ಕನ್ನಡ ಕಲಿಕಾಸಕ್ತರಿಗೆ ಇ-ಕನ್ನಡ ಕಲಿಕಾ ಅಕಾಡೆಮಿ : ಸಚಿವ ಕೋಟ
Team Udayavani, Nov 1, 2020, 11:15 PM IST
ಸಚಿವ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ಮಂಗಳೂರು: ಕನ್ನಡ ಕಲಿಕೆಯ ಎಲ್ಲ ಆಸಕ್ತರಿಗೆ ಕನ್ನಡ ಕಲಿಕೆಗೆ ಒಂದು ವೇದಿಕೆ ನಿರ್ಮಾಣ ಮಾಡುವ ಉದ್ದೇಶದಿಂದ ಇ-ಕನ್ನಡ ಕಲಿಕಾ ಅಕಾಡೆಮಿಯನ್ನು ಸ್ಥಾಪಿಸಿ ಪ್ರತ್ಯೇಕ ವೆಬ್‌ಸೈಟ್ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ನೆಹರೂ ಮೈದಾನದಲ್ಲಿ ರವಿವಾರ ಜರಗಿದ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನೂತನ ಕೈಗಾರಿಕಾ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ ಎಂದರು.
ಭತ್ತ ಬೆಳೆಗೆ ಪ್ರೋತ್ಸಾಹ
ಕರಾವಳಿ ಹಾಗೂ ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರೇರಣೆ ನೀಡುವ ಉದ್ದೇಶದಿಂದ ಪ್ರತೀ ಹೆಕ್ಟೇರ್‌ಗೆ 7,500 ರೂ. ಪ್ರೋತ್ಸಾಹ ನೀಡುವ ಕರಾವಳಿ ಪ್ಯಾಕೇಜ್ ಜಾರಿಗೊಳಿಸಲಾಗಿದ್ದು, ಈಗಾಗಲೇ 5,169 ಭತ್ತ ಬೆಳೆಗಾರರಿಗೆ ಇದನ್ನು ನೀಡಲಾಗಿದೆ. 2019-20ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ 23 ಲಕ್ಷ ರೈತರು ನೋಂದಣಿ ಮಾಡಿದ್ದು, 1,020 ಕೋ.ರೂ. ವಿಮಾ ಪರಿಹಾರ ಇತ್ಯರ್ಥಪಡಿಸಲಾಗಿದೆ. ವನ್ಯಜೀವಿಗಳಿಂದ ಸಂಭವಿಸುವ ಮಾನವ ಪ್ರಾಣಹಾನಿ ಪ್ರಕರಣಗಳಿಗೆ ಪಾವತಿಸುತ್ತಿದ್ದ 5 ಲಕ್ಷ ರೂ.ಗಳನ್ನು 7.50 ಲಕ್ಷ ರೂ.ಗಳಿಗೆ, ಅಶಕ್ತ ಕಲಾವಿದರ ಮಾಸಾಶನವನ್ನು 1,500 ರೂ.ಗಳಿಂದ 2,000 ರೂ.ಗೆ ಹೆಚ್ಚಿಸಲಾಗಿದೆ ಎಂದರು.
ಮೀನುಗಾರಿಕೆಗೆ ಚೈತನ್ಯ
ಮೀನುಗಾರಿಕೆಗೆ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗಿದೆ. ಯುವಜನಾಂಗಕ್ಕೆ ಪಂಜರ ಕೃಷಿಯ ಮೀನುಗಾರಿಕೆ ನಡೆಸಲು ರಾಜ್ಯದಲ್ಲಿ 10 ಸಾವಿರ ಸ್ವ ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಸರಕಾರ ಹೊಂದಿದೆ ಎಂದರು.
ಸರಳ ಸಮಾರಂಭ ಕೊರೊನಾ ಕಾರಣದಿಂದ ನಿಯಮಗಳ ಅನುಸರಣೆ, ಹೆಚ್ಚು ಜನಸಂದಣಿ ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಬಾರಿಯ ರಾಜ್ಯೋತ್ಸವವನ್ನು ಸರಳವಾಗಿ ನಡೆಸಲಾಯಿತು. ಪೊಲೀಸ್ ಪಥಸಂಚಲನ, ಸಾಂಸ್ಕೃತಿಕ ಕಾರ್ಯ ಕ್ರಮ ಇರಲಿಲ್ಲ.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಡಾ| ವೈ. ಭರತ್ ಶೆಟ್ಟಿ, ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಕಸಪಾ ಜಿಲ್ಲಾಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ, ಪ್ರಮುಖರಾದ ಜಾಯಿಲಸ್ ಡಿ’ಸೋಜಾ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಎಡಿಸಿ ಎಂ.ಜೆ. ರೂಪಾ, ಎಸ್‌ಪಿ ಲಕ್ಷ್ಮೀಪ್ರಸಾದ್, ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 27 ಮಹನೀಯರು ಮತ್ತು 11 ಸಂಘ-ಸಂಸ್ಥೆಗಳಿಗೆ ಈ ಬಾರಿಯ ದ.ಕ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಎಸೆಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಅಂಕ ಗಳಿಸಿದ ಬೆಳ್ತಂಗಡಿಯ ಶೈವಿ ಬಿ., ಬಂಟ್ವಾಳದ ಗೀತಾ ಎಚ್. ಹಾಗೂ ವೇಣೂರಿನ ಶ್ವೇತಾ ಅವರನ್ನು ಗೌರವಿಸಿ ಲ್ಯಾಪ್‌ಟಾಪ್ ವಿತರಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.