ಡೆಂಗ್ಯೂ ಉಲ್ಬಣ: ಮತ್ತೆ 29 ಮಂದಿ ಆಸ್ಪತ್ರೆಗೆ ದಾಖಲು
Team Udayavani, Jul 24, 2019, 6:05 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ದಿನೇದಿನೆ ಏರಿಕೆಯಾಗುತ್ತಿದೆ. ಮಂಗಳವಾರ 29 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಸತತ ಪ್ರಯತ್ನಗಳನ್ನು ನಡೆಸುತ್ತಿವೆ. ಫಾಗಿಂಗ್, ಮನೆಮನೆ ಭೇಟಿ, ಪರಿಶೀಲನೆ ಪ್ರತಿದಿನ ನಡೆಯುತ್ತಿದೆ. ಆದಾಗ್ಯೂ ಡೆಂಗ್ಯೂ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಂಗಳವಾರ ಒಂದೇ ದಿನ 29 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಈ ಪೈಕಿ 26 ಮಂದಿ ಮಂಗಳೂರಿನವರಾದರೆ, ಓರ್ವರು ಸುಳ್ಯ ತಾಲೂಕಿನವರು. ಇಬ್ಬರು ಹೊರ ಜಿಲ್ಲೆಯವರಾಗಿದ್ದಾರೆ.
ಜುಲೈ 18ರಿಂದ ಇಲ್ಲಿವರೆಗೆ ಒಟ್ಟು 163 ಮಂದಿ ಡೆಂಗ್ಯೂ ಜ್ವರಕ್ಕಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಈ ಪೈಕಿ 19 ಮಂದಿ ಹೊರ ಜಿಲ್ಲೆಯವರು.
45 ಸಾವಿರ ರೂ. ದಂಡ ಸಂಗ್ರಹ
ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದರೆ ಅಂತಹ ಕಟ್ಟಡಗಳ ಗುತ್ತಿಗೆದಾರರು, ಮಾಲಕರಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದ್ದು, ಮಂಗಳವಾರ ಒಟ್ಟು 45 ಸಾವಿರ ದಂಡ ವಿಧಿಸಲಾಗಿದೆ.
ಸೊಳ್ಳೆ ಉತ್ಪತ್ತಿಗೆ ಪೂರಕ ತಾಣವನ್ನು ಶುಚಿಗೊಳಿಸದೆ ಹಾಗೆಯೇ ಬಿಡುವ ಕಟ್ಟಡ, ಮನೆ, ಇತರ ವ್ಯಾಪಾರ ಕೇಂದ್ರಗಳಲ್ಲಿ ತಪಾಸಣೆ ವೇಳೆ ಕಂಡು ಬಂದರೆ ನಿರ್ದಾಕ್ಷಿಣ್ಯ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ರವಿವಾರದಿಂದಲೇ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಿತ್ತು. ರವಿವಾರ ಎಂಟು ಕಟ್ಟಡಗಳಿಗೆ 85 ಸಾವಿರ ರೂ. ಮತ್ತು ಸೋಮವಾರ ಎಂಟು ಕಟ್ಟಡಗಳಿಗೆ 75 ಸಾವಿರ ರೂ. ದಂಡ ವಿಧಿಸಲಾಗಿತ್ತು.
ತೀವ್ರ ಕಾರ್ಯಾಚರಣೆ: ಉಸ್ತುವಾರಿ ಕಾರ್ಯದರ್ಶಿ
ಇದೇವೇಳೆ, ಜಿಲ್ಲೆಯಲ್ಲಿ ಕಂಡುಬಂದಿರುವ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್ ಸೂಚಿಸಿದ್ದಾರೆ.
ಮಂಗಳವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಈಗಾಗಲೇ ನಡೆಸುತ್ತಿರುವ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು. ಇದರಲ್ಲಿ ಯಾವುದೇ ಲೋಪವನ್ನು ಸಹಿಸಲಾಗದು. ಆರೋಗ್ಯ ಇಲಾಖೆ ಮತ್ತು ನಗರ ಪಾಲಿಕೆ ಯುದೊœàಪಾದಿಯಲ್ಲಿ ತೊಡಗಿಕೊಳ್ಳಬೇಕು ಎಂದವರು ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮಾತನಾಡಿ, ಡೆಂಗ್ಯೂ ನಿಯಂತ್ರಣದಲ್ಲಿ ಜಿಲ್ಲಾಡಳಿತವನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗಿದೆ. ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾ ಇರಿಸಲು ನಿರ್ಲಕ್ಷ್ಯ ತೋರಿದ್ದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದರು.
ಹಲವು ಪತ್ರಕರ್ತರಿಗೆ ಡೆಂಗ್ಯೂ !
ಡೆಂಗ್ಯೂ ಬಾಧಿತ ಪ್ರದೇಶಗಳಿಗೆ ವರದಿ ಮಾಡಲು ತೆರಳಿದ್ದ ವಿವಿಧ ಖಾಸಗಿ ಸುದ್ದಿ ವಾಹಿನಿ ಮತ್ತು ಪತ್ರಿಕೆಗಳ ಪತ್ರಕರ್ತರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ನಾಲ್ಕು ಮಂದಿ ಪತ್ರಕರ್ತರು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ ಹಲವು ಪತ್ರಕರ್ತರು ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಖಾಸಗಿ ಸುದ್ದಿ ವಾಹಿನಿಯ ಕ್ಯಾಮರಾಮನ್ ನಾಗೇಶ್ ಪಡು ಡೆಂಗ್ಯೂ ಜ್ವರದಿಂದ ರವಿವಾರ ಮೃತಪಟ್ಟಿದ್ದರು.