ಕಾಲೇಜು ಕ್ಯಾಂಪಸ್ ಗುರಿಯಾಗಿಸಿ ಡ್ರಗ್ಸ್ ಜಾಲ !
Team Udayavani, Jul 5, 2019, 10:04 AM IST
ಪುತ್ತೂರು: ಕೇರಳದಿಂದ ಗಡಿ ಗ್ರಾಮಗಳ ಮೂಲಕ ಪುತ್ತೂರು, ಸುಳ್ಯ ನಗರಕ್ಕೆ ಅಮಲು ಪದಾರ್ಥ ಪೂರೈಸುವ ದಂಧೆ ಹೆಚ್ಚಿದ್ದು, ಕಾಲೇಜುಗಳನ್ನೇ ಕೇಂದ್ರೀಕರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಲವು ಕಾಲೇಜುಗಳ ವಿದ್ಯಾರ್ಥಿ ಗಳನ್ನೇ ಗ್ರಾಹಕರನ್ನಾಗಿಸಿಕೊಂಡಿರುವ ಈ ಮಾದಕ ಪದಾರ್ಥ ಜಾಲ, ಗಾಂಜಾ, ಅಫೀಮು ಮತ್ತಿತರ ಅಮಲು ಪದಾರ್ಥಗಳ ಬಳಕೆಗೆ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದೆ.
ಒಳ ರಸ್ತೆಗಳಿಂದ ಪ್ರವೇಶ
ಕೇರಳದಿಂದ ಸುಳ್ಯ, ಪುತ್ತೂರು ತಾಲೂಕಿನ ಪೊಲೀಸರ ಸಂಚಾರ ಇಲ್ಲದ ಒಳ ರಸ್ತೆಗಳನ್ನೇ ತಮ್ಮ ಅಮಲು ಪದಾರ್ಥಗಳನ್ನು ಸಾಗಿಸಲು ಬಳಸುತ್ತಿರುವ ದಂಧೆಕೋರರು, ಕಾಲೇಜು ತರಗತಿ ಮುಗಿಯುವ ಅವಧಿ ಆಧರಿಸಿಯೇ ನಿರ್ದಿಷ್ಟ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಅಮಲು ಪದಾರ್ಥ ಪೂರೈಸುತ್ತಾರೆ. ಈ ಜಾಲ ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಓರ್ವ ವಿದ್ಯಾರ್ಥಿಯನ್ನು ಪರಿಚಯ ಮಾಡಿಕೊಳ್ಳುವ ಈ ಜಾಲ, ಬಳಿಕ ಆತನೇ ಗ್ರಾಹಕರನ್ನು ಹುಡುಕಿಕೊಡುವುದಲ್ಲದೇ, ಪೂರೈಕೆದಾರನೂ ಆಗುತ್ತಾನೆ. ಹೀಗೆ ವಿದ್ಯಾರ್ಥಿಗಳ ಭವಿಷ್ಯವನ್ನೇ ಮಾದಕ ವಸ್ತು ಮಾರಾಟ ಜಾಲ ಕೊಲ್ಲುತ್ತಿದೆ. ದಿನೇ ದಿನೇ ಈ ಜಾಲ ಪ್ರಬಲಗೊಳ್ಳುತ್ತಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.
ಅನಧಿಕೃತ ಗೆಸ್ಟ್ ಹೌಸ್!
ಅನಧಿಕೃತವಾಗಿ ಹುಟ್ಟಿಕೊಳ್ಳುವ ಪೇಯಿಂಗ್ ಗೆಸ್ಟ್, ಕಾಲೇಜು ಸಂಪರ್ಕ ರಸ್ತೆಯಲ್ಲಿ ಏಕಾಏಕಿ ನಿರ್ಮಾಣವಾಗುವ ಸಣ್ಣ ಪುಟ್ಟ ಡೇರೆ ಅಂಗಡಿಗಳು ಡ್ರಗ್ಸ್ ಪೂರೈಕೆ ತಾಣಗಳಾಗುತ್ತಿವೆ ಎಂಬುದು ಸ್ಥಳೀಯವಾಗಿ ಸಿಗುವ ಮಾಹಿತಿ. ಅನಧಿಕೃತ ಪೇಯಿಂಗ್ ಗೆಸ್ಟ್ ಸೌಲಭ್ಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇರದು.ಸ್ಥಳೀಯಾಡಳಿತಕ್ಕೂ ತಿಳಿಯದು. ಹೀಗಾಗಿ ಮಾದಕ ವಸ್ತು ಜಾಲದ ಸುರಕ್ಷಿತ ಸ್ಥಳಗಳಾಗಿ ಪರಿವರ್ತಿತವಾಗುತ್ತಿವೆ.
ಈ ಹಿಂದೆ ಕೂರ್ನಡ್ಕ, ದರ್ಬೆ, ನೆಹರೂನಗರ ಮೊದಲಾದೆಡೆ ಗಾಂಜಾ ಸಾಗಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ, ಹಲವರನ್ನು ಬಂಧಿಸಿದ್ದರು. ಆ ಬಳಿಕ ಏನಾಯಿತು ಎಂಬುದಕ್ಕೆ ಸ್ಪಷ್ಟ ಮಾಹಿತಿ ಇಲ್ಲ.
ಗಾಂಜಾ ಎಲ್ಲಿಂದ ಬಂದಿದೆ, ಯಾರು ಪೂರೈಕೆ ಮಾಡುತ್ತಾರೆ ಎಂಬ ಬಗ್ಗೆ ಕೂಲಂಕಷ ತನಿಖೆಯೂ ನಡೆಯುತ್ತಿಲ್ಲ ಎಂಬ ಟೀಕೆಯೂ ಕೇಳಿಬಂದಿದೆ. ಬಂಧಿತರು ಕೂಡಲೇ ಜಾಮೀನು ಪಡೆದು ಹೊರ ಬಂದು ಮತ್ತದೇ ಕೃತ್ಯದಲ್ಲಿ ತೊಡಗುತ್ತಿದ್ದಾರೆ.
ಠಾಣೆಯಿಂದ ಮಾಹಿತಿ ನೀಡುವಂತಿಲ್ಲ!
ವರ್ಷದಲ್ಲಿ ಎಷ್ಟು ಗಾಂಜಾ ಪ್ರಕರಣಗಳು ನಡೆದಿವೆ ಎಂಬ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಮಾಹಿತಿ ಕೇಳಿದರೆ, ಈ ಮಾಹಿತಿ ನಮ್ಮ ವ್ಯಾಪ್ತಿಯಲ್ಲಿ ನೀಡಲು ಸಾಧ್ಯವಿಲ್ಲ. ಅದೇನಿದ್ದರೂ ಜಿಲ್ಲಾ ಮಟ್ಟದಿಂದಲೇ ಪಡೆಯಬೇಕು ಅನ್ನುತ್ತಾರೆ ಅಲ್ಲಿನ ಪೊಲೀಸರು. ಹಾಗೆಯೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಲ್ಲಿ ಮಾಹಿತಿ ಕೋರಿದರೆ, ನೀವು ಠಾಣೆಯಲ್ಲೇ ಮಾಹಿತಿ ಪಡೆಯಿರಿ ಎನ್ನುತ್ತಿದ್ದಾರೆ. ಇದರಿಂದ ಮಾಹಿತಿಯೂ ಸಕಾಲದಲ್ಲಿ ಸಿಗದಂತಾಗಿದೆ.
2019ರಲ್ಲಿ ಇದುವರೆಗೆ ಮಾದಕ ಪದಾರ್ಥ, ಅಮಲು ದ್ರವ್ಯ ಸಂಬಂಧಿಯಾಗಿ ಅಬಕಾರಿ ಕಾಯಿದೆಯಡಿ 433, ಎನ್‌ಡಿಪಿಎಸ್ ಕಾಯಿದೆಯಡಿ 5 ಪ್ರಕರಣಗಳು ದಾಖಲಾಗಿವೆ ಎನ್ನುತ್ತವೆ ಪೊಲೀಸ್ ಮೂಲಗಳು.
ವಿದ್ಯಾರ್ಥಿಗಳೇ ಹಿಡಿದುಕೊಟ್ಟರು!
ವರ್ಷಗಳ ಹಿಂದೆ ಪುತ್ತೂರಿನಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. 2017ರಲ್ಲಿ ಕಾಲೇಜೊಂದರ ಬಳಿ ಗಾಂಜಾ ಮಾರುತ್ತಿದ್ದವನನ್ನು ಸಿನಿಮೀಯ ರೀತಿಯಲ್ಲಿ ವಿದ್ಯಾರ್ಥಿಗಳೇ ಹಿಡಿದು ಪೊಲೀಸರಿ ಗೊಪ್ಪಿಸಿದ್ದರು. ಇಂತಹ ಹತ್ತಾರು ಪ್ರಕರಣಗಳು ಅಮಲು ಪದಾರ್ಥ ಜಾಲದ ಚಟುವಟಿಕೆಯನ್ನು ದೃಢೀಕರಿಸಿವೆ. ಹಿಂದೊಮ್ಮೆ ಪುತ್ತೂರು ಬಸ್ ನಿಲ್ದಾಣದ ಬಳಿ, ನೆಲ್ಲಿಕಟ್ಟೆ ಹಳೆ ಶಾಲಾ ಕಟ್ಟಡದ ಸಮೀಪ ಗಾಂಜಾ ವ್ಯವಹಾರ ನಡೆಸಿ ವಿದ್ಯಾರ್ಥಿಗಳನ್ನು ಖೆಡ್ಡಾಕ್ಕೆ ಬೀಳಿಸಲಾಗುತ್ತಿದೆ ಎಂಬ ಮಾಹಿತಿ ಹರಿದಾಡಿತ್ತು. ಸಾಕ್ಷಿಯೆಂಬಂತೆ ನೆಲ್ಲಿಕಟ್ಟೆಯ ಹಳೆ ಕಟ್ಟಡದೊಳಗೆ ಅಮಲು ಪದಾರ್ಥ, ಸಿಗರೇಟು ತುಂಡುಗಳು ಸಿಕ್ಕಿದ್ದವು. ಈ ಕಟ್ಟಡದ ಸುತ್ತ ರಾತ್ರಿ ವೇಳೆ ಗಸ್ತು ತಿರುಗುವಂತೆ ಪೊಲೀಸರನ್ನು ಸಾರ್ವಜನಿಕರು ಮನವಿ ಮಾಡಿದ್ದರು.
ಇಲಾಖೆ ಕಟ್ಟುನಿಟ್ಟಿನ ನಿಗಾ
ಮಾದಕ ಪದಾರ್ಥ ಜಾಲ ನಿಯಂತ್ರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ನಿಗಾ ಇರಿಸಿದೆ. ಗಾಂಜಾ, ಅಫೀಮು ಮೊದಲಾದ ಅಮಲು ಪದಾರ್ಥ ಸಾಗಾಟ, ಪೂರೈಕೆ ಕಂಡುಬಂದಲ್ಲಿ ನಿಯಮಾನುಸಾರ ವಿವಿಧ ಪ್ರಕರಣ ದಾಖಲಿಸಲಾಗುತ್ತದೆ. ಕಠಿನ ಶಿಕ್ಷೆಗೂ ಗುರಿಯಾಗಿಸಬಹುದು.
– ದಿನಕರ ಶೆಟ್ಟಿ, ಡಿವೈಎಸ್‌ಪಿ, ಪುತ್ತೂರು ವಿಭಾಗ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.