ಧರ್ಮ ದೀವಿಗೆಯಾಗಿ ವಿಶ್ವಮಾನ್ಯ ಧರ್ಮಸ್ಥಳ: ಡಿಸಿಎಂ
ಧರ್ಮಸ್ಥಳ ಲಕ್ಷದೀಪೋತ್ಸವ ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನ
Team Udayavani, Nov 27, 2019, 5:45 AM IST
ಬೆಳ್ತಂಗಡಿ: ಸತ್ಕಾರ್ಯ, ಸಂಪತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಹತ್ಕಾರ್ಯದಿಂದಾಗಿ ಶ್ರೀಕ್ಷೇತ್ರ ಧರ್ಮಸ್ಥಳವು ಧರ್ಮದ ದೀವಿಗೆ, ಭಕ್ತಿ ನಂಬಿಕೆಯ ಕೇಂದ್ರವಾಗಿ ವಿಶ್ವಮಾನ್ಯವಾಗಿದೆ ಎಂದು ರಾಜ್ಯ ಉಪಮುಖ್ಯಮಂತ್ರಿ ಡಾ| ಅಶ್ವತ್ಥ ನಾರಾಯಣ ಬಣ್ಣಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಮೃತ ವರ್ಷಿಣಿ ಸಭಾಭವನದಲ್ಲಿ ಆಯೋಜನೆ ಗೊಂಡ ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಕೃಷಿ, ಧ.ಗ್ರಾ. ಯೋಜನೆ, ಸ್ವ ಉದ್ಯೋಗ, ಸಾಮೂಹಿಕ ವಿವಾಹ, ದೇಗುಲ ಜೀರ್ಣೋದ್ಧಾರ ಮತ್ತು ಸಂರಕ್ಷಣೆ ಯಂಥ ಶ್ರೀ ಕ್ಷೇತ್ರದ ಕಾರ್ಯ ಚಟುವಟಿಕೆಗಳು ಸರಕಾರಕ್ಕೂ ಮಾದರಿ ಎಂದವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿವಿಯ ನಿವೃತ್ತ ಉಪಕುಲಪತಿ ಡಾ| ಬಿ.ಎ. ವಿವೇಕ ರೈ ಮಾತನಾಡಿ, ಸಾಹಿತ್ಯವು ನಿಷೇಧಾತ್ಮಕವಾದ ನಿಲುವುಗಳಿಂದ ಹೊರ ಬಂದು ಸಾಮರಸ್ಯದ ಆಲೋಚನ ಕ್ರಮ ವನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಾಹಿತಿ ಮತ್ತು ಸಾಹಿತ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತ. ರನ್ನ, ಪೊನ್ನ, ಬಸವಣ್ಣ, ಬೇಂದ್ರೆ, ಕುವೆಂಪು, ಕಾರಂತಾದಿ ಸಾಹಿತಿಗಳು ಮತ್ತವರ ಸಾಹಿತ್ಯ ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದರು. ಇತಿಹಾಸವನ್ನು ತಿಳಿಯದ ಹೊರತು ವರ್ತಮಾನದ ಬದುಕನ್ನು ಕಟ್ಟಲು ಸಾಧ್ಯವಿಲ್ಲ. ಹಿರಿಯರ ಆತ್ಮಕತೆಗಳು ನಮಗೆ ಹೊಸ ಪ್ರೇರಣೆಯನ್ನು ನೀಡಬಲ್ಲವು ಎಂದ ಅವರು, ಕನ್ನಡದ ಹಿರಿಯರ ಸಾಹಿತ್ಯವನ್ನು ಡಿಜಿಟಲೀಕರಣಗೊಳಿಸುವ ಕಾರ್ಯವನ್ನು ಸರಕಾರ ಕೂಡಲೇ ಮಾಡಬೇಕು ಎಂದರು. ಕಥೆಗಾರ ಶ್ರೀಧರ ಬಳಗಾರ, ಆಧ್ಯಾತ್ಮಿಕ ಚಿಂತಕಿ ಡಾ| ವೀಣಾ ಬನ್ನಂಜೆ, ವಾಗ್ಮಿ ರಿಚರ್ಡ್ ಲೂಯಿಸ್ ಉಪನ್ಯಾಸ ನೀಡಿದರು. ವಿನಯ್ ಕುಮಾರ್ ವಂದಿಸಿದರು. ಡಾ| ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರತಿಫಲಾಪೇಕ್ಷೆ ಇಲ್ಲದ ಸೇವೆ
ಮಂಗಳವಾರ ರಾತ್ರಿ ಸಾವಿರಾರು ಕಲಾವಿದರು ಪ್ರತಿಫಲಾಪೇಕ್ಷೆ ಇಲ್ಲದೆ ಶ್ರೀ ಸ್ವಾಮಿಗೆ ಕಲಾಸೇವೆ ಅರ್ಪಿಸಿದ್ದಾರೆ ಎಂದು ಡಾ| ಹೆಗ್ಗಡೆ ಮಾಹಿತಿ ನೀಡಿದರು.
ಉತ್ಸವದ ಮೆರುಗು
ರಾತ್ರಿ ನಡೆದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವವನ್ನು (ಗೌರಿಮಾರುಕಟ್ಟೆ ಉತ್ಸವ) ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಮಂದಿ ಭಕ್ತರು ವೀಕ್ಷಿಸಿದರು.
“ನಡೆನುಡಿಗಳಲ್ಲಿ ನೈತಿಕತೆ ಜಾಗೃತಗೊಳ್ಳಲಿ’
ಸ್ವಾಗತ ಭಾಷಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಸಾಹಿತ್ಯವು ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಗಟ್ಟಿ ನಿಲುವು ತಾಳಬೇಕಾಗಿದೆ. ಸೈದ್ಧಾಂತಿಕ ಪ್ರತಿಷ್ಠೆಯಿಂದ ಛಿದ್ರಗೊಳ್ಳುತ್ತಿರುವ ಸಮಾಜವನ್ನು ಒಗ್ಗೂಡಿಸುವ ಚಿಂತನೆಯನ್ನು ಸಾಹಿತ್ಯ ಮಾಡಬೇಕಾಗುತ್ತದೆ ಎಂದರು. ಇಂದಿನ ತಲೆಮಾರಿನ ಸಾಹಿತ್ಯ ರಚನೆಯಲ್ಲಿ ಇಂತಹ ಪ್ರಯತ್ನವನ್ನು ಹೆಚ್ಚಾಗಿ ಕಾಣುತ್ತಿದ್ದೇವೆ ಎಂದರು. ಸಾಹಿತ್ಯಕ್ಕೆ ನೈತಿಕತೆಯ ಸ್ಪರ್ಶ ಅಗತ್ಯವಾಗಿದೆ. ಬರಹ ಮತ್ತು ಬರಹಗಾರ ನೈತಿಕ ಶುದ್ಧಿಯನ್ನು ಹೊಂದಿರಬೇಕು. ಆಗ ಸಮಾಜವನ್ನು ಸಾಂಸ್ಕೃತಿಕವಾಗಿ ವಿಕಾಸಗೊಳಿಸಲು ಸಾಧ್ಯ. ಒಳ್ಳೆಯ ಸಾಹಿತ್ಯವನ್ನು ಓದುವವರು ನಮ್ಮ ನಡುವೆ ಸದಾ ಇರುತ್ತಾರೆ ಎಂದು ಡಾ| ಹೆಗ್ಗಡೆ ಹೇಳಿದರು.
ಇಂದು ಸಮವಸರಣ ಪೂಜೆ
ಬುಧವಾರ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಸಮಾಪನಗೊಳ್ಳಲಿವೆ. ತೀರ್ಥಂಕರರು ತಮ್ಮ ದಿವ್ಯಧ್ವನಿಯ ಮೂಲಕ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಕೇಳುವ ಮುಕ್ತ ಅವಕಾಶವಿದೆ. ಬೀಡಿನ ಚಾವಡಿಯಿಂದ ಮಹೋತ್ಸವ ಸಭಾಭವನಕ್ಕೆ ಭವ್ಯ ಮೆರವಣಿಗೆಯ ಬಳಿಕ ಸಮವಸರಣ ಪೂಜಾ ಮಂತ್ರ ಪಠಣ ನಡೆಯುತ್ತದೆ. ಬಳಿಕ ಶ್ರಾವಕ-ಶ್ರಾವಿಕೆಯರಿಂದ ಅಷ್ಟ ವಿಧಾರ್ಚನೆ ಮತ್ತು ಅಥಣಿ ಸ್ವ-ಸಹಾಯ ಸಂಘದ ಮಹಿಳೆಯರಿಂದ ಸಮೂಹ ನೃತ್ಯ ಕಾರ್ಯಕ್ರಮವಿದೆ. ಹಿರಿಯ ಪಾಕ ಪರಿಣತರಾದ ರತ್ನರಾಜ ಕನ್ನಡಿಕಟ್ಟೆ ಮತ್ತು ಜಯಕೀರ್ತಿ ಇರ್ವತ್ತೂರು ಅವರನ್ನು ಸಮ್ಮಾನಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.