ಟಿ ಕಾರ್ಡ್ ಬಗ್ಗೆ ದಿಢೀರನೆ ಪ್ರಸ್ತಾವವಾಗಿದೆ ಮಾತ್ರವಲ್ಲ ಈ ಕಾರ್ಡ್ ಕಡ್ಡಾಯ ಎಂದೂ ತಿಳಿಸಲಾಗಿದೆ.
- ಓರ್ವ ಫ್ಲ್ಯಾಟ್ ನಿವಾಸಿ
ಗೈಡ್ ಮಾಡಲು ಸಿಬಂದಿ ಬೇಕು
ಪ್ರಾಪರ್ಟಿ ಕಾರ್ಡ್ ಮಾಡಿಸುವ ಬಗ್ಗೆ ಈ ಕೇಂದ್ರಕ್ಕೆ ಬರುವ ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ಹಾಗಾಗಿ ಜನರಿಗೆ ಮಾಹಿತಿ, ಮಾರ್ಗದರ್ಶನ ನೀಡಲು ಈ ಕೇಂದ್ರದಲ್ಲಿ ಸಿಬಂದಿ ನೇಮಿಸಬೇಕು.
- ಓರ್ವ ನಾಗರಿಕ
ಮೂರನೇ ಬಾರಿ ಬಂದರೂ ಆಗಿಲ್ಲ
ಪ್ರಾಪರ್ಟಿ ಕಾರ್ಡ್ ಮಾಡಿಸಲು ನಾನು ಈ ಹಿಂದೆ ಎರಡು ಬಾರಿ ಬಂದು ಹೋಗಿದ್ದೆ. ಈಗ ಮೂರನೇ ಬಾರಿ ಬಂದಿದ್ದೇನೆ. ಇನ್ನೂ ಆಗಿಲ್ಲ.
- ಕಮಲಾಕರ,ಮಂಗಳೂರು
ಪ್ರಾಪರ್ಟಿ ಕಾರ್ಡ್: ಸಂಪರ್ಕಿಸಬೇಕಾದ ವಿಳಾಸ
ಯು.ಪಿ.ಒ.ಆರ್. ಯೋಜನ ಘಟಕ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ),
1ನೇ ಮಹಡಿ, ಹಳೆ ತಾಲೂಕು ಕಚೇರಿ ಆವರಣ
ಹಂಪನಕಟ್ಟೆ, ಮಂಗಳೂರು-575001
ಇ ಮೈಲ್: [email protected]
ಮೊಬೈಲ್ ಸಂಖ್ಯೆ: 9632808962
ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.