ಸಾಮರಸ್ಯ ನಡಿಗೆ ರಾಜಕೀಯ ಕನ್ನಡಕ ಧರಿಸಿ ನೋಡದಿರಿ
Team Udayavani, Dec 11, 2017, 6:00 AM IST
ಮಂಗಳೂರು: ಬಿಜೆಪಿಯವರು ಮಂಗಳೂರಿನಲ್ಲಿ ಬೈಕ್ ರ್ಯಾಲಿ ಆಯೋಜಿಸಿದ್ದಾಗ ರಾಜ್ಯ ಮಟ್ಟದಲ್ಲಿ ವಿವಾದಕ್ಕೆ ಎಡೆಯಾಗಿತ್ತು. ಅದೇವೇಳೆ ಬೈಕ್ ರ್ಯಾಲಿಗೆ ಪರ್ಯಾಯವಾಗಿ ಸಚಿವ ಬಿ. ರಮಾನಾಥ ರೈ ಅವರು ಜಿಲ್ಲೆ ಯಲ್ಲಿ ಸಾಮರಸ್ಯ ಯಾತ್ರೆ ಮಾಡಲು ಹೊರಟು ಅನಂತರ ಕೈಬಿಟ್ಟಿದ್ದರು. ಜಿಲ್ಲೆಯಲ್ಲಿ ಶಾಂತಿ ನೆಲೆಸಿರುವಾಗ ರೈ ಅವರು ಸಾಮರಸ್ಯ ಯಾತ್ರೆಗೆ ಡಿ. 12ರಂದು ಮುಹೂರ್ತ ನಿಗದಿ ಮಾಡಿದ್ದು ಟೀಕೆಗಳು ವ್ಯಕ್ತ ವಾಗತೊಡಗಿವೆ. ಕೆಲವು ಮುಸ್ಲಿಂ ಸಂಘಟನೆಗಳೂ ಯಾತ್ರೆಗೆ ತಮ್ಮ ಬೆಂಬಲವಿಲ್ಲ ಎಂದು ಘೋಷಿಸಿವೆ. ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮಾನಾಥ ರೈ ತಮ್ಮ ಸಾಮರಸ್ಯ ಯಾತ್ರೆ ಕುರಿತು “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸಾಮರಸ್ಯ ಯಾತ್ರೆ ನೆನಪು ಈಗ ಏಕೆ ಬಂತು?
ಈ ಹಿಂದೆ ಜಿಲ್ಲೆಯಲ್ಲಿ ಶಾಂತಿ ಸಭೆಗಳಾದಾಗ ಸಾಮರಸ್ಯ ಯಾತ್ರೆಯೊಂದನ್ನು ನಡೆಸಲು ಜನ ರಿಂದಲೇ ಮನವಿ ಬಂದಿತ್ತು. ಆದರೆ ಕಾನೂನು ಸುವ್ಯವಸ್ಥೆ ಸಮಸ್ಯೆಯಿಂದಾಗಿ ಸಾಧ್ಯವಾಗಿರಲಿಲ್ಲ. ಜಿಲ್ಲೆಯಲ್ಲಿ ಈಗ ತಿಳಿ ವಾತಾವರಣ ನಿರ್ಮಾಣ ಗೊಂಡುದರಿಂದ ಈಗ ನಡೆಸುತ್ತಿದ್ದೇವೆ.
ಇದು ನಿಮ್ಮ ಚುನಾವಣಾ ಯಾತ್ರೆ ಎಂಬ ಆರೋಪವಿದೆಯಲ್ಲ?
ಖಂಡಿತ ಅಲ್ಲ; ಜಿಲ್ಲೆ ಸಮಾನಮನಸ್ಕರೆಲ್ಲ ಸೇರಿ ಚರ್ಚಿಸಿ ನಡೆಸುತ್ತಿರುವ ಯಾತ್ರೆಯಿದು. ಡಿ. 12ರಂದು ಬೆಳಗ್ಗೆ 9 ಗಂಟೆಗೆ ಫರಂಗಿಪೇಟೆಯಲ್ಲಿ ನಟ ಪ್ರಕಾಶ್ ರೈ ಯಾತ್ರೆಗೆ ಚಾಲನೆ ನೀಡುತ್ತಾರೆ.
ಹಿಂದೆ ಹೇಳಿದ್ದ ಯಾತ್ರೆ ಸ್ವರೂಪ ಬದಲಾಯಿತೇ?
ಬಿಜೆಪಿ ಬೈಕ್ ರ್ಯಾಲಿ ಪಕ್ಷದ ಲಾಭಕ್ಕೆ ನಡೆಸಿದ ಯಾತ್ರೆ. ನಮ್ಮದು ಆ ರೀತಿಯದ್ದಲ್ಲ. ಆಗ ಪೊಲೀಸರ ಅನುಮತಿ ಸಿಗದ ಕಾರಣ ನಮಗೆ ಸಾಮರಸ್ಯ ಯಾತ್ರೆ ಮಾಡಲು ಆಗಿರಲಿಲ್ಲ. ಹಿಂದೆ ಕೊಟ್ಟ ಮಾತನ್ನು ಈಗ ಪಾಲಿಸುತ್ತಿದ್ದೇನೆ ಅಷ್ಟೇ.
ಹಿಂದೆ ಬಿಜೆಪಿ ಬೈಕ್ ರ್ಯಾಲಿಗೆ ಸಿಗದ ಅನುಮತಿ ಈಗ ನಿಮ್ಮ ಯಾತ್ರೆಗೆ ಹೇಗೆ ಸಿಕ್ಕಿತು?
ಆಗಿನ ಪರಿಸ್ಥಿತಿಯಲ್ಲಿ ಯಾರಿಗೂ ಅನುಮತಿ ಸಿಕ್ಕಿರಲಿಲ್ಲ. ಹಾಗಂತ, ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಸಾಮರಸ್ಯ ಯಾತ್ರೆಗೆ ಅನುಮತಿ ಕೊಡಿ ಎಂದು ಹಠ ಮಾಡಿರಲಿಲ್ಲ. ಸರಕಾರ ನನ್ನದೇ ಇದೆ ಎಂದು ದರ್ಪ ತೋರಿಸಿರಲಿಲ್ಲ. ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವವರು ಪೊಲೀಸರು. ಈಗ ವಾತಾವರಣ ತಿಳಿಯಿದೆ, ಎಲ್ಲರಿಗೂ ರ್ಯಾಲಿ ಅಥವಾ ಯಾತ್ರೆಗೆ ಅವಕಾಶ ಸಿಗುತ್ತದೆ. ಹಾಗೆಯೇ ನನಗೂ ಕೊಟ್ಟಿದ್ದಾರೆ.
ಯಾತ್ರೆಯಿಂದ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡಿದರೆ ಯಾರು ಹೊಣೆ?
ನಾನು ಎಲ್ಲ ಜಾತಿ-ಧರ್ಮಗಳ ಜನ ರನ್ನು ಪ್ರೀತಿಸು ವವನು. ಯಾವುದೋ ಸಂಘಟನೆಯ ವರು ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಾಕ್ಷಣ ನನ್ನ ಸೈದ್ಧಾಂತಿಕ ನಿಲುವು ಬದಲಿಸಿಕೊಳ್ಳುವುದಿಲ್ಲ. ಯಾತ್ರೆಯಲ್ಲಿ ಶಾಂತಿ ಕದಡುವ ಯತ್ನನಡೆಯ ಬಹುದೆಂಬ ಎಚ್ಚರಿಕೆಯೂ ಇದೆ. ಪಾದಯಾತ್ರೆ ಯನ್ನು ಶಾಂತಿಯಿಂದ ಯಶಸ್ವಿಗೊಳಿಸುತ್ತೇವೆ.
ಸಿಪಿಐಯಂಥ ರಾಷ್ಟ್ರೀಯ ಪಕ್ಷ ದವರನ್ನು ಮುಂದಿಟ್ಟು ಪಾದಯಾತ್ರೆ ಸರಿಯೇ?
ಚುನಾವಣೆ ಬಂದಾಗ ಅವರೆಲ್ಲ ತಮ್ಮ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ. ಆದರೆ ಜಿಲ್ಲೆಯಲ್ಲಿ ಸಾಮರಸ್ಯ ನೆಲೆಗೊಳ್ಳಬೇಕೆಂಬ ತುಡಿತವಿರುವರೆಲ್ಲ ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಅದು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಇರಬಹುದು; ಭಾರತೀಯ ಕಮುನಿಸ್ಟ್ ಇರಬಹುದು; ಆದರೆ ಅವರಿಗೆ ಜಾತ್ಯತೀತ ಶಕ್ತಿ ಉಳಿಯಬೇಕೆಂಬ ಆಶಯ ವಿದೆ. ಅದಕ್ಕಾಗಿ ಈ ಹಿಂದೆಯೂ ಒಂದು ಸಮಿತಿ ಮಾಡಿಕೊಂಡು ಇಂಥ ಕಾರ್ಯ ಕ್ರಮಗಳನ್ನು ಮಾಡಿದ್ದೇವೆ.
ಹತ್ಯೆ ಮಾಡಿದವರು ಭಾಗವಹಿಸುವಂತಿಲ್ಲ ಎಂಬ ಷರತ್ತು ಹಾಕಿದ್ದೀರಿ; ಕೇರಳದಲ್ಲಿ ಸಿಪಿಐ ಮೇಲೆ ಕೊಲೆ ಆರೋಪವಿದೆಯಲ್ಲ?
ನಾನು ನನ್ನ ಜಿಲ್ಲೆಯ ಮಟ್ಟಿಗೆ ಮಾತನಾಡುತ್ತೇನೆ. ನನ್ನ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ಯಾರು ಸಹಕರಿಸುತ್ತಿದ್ದಾರೆಯೋ ಅಂಥವರನ್ನೆಲ್ಲ ಒಟ್ಟು ಗೂಡಿಸಿ ಕೊಂಡು ಈ ನಡಿಗೆ ಆಯೋಜಿಸಿದ್ದೇನೆ.
ಈಗ ಕೆಲವು ಮುಸ್ಲಿಂ ಸಂಘಟನೆಗಳೇ ಕೈಕೊಟ್ಟಿವೆಯಲ್ಲ?
ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ನಾನು ಬಹುಸಂಖ್ಯಾಕ ಮತೀಯವಾದವನ್ನು ಮಾತ್ರವಲ್ಲ, ಅಲ್ಪಸಂಖ್ಯಾಕ ಮತೀಯವಾದವನ್ನೂ ವಿರೋಧಿಸುತ್ತೇನೆ. ಮತೀಯ ಶಕ್ತಿಗಳ ವಿರುದ್ಧ ಕೆಲಸ ಮಾಡುವ ವ್ಯಕ್ತಿ ನಾನು. ಮೂಲಭೂತವಾದಿಗಳು ಮುಸ್ಲಿಮರು ಇರಬಹುದು; ಹಿಂದೂಗಳಿರ ಬಹುದು; ನಾನು ಎರಡೂ ಕಡೆಯ ಮೂಲಭೂತವಾದಿಗಳಿಗೂ ವಿರೋಧಿಯೇ. ಇದು ಕೆಲವರಿಗೆ ಹಿಡಿಸುವುದಿಲ್ಲ. ಅಂಥವರು ನಮ್ಮ ಯಾತ್ರೆಯನ್ನು ಬೆಂಬಲಿಸುತ್ತಿಲ್ಲ.
ಮುಸ್ಲಿಂ ಸಂಘಟನೆಗಳ ವಿರೋಧ ಕಟ್ಟಿಕೊಂಡರೆ, ಮುಂದೆ ಚುನಾವಣೆಯಲ್ಲಿ ತೊಂದರೆಯಾಗದೇ?
ಏನೂ ಆಗುವುದಿಲ್ಲ. ಏಕೆಂದರೆ ನಮ್ಮ ಉದ್ದೇಶ ಸರಿಯಿದೆ. ನಮ್ಮ ಬಗ್ಗೆ ಟೀಕೆ ಮಾಡಬಹುದು. ನಾನು ಈ ಹಿಂದೆ ಶಾಸಕನಾಗಿದ್ದಾಗ ರಾಜ್ಯದಲ್ಲಿ ಜೆಡಿಎಸ್ ಸರಕಾರವಿತ್ತು. ಆದರೆ ಇಲ್ಲಿ ನಾಗರಾಜ ಶೆಟ್ಟಿ ಮಂತ್ರಿಯಾಗಿದ್ದು, ಅವರು ಕಲ್ಲಡ್ಕ ಪ್ರಭಾಕರ ಭಟ್ ಆಣತಿಯಂತೆ ಕೆಲಸ ಮಾಡುತ್ತಿದ್ದರು. ಜೆಡಿಎಸ್ ಅಧಿಕಾರದಲ್ಲಿದ್ದಾಗ ಹೆಚ್ಚು ತೊಂದರೆ ಗೊಳ ಗಾದವನು ನಾನು ಮತ್ತು ನನ್ನ ಜನ. ಇದನ್ನೆಲ್ಲ ಜನರು ಮರೆತುಬಿಟ್ಟಿದ್ದಾರೆ ಎಂದು ಕೆಲವರು ಅಂದು ಕೊಂಡಿರಬಹುದು. ಸಮಾಜ ಮುಖೀಯಾಗಿ ಬೆಳೆದು ಬಂದು ಕಾಂಗ್ರೆಸ್‌ನಿಂದಲೇ ಏಳು ಬಾರಿ ಸ್ಪರ್ಧಿಸಿದ ಏಕೈಕ ಶಾಸಕ ನಾನು. ಹೀಗಾಗಿ ಅಧಿಕಾರದ ಆಸೆ ಇಟ್ಟು ಕೆಲಸ ಮಾಡುವುದಿಲ್ಲ.
ನಿಮ್ಮ ಸಾಮರಸ್ಯ ಯಾತ್ರೆ ಆಶಯವೇನು?
ನಮ್ಮದು ಸಾಮರಸ್ಯಕ್ಕೆ ಹೆಸರಾದ ಜಿಲ್ಲೆ. ಇಲ್ಲಿನ ಕೋಲ-ನೇಮ, ಯಕ್ಷಗಾನ ಜಾತಿ-ಧರ್ಮಕ್ಕೆ ಸೀಮಿತವಾಗಿಲ್ಲ. ಇದು ನಮ್ಮ ಹಿಂದಿನ ತಲೆಮಾರಿನ ಬಳುವಳಿ, ಅದನ್ನು ಉಳಿಸಿಕೊಳ್ಳುವುದಕ್ಕೆ ಪೂರಕವಾಗಿ ಯುವ ಜನತೆಯಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು. ಆ ಮೂಲಕ ಮುಂದಿನ ಪೀಳಿಗೆ ಸಾಮರಸ್ಯದ ಪೀಳಿಗೆ ಆಗಬೇಕು. ನಾವೆಲ್ಲ ಒಂದೇ ತಾಯಿಯ ಮಕ್ಕಳು ಹಾಗೂ ಜೀವನ ಪರ್ಯಂತ ಒಟ್ಟಾಗಿ ನಡೆಯೋಣ ಎಂಬ ಸಂದೇಶವನ್ನು ಮೂಡಿಸುವುದೇ ನಮ್ಮ ಸಾಮರಸ್ಯ ಯಾತ್ರೆಯ ಆಶಯ.
ನೀವು ಒಂದು ಪಕ್ಷದಲ್ಲಿದ್ದು, ರಾಜ್ಯದ ಸಚಿವರಾಗಿರುವಾಗ, “ನಮ್ಮದು ಪಕ್ಷಾತೀತ ಪಾದಯಾತ್ರೆ’ ಎಂದರೆ ಜನ ನಂಬುತ್ತಾರೆಯೇ?
ಬೇರೆ ಬೇರೆ ಸಂಘಟನೆಗಳೆಲ್ಲ ಜತೆಸೇರಿ ನಡೆಸುತ್ತಿರುವ ಯಾತ್ರೆಯಿದು. ನಾನು ಒಂದು ಪಕ್ಷದ ವ್ಯಕ್ತಿ. ಚುನಾವಣೆ ಬಂದಾಗ ಎಲ್ಲರೂ ತಮ್ಮ ತಮ್ಮ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ. ಆದರೆ ಜಾತ್ಯತೀತ ಅಥವಾ ಸಾಮರಸ್ಯದ ವಿಚಾರ ಬಂದಾಗ ನಾವೆಲ್ಲ ಒಟ್ಟಾಗಬೇಕು ಎನ್ನುವ ಸಂದೇಶವಿದು. ಜತೆ ಯಾಗಿ ನಡೆಯೋಣ ಅಂದರೆ ಫರಂಗಿಪೇಟೆಯಿಂದ ಮಾಣಿ ತನಕ ಜತೆಯಾಗಿ ನಡೆಯೋಣ ಎಂದಲ್ಲ. ಜೀವನದುದ್ದಕ್ಕೂ ಜತೆಯಾಗಿ ನಡೆಯೋಣ ಎನ್ನುವುದು ಉದ್ದೇಶ. ಯಾತ್ರೆಯನ್ನು ರಾಜಕೀಯ ಕನ್ನಡಕ ಧರಿಸಿ ನೋಡಬೇಡಿ, ಸಾಮರಸ್ಯದ ದೃಷ್ಟಿಕೋನದಿಂದ ನೋಡಬೇಕು. ಸಾಮರಸ್ಯ ನಡಿಗೆ ಬಲವರ್ಧನೆಗಾಗಿ ನಡೆಯುವ ಯಾತ್ರೆಯೇ ಹೊರತು ಚುನಾವಣಾ ಮೈತ್ರಿಯಲ್ಲ.
– ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.