ದ.ಕ.: 10 ತಿಂಗಳ ಶಿಶು ಸಹಿತ ಇಬ್ಬರಲ್ಲಿ ಸೋಂಕು ದೃಢ
ಮಂಗಳೂರು,ಪುತ್ತೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ
Team Udayavani, Mar 28, 2020, 4:25 AM IST
ಮಂಗಳೂರು/ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳ ಮಗು ಮತ್ತು 21 ವರ್ಷದ ಯುವಕನಲ್ಲಿ ಶುಕ್ರವಾರ ಕೋವಿಡ್ 19 ಸೋಂಕು ದೃಢವಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಬಾಧಿತರ ಸಂಖ್ಯೆ ಏಳಕ್ಕೇರಿದೆ.
ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗು ಮತ್ತು ಪುತ್ತೂರು ಗಡಿಭಾಗದ ಬೆಳ್ತಂಗಡಿ ತಾಲೂಕಿಗೆ ಸೇರಿದ ಕರಾಯ ಗ್ರಾಮದ 21ರ ಹರೆಯದ ವ್ಯಕ್ತಿ ಶುಕ್ರವಾರ ಸೋಂಕು ದೃಢವಾಗಿದೆ. ಕಾಸರಗೋಡಿನ ನಾಲ್ವರು, ಭಟ್ಕಳದ ಓರ್ವ ವ್ಯಕ್ತಿ ಈಗಾಗಲೇ ನಗರದ ವಿವಿಧ ಆಸ್ಪತ್ರೆಗಳಲ್ಲಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾನೆ.
10 ತಿಂಗಳ ಮಗು
ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗು ಕೋವಿಡ್ 19 ಸೋಂಕಿಗೆ ಒಳಗಾಗಿದ್ದು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಮಾ. 23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ. 24ರಂದು ಮಗುವಿನ ಗಂಟಲು ಸ್ರಾವ ಮಾದರಿಯನ್ನು ತಪಾಸಣೆಗಾಗಿ ಕಳುಹಿಸಿಕೊಡಲಾಗಿತ್ತು. ಮಾ. 26ರಂದು ವರದಿ ಬಂದಿದ್ದು, ಮಗುವಿನಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ವಿದೇಶಕ್ಕೆ ಪ್ರಯಾಣಿಸಿಲ್ಲ
ಸೋಂಕಿತ ಮಗು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾಗಲೀ ವಿದೇಶದಿಂದ ಬಂದದ್ದಾಗಲೀ ಇತಿಹಾಸವಿಲ್ಲ. ಮಗುವಿನ ಸಂಬಂಧಿಕರು “ಉದಯವಾಣಿ’ಯೊಂದಿಗೆ ಮಾತನಾಡಿ, ತಾಯಿ ಮತ್ತು ಮಗು ಮಂಜನಾಡಿಯಲ್ಲಿರುವ ತಾಯಿ ಮನೆಗೆ ಇತ್ತೀಚೆಗೆ ಹೋಗಿದ್ದರು. ಉಳಿದಂತೆ ಎಲ್ಲಿಯೂ ಹೋಗಿಲ್ಲ. ಹೇಗೆ ಕೋವಿಡ್ 19 ತಗುಲಿರಬಹುದು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ತಾಯಿ, ಅಜ್ಜಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ
10 ತಿಂಗಳ ಮಗುವಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಗುವಿನ ತಾಯಿ ಮತ್ತು ಅಜ್ಜಿಯನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದು, ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿ ಇನ್ನಷ್ಟೇ ಬರಬೇಕಿದೆ. ಸದ್ಯ ಮಗು ಚೇತರಿಸಿ ಕೊಳ್ಳುತ್ತಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮಗುವಿನ ತಂದೆ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ ತಾಯಿ, ಅಜ್ಜ ಅಜ್ಜಿಯೊಂದಿಗೆ ಮಗು ವಾಸಿಸುತ್ತಿತ್ತು.
21ರ ಯುವಕ
ದುಬಾೖಯಿಂದ ಮಾ. 21ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವ್ಯಕ್ತಿ ಬಂದಿದ್ದು, ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಕೆಎಸ್ಸಾರ್ಟಿಸಿ ಬಸ್ ಮೂಲಕ ತೆರಳಿದ್ದ. ಜ್ವರ ಹಾಗೂ ಕೆಮ್ಮಿನಿಂದ ಮಾ. 24ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಮಾ. 24ರಂದು ಆತನ ಗಂಟಲು ಸ್ರಾವ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಶುಕ್ರವಾರ ಪರೀಕ್ಷಾ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ.
ವ್ಯಕ್ತಿಯ ಹತ್ತಿರದ ಸಂಬಂಧಿಗಳನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡಲಾಗುತ್ತಿದೆ. ಬಾಧಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
3,032 ಮಂದಿ ಗೃಹ ನಿಗಾವಣೆಯಲ್ಲಿ
ದ.ಕ. ಜಿಲ್ಲೆಯಲ್ಲಿ ಈವರೆಗೆ 3,032 ಮಂದಿ ಗೃಹ ನಿಗಾವಣೆಯಲ್ಲಿದ್ದು, ಇಎಸ್‌ಐ ಆಸ್ಪತ್ರೆಯಲ್ಲಿ 28 ಮಂದಿ ನಿಗಾದಲ್ಲಿದ್ದಾರೆ. ಶುಕ್ರವಾರ 64 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. 20 ಮಂದಿ 28 ದಿನಗಳ ಗೃಹ ನಿಗಾವಣೆಯನ್ನು ಪೂರ್ಣಗೊಳಿಸಿದ್ದಾರೆ. 15 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 5 ಮಂದಿಯ ವರದಿ ಈಗಾಗಲೇ ಸ್ವೀಕೃತವಾಗಿದೆ. ಇದರಲ್ಲಿ 4 ನೆಗೆಟಿವ್ ಬಂದಿದ್ದು, 10 ತಿಂಗಳ ಮಗುವಿನ ವರದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ. 6 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಿರಿಯರು, ಮಕ್ಕಳ ಬಗ್ಗೆ ಗಮನಹರಿಸಿ
ದ.ಕ. ಜಿಲ್ಲೆಯಲ್ಲಿ ಕೋವಿಡ್ 19 ಹತೋಟಿಯಲ್ಲಿದೆ. ಆದರೆ ಪಕ್ಕದ ಜಿಲ್ಲೆಯಲ್ಲಿ ಪ್ರಕರಣ ಹೆಚ್ಚುತ್ತಿರುವುದರಿಂದ ಇಲ್ಲಿಯೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. 60 ವರ್ಷ ಮೇಲ್ಪಟ್ಟವರು, ಪುಟಾಣಿ ಮಕ್ಕಳು, ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಮನೆ ಮಂದಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ 60 ವರ್ಷ ಮೇಲ್ಪಟ್ಟವ ರಿದ್ದಲ್ಲಿ ಅವರು ಬಳಸುವ ವಸ್ತುಗಳನ್ನು ಪ್ರತ್ಯೇಕ ವಾಗಿಡಿ. ಆರೋಗ್ಯವಂತ ವ್ಯಕ್ತಿಯೇ ಅವರ ಆರೈಕೆ ಮಾಡಬೇಕು. ಪೌಷ್ಠಿಕಾಂಶಯುಕ್ತ ಆಹಾರವನ್ನು ಹೆಚ್ಚು ನೀಡಬೇಕು. ವ್ಯಕ್ತಿ ವ್ಯಕ್ತಿಗಳ ಮಧ್ಯೆ ಕನಿಷ್ಠ 1 ಮೀ. ಅಂತರವಿರಲಿ.
– ಸಿಂಧೂ ಬಿ. ರೂಪೇಶ್, ದ.ಕ. ಜಿಲ್ಲಾಧಿಕಾರಿ
ಸಜೀಪನಡು ಗ್ರಾಮದಲ್ಲಿ ಕಟ್ಟೆಚ್ಚರ
ಬಂಟ್ವಾಳ: ಸಜೀಪನಡು ಗ್ರಾಮದ 10 ತಿಂಗಳ ಮಗುವಿನಲ್ಲಿ ಸೋಂಕು ದೃಢವಾಗಿರುವುದರಿಂದ ಗ್ರಾಮದಲ್ಲಿ ಗುರುವಾರ ಸಂಜೆಯಿಂದಲೇ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ತಗಲಿರುವ ವಿಚಾರ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಪೊಲೀಸರು ಕೂಡ ಗ್ರಾಮಕ್ಕೆ ಭೇಟಿ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಪ್ರಸನ್ನ ನೇತೃತ್ವದಲ್ಲಿ ಗ್ರಾಮದಲ್ಲಿ ನಾಕಾಬಂದಿ ಹಾಕಲಾಗಿದೆ. ಬೆಳಗ್ಗಿನಿಂದಲೇ ಗ್ರಾಮದ ಮೂಲಕ ಸಾಗುವ ವಾಹನಗಳನ್ನು ತಡೆದು, ಅಗತ್ಯ ದಾಖಲೆ ತೋರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಮೆಲ್ಕಾರ್-ಮುಡಿಪು ರಸ್ತೆಯ ಎರಡೂ ಪಾರ್ಶ್ವಗಳಲ್ಲಿ ವಾಹನಗಳನ್ನು ತಡೆಯಲಾಗುತ್ತಿದೆ. ಕುಕ್ಕಾಜೆ, ಚಟ್ಟೆಕಲ್ ಭಾಗದಿಂದಲೂ ಸಜೀಪನಡು ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಗ್ರಾಮದಿಂದ ಹೊರ ಹೋಗುವುದು ಹಾಗೂ ಹೊರಕ್ಕೆ ಬರುವುದನ್ನೂ ಕೂಡ ನಿರ್ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.