ಕರಾವಳಿಯಲ್ಲಿ ಸಂಭ್ರಮದ ಈದುಲ್ ಫಿತ್ರ ಆಚರಣೆ
Team Udayavani, Jun 6, 2019, 10:07 AM IST
ಮಂಗಳೂರು/ಉಡುಪಿ/ಕಾಸರಗೋಡು: ರಮ್ಜಾನ್ ತಿಂಗಳ ಉಪವಾಸದ ಬಳಿಕ ಶವ್ವಾಲ್ ತಿಂಗಳ ಆರಂಭದ ದಿನವಾದ ಬುಧವಾರ ಮುಸ್ಲಿಮರು ಈದುಲ್ ಫಿತ್ರ ಹಬ್ಬವನ್ನು ಮಂಗಳೂರು ಸಹಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಕರಾವಳಿಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಿದರು.
ಕರಾವಳಿ ಜಿಲ್ಲೆಗಳ ಎಲ್ಲ ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಝ್, ಧರ್ಮ ಗುರುಗಳು ಈದ್ ಸಂದೇಶ ಮತ್ತು ಪ್ರವಚನ ನೀಡಿದರು. ಪ್ರಮುಖ ಮಸೀದಿಗಳಲ್ಲಿ ಸೌಹಾರ್ದ ಸಭೆ ನಡೆಯಿತು.
ಮಂಗಳೂರು ಬಾವುಟಗುಡ್ಡೆಯ ಈದ್ಗಾ ಪ್ರಾರ್ಥನಾ ಮಂದಿರದಲ್ಲಿ ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದ್ ನಮಾಝ್ ನಡೆಯಿತು.
ಮಾನವ ಸಂಬಂಧ ವೃದ್ಧಿಗೆ ಪ್ರೇರಣೆ ನೀಡಲಿ
ಈದುಲ್ ಫಿತ್ರ ಹಬ್ಬವು ಕುಟುಂಬ, ಸಮಾಜ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಮನುಷ್ಯ- ಮನುಷ್ಯರ ನಡುವಣ ಸಂಬಂಧ ವೃದ್ಧಿಗೆ ಪ್ರೇರಣೆ ನೀಡಲಿ. ಹಳಸಿದ ಸಂಬಂಧಗಳು ಮರು ಜೋಡಣೆಯಾಗಲಿ. “ಕೆಡುಕನ್ನು ಒಳಿತಿನ ಮೂಲಕ ಎದುರಿಸಿ’ ಎಂಬ ಕುರ್‌ಆನ್ ಸಂದೇಶ ಹಾಗೂ ಪರಸ್ಪರ ಪ್ರೀತಿ, ವಿಶ್ವಾಸದ ಮೂಲಕ ಜಗತ್ತನ್ನು ಗೆದ್ದಿರುವ ಪ್ರವಾದಿ ಬೋಧನೆ ನಮಗೆಲ್ಲಾ ಮಾರ್ಗದರ್ಶಿಯಾಗಲಿ ಎಂದು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಂದೇಶದಲ್ಲಿ ಹೇಳಿದರು.
ಪವಿತ್ರ ರಮ್ಜಾನ್ ತಿಂಗಳ 30 ಉಪವಾಸ ವ್ರತ, ದಾನ ಧರ್ಮಗಳನ್ನು ಮಾಡುತ್ತಾ, ಯಾವುದೇ ಕೆಡುಕಿಗೆ ಆಸ್ಪದ ನೀಡದ ಮುಸ್ಲಿಮರು, ಸಾಕಷ್ಟು ಒಳಿತಿನ, ಪುಣ್ಯದ ಕಾರ್ಯಗಳನ್ನು ಮಾಡಿದ್ದಾರೆ. ಅದರ ಸಂತೋಷದಲ್ಲಿ ಈದುಲ್ ಫಿತ್ರ ಆಚರಿಸುತ್ತಿದ್ದಾರೆ ಎಂದರು. ಶಾಹ ಅಮೀರ್ ಅಲಿ ಮಸೀದಿಯ ಇಮಾಮ್ ಮೌಲಾನ ರಿಯಾಝುಲ್ ಹಖ್ ಈದ್ ನಮಾಝ್ ಬಗ್ಗೆ ಮಾಹಿತಿ ನೀಡಿದರು.
ಸೌಹಾರ್ದ ಸಭೆ
ಈದ್ ನಮಾಝ್ ಬಳಿಕ ಮಸೀದಿ ಆವರಣದಲ್ಲಿ ಸರ್ವಧರ್ಮೀಯ ಗಣ್ಯರ ಸಮ್ಮುಖ ಸೌಹಾರ್ದ ಸಭೆ ನಡೆಯಿತು. ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ನಮಾಜು ನಡೆಯಿತು., ಮುಸ್ಲಿಮರು ಪರಸ್ಪರ ಶುಭಾಶಯ ಕೋರಿದರು. ಕೆಥೊಲಿಕ್ ಸಭಾದವರು ಜಾಮಿಯ ಮಸೀದಿಗೆ ತೆರಳಿ ಹಬ್ಬದ ಶುಭಾಶಯ ಕೋರಿದರು. ಕಾಸರಗೋಡು ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಈದುಲ್ ಫಿತ್ರ ಹಬ್ಬ ನಡೆಯಿತು.
ವಿಶೇಷ ವ್ಯವಸ್ಥೆ
ಬಾವುಟಗುಡ್ಡೆ ಈದ್ಗಾದಲ್ಲಿ ನಮಾಝ್ಗೆ ಚಪ್ಪರ ಮೂಲಕ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಸಂಚಾರ ನಿಯಂತ್ರಿಸಿ ವಿಶೇಷ ಬಂದೋಬಸ್ತ್ ಏರ್ಪಡಿಸಿದ್ದರು. ವಿವಿಧೆಡೆ ಮುಸ್ಲಿಂ ಬಾಂಧವರು ಸಿಹಿ ಹಂಚಿ ಸಂಭ್ರಮಿಸಿದರು.
ಶಾಂತಿ, ಸಹೋದರತ್ವದ ಹಬ್ಬ : ಖಾದರ್
ಸಚಿವ ಯು.ಟಿ. ಖಾದರ್ ಮಾತನಾಡಿ, ಈದುಲ್ ಫಿತ್ರ ಶಾಂತಿ, ಸಹೋದರತೆ, ಏಕತೆ, ಪರಸ್ಪರ ಸಹಕಾರ ಹಾಗೂ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವಂತಹ ಮೌಲ್ಯಾಧಾರಿತ ಸಂದೇಶ ಸಾರುವ ಹಬ್ಬ ಎಂದು ಹೇಳಿದರು.
ಒಂದು ತಿಂಗಳ ಉಪವಾಸದ ಸಂದರ್ಭ ಅನುಸರಿಸಿದ ಶಾಂತಿ, ಸಹನೆಯ ಗುಣಗಳನ್ನು ಮುಂದೆಯೂ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು; ಈ ದಿಶೆಯಲ್ಲಿ ಹಬ್ಬ ಆಚರಣೆ ಪ್ರೇರಣೆ ಒದಗಿಸಲಿ ಎಂದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ, ಝೀನತ್ ಬಕ್ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ವೈ. ಅಬ್ದುಲ್ಲ ಕುಂಞಿ ಹಬ್ಬದ ಸಂದೇಶ ನೀಡಿದರು. ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಈದ್ ಹಬ್ಬದ ಶುಭಾಶಯ ಸಲ್ಲಿಸಿದರು. ಮಾಜಿ ಶಾಸಕ ಜೆ.ಆರ್.ಲೋಬೊ, ಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲ ರೆ| ಡಾ| ಪ್ರವೀಣ್ ಮಾರ್ಟಿಸ್, ಡಿಸಿಪಿ ಹನುಮಂತರಾಯ ಮೊದಲಾದವರು ಉಪಸ್ಥಿತರಿದ್ದರು. ಝೀನತ್ ಬಕ್ ಮಸೀದಿಯ ಟ್ರಸ್ಟಿ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.