ಬಹುಮತವಿದ್ದರೂ ಸಹಕಾರ ಭಾರತಿ ಅಭ್ಯರ್ಥಿಗೆ ಸೋಲು
ಏಳು ಸಿ.ಎ. ಬ್ಯಾಂಕ್‌ಗಳ ಅಧ್ಯಕ್ಷರ ಅಡ್ಡ ಮತದಾನ: ಬಿಜೆಪಿಯಲ್ಲಿ ತಳಮಳ
Team Udayavani, Mar 24, 2019, 12:50 PM IST
ಸುಳ್ಯ : ಬಿಜೆಪಿಯ ಸಂಘಟನೆಗೆ, ಪಕ್ಷ ನಿಷ್ಠೆಗೆ ಹೆಸರುವಾಸಿಯಾಗಿದ್ದ ಸುಳ್ಯ ಬಿಜೆಪಿ ಪಾಳಯಕ್ಕೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಫಲಿತಾಂಶ ದೊಡ್ಡ ಆಘಾತ ನೀಡಿದೆ!
ಪಕ್ಷ ಬೆಂಬಲಿತ 7 ಸೊಸೈಟಿಗಳ ಅಧ್ಯಕ್ಷರು ಸ್ವ-ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿ, ಸೋಲಿಗೆ ಕಾರಣರಾಗಿರುವುದು ಬಿಜೆಪಿ ಪಾಳಯದ ಆಘಾತಕ್ಕೆ ಕಾರಣ. ಈ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಪಕ್ಷ ಕ್ರಮ ಕೈಗೊಳ್ಳುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.
ಬಹುಮತವಿದ್ದ ಸಹಕಾರ ಭಾರತಿ
ತಾಲೂಕಿನ 23 ಸಹಕಾರ ಸಂಘಗಳ ಪೈಕಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 17 ಹಾಗೂ ಕಾಂಗ್ರೆಸ್ ಬೆಂಬಲಿತ 6 ಮತದಾರರು ಇದ್ದರು. ಹೀಗಾಗಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ವೆಂಕಟ್ ದಂಬೆಕೋಡಿ ಅವರ ಗೆಲುವು ನಿಶ್ಚಿತ ಎಂದು ಭಾವಿಸಲಾಗಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಸಹಕಾರ ರಂಗ ಬೆಂಬಲಿತ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ದೇವರಾಜ್ ಕೆ.ಎಸ್. ಅವರು 13 ಮತ ಪಡೆದು ಗೆಲುವು ಸಾಧಿಸಿದ್ದರು. ವೆಂಕಟ್ 10 ಮತಗಳನ್ನಷ್ಟೇ ಗಳಿಸಿದ್ದರು. ಇದರಿಂದ ಸಹಕಾರ ಭಾರತಿಯ 7 ಮಂದಿ ಅಡ್ಡ ಮತದಾನ ಮಾಡಿರುವುದು ಬೆಳಕಿಗೆ ಬಂದಿತ್ತು.
ಅಡ್ಡ ಮತದಾರರು ಯಾರು?
ಮತದಾನಕ್ಕೆ ಅರ್ಹತೆ ಪಡೆದಿದ್ದವರು ಆಯಾ ಸಿ.ಎ. ಬ್ಯಾಂಕ್ ಅಧ್ಯಕ್ಷರು. ಈ 17 ಮಂದಿ ಬಿಜೆಪಿಯ ತಾಲೂಕು ಮಟ್ಟದ ಮುಖಂಡರು ಅಂದರೂ ತಪ್ಪಿಲ್ಲ. ಇಂತಹ ಪ್ರಮುಖರು ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿ ಪರ ಮತ ಚಲಾಯಿಸದೆ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಹಾಗೂ ಸಹಕಾರ ಭಾರತಿಯ ಎದುರಾಳಿ ತಂಡದ ಅಭ್ಯರ್ಥಿಗೆ ಮತ ಚಲಾಯಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಬೆಳ್ಳಾರೆ, ಐವರ್ನಾಡು, ಅರಂತೋಡು, ಆಲೆಟ್ಟಿ, ಚೊಕ್ಕಾಡಿ, ಗುತ್ತಿಗಾರು, ಕಳಂಜ-ಬಾಳಿಲ, ಕನಕಮಜಲು, ಮಂಡೆಕೋಲು, ಮರ್ಕಂಜ, ಮುರುಳ್ಯ-ಎಣ್ಮೂರು, ನೆಲ್ಲೂರು ಕೆಮ್ರಾಜೆ, ಪಂಬೆತ್ತಾಡಿ, ಪಂಜ, ಉಬರಡ್ಕ, ಮಿತ್ತೂರು, ಸುಳ್ಯ ಸಿ.ಎ. ಬ್ಯಾಂಕ್‌ಗಳಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಬೆಂಬಲಿತರ ಆಡಳಿತ ಮಂಡಳಿಯಿದೆ. ಈ 17 ಬ್ಯಾಂಕ್ ಅಧ್ಯಕ್ಷರಲ್ಲಿ ಅಡ್ಡ ಮತದಾನ ಮಾಡಿದ 7 ಮಂದಿ ಯಾರು ಎಂಬ ಹುಡುಕಾಟ ನಡೆದಿದೆ. ಈ ಪೈಕಿ ಐವರು ಯಾರೆಂಬುದು ಪಕ್ಷಕ್ಕೆ ಖಚಿತವಾಗಿ ಗೊತ್ತಾಗಿದೆ ಎನ್ನಲಾಗಿದೆ. ಆದರೆ ಇನ್ನಿಬ್ಬರ ಬಗ್ಗೆ ಅನುಮಾನ ಇದೆ. ಇನ್ನೂ ಕೆಲವರು ತಾವು ಓಟು ಹಾಕಿದ್ದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ತಮ್ಮ ಬಗ್ಗೆ ಅನುಮಾನ ಬಂದರೆ ಪೋಟೋ ತೋರಿಸಿ ಮತ ಚಲಾಯಿಸಿರುವುದನ್ನು ಖಚಿತಪಡಿಸುತ್ತಿದ್ದಾರೆ.
ಪೈಪೋಟಿ ನಡೆದಿತ್ತು!
ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪಂ. ಮಾಜಿ ಸದಸ್ಯ ವೆಂಕಟ್ ದಂಬೆಕೋಡಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕೆಲ ಸಿ.ಎ. ಬ್ಯಾಂಕ್ ಅಧ್ಯಕ್ಷರು ಅಪಸ್ವರ ಎತ್ತಿದ್ದರು. ಅದಾದ ಬಳಿಕ ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಬೆಳ್ಳಾರೆ ಸೊಸೈಟಿ ಅಧ್ಯಕ್ಷ ಗಂಗಾಧರ ರೈ ನಾಮಪತ್ರ ಸಲ್ಲಿಸಿದ್ದರು. ಸಂಘಟನೆ ಪ್ರಮುಖರು ಮಾತುಕತೆ ನಡೆಸಿದ ಪರಿಣಾಮ ಅವರಿಬ್ಬರೂ ನಾಮಪತ್ರ ಹಿಂತೆಗೆದುಕೊಂಡಿದ್ದರು. ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಡಮ್ಮಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಕೊನೆಗೆ ನಾಮಪತ್ರ ಹಿಂಪಡೆದಿದ್ದರು. ವೆಂಕಟ ದಂಬೆಕೋಡಿ ಅಧಿಕೃತ ಅಭ್ಯರ್ಥಿಯಾಗಿ ಉಳಿದಿದ್ದರು.
ಜಾಲತಾಣದಲ್ಲಿ ಕಿಡಿ
ಫಲಿತಾಂಶ ಪ್ರಕಟವಾದ ಬಳಿಕ ಅಡ್ಡ ಮತದಾನದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಬಿಜೆಪಿ ಬೆಂಬಲಿತ ಕಾರ್ಯಕರ್ತರು, ಮುಖಂಡರು, ಅಡ್ಡ ಮತದಾನ ಮಾಡಿದ ಸ್ವ ಪಕ್ಷದ ಸಿ.ಎ. ಬ್ಯಾಂಕ್ ಅಧ್ಯಕ್ಷರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸ್ವ-ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆಯೂ ಉಲ್ಲೇಖೀಸಿದ್ದಾರೆ.
ಭದ್ರಕೋಟೆಯಲ್ಲಿ ತಲ್ಲಣ
ಕರಾವಳಿಯಲ್ಲಿ ಸುಳ್ಯ ಬಿಜೆಪಿ ಭದ್ರನೆಲೆ. ಸಂಘಟನೆ ವಿಚಾರದಲ್ಲೂ ಎತ್ತಿದ ಕೈ. ಸಂಘ ಪರಿವಾರದ ಹಿಡಿತವೂ ಇಲ್ಲಿದೆ. ಎಲ್ಲ ಸ್ತರದ ಆಡಳಿತ ವ್ಯವಸ್ಥೆಯಲ್ಲಿ ಬಿಜೆಪಿ ಬೆಂಬಲಿತರೇ ಅಧಿಕಾರದಲ್ಲಿದ್ದಾರೆ. ಕಳೆದ ಅವಧಿಯ ವಿಧಾನಸಭೆ ಚುನಾವಣೆಯಲ್ಲಿ ಸುಳ್ಯದಲ್ಲಿ ಬಿಜೆಪಿ ಗೆದ್ದಿತ್ತು. ಇಲ್ಲಿನ ಪಕ್ಷ ನಿಷ್ಠೆ, ಸಂಘಟನೆ ಶಕ್ತಿ ಬಗ್ಗೆ ರಾಜ್ಯ, ರಾಷ್ಟ್ರ ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ ಲೋಕಸಭೆ ಚುನಾವಣೆ ಸಂದರ್ಭ ಈ ಬೆಳವಣಿಗೆ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.
ಅಭಿಪ್ರಾಯ ಪಡೆದು ಕ್ರಮ
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತದಾನ ಮಾಡಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಆಡಳಿತ ಮಂಡಳಿಗಳು ಅಧಿಕಾರದಲ್ಲಿರುವ ಸಿ.ಎ. ಬ್ಯಾಂಕ್‌ಗಳ ಅಧ್ಯಕ್ಷರನ್ನು ಕರೆದು, ಅವರ ಅಭಿಪ್ರಾಯವನ್ನು ಪಡೆಯಲಾಗುವುದು. ಅದಾದ ಬಳಿಕ ಮುಂದಿನ ಹಂತದಲ್ಲಿ ಯಾರು ಅಡ್ಡ ಮತದಾನ ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
–ವೆಂಕಟ್ ವಳಲಂಬೆ,
ಅಧ್ಯಕ್ಷರು, ಬಿಜೆಪಿ ಮಂಡಲ ಸಮಿತಿ, ಸುಳ್ಯ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.