ಕೆರೆ ಸಂಜೀವಿನಿ ಮೂಲಕ ರಾಜ್ಯ ಜಲ ಸಮೃದ್ಧ: ಕುಮಾರಸ್ವಾಮಿ
Team Udayavani, Feb 10, 2019, 12:30 AM IST
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಾಹುಬಲಿ ಮೂರ್ತಿಗೆ ಪ್ರಥಮ ಮಹಾ ಮಸ್ತಕಾಭಿಷೇಕ ಸಂದರ್ಭ ವೀರೇಂದ್ರ ಹೆಗ್ಗಡೆಯವರು ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಲಕ್ಷಾಂತರ ಕೃಷಿಕರ ಬಾಳಿನ ಬೆಳಕಾಗಿದೆ. ಈ ಸಲ ಕೆರೆ ಸಂಜೀವಿನಿ ಯೋಜನೆ ಮೂಲಕ ಕರ್ನಾಟಕ ರಾಜ್ಯ ಜಲಸಮೃದ್ಧ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಸರಕಾರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಭಾಗಿತ್ವದಲ್ಲಿ ನಡೆಯುವ ಕೆರೆ ಸಂಜೀವಿನಿ ಯೋಜನೆಯ ಒಡಂಬಡಿಕೆ ಮತ್ತು ಚತುಷ್ಪಥ ರಸ್ತೆಯ ಪ್ರಥಮ ಹಂತವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಸಮಸ್ತ ಕೆರೆಗಳನ್ನು ಅಭಿವೃದ್ಧಿ ಪಡಿಸುವುದು ರಾಜ್ಯ ಸರಕಾರದ ಗುರಿ. ರೈತನ ರಕ್ಷಣೆ ನಮ್ಮೆಲ್ಲರ ಗುರಿ; ಕೃಷಿಗೆ ನೀರಿಲ್ಲ ಎಂಬ ಆತಂಕ ದೂರವಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಕೆರೆಗಳ ಅಭಿವೃದ್ಧಿಗಾಗಿ ಸಂಕಲ್ಪ ಮಾಡಿದೆ ಎಂದರು.
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಮಾಜ ಕಟ್ಟುವ ಅವರ ಕಾಯಕದಿಂದಾಗಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಜನರು ದುಶ್ಚಟಗಳಿಂದ ವಿಮುಖರಾಗಿದ್ದಾರೆ. ರೈತರು ಹಸನ್ಮುಖರಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ ಮುಖ್ಯಮಂತ್ರಿಗಳು, ಸಂಘಟನೆ, ಮಾನವ ಸಂಪದ ಅಭಿವೃದ್ಧಿ, ಕೃಷಿ ಕಾರ್ಯಕ್ರಮ, ಪ್ರಗತಿ ನಿ ಧಿ, ಜನಜಾಗೃತಿ, ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳು ಮೊದಲಾದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ನಾಡಿನ ಸಮಗ್ರ ಬೆಳವಣಿಗೆಯಲ್ಲಿ ಸರಕಾರದೊಂದಿಗೆ ಕೈಜೋಡಿಸಿದೆ ಎಂದು ಶ್ಲಾಘಿಸಿದರು.
ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ರಾಜ್ಯ ಬಜೆಟ್ ಉತ್ತಮವಾಗಿ ಮೂಡಿಬಂದಿದ್ದು ಪೂರ್ಣ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸು ವಾಗ ಜನಪರ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಾ ಬಂದಿದ್ದೇವೆ. ಅದರಂತೆ ಈ ಬಾರಿ ಕೆರೆ ಸಂಜೀವಿನಿ ಯೋಜನೆ ಮಸ್ತಕಾಭಿಷೇಕದ ನೆನಪಲ್ಲಿ ನಡೆಯುತ್ತಿದೆ ಎಂದರು.
ಹಸಿರು ಕರ್ನಾಟಕಕ್ಕೆ ನಾಂದಿ: ಡಿವಿಎಸ್
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಸರಕಾರ ಮಾಡುವ ಯೋಜನೆಗಳಿಗೆ ಸರಿಸಮಾನವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳವು ವಿವಿಧ ಸಮಾಜಮುಖೀ, ಗಾಮೀಣಾಭಿವೃದ್ಧಿ ಕಾರ್ಯವನ್ನು ನಡೆಸುತ್ತಿದೆ. ಸರಕಾರಗಳು ಕೂಡ ಕ್ಷೇತ್ರದ ಮಾದರಿ ಕಾರ್ಯವನ್ನು ಅನುಸರಿಸುತ್ತಿವೆ. ಕೆರೆಗಳ ಅಭಿವೃದ್ಧಿಗೆ ಮುಂದಾಗಿರುವುದು ಕ್ಷೇತ್ರದ ಮಹಾನ್ ಕಾರ್ಯ. ಇದರಿಂದಾಗಿ ಹಸಿರು ಕರ್ನಾಟಕ ಸಂಕಲ್ಪಕ್ಕೆ ನಾಂದಿ ಹಾಡಿದಂತಾಗಿದೆ ಎಂದರು.
ಸಣ್ಣ ನೀರಾವರಿ ಖಾತೆ ಸಚಿವ ಸಿ.ಎಸ್. ಪುಟ್ಟರಾಜು, ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಕೆರೆ ಸಂಜೀವಿನಿ ಯೋಜನೆಯನ್ನು ಶ್ಲಾಘಿಸಿದರು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಶಾಸಕ ಹರೀಶ್ ಪೂಂಜ, ವಿ.ಪರಿಷತ್ ಸದಸ್ಯರಾದ ಭೋಜೇಗೌಡ, ಬಿ.ಎಂ. ಫಾರೂಕ್, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಡಿ. ಹಷೇìಂದ್ರ ಕುಮಾರ್, ಕೆರೆ ಅಭಿವೃದ್ಧಿ ಪ್ರಾ ಧಿಕಾರ ಪ್ರಮುಖ ಮೃತ್ಯುಂಜಯ ಸ್ವಾಮಿ ಉಪಸ್ಥಿತರಿದ್ದರು.ವಿ.ಪರಿಷತ್ ಸದಸ್ಯ ಹರೀಶ್ ಕುಮಾರ್ ಸ್ವಾಗತಿಸಿದರು. ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜು ನಾಥ್ ವಂದಿಸಿದರು. ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.
ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ
ಕೆರೆ ಸಂಜೀವಿನಿ ಯೋಜನೆಯ ಮೊದಲ ಹಂತವಾಗಿ 93 ಕೆರೆಗಳ ಪೈಕಿ 34 ಕೆರೆಗಳ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಇದಕ್ಕಾಗಿ ಸ್ಥಾಪಿಸಲಾದ 10 ಜಿಲ್ಲೆಗಳ ಕೆರೆ ಸಮಿತಿಯವರಿಗೆ ಸರಕಾರದ ಕೆರೆ ಸಂಜೀವಿನಿ ಯೋಜನೆಯಡಿ ತಲಾ 1 ಲಕ್ಷ ರೂ.ಗಳಂತೆ 10 ಲಕ್ಷ ರೂ. ನಿರ್ವಹಣಾ ವೆಚ್ಚವನ್ನು ವಿತರಿಸಲಾಯಿತು. ಸರಕಾರದ ವತಿಯಿಂದ ಈ ಯೋಜನೆಗೆ ಒದಗಿಸುವ ಅನುದಾನದ ಪೈಕಿ ಮೊದಲ ಕಂತಿನಲ್ಲಿ 88 ಲಕ್ಷ ರೂ.ಗಳ ಚೆಕ್ ಅನ್ನು ಡಾ| ಹೆಗ್ಗಡೆ ಅವರಿಗೆ ಹಸ್ತಾಂತರಿಸಲಾಯಿತು.
ಜತೆಗೆ ನೇತ್ರಾವತಿ ಸ್ನಾನಘಟ್ಟದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗೆ ನಿರ್ಮಿಸಲಾದ ಚತುಷ್ಪಥ ರಸ್ತೆಯ ಪ್ರಾರಂಭಿಕ ಹಂತವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಿದರು. ಮಸ್ತಕಾಭಿಷೇಕದ ನೆನಪಿನಲ್ಲಿ ಹೊರತಂದ ಅಂಚೆ ಲಕೋಟೆ ಹಾಗೂ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಡಾ| ಹೆಗ್ಗಡೆ ಭಾರತರತ್ನ: ಪೇಜಾವರ ಶ್ರೀ
ಪೇಜಾವರ ಶ್ರೀಗಳು ಮಾತನಾಡಿ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕ ಧರ್ಮಸ್ಥಳದಲ್ಲಿ ನಡೆಯುತ್ತಿದ್ದರೆ, ಅದು ಇಡೀ ಜನತೆಯ ಮಸ್ತಕಕ್ಕೆ ಆಗುತ್ತಿರುವ ಜ್ಞಾನದ ಅಭಿಷೇಕ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಮಸ್ತಕಾಭಿಷೆೇಕ ಜ್ಞಾನ ಹಾಗೂ ಭಕ್ತಿ ಜಾಗೃತಿಯ ಅಭಿಷೇಕವಾಗಿದೆ. ದೇವತಾರಾಧನೆ ಹಾಗೂ ವಿವಿಧ ಯೋಜನೆಗಳ ಮೂಲಕ ಜನತಾರಾಧನೆ ಇಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಡಾ| ಹೆಗ್ಗಡೆ ಅವರು ಭಾರತ ರತ್ನಕ್ಕೆ ಅರ್ಹರು ಎಂದು ಶ್ಲಾಘಿಸಿದರು.
ಬಜೆಟ್ ಶ್ಲಾಘಿಸಿದ ಪೇಜಾವರ ಶ್ರೀ
ಮುಖ್ಯಮಂತ್ರಿ ಆಗಮನ 2 ತಾಸು ವಿಳಂಬವಾಗಿದ್ದು, ಅವರ ಆಗಮನ ನಿರೀಕ್ಷೆಯಲ್ಲಿ ಸಭಾ ಕಾರ್ಯಕ್ರಮ ಆರಂಭಿಸಲಾಗಿತ್ತು. ಪೇಜಾವರ ಶ್ರೀಗಳು ಆಶೀರ್ವಚನ ನೀಡಿ ಕೆಲವು ಹೊತ್ತಿನಲ್ಲಿ ವೇದಿಕೆಯಿಂದ ನಿರ್ಗಮಿಸಿದ್ದರು. ಅಲ್ಪ ಸಮಯದ ಬಳಿಕ ಕುಮಾರಸ್ವಾಮಿ ಬಂದ ಮಾಹಿತಿ ಪಡೆದ ಶ್ರೀಗಳು ಮತ್ತೆ ಆಗಮಿಸಿ, ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು. ರಾಜ್ಯದ ರೈತರ, ಬಡವರ ಪರವಾದ ಉತ್ತಮ ಬಜೆಟ್ ಮಂಡಿಸಿದ್ದೀರಿ ಎಂದು ಶ್ಲಾಘಿಸಿದರು.
ಆಣೆ ಪ್ರಮಾಣಕ್ಕೆ ಎಚ್‌ಡಿಕೆ ಪಶ್ಚಾತ್ತಾಪ!
ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣದ ಮಧ್ಯೆ ಈ ಹಿಂದಿನ ಆಣೆ ಪ್ರಮಾಣ ಘಟನೆಯನ್ನು ನೆನಪಿಸಿಕೊಂಡು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮುಂಭಾಗದಲ್ಲಿಯೇ ಪಶ್ಚಾತ್ತಾಪ ವ್ಯಕ್ತಪಡಿಸಿದರು. 12 ವರ್ಷಗಳ ಹಿಂದೆ ಧರ್ಮಸ್ಥಳದ ಮಸ್ತಕಾಭಿಷೇಕದ ಸಂದರ್ಭ ನಾನು ಮುಖ್ಯಮಂತ್ರಿಯಾಗಿದ್ದೆ. ಬಳಿಕ ಯಾವುದೋ ಸಂದರ್ಭ ರಾಜಕೀಯ ಕಾರಣಕ್ಕಾಗಿ ಅರಿವಿಧ್ದೋ ಇಲ್ಲದೆಯೋ ಕ್ಷೇತ್ರದ ಹೆಸರನ್ನು ಉಲ್ಲೇಖೀಸಿ ತಪ್ಪು ಮಾಡಿದ್ದೇನೆ. ಮಂಜುನಾಥ ಸ್ವಾಮಿಗೆ ಅಪಚಾರ ಮಾಡಿದರೆ ಯಾರನ್ನೂ ಸ್ವಾಮಿ ಬಿಡುವುದಿಲ್ಲ ಹಾಗೂ ಬಿಟ್ಟಿಲ್ಲ. ಜನಸಾಮಾನ್ಯನಿಂದ ಹಿಡಿದು ಯಾವುದೇ ಉನ್ನತ ಸ್ಥಾನದಲ್ಲಿದ್ದವರನ್ನು ಕೂಡ ಮಂಜುನಾಥ ಸ್ವಾಮಿ ನೋಡುತ್ತಿರುತ್ತಾರೆ. ಹೀಗಾಗಿ ಅವರ ಹೆಸರಿನಲ್ಲಿ ನಾವು ಯಾರೂ ಕೂಡ ಚೆಲ್ಲಾಟವಾಡಬಾರದು ಎಂದು ಆಣೆ ಪ್ರಮಾಣದ ವಿಷಯವನ್ನು ಉಲ್ಲೇಖೀಸದೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.