ಧರ್ಮಸ್ಥಳ; ಅಂಚೆಕುಂಚ ವಿಜೇತರಿಗೆ ಬಹುಮಾನ
Team Udayavani, Jan 28, 2018, 12:10 PM IST
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಆರಂಭವಾದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ಬ್ಯಾಗ್ ರಹಿತ ಶನಿವಾರ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸುವ ಕುರಿತು ಚಿಂತನೆ ನಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್ ಹೇಳಿದರು.
ಶನಿವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸ
ಲಾದ 16ನೇ ವರ್ಷದ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ ಹಾಗೂ ನೈತಿಕ ಮೌಲ್ಯಯುತ ಪುಸ್ತಕ ಆಧರಿತ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮೌಲ್ಯಗಳನ್ನು ತ್ಯಜಿಸಿದರೆ ತಾತ್ಕಾಲಿಕ ಯಶಸ್ಸು ದೊರೆಯಬಹುದು. ಆದರೆ ಅದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯ ಇಲ್ಲದೆ ಯಾವುದೇ ಸಾಧನೆ ನಿಷ್ಪ್ರಯೋಜಕ. ಧರ್ಮಸ್ಥಳದ ಶಾಂತಿವನ ಮೌಲ್ಯಯುತ ಪುಸ್ತಕಗಳನ್ನು ಪ್ರಕಾಶಿಸಿ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುತ್ತಿರುವುದು ಶ್ಲಾಘನೀಯ. ರಾಜ್ಯದ ಎಲ್ಲ ಶಾಲೆಗಳ ಗ್ರಂಥಾಲಯಗಳಲ್ಲೂ ಈ ಪುಸ್ತಕಗಳು ಸಿಗುವಂತಾಗಬೇಕು. ದ.ಕ. ಜಿಲ್ಲೆಯಲ್ಲಿ ಬ್ಯಾಗ್ ರಹಿತ ಶನಿವಾರ ವಿದ್ಯಾರ್ಥಿಗಳಲ್ಲಿ ಮೌಲಿಕ ವಿಚಾರ ವರ್ಧನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಆತ್ಮಾವಲೋಕನ ಇರಲಿ
ನಿತ್ಯ ಜೀವನದಲ್ಲಿ ಮಾನವೀಯ ಮೌಲ್ಯಗಳ ಅನುಷ್ಠಾನದ ಬಗ್ಗೆ ಶಿಕ್ಷಕರು, ರಕ್ಷಕರು ಮತ್ತು ಸಾರ್ವಜನಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೌಲ್ಯಗಳ ಕೊರತೆ ದೊಡ್ಡ ಕಳಂಕವಾಗಿದೆ. ಸೋಮಾರಿತನ ತ್ಯಜಿಸಿ, ದೇವರು ನಮಗೆ ಕೊಟ್ಟ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಉನ್ನತ ಸಾಧನೆ ನಡೆಸಿ ಯಶಸ್ಸನ್ನು ಪಡೆಯಬೇಕು. ಸ್ವ-ಪ್ರಯತ್ನ ಮತ್ತು ಸಾಧನೆಯಿಂದ ಪಡೆದ ಯಶಸ್ಸಿಗೆ ಸಾರ್ವಕಾಲಿಕ ಮಾನ್ಯತೆ ಇದೆ ಎಂದರು.
ಮೌಲ್ಯಗಳನ್ನು ತುಂಬಿ
ಚಲನಚಿತ್ರ ನಟ ವಿಜಯ ರಾಘವೇಂದ್ರ ಮಾತನಾಡಿ, ಕೇವಲ ಪುಸ್ತಕಗಳನ್ನು ನೀಡಿದರೆ ಸಾಲದು, ಅವುಗಳಲ್ಲಿರುವ ಮೌಲ್ಯಯುತ ವಿಚಾರಗಳು ಮನಸ್ಸಿಗೆ ಏರುವ ಕಾರ್ಯ ನಡೆಯಬೇಕೆಂದು ಶಾಂತಿವನ ಟ್ರಸ್ಟ್ ಮೂಲಕ ಡಾ| ಹೆಗ್ಗಡೆಯವರು ನಿರೂಪಿಸಿದ್ದಾರೆ. ಕಲಿಕೆ ಬರಿಯ ಪುಸ್ತಕದಿಂದಲ್ಲ, ಮೌಲ್ಯ ಬಿತ್ತುವ ಅನೇಕ ಚಟುವಟಿಕೆಗಳಿಂದಲೂ ಸಾಧ್ಯ ಎಂದರು.
ಒಳ್ಳೆಯದನ್ನು ಸ್ವೀಕರಿಸಿ
ಅಧ್ಯಕ್ಷತೆ ವಹಿಸಿದ್ದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪುಸ್ತಕದ ಸಂದೇಶವನ್ನು ಬದುಕಿನಲ್ಲಿ ಅಳವಡಿಕೊಳ್ಳಬೇಕು. ಸೋಲು- ಗೆಲುವಿನ ಬಗ್ಗೆ ಚಿಂತಿಸದೆ ಆತ್ಮವಿಶ್ವಾಸದಿಂದ ಜೀವನದ ಸವಾಲುಗಳನ್ನು ಎದುರಿಸಬೇಕು. ಹಿಂದಿನ ಕಾಲದಲ್ಲಿ ಶಿಕ್ಷೆಯಿಂದ ಶಿಕ್ಷಣ ನೀಡುತ್ತಿದ್ದರೆ ಇಂದು ಪ್ರೀತಿ- ವಿಶ್ವಾಸದಿಂದ ಕಲಿಸಲಾಗುತ್ತದೆ. ಮಾಹಿತಿ ಎಲ್ಲೆಡೆಯಿಂದ ಸಿಗುತ್ತದೆ, ಆದರೆ ಆಯ್ಕೆ ನಮ್ಮ ಕೈಯಲ್ಲಿದೆ. ಜೊಳ್ಳನ್ನು ತ್ಯಜಿಸಿ ಒಳ್ಳೆಯ ಅಂಶಗಳನ್ನು ಮಾತ್ರ ಸ್ವೀಕರಿಸಬೇಕು ಎಂದರು.
ಹೇಮಾವತಿ ವೀ. ಹೆಗ್ಗಡೆ, ಶಾಂತಿವನ ಟ್ರಸ್ಟ್‌ನ ಟ್ರಸ್ಟಿ ಡಿ. ಹರ್ಷೇನ್ದ್ರ ಕುಮಾರ್, ದ.ಕ. ಡಿಡಿಪಿಐ ಶಿವರಾಮಯ್ಯ, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತ ರಿದ್ದರು. ಯೋಗ, ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ| ಐ. ಶಶಿಕಾಂತ ಜೈನ್ ಸ್ವಾಗತಿಸಿ, ಸದಾಶಿವ ನಾಯಕ್ ಬಂಟ್ವಾಳ ನಿರ್ವಹಿಸಿದರು. ಯೋಗ ಸಂಘಟಕ ಶೇಖರ ಕಡ್ತಲ ವಂದಿಸಿದರು.
. ನಟ ವಿಜಯರಾಘವೇಂದ್ರ ಪ್ರಾರ್ಥನೆ, ಸಿನೆಮಾ ಹಾಡು ಹಾಡಿದರು.
.4,189 ಶಿಕ್ಷಕರಿಗೆ ಯೋಗ ಮತ್ತು ನೈತಿಕ ಶಿಕ್ಷಣ ತರಬೇತಿ.
.25 ವರ್ಷದಲ್ಲಿ 44 ಪುಸ್ತಕಗಳ 20 ಲಕ್ಷ ಪ್ರತಿ ವಿದ್ಯಾರ್ಥಿಗಳಿಗೆ ವಿತರಣೆ.
.16 ವರ್ಷಗಳಲ್ಲಿ 2.05 ಲಕ್ಷ ಕುಂಚ ಕಲಾವಿದರು ಭಾಗಿಯಾಗಿದ್ದಾರೆ.
.ಬ್ರಹ್ಮಾವರದ ಚಂದ್ರಶೇಖರ ಕೆದಿಲಾಯ ಅವರ ಹಾಡಿಗೆ ಕೋಟದ ವಿಶ್ವದಾಖಲೆಯ ಕಲಾವಿದ ಪ್ರದೀಶ್ ಭಟ್ ರೂಪಿಸಿದ ಕುಂಚಗಾನ ವೈಭವ ಆಕರ್ಷಕವಾಗಿ ಮೂಡಿ ಬಂತು. ಜನಾರ್ದನ ತೋಳ್ಪಾಡಿತ್ತಾಯ, ಕಮಲಾಕ್ಷ ಹಿಮ್ಮೇಳದಲ್ಲಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.