ದ.ಕ.: ವಿವಿಧೆಡೆ ಮೊಸರುಕುಡಿಕೆ ಸಂಭ್ರಮ
Team Udayavani, Sep 15, 2017, 8:30 AM IST
ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳೂರಿನ ಕದ್ರಿ, ಅತ್ತಾವರ, ಕಾವೂರು, ಉರ್ವಾ ಸಹಿತ ವಿವಿಧೆಡೆ ಮೊಸರುಕುಡಿಕೆ ಉತ್ಸವ ಸಂಭ್ರಮದಿಂದ ಗುರುವಾರ ನೆರವೇರಿತು. ವರ್ಣರಂಜಿತ ಟ್ಯಾಬ್ಲೋಗಳು, ಹುಲಿವೇಷ ಮೆರವಣಿಗೆಗೆ ಮೆರುಗು ನೀಡಿದವು.
ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ ಜರಗಿದ ಮೊಸರು ಕುಡಿಕೆ ಉತ್ಸವದಲ್ಲಿ ಶ್ರೀ ಗೋಪಾಲ ಕೃಷ್ಣ ದೇವಾಲಯದಿಂದ ಶ್ರೀಕೃಷ್ಣ ದೇವರ ಮೂರ್ತಿಯ ಶೋಭಾಯಾತ್ರೆ ಭಕ್ತಿ, ಸಂಭ್ರಮ, ಸಡಗರದೊಂದಿಗೆ ಸಂಜೆ ನಡೆಯಿತು.
ಅತ್ತಾವರದಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ 108ನೇ ವರ್ಷದ ಮೊಸರುಕುಡಿಕೆ ಉತ್ಸವ ಜರಗಿತು. ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಜೆ 6ರಿಂದ ಶ್ರೀಕೃಷ್ಣ ದೇವರ ಭವ್ಯ ಶೋಭಾಯಾತ್ರೆ ನೆರವೇರಿತು.
ಕಾವೂರಿನಲ್ಲಿ ಕಾವೂರು ಶ್ರೀ ಮಹಾಲಿಂಗೇಶ್ವರ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ 21ನೇ ವರ್ಷದ ಮೊಸರುಕುಡಿಕೆ ಉತ್ಸವ ಸಂಭ್ರಮದಿಂದ ನಡೆಯಿತು.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಅಲಂಕೃತ ಮಂಟಪದಲ್ಲಿ ಶ್ರೀಕೃಷ್ಣನ ವಿಗ್ರಹ ವನ್ನು ವೈಭವದ ಶೋಭಾಯಾತ್ರೆಯಲ್ಲಿ ಕಾವೂರು ಮೊಸರುಕುಡಿಕೆ ಮೈದಾನಕ್ಕೆ ತರಲಾಯಿತು.
ಉರ್ವಾದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಸಮಿತಿ ಆಶ್ರಯದಲ್ಲಿ ಜರಗಿದ ಮೊಸರು ಕುಡಿಕೆ ಉತ್ಸವದಲ್ಲಿ ಶ್ರೀರಾಮ ಭಜನಾ ಮಂದಿರದಿಂದ ಶ್ರೀಕೃಷ್ಣ ದೇವರ ವಿಗ್ರಹ ವನ್ನು ಮೆರವಣಿಗೆಯಲ್ಲಿ ಉರ್ವ ಮೈದಾನಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ಸಂಜೆ ಶ್ರೀದೇವರ ಶೋಭಾಯಾತ್ರೆ ಜರಗಿತು.
ಮೊಸರು ಕುಡಿಕೆ ಅಂಗವಾಗಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೆರವಣಿಗೆ ಸಾಗುವ ಹಾದಿಯಲ್ಲಿ ತೂಗುಹಾಕಲಾಗಿದ್ದ ಮೊಸರು ಕುಡಿಕೆಗಳನ್ನು ಯುವಕರ ತಂಡಗಳು ಪಿರಮಿಡ್ ರಚಿಸಿ ಒಡೆದು ಸಂಭ್ರಮಿಸಿದರು.
ರಸಮಂಜರಿ, ನೃತ್ಯ ಸೇರಿದಂತೆ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.