ಹಲವು ದಶಕಗಳಿಂದ ಈಡೇರದ ಬಸ್ ಸಂಚಾರದ ಬೇಡಿಕೆ
Team Udayavani, Oct 1, 2018, 10:36 AM IST
ದೇಲಂಪಾಡಿ: ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ದೇಲಂಪಾಡಿ ಗ್ರಾಮಕ್ಕೆ ಸರಕಾರಿ ಬಸ್‌ಗಳಿಲ್ಲದೆ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ. ತೀರ ಹತ್ತಿರದ ಪ್ರದೇಶಗಳಿಗೂ ಸಂಪರ್ಕಿಸಲು ಸಾಧ್ಯವಾಗದೆ ಇಲ್ಲಿನ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.
ದೇಲಂಪಾಡಿ ಗ್ರಾಮ ವ್ಯಾಪ್ತಿಯ ಬೆಳ್ಳಿಪ್ಪಾಡಿ, ಬನಾರಿ ಹಾಗೂ ಪಂಜಿಕಲ್ಲು ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿವೆ. ಕೆಲಸ ಕಾರ್ಯಗಳಿಗೆ ಇಲ್ಲಿನವರು ದಿನನಿತ್ಯ ಜಾಲ್ಸೂರು-ಸುಳ್ಯ ಕಡೆಗೆ ತೆರಳಬೇಕಾಗುತ್ತದೆ. ಹೀಗಿದ್ದರೂ ಸರಿಯಾದ ವಾಹನಗಳ ವ್ಯವಸ್ಥೆಯೇ ಇಲ್ಲಿಲ್ಲ.
ಪರ್ಯಾಯ ಮಾರ್ಗ ದೂರ
ದೇಲಂಪಾಡಿ ಗ್ರಾಮದಿಂದ ಕಾಸರಗೋಡಿಗೆ ಸಂಚರಿಸಲು ಬಸ್‌ಗಳ ಓಡಾಟ ಹೆಚ್ಚಿದೆ. ಸುಳ್ಯಕ್ಕೆ ಹೋಗುವ ಪ್ರಯಾಣಿಕರು ಈ ಬಸ್‌ಗಳನ್ನೆ ಅವಲಂಬಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ದೇಲಂಪಾಡಿಗೆ ಪುತ್ತೂರು ಡಿಪೋದಿಂದ ಒಂದು ಸರಕಾರಿ ಬಸ್ ಆರಂಭಿಸಲಾಗಿತ್ತು. ಆದರೆ ಈ ಬಸ್ ಪಂಜಿಕಲ್ಲು ಮಾರ್ಗವಾಗಿ ಸಂಚರಿಸುತ್ತಿಲ್ಲ. ಸುಳ್ಯಕ್ಕೆ ಪ್ರಯಾಣಿಸುವ ಜನರು ದೇಲಂಪಾಡಿಯಿಂದ ಈಶ್ವರಮಂಗಲ ಮಾರ್ಗವಾಗಿ ಕಾವು ಮೂಲಕ ಸಂಚರಿಸುತ್ತಿದ್ದಾರೆ. ಈ ಬದಲಿ ಮಾರ್ಗವನ್ನು ಪಂಜಿಕಲ್ಲು ರಸ್ತೆಗೆ ಹೋಲಿಸಿದರೆ ತುಂಬಾ ದೂರ. ದೇಲಂಪಾಡಿ-ಈಶ್ವರ ಮಂಗಲ-ಸುಳ್ಯ ರಸ್ತೆ ಸುಮಾರು 28 ಕಿ.ಮೀ. ದೂರವಿದೆ. ಆದರೆ ಪಂಜಿಕಲ್ಲು-ಸುಳ್ಯ ಮಾರ್ಗ 15 ಕಿ.ಮೀ ದೂರವಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಸಮಯವೂ ಉಳಿಸಬಹುದು. ಪ್ರಯಾಣ ವೆಚ್ಚ ಕೂಡ ಕಡಿಮೆ.
ಶೀಘ್ರ ಬಸ್ ಸಂಚಾರ: ಆಗ್ರಹ
ದೇಲಂಪಾಡಿ ಪಂಜಿಕಲ್ಲು ಸುಳ್ಯ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿವೆ. ಕಾರು, ಜೀಪು, ಆಟೋ ರಿಕ್ಷಾಗಳು, ಪಿಕ್ ಅಪ್, ಮಿನಿ ಲಾರಿಗಳು ಸಹಿತ ದ್ವಿಚಕ್ರ ವಾಹನಗಳು ಅನಾಯಸವಾಗಿ ಓಡಾಡುತ್ತಿವೆ. ಸುಳ್ಯದಲ್ಲಿ ಕಳೆದ ವರ್ಷವೇ ಬಸ್ ಡಿಪೋ ಕಾರ್ಯಾರಂಭಿಸಿದೆ. ಅತೀ ಶೀಘ್ರದಲ್ಲಿ ಎರಡು ಸರಕಾರಿ ಬಸ್ಸುಗಳು ಈ ಮಾರ್ಗವಾಗಿ ಸಂಚರಿಸುವಂತಾಗಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಬೆಳಗ್ಗೆ ಏಳು ಗಂಟೆಗೆ ಪುತ್ತೂರಿನಿಂದ ದೇಲಂಪಾಡಿ ಮಾರ್ಗವಾಗಿ ಬಸ್ ಹೊರಟರೆ ಶಾಲಾ ಮಕ್ಕಳಿಗೆ, ಕೆಲಸಕಾರ್ಯಗಳಿಗೆ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಶಾಲಾ ಮಕ್ಕಳ ಸ್ಥಿತಿ ಅತಂತ್ರ
ಸುಳ್ಯಕ್ಕೆ ತೆರಳುವ ಶಾಲಾ ಮಕ್ಕಳು ಶಾಲೆಗೆ ಸರಿಯಾದ ಸಮಯಕ್ಕೆ ತಲುಪಲಾಗುತ್ತಿಲ್ಲ. ಈಶ್ವರ ಮಂಗಲ ಮಾರ್ಗವಾಗಿ ಸಂಚರಿಸುವ ಮಕ್ಕಳು ದಿನಂಪ್ರತಿ 50ರಿಂದ 60 ಕಿ.ಮೀ. ಪ್ರಯಾಣಿಸುವಂತಾಗಿದೆ. ಹೆಚ್ಚಿನ ಹೆತ್ತವರು ಬೇಸತ್ತು ಮಕ್ಕಳನ್ನು ಪುತ್ತೂರಿನ ಶಾಲಾ, ಕಾಲೇಜಿಗೆ ಕಳುಹಿಸುತ್ತಿದ್ದಾರೆ.
ಖಾಸಗಿ ವಾಹನಗಳ ಬಳಕೆ
ದೇಲಂಪಾಡಿ-ಪಂಜಿಕಲ್ಲು ಭಾಗದಲ್ಲಿ ಬಸ್ ಓಡಾಟವಿಲ್ಲದೆ ಜನರು ಅನಿವಾರ್ಯವಾಗಿ ಆಟೋ ರಿಕ್ಷಾಗಳನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ಪ್ರಯಾಣಿಸಲು ದ್ವಿಚಕ್ರ ವಾಹನ, ಆಟೋ ರಿಕ್ಷಾಗಳನ್ನು ಬಳಸುವುದರಿಂದ ಸಂಚಾರ ವೆಚ್ಚ ದುಬಾರಿಯಾಗುತ್ತಿದೆ. ಈಶ್ವರಮಂಗಲ ಮಾರ್ಗವಾಗಿ ಸಂಚರಿಸಿ ದೇಲಂಪಾಡಿ ಹೃದಯ ಭಾಗಕ್ಕೆ ಬರಲು 2ರಿಂದ 3 ಕಿ.ಮೀ. ದೂರ ನಡೆಯಬೇಕು.
ಬಸ್ಸು ಓಡಾಟವಾಗಲಿ
ಬಸ್ಸುಗಳ ಓಡಾಟವಿಲ್ಲದೆ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಪ್ರಯಾಣಿಕರಿಗೆ ಆಟೋ ರಿಕ್ಷಾಗಳ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರ ಬಸ್ಸು ಪ್ರಯಾಣ ಆರಂಭಿಸಿ, ಕನಿಷ್ಠ ಎರಡು ಸರಕಾರಿ ಬಸ್ಸುಗಳಾದರೂ ಓಡಾಡುವಂತಾಗಬೇಕು.
– ಚಂದ್ರಶೇಖರ್,
ಬೆಳ್ಳಿಪ್ಪಾಡಿ ಸ್ಥಳೀಯರು
ಸಂಕಷ್ಟ
ದೇಲಂಪಾಡಿ- ಪಂಜಿಕಲ್ಲು ಮಾರ್ಗ ಸುಳ್ಯಕ್ಕೆ ಬಹಳ ಹತ್ತಿರದ ರಸ್ತೆಯಾಗಿದೆ. ಬಹಳ ವರ್ಷಗಳಿಂದ ಈ ಭಾಗಕ್ಕೆ ಬಸ್ಸುಗಳಿಲ್ಲದೆ ಕಷ್ಟ ಅನುಭವಿಸುತ್ತಿದ್ದೇವೆ. ಶೀಘ್ರವಾಗಿ ಬಸ್ ಸಂಚಾರ ಆರಂಭಿಸಿದರೆ ಶಾಲಾ ಮಕ್ಕಳಿಗೆ ಅನುಕೂಲವಾಗುತ್ತದೆ.
– ಜಯ ಬಂದ್ಯಡ್ಕ.
ಗ್ರಾಮಸ್ಥರು
ಶಿವಪ್ರಸಾದ್ ಮಣಿಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.