ಬರ ನಿರ್ವಹಣೆಯಲ್ಲಿ ಸರಕಾರ ವಿಫಲ: ಜಗದೀಶ ಶೆಟ್ಟರ್
Team Udayavani, Apr 13, 2017, 12:17 PM IST
ಬೆಳ್ತಂಗಡಿ: ರಾಜ್ಯಾದ್ಯಂತ ಬರ ಇದ್ದಾಗಲೂ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಿದ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಷ್ಟೇ ನಂ.1 ಆಗುವತ್ತ ಮುನ್ನುಗ್ಗುತ್ತಿದೆ. ಬೆಲೆ ಏರಿಕೆ ಹಾಗೂ ಬರದ ಬೇಗೆಯಿಂದ ಬೇಸತ್ತ ಜನರಿಗೆ ವಿದ್ಯುತ್ ಶಾಕ್ ಆಘಾತವನ್ನುಂಟು ಮಾಡಿದೆ. ಬರ ನಿರ್ವಹಣೆಯಲ್ಲೂ ರಾಜ್ಯ ಸರಕಾರ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಅವರು ಬುಧವಾರ ಧರ್ಮಸ್ಥಳಧಿದಲ್ಲಿ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ಸಾಮಾನ್ಯ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಹೊರೆಯಾಗಿದ್ದು ಅದನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ವೈಜ್ಞಾನಿಕ ಹಾಗೂ ಆಧುನಿಕ ವಿಧಾನ ಮೂಲಕ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆಯಲ್ಲಿ ಆಗುವ ಸೋರಿಕೆ ತಡೆಗಟ್ಟಿದರೆ ದರ ಏರಿಸುವ ಅಗತ್ಯವಿಲ್ಲ. ಈ ಬಗೆ ವೈಜ್ಞಾನಿಕ ಚಿಂತನೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ರಾಜಸ್ಥಾನ, ತೆಲಂಗಾಣ, ಆಂಧ್ರ, ತಮಿಳುನಾಡಿನಂತಹ ರಾಜ್ಯಗಳಂತೆ ಸೌರ ವಿದ್ಯುತ್ ಬಳಕೆ ಮಾಡಿದಲ್ಲಿ ಸ್ವಾವಲಂಬನೆ ಸಾಧಿಸಬಹುದು. ಈ ಬಗ್ಗೆ ಕೇಂದ್ರ ಸರಕಾರ ಎಲ್ಲ ರೀತಿಯ ನೆರವು ನೀಡಿದರೂ ರಾಜ್ಯ ಸರಕಾರ ಅದರ ಸದುಪಯೋಗ ಮಾಡುವಲ್ಲಿ ವಿಫಲವಾಗಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ 24 ತಾಸು ವಿದ್ಯುತ್ತಿನ ಭರವಸೆ ನೀಡಿದ್ದರೂ ಕರ್ನಾಟಕ ಮುಖ್ಯಮಂತ್ರಿ ಈ 4 ವರ್ಷದಲ್ಲಿ ಒಮ್ಮೆಯೂ ಅಂತಹ ಹೇಳಿಕೆ ಕೂಡ ನೀಡಿಲ್ಲ ಎಂದರು.
ಯುಪಿಯಲ್ಲಿ ಸಾಲ ಮನ್ನಾ ಮಾಡಲಾಗಿದೆ. ನಾನು ಸಿಎಂ ಆಗಿದ್ದಾಗಲೂ ಸಾಲ ಮನ್ನಾ ಮಾಡಿದ್ದೆ. ಈ ಬಾರಿ ಅಧಿವೇಶನಗಳಲ್ಲಿ ಸತತ ಒತ್ತಾಯಿಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಹಿತಾಸಕ್ತಿ ಬಗ್ಗೆ ಕಾಳಜಿ ಇಲ್ಲ. ರೈತರ ಸಾಲ ಮನ್ನಾ ಮಾಡಲಿ. 2,200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ರೈತ ಕುಟುಂಬಗಳಲ್ಲಿ ಆತ್ಮವಿಶ್ವಾಸ ತುಂಬಬೇಕು. 170 ತಾಲೂಕುಗಳಲ್ಲಿ ಬರ ಇದ್ದರೂ ರೈತರಿಗೆ ನೆರವಿಲ್ಲ. ಗೋಶಾಲೆ ತೆರೆದಿಲ್ಲ. ಮೇವಿನ ಬ್ಯಾಂಕ್ ತೆರೆದಿಲ್ಲ. ಮೇವಿನಲ್ಲೂ ಹಗರಣಗಳಾಗಿವೆ ಎಂದರು.
ಕೇರಳ ಮಾದರಿಯಲ್ಲಿ ಕಸ್ತೂರಿರಂಗನ್ ವರದಿ ಜಾರಿಗೆ ಯತ್ನಿಸಿ ಎಂದಾಗಲೂ ಸರಕಾರ ಉಪಗ್ರಹಾಧಾರಿತ ಸರ್ವೆ ಮಾಡಿದೆ. ಕಪ್ಪತಗುಡ್ಡ ಸಂರಕ್ಷಣೆ ಕುರಿತು ಗೊಂದಲದಲ್ಲಿ ಬಿದ್ದು ಈಗ ಅಧಿಸೂಚನೆ ಕೊಟ್ಟಿದೆ. ಒಟ್ಟಿನಲ್ಲಿ ವಿಫಲ ಆಡಳಿತ. ಜ್ವಲಂತ ಸಮಸ್ಯೆಗೆ ಸ್ಪಂದಿಸುವ ನಿಲುವೇ ಇಲ್ಲ ಎಂದರು.
ಭ್ರಷ್ಟಾಚಾರಿಗಳಿಗೆ ರಕ್ಷಣೆ
ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆಯನ್ನು ಅವರು ಖಂಡಿಸಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟರಿಗೆ ರಕ್ಷಣೆ ನೀಡಲಾಗುತ್ತಿದೆ. ಅಮಾನತಾದ ಪೊಲೀಸ್ ಸಿಬಂದಿಯನ್ನು ಮರಳಿ ಕೆಲಸಕ್ಕೆ ತತ್‌ಕ್ಷಣ ತೆಗೆದುಕೊಳ್ಳಬೇಕು. ಪೊಲೀಸರ ಪತ್ನಿಯರಿಗೇ ರಕ್ಷಣೆ ದೊರೆಯಲಿಲ್ಲ, ಅದನ್ನು ಪ್ರಶ್ನಿಸಿದ ಪೊಲೀಸ್ ಅಮಾನತಾಗುತ್ತಾರೆ ಎಂದರೆ ಏನರ್ಥ ಎಂದರು.
ಎತ್ತಿನಹೊಳೆ ಯೋಜನೆ
ಸ್ಥಳೀಯರಿಗೆ ಸಮರ್ಪಕ ಮಾಹಿತಿ ನೀಡದೆ ಸರಕಾರ ತಪ್ಪು ಮಾಡಿದೆ. ಮೊದಲು ಜನರ ವಿಶ್ವಾಸ ಪಡೆಯಬೇಕು. ಎರಡೂ ಭಾಗದ ಜನರಿಗೆ ಮಾಹಿತಿ ಕೊಡದ ಕಾರಣ ಇದು ವಿವಾದಾತ್ಮಕವಾಗಿದೆ ಎಂದರು.
ಪ್ರಕೃತಿ ಚಿಕಿತ್ಸೆಗೆ ಪ್ರಶಂಸೆ
8 ವರ್ಷಗಳ ಹಿಂದೆ ಪ್ರಕೃತಿ ಚಿಕಿತ್ಸೆಗೆ ಧರ್ಮಸ್ಥಳಕ್ಕೆ ಆಗಮಿಸಿ ಯೋಗಾಭ್ಯಾಸ ಕಲಿತು ನವೋಲ್ಲಾಸ ಪಡೆದಿದ್ದೇನೆ. ಒತ್ತಡ ಕಳೆಯುವ ತಂತ್ರ ಕಲಿತಿದ್ದೇನೆ. ಕಳೆದ ಒಂದು ವಾರದಿಂದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದು ಇಲ್ಲಿನ ಪ್ರಶಾಂತ ಪರಿಸರ ಹಾಗೂ ಚಿಕಿತ್ಸಾ ವಿಧಾನ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಭೇಟಿ: ಇದೇ ವೇಳೆ ಜಗದೀಶ್ ಶೆಟ್ಟರ್ ಹಾಗೂ ಶಿಲ್ಪಾ ಶೆಟ್ಟರ್ ದಂಪತಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಸುರೇಂದ್ರ ಕುಮಾರ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಮುಖ್ಯ ವೈದ್ಯಾಧಿಕಾರಿ ಡಾ| ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.