ಐದು ಕಿ.ಮೀ. ವ್ಯಾಪ್ತಿಯಲ್ಲಿ ಕನಿಷ್ಠ 500 ಹೊಂಡಗಳೇ ಈ ರಸ್ತೆಯ ಹೆಗ್ಗಳಿಕೆ!
ದ.ಕ.-ಕೊಡಗು, ಕೇರಳ-ಕರ್ನಾಟಕ ಸಂಪರ್ಕ ರಸ್ತೆ
Team Udayavani, Nov 21, 2019, 4:42 AM IST
ಈ ಸರಣಿ ಆರಂಭಿಸಿರುವುದು ನಮ್ಮ ಪ್ರಮುಖ ರಸ್ತೆಗಳ ಸಚಿತ್ರ ದರ್ಶನ ನೀಡಲೆಂದೇ. ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಪಂಚಾಯತ್‌ನ ಹಲವು ರಸ್ತೆಗಳು ಇಂದು ಸಂಚಾರಕ್ಕೆ ಅಯೋಗ್ಯವಾಗಿವೆ. ಈ ಮಾತು ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಿಗೆ ಅನ್ವಯ. ಉದಯವಾಣಿಯ ವರದಿಗಾರರು ಈ ಹದಗೆಟ್ಟ ರಸ್ತೆಗಳಲ್ಲಿ ತಿರುಗಾಡಿ, ಸ್ಥಳೀಯರನ್ನು ಮಾತನಾಡಿಸಿ ರಸ್ತೆಗಳ ವಾಸ್ತವ ಸ್ಥಿತಿಯನ್ನು ಓದುಗರ ಎದುರು ತೆರೆದಿಡುವ ಪ್ರಯತ್ನವಿದು. ಲೋಕೋಪಯೋಗಿ ಇಲಾಖೆ ಕೂಡಲೇ
ಜನರ ಗೋಳನ್ನು ಆಲಿಸಿ ಪರಿಹಾರ ಕಲ್ಪಿಸಬೇಕೆಂಬುದು ಜನಾಗ್ರಹ.
ಸುಳ್ಯ: ಅಂತಾರಾಜ್ಯ ಸಂಪರ್ಕಿಸುವ ಈ ರಸ್ತೆಯಲ್ಲಿ ಐದು ನಿಮಿಷಕ್ಕೊಮ್ಮೆ ವಾಹನ ನಿಲ್ಲಿಸಿ ಲೆಕ್ಕ ಹಾಕಿದರೂ ಐದು ಕಿ.ಮೀ.ಯೊಳಗೆ ಕನಿಷ್ಠ ಐನೂರು ಹೊಂಡಗಳಿಗೇನೂ ಬರವಿಲ್ಲ !
ಒಂದೆಡೆ ಕೇರಳ, ಇನ್ನೊಂದೆಡೆ ಕೊಡಗನ್ನು ಸಂಪರ್ಕಿಸುವ ರಸ್ತೆಯ ವಾಸ್ತವ ಸ್ಥಿತಿ ಇದು. ಸುಳ್ಯ – ಆಲೆಟ್ಟಿ- ಬಡ್ಡಡ್ಕ- ಪಾಣತ್ತೂರು -ಕರಿಕೆ- ಭಾಗಮಂಡಲ ಮತ್ತು ಇನ್ನೊಂದೆಡೆ ಪಾಣತ್ತೂರು ಮೂಲಕ ಕೇರಳ ಬೆಸೆಯುವ ಈ ರಸ್ತೆಯ ಬಹುಭಾಗ ಹೊಂಡಗುಂಡಿಗಳಿಂದ ತುಂಬಿ ಅಪಾಯದ ಸ್ವಾಗತ ಕೋರುತ್ತಿದೆ.
ಏಕೈಕ ಪರ್ಯಾಯ ರಸ್ತೆ
ಮಡಿಕೇರಿ-ಸಂಪಾಜೆ ರಸ್ತೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಸಂದರ್ಭ ಆರು ತಿಂಗಳ ಕಾಲ ಸಂಚಾರಕ್ಕೆ ಏಕೈಕ ಹಾದಿ ಇದೇ ರಸ್ತೆ ಆಗಿತ್ತು. ತುರ್ತು ಸಂದರ್ಭ ಮಡಿಕೇರಿ ಮತ್ತು ಸುಳ್ಯ ಕೆಎಸ್‌ಆರ್‌ಟಿಸಿ ಘಟಕಗಳು ಈ ರಸ್ತೆಯಲ್ಲಿ ತಾತ್ಕಾಲಿಕ ಮಿನಿ ಬಸ್ ಓಡಾಟ ಕಲ್ಪಿಸಿದ್ದವು. ಕಾಸರಗೋಡು, ಮಡಿಕೇರಿ, ಸುಳ್ಯ ಭಾಗದಿಂದ ಈ ರಸ್ತೆಯಲ್ಲಿ ದಿನಂಪ್ರತಿ ಕೆಎಸ್‌ಆರ್‌ಟಿಸಿ, ಖಾಸಗಿ, ಟೂರಿಸ್ಟ್ ವಾಹನಗಳು ಸಂಚರಿಸುತ್ತವೆ.
13 ಕೋ.ರೂ. ಪ್ರಸ್ತಾವನೆ
ಇಲ್ಲಿನ ಒಟ್ಟು ರಸ್ತೆಯಲ್ಲಿನ 30 ಕಿ.ಮೀ. ಮೇಲ್ದರ್ಜೆಗೆ 13 ಕೋ.ರೂ.ಪ್ರಸ್ತಾವನೆ ಸಲ್ಲಿಸಲಾಗಿದೆ. ಮಡಿಕೇರಿ- ಸಂಪಾಜೆ ನಡುವೆ ಸಂಪರ್ಕ ಕಡಿತಗೊಂಡ ಈ ವೇಳೆ ಈ ಅನುದಾನ ಬಿಡುಗಡೆಗೆ ಆಗ್ರಹ ಕೇಳಿಬಂದಿತ್ತು. ಆದರೆ ಮುಖ್ಯ ಹೆದ್ದಾರಿ ಸಿದ್ಧಗೊಂಡ ಬಳಿಕ ಬೇಡಿಕೆ ತೆರೆಮರೆಗೆ ಸಂದಿತು.
ಶಿಥಿಲ ಸೇತುವೆ ಪಯಸ್ವಿನಿ ನದಿಗೆ ನಿರ್ಮಿಸಿರುವ ನಾಗ ಪಟ್ಟಣ ಸೇತುವೆ ಶಿಥಿಲವಾಗಿದ್ದು, ಘನ ವಾಹನ ಸಂಚಾರ ನಿಷೇಧಿಸಿ ಪಂ.ರಾಜ್ ಎಂಜಿನಿಯರಿಂಗ್ ಇಲಾಖೆ ಫಲಕ ಅಳವಡಿಸಿದೆ. ಸೇತುವೆ ದುರಸ್ತಿ ತನಕ ಲಘು ವಾಹನಗಳು ಮಾತ್ರ ಈ ರಸ್ತೆಯಲ್ಲಿ ಸಂಚರಿಸಬಹುದಷ್ಟೆ. ಈ ಸೇತುವೆಗೆ ಬದಲಿಯಾಗಿ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ತುರ್ತು ದುರಸ್ತಿಯ ಅಗತ್ಯವೂ ಇದೆ.
320 ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ
ಈ ರಸ್ತೆ ಗುಂಡ್ಯ ಪ್ರದೇಶದಲ್ಲಿ ತೀವ್ರವಾಗಿ ಹದಗೆಟ್ಟಿದ್ದು, ಜಿ.ಪಂ.ಅನು ದಾನದಡಿ 320 ಮೀ. ದೂರ 21 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆಯ ಒಂದು ಬದಿಯಲ್ಲಿ ಅಂತಿಮ ಹಂತದಲ್ಲಿದ್ದು, ಇನ್ನೊಂದು ಬದಿ ಮಣ್ಣಿನ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಅತಿ ಹೆಚ್ಚು ಹಾಳಾಗಿರುವುದು
ಸುಳ್ಯ-ಪಾಣತ್ತೂರು ರಸ್ತೆಯಲ್ಲಿ ಆಲೆಟ್ಟಿ
ಬಡ್ಡಡ್ಕದ ಮೂಲಕ ಬಾಟೋಳಿ ಗಡಿ ತನಕ
ಡಾಮರು ಆಗಿದ್ದರೂ ಹೊಂಡಗಳು ಸೃಷ್ಟಿಯಾಗಿ ಸಂಚಾರ ಕಷ್ಟವಾಗಿದೆ.
ನಾಗಪಟ್ಟಣದಿಂದ ಗುಂಡ್ಯ ಸನಿಹದ ತನಕ ಹೊಂಡಗಳಿವೆ. ಕೆಸರು, ಮಳೆ ನೀರು ನಿಂತು ವಾಹನಗಳು ನಿತ್ಯ ಸಂಚಾರಕ್ಕೆ ಪ್ರಯಾಸಪಡುವಂತಾಗಿದೆ.
ಎಚ್ಚರಿಕೆ ವಹಿಸಬೇಕಾದ ಅಂಶಗಳು
– ಕರಿಕೆಯಿಂದ ಭಾಗಮಂಡಲ ತನಕ ಏಕಪಥ ರಸ್ತೆಯಿದ್ದು, ಅನೇಕ ತಿರುವು, ಗುಡ್ಡ ಪ್ರದೇಶಗಳಿವೆ. ಹಲವು ಕಡೆ ಗುಡ್ಡ, ರಸ್ತೆ ಕುಸಿದಿದೆ.
– ಕೂರ್ನಡ್ಕ, ಬಡ್ಡಡ್ಕಗಳಲ್ಲಿ ಅಪಾಯಕಾರಿ ತಿರುವುಗಳಿವೆ. ಎರಡು ವಾಹನಗಳು ಮುಖಾಮುಖೀಯಾದಾಗ ಬದಿಗೆ ಸರಿಯಲು ಕಷ್ಟ.
ಪದೇ-ಪದೇ ಮಳೆಯಾಗುತ್ತಿರುವ ಕಾರಣ ದುರಸ್ತಿ ಆರಂಭಿಸಿಲ್ಲ. ಈಗಾಗಲೇ ಈ ರಸ್ತೆಯ ಗುಂಡ್ಯ ಬಳಿ ಕಾಂಕ್ರೀಟ್ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ. ಮಳೆ ಕಡಿಮೆ ಆದ ತತ್‌ಕ್ಷಣ ಉಳಿದ ಭಾಗದಲ್ಲಿ ದುರಸ್ತಿ ಕೈಗೆತ್ತಿಕೊಳ್ಳಲಾಗುವುದು
-ಹನುಮಂತರಾಯಪ್ಪ, ಎಂಜಿನಿಯರ್, ಜಿ.ಪಂ.ಇಲಾಖೆ
ತತ್‌ಕ್ಷಣ ದುರಸ್ತಿ ಪಡಿಸಿ
ನಗರ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ನಾಗಪಟ್ಟಣ ಸೇತುವೆ ತನಕದ ರಸ್ತೆ ಹೊಂಡ ಗುಂಡಿ ತುಂಬಿ ಸಂಚಾರಕ್ಕೆ ದುಸ್ತರವೆನಿಸಿದೆ. ಮಳೆಹಾನಿ ಯೋಜನೆ ಸೇರಿದಂತೆ ಶಾಸಕ, ಸಂಸದರ ಅನುದಾನ ಬಳಸಿ ತತ್‌ಕ್ಷಣ ರಸ್ತೆ ದುರಸ್ತಿ ಮಾಡಬೇಕು.
– ಉಮ್ಮರ್ ಕೆ.ಎಸ್, ಗಾಂಧಿನಗರ
ಪೂರ್ಣ ಪ್ರಮಾಣ ಅಭಿವೃದ್ಧಿ ಅಗತ್ಯ
ಕೂರ್ನಡ್ಕ ವ್ಯಾಪ್ತಿಯಲ್ಲಿ ಹೊಂಡ ತುಂಬಿದೆ. ತೀರಾ ಹದೆಗೆಟ್ಟಿದ್ದ ಗುಂಡ್ಯ ಬಳಿ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆಯು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಂಡರೆ ನೂರಾರು ಪ್ರಯಾಣಿಕರಿಗೆ ಪ್ರಯೋಜನವಾಗುತ್ತದೆ.
– ಜಗದೀಶ್, ಕಾಪುಮಲೆ
ಕಿರು ರಸ್ತೆಯಲ್ಲಿ ಸಂಚಾರವೇ ಸಂಕಷ್ಟ
ತುರ್ತು ಸಂದರ್ಭ ಇಲ್ಲಿ ಸಂಚಾರವೇ ಸವಾಲೆನಿಸಿದೆ. ರಸ್ತೆಯ ಅಗಲವು ಕಿರಿದಾಗಿದೆ. ಹೊಂಡ ತುಂಬಿ ವಾಹನ ಸಂಚಾರವೇ ಅಸಾಧ್ಯವಾಗಿದೆ. ಆದಷ್ಟು ಬೇಗನೆ ಈ ರಸ್ತೆಯನ್ನು ದುರಸ್ತಿಗೊಳಿಸಬೇಕು ಅಥವಾ ಸಂಪೂರ್ಣವಾಗಿ ಮರುನಿರ್ಮಿಸಬೇಕು.
– ರಂಜಿತ್, ಕಲ್ಕುಮುಟ್ಲು
ಹೊಂಡಗಳನ್ನು ಕೂಡಲೇ ಮುಚ್ಚಿ
ನಾನು ವಿರಾಜಪೇಟೆ ನಿವಾಸಿ. ಮಡಿಕೇರಿ-ಸಂಪಾಜೆ ರಸ್ತೆ ಕೈ ಕೊಟ್ಟ ಸಂದರ್ಭ ಮಂಗಳೂರಿಗೆ ಹೋಗಲು ಈ ರಸ್ತೆಯನ್ನು ಬಳಸುತ್ತೇವೆ. ಅಲ್ಲಲ್ಲಿ ಹೊಂಡಗಳಾಗಿ ಸಮಸ್ಯೆಯಾಗಿದೆ. ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕು.
-ಶ್ರೀನಿವಾಸ, ವಾಹನ ಸವಾರ.
ಸುಸಜ್ಜಿತ ರಸ್ತೆಯಾಗಿಸಿ
ಕೊಡಗು ಮತ್ತು ಕಾಸರಗೋಡು ಭಾಗದಿಂದ ವಿದ್ಯಾಭ್ಯಾಸಕ್ಕೆಂದು ಹೆಚ್ಚಿನ ವಿದ್ಯಾರ್ಥಿಗಳು ಸುಳ್ಯಕ್ಕೆ ಇದೇ ರಸ್ತೆಯ ಮೂಲಕ ಬರುತ್ತಾರೆ. ಅನೇಕ ನೆಲೆಯಲ್ಲಿ ಅನುಕೂಲಕರ ರಸ್ತೆ ಇದಾಗಿದ್ದು ಸುಸಜ್ಜಿತ ರಸ್ತೆಯನ್ನಾಗಿ ರೂಪಿಸುವ ಅಗತ್ಯವಿದೆ.
– ಸುನಿಲ್ ಪಿ.ಕೆ., ಪಾವನಿಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.