![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 19, 2022, 7:30 AM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟಿ ಹಾಗೂ ಪರ್ಯಾಯ ರಸ್ತೆಗಳಾದ ಚಾರ್ಮಾಡಿ, ಸಂಪಾಜೆ, ಅಗುಂಬೆ ರಸ್ತೆಗಳಲ್ಲಿ ಭಾರಿ ಮಳೆಗೆ ಸಂಭವಿಸಿರುವ ಭೂಕುಸಿತದಿಂದಾಗಿ ಮಂಗಳೂರಿನಿಂದ ಬೆಂಗಳೂರಿಗೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ ಹಂತಕ್ಕೆ ತಲುಪಿದ್ದು ಪರ್ಯಾಯ ಸಂಚಾರ ವ್ಯವಸ್ಥೆಯಾಗಿ ರೈಲುಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಹಾಗಾಗಿ ಮಂಗಳೂರಿನಿಂದ ಪ್ರಸ್ತುತ ಇರುವ ರೈಲುಗಳ ಜತೆ ಕೂಡಲೇ ಹೆಚ್ಚುವರಿ ರೈಲುಗಳನ್ನು ಓಡಿಸುವಂತೆ ಕರಾವಳಿ ಭಾಗದಿಂದ ಪ್ರಯಾಣಿಕರು, ವಿವಿಧ ಸಂಘಟನೆಗಳಿಂದ ಈಗಾಗಲೇ ಒತ್ತಾಯಿಸಲಾಗಿದೆ.
ಭೂಕುಸಿತ ಹಿನ್ನೆಲೆಯಲ್ಲಿ ಶಿರಾಡಿ ಘಾಟಿಯಲ್ಲಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಚಾರ್ಮಾಡಿ ಹಾಗೂ ಸಂಪಾಜೆ ಘಾಟಿ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳು ಸಾಗುತ್ತಿರುವ ಕಾರಣ ಒತ್ತಡ ಸೃಷ್ಟಿಯಾಗಿದೆ. ಇಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದ್ದು ಯಾವುದೇ ಸಂದರ್ಭ ಸಂಚಾರ ಸ್ಥಗಿತದ ಆತಂಕ ಸೃಷ್ಟಿಯಾಗಿದೆ.
ಹೆಚ್ಚುವರಿ ರೈಲುಗಳ ಸಂಚಾರ
ಪ್ರಸ್ತುತ ಮಂಗಳೂರು -ಬೆಂಗಳೂರು -ಮಂಗಳೂರು ಮಧ್ಯೆ ಮಂಗಳೂರು-ಕಣ್ಣೂರು ರೈಲು ವಾರಕ್ಕೆ 4 ದಿನ, ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ವಾರಕ್ಕೆ 3 ದಿನ, ವಯಾ ಮೈಸೂರು ವಾರಕ್ಕೆ ಮೂರು ದಿನ ಸಂಚರಿಸುತ್ತಿವೆ. ಪಂಚಗಂಗಾ ಎಕ್ಸ್‌ಪ್ರೆಸ್ ಪಡೀಲು ಮೂಲಕ ಸಂಚರಿಸುತ್ತಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಹೆಚ್ಚುವರಿಯಾಗಿ 1 ರಾತ್ರಿ ಹಾಗೂ 1 ಹಗಲು ರೈಲು ಆರಂಭಿÓಬೇಕಿದೆ. ಜತೆಗೆ ಮೈಸೂರು ಮಾರ್ಗವಾಗಿ ಸಾಗುತ್ತಿರುವ ರೈಲುಗಾಡಿಯನ್ನು ದಿನಂಪ್ರತಿ ಓಡಿಸಬೇಕು. ಇದಲ್ಲದೆ ಕಣ್ಣೂರು -ಬೆಂಗಳೂರು ಗಾಡಿ ಪ್ರಸ್ತುತ 16 ಬೋಗಿಗಳನ್ನು ಒಳಗೊಂಡಿದ್ದು ಇದಕ್ಕೆ ಹೆಚ್ಚುವರಿಯಾಗಿ ಇನ್ನೂ ಕೆಲವು ಬೋಗಿಗಳನ್ನು ಜೋಡಿಸಬೇಕು ಎಂಬ ಸಲಹೆಗಳು ರೈಲ್ವೇ ಬಳಕೆದಾರ ಸಂಘಟನೆಗಳಿಂದ ವ್ಯಕ್ತವಾಗಿವೆ.
ಪ್ರಸ್ತುತ ಸ್ಥಿತಿಯಲ್ಲಿ ಬೆಂಗಳೂರು -ಮಂಗಳೂರು ಮಧ್ಯೆ ಹೆಚ್ಚುವರಿ ರೈಲು ಸಂಚಾರ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯವಾಗಿದೆ.
ಈ ನಿಟ್ಟಿನಲ್ಲಿ ರೈಲ್ವೇ ಇಲಾಖೆ ತ್ವರಿತವಾಗಿ ಸ್ಪಂದಿಸಬೇಕು. ಜನಪ್ರತಿನಿಧಿಗಳು ಒತ್ತಡ ಹೇರಬೇಕು ಎಂದು ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ತಿಳಿಸಿದ್ದಾರೆ.
ಸಂಸದರಿಂದ ರೈಲ್ವೇ ಸಚಿವರಿಗೆ ಮನವಿ
ಶಿರಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತ ಹಿನ್ನಲೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೆಚ್ಚುವರಿಯಾಗಿ ರೈಲುಗಳನ್ನು ಓಡಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ.
ಮಂಗಳೂರು-ಬೆಂಗಳೂರು ಮಧ್ಯೆ ಪ್ರತಿದಿನ ಸುಮಾರು 10,000 ಮಂದಿ ಪ್ರಯಾಣಿಸುತ್ತಿದ್ದಾರೆ. ಇದೀಗ ಸಂಪರ್ಕ ಮಾರ್ಗಗಳಾಗಿರುವ ಶಿರಾಡಿ, ಚಾರ್ಮಾಡಿ ಹಾಗೂ ಸಂಪಾಜೆ ಘಾಟಿಗಳಲ್ಲಿ ಬಸ್‌ಸಂಚಾರಕ್ಕೆ ತಡೆಯಾಗಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ ಪ್ರಮುಖ ಸಂಪರ್ಕವಾಗಿದೆ. ಆದುದರಿಂದ ಹೆಚ್ಚುವರಿಯಾಗಿ ಒಂದು ಹಗಲು ಮತ್ತು ಒಂದು ರಾತ್ರಿ ರೈಲು ಸಂಚಾರ ಆರಂಭಿಸುವಂತೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆಂದು ಸಂಸದರು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.