ನದಿ ಮಧ್ಯೆ ವಿದ್ಯುತ್ ತಂತಿ ಎಳೆಯಲು ಡ್ರೋನ್ ನೆರವು
Team Udayavani, Aug 23, 2018, 1:25 AM IST
ಉಪ್ಪಿನಂಗಡಿ: ನದಿಯ ಎರಡು ದಡಗಳ ನಡುವೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಡ್ರೋನ್ ನೆರವು ಪಡೆದು, ಹಲವು ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಉಪ್ಪಿನಂಗಡಿ ಫೀಡರ್‌ನಿಂದ 34ನೇ ನೆಕ್ಕಿಲಾಡಿಯ ದರ್ಬೆ ಮೂಲಕ ಕುಮಾರಧಾರಾ ನದಿಯನ್ನು ದಾಟಿ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ಗೆ ಎಚ್.ಟಿ. ಲೈನ್ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಇದರಲ್ಲಿ 80 ಟಿಸಿಗಳು ಕಾರ್ಯಾಚರಿಸುತ್ತಿವೆ. ಅಡೆಕ್ಕಲ್‌ನಿಂದ ಕೊಯಿಲದ ಗೋಕುಲನಗರ ತನಕ ಇಲ್ಲಿಂದಲೇ ವಿದ್ಯುತ್ ಸರಬರಾಜಾಗುತ್ತಿತ್ತು. ಕೆಲವು ದಿನಗಳ ಹಿಂದೆ ಕುಮಾರಧಾರಾ ನದಿಗೆ ನೆರೆ ಬಂದಾಗ ನೀರಿನಲ್ಲಿ ತೇಲಿಬಂದ ಬೃಹತ್ ಮರಕ್ಕೆ ತಂತಿಗಳು ಸಿಲುಕಿ ಎಳೆದಂತಾಗಿ, ಕಂಬಗಳು ಮುರಿದಿದ್ದವು. ಅಡೆಕ್ಕಲ್ ಭಾಗಕ್ಕೆ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿತ್ತು. ಕಾಂಚನ ಫೀಡರ್‌ನಿಂದ ತಾತ್ಕಾಲಿಕವಾಗಿ ವಿದ್ಯುತ್ ಪೂರೈಸಲಾಗುತ್ತಿತ್ತು.
ಅಪಾಯಕಾರಿ ಪ್ರದೇಶ
ಕುಮಾರಧಾರಾ ನದಿ ತುಂಬಿ ಹರಿಯುತ್ತಿರುವ ಕಾರಣ ಅದನ್ನು ದಾಟಿ, ದರ್ಬೆಯಿಂದ ಅಡೆಕ್ಕಲ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಕಷ್ಟವಾಗಿತ್ತು. ನದಿಯಲ್ಲಿ ದೊಡ್ಡ ಬಂಡೆ ಗಲ್ಲುಗಳಿದ್ದು, ನೀರಿನ ಸೆಳೆತವೂ ಜಾಸ್ತಿ ಇರುವುದರಿಂದ ಅಪಾಯಕಾರಿಯಾಗಿದೆ. ದೋಣಿಗಳ ಮೂಲಕವೂ ವಿದ್ಯುತ್ ತಂತಿಗಳನ್ನು ಆಚೆ ದಡಕ್ಕೆ ಎಳೆಯುವುದು ಸಾಧ್ಯವಿರಲಿಲ್ಲ. ಆದರೆ, 300 ಮೀ. ದೂರದ ಇನ್ನೊಂದು ತೀರಕ್ಕೆ ತಂತಿ ಎಳೆಯುವುದು ಅನಿವಾರ್ಯವಾಗಿತ್ತು. ಕೊನೆಗೆ ಮೆಸ್ಕಾಂ ಡ್ರೋನ್ ಬಳಸಲು ಮುಂದಾಯಿತು.
ಹೀಗೆ ನಡೆಯಿತು ಪ್ರಯೋಗ…
ಬಾಡಿಗೆ ಆಧಾರದಲ್ಲಿ ಡ್ರೋನ್ ತರಿಸಿ, ಅದಕ್ಕೆ ನೈಲಾನ್ ಹಗ್ಗದ ತುದಿಯನ್ನು ಕಟ್ಟಿ ಅಡೆಕ್ಕಲ್ ಭಾಗದಿಂದ ನದಿಯ ಇನ್ನೊಂದು ತೀರದಲ್ಲಿರುವ ದರ್ಬೆಯ ವಿದ್ಯುತ್ ಕಂಬಕ್ಕೆ ಇಳಿಸುವ ಪ್ರಯೋಗ ನಡೆಸಿತು. ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿದ್ದ ಕಾರಣ ಸಫಲವಾಗಲಿಲ್ಲ. ಕೊನೆಗೆ 34ನೇ ನೆಕ್ಕಿಲಾಡಿ ಗ್ರಾಮದ ದರ್ಬೆ ಕಡೆಯಿಂದ ಡ್ರೋನ್ ಹಾರಿಸಲು ನಿರ್ಧರಿಸಲಾಯಿತು. ಈ ಪ್ರಯೋಗ ಯಶಸ್ವಿಯಾಯಿತು. ಎರಡನೇ ಹಂತದಲ್ಲಿ ಸ್ವಲ್ಪ ದಪ್ಪನೆಯ, ಮೂರನೇ ಸಲ ಹೆಚ್ಚು ದೃಢತೆಯ ನೈಲಾನ್ ಹಗ್ಗವನ್ನು ಬಳಸಿ, ಆ ಬದಿಗೆ ಎಳೆಯಲಾಯಿತು. ಬಳಿಕ ಈ ಮೂಲಕ ತಂತಿಗಳನ್ನು ಎಳೆಯಲಾಯಿತು.
ಮೆಸ್ಕಾಂ ಪುತ್ತೂರು ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನರಸಿಂಹ, ಉಪ್ಪಿನಂಗಡಿ ಶಾಖೆಯ ಸ.ಕಾ.ನಿ. ಎಂಜಿನಿಯರ್ ರಾಜೇಶ್ ಹಾಗೂ ಪುತ್ತೂರು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು. ಗುತ್ತಿಗೆದಾರ ನವೀನ್, ಮೆಸ್ಕಾಂ ಸಿಬಂದಿ ಸಹಕರಿಸಿದರು. ‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ಜತೀಂದ್ರ ಶೆಟ್ಟಿ ಸ್ಥಳದಲ್ಲಿದ್ದರು.
ಮೊಬೈಲ್ ಸಹಾಯ
ನದಿಯ ಎರಡು ದಡಗಳ ನಡುವೆ 300 ಮೀ. ಅಂತರವಿರುವ ಕಾರಣ ಆಗಸದಲ್ಲಿ ಹಾರಾಡುತ್ತಿದ್ದ ಡ್ರೋನ್ ನಿಯಂತ್ರಕರಿಗೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಅಡೆಕ್ಕಲ್ ಪರಿಸರದಲ್ಲಿ ನಿಂತಿದ್ದ ಮೆಸ್ಕಾಂ ಎಇ ರಾಜೇಶ್ ಡ್ರೋನ್ ಸಾಗಬೇಕಾದ ಪಥದ ಬಗ್ಗೆ ಮೊಬೈಲ್ ಮೂಲಕವೇ ಮಾರ್ಗದರ್ಶನ ನೀಡುತ್ತಿದ್ದರು. ಅವರ ಸೂಚನೆಯಂತೆ ಡ್ರೋನ್ ನಿಯಂತ್ರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.