ಸಂಸದರ ಆದರ್ಶ ಗ್ರಾಮದಲ್ಲೆ ಚುನಾವಣೆ ಬಹಿಷ್ಕಾರದ ಅಪಸ್ವರ!
Team Udayavani, Apr 5, 2018, 11:23 AM IST
ಸುಬ್ರಹ್ಮಣ್ಯ: ಸಂಸದರ ಆದರ್ಶ ಗ್ರಾಮ ಬಳ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ಚುನಾವಣೆಗೆ ಅಪಸ್ವರ ಕೇಳಿ ಬಂದಿದೆ. ಗ್ರಾಮದಲ್ಲಿ ಪ್ರತ್ಯೇಕ ಭಾಗಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸಿಲ್ಲ ಎಂದು ಎರಡೂ ಭಾಗದ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ. ರಸ್ತೆ ಅಭಿವೃದ್ಧಿಪಡಿಸದೆ ನಿರ್ಲಕ್ಷಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸಿ, ‘ಈ ಚುನಾವಣೆಯಲ್ಲಿ ನಾವು ಮತ ನೀಡುವುದಿಲ್ಲ, ನೋಟಾ ಚಲಾಯಿಸುತ್ತೇವೆ’ ಎಂಬ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ರಸ್ತೆ ಅಭಿವೃದ್ಧಿ ಆಗಿಲ್ಲ
ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಸಂಚಾರದ ಮಧ್ಯೆ ಬಳ್ಪ ಗ್ರಾಮವಿದೆ. ಇದು ಸಂಸದರ ಆದರ್ಶ ಗ್ರಾಮವೂ ಆಗಿದೆ. ಬಳ್ಪ ಪೇಟೆಯಿಂದ ಸ್ವಲ್ಪ ಮುಂದಕ್ಕೆ ಸಿಗುವ ಅಡ್ಡಬೈಲು ಎಂಬಲ್ಲಿಂದ ಬಲಭಾಗಕ್ಕೆ ಬೀದಿಗುಡ್ಡೆಗೆ ತೆರಳುವ ರಸ್ತೆಯಲ್ಲಿ ಸಾಗಿದರೆ ಕಾಯರ್ತಡ್ಕ ಜಂಕ್ಷನ್ ಸಿಗುತ್ತದೆ. ಇಲ್ಲಿಂದ ಕವಲೊಡೆದು ಪ್ರತ್ಯೇಕವಾಗಿ ಎಡಕ್ಕೆ ತೆರಳುವ ಕಾಯರ್ತಡ್ಕ-ನೇಲ್ಯಡ್ಕ ರಸ್ತೆ ಹಾಗೂ ಬಲಭಾಗಕ್ಕೆ ತೆರಳುವ ಪೇರಳ ಕಟ್ಟೆ-ಕೊರಿಯಾರ್-ಕಣ್ಕಲ್-ಬಟ್ರಾಪ್ಪಾಡಿ ರಸ್ತೆಗಳು ಬಹುಕಾಲದಿಂದ ಅಭಿವೃದ್ಧಿಗೆ ಕಾಯುತ್ತಿವೆ. ಈ ರಸ್ತೆ ಅಭಿವೃದ್ಧಿ ಮಾಡಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣ.
ಕಾಯರ್ತಡ್ಕ-ನೇಲ್ಯಡ್ಕ ರಸ್ತೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸುವಂತೆ ಇಲ್ಲಿಯವರು ಒತ್ತಾಯಿಸುತ್ತಾ ಬಂದಿದ್ದರು. ಅವರ ಒತ್ತಾಯಕ್ಕೆ ಬೆಲೆ ಸಿಗದಿರುವ ಕುರಿತು ಸ್ಥಳಿಯರು ಅಸಮಧಾನ ಹೊಂದಿದ್ದಾರೆ. ರಸ್ತೆ ಅಭಿವೃದ್ಧಿ ನಿರ್ಲಕ್ಷಿಸಿದ ಪರಿಣಾಮ ಪೆರಂಬುಡ, ನೇಲ್ಯಡ್ಕ, ಬಡ್ಡಕೋಟಿ, ಕೆರೆಕ್ಕೋಡಿ, ಕಣ್ಕಲ್, ಕುದ್ಕುರಿ, ಕೆಮ್ಮಟೆ ಬಂಟ್ರಮೂಲೆ ಭಾಗದ ನಿವಾಸಿಗಳಿಗೆ ನಿತ್ಯ ಓಡಾಟಕ್ಕೆ ಅಡ್ಡಿಯಾಗುತ್ತಿದೆ.
ಸುಮಾರು ನಾಲ್ಕು ಕಿ.ಮೀ. ರಸ್ತೆಯ ಪೈಕಿ ಒಂದು ಕಡೆ ಮಾತ್ರ ಜಿ.ಪಂ. ಸದಸ್ಯರ 2 ಲಕ್ಷ ರೂ. ಅನುದಾನದಲ್ಲಿ ಇತ್ತೀಚೆಗೆ ಅಲ್ಪ ಪ್ರಮಾಣದ ಕಾಂಕ್ರೀಟ್ ಕಾಮಗಾರಿ ಮಾಡಿದ್ದು ಬಿಟ್ಟರೆ, ಉಳಿದಂತೆ ಕಚ್ಚಾ ರಸ್ತೆ ತೀರಾ ಹದಗೆಟ್ಟಿದೆ. ನೇಲ್ಯಡ್ಕ ಎಂಬಲ್ಲಿ ಪರಿಶಿಷ್ಟ ಜಾತಿ ಕಾಲನಿ ಸಹಿತ ನೂರಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಸರಕಾರಿ ಶಾಲೆಯೂ ಇದೆ. ರಸ್ತೆ ಅಭಿವೃದ್ಧಿ ಆಗದೆ ಓಡಾಟಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಸ್ಥಳೀಯರು ಪ್ರತಿಭಟನೆಗೆ ಇಳಿದಿದ್ದಾರೆ.
ಕಾಯರ್ತಡ್ಕ ಜಂಕ್ಷನ್‌ನಿಂದ ಬಲಭಾಗಕ್ಕೆ ತೆರಳುವ ಪೇರಳಕಟ್ಟೆ-ಕೊರಿಯಾರ್ -ಕಣ್ಕಲ್-ಬಟ್ರಾಪ್ಪಾಡಿ ರಸ್ತೆ ಸ್ಥಿತಿಯೂ ಇದೇ ಆಗಿದೆ. ನಾಲ್ಕು ಕಿ.ಮೀ. ಉದ್ದದ ಈ ಕಚ್ಚಾ ರಸ್ತೆ ಐದು ಕಡೆ ಅಲ್ಪಸ್ವಲ್ಪ ಕಾಂಕ್ರೀಟ್ ಕಂಡಿದೆ. ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ ಎಂಬ ಮುನಿಸು ಇಲ್ಲಿಯವರದ್ದು. ಈ ಭಾಗದಲ್ಲಿ ಸರಕಾರಿ ಶಾಲೆ ಹಾಗೂ ಪರಿಶಿಷ್ಟ ಜಾತಿಯವರ ಕಾಲನಿ ಇದೆ.
ಪೇರಳಕಟ್ಟೆ, ಕಾಯಂಬಾಡಿ ಮಾತ್ರವಲ್ಲ ಈ ರಸ್ತೆ ಮೂಲಕ ಕುಮಾರಧಾರಾ ನದಿಯನ್ನು ಓಡತಕಡಪು ಎಂಬಲ್ಲಿ ದಾಟಿ ಮರ್ದಾಳ ಮೂಲಕ ದೂರದೂರಿಗೆ ತೆರಳಲು ಹತ್ತಿರದ ದಾರಿಯಾಗಿದೆ. ಈ ರಸ್ತೆಯಲ್ಲಿ ಬಳ್ಪ, ಯೇನೆಕಲ್, ಪಂಜ ಭಾಗದವರೂ ಓಡಾಡುತ್ತಿದ್ದು, ಅವಶ್ಯವಾಗಿ ಅಭಿವೃದ್ಧಿ ಆಗಬೇಕಿದೆ. ಆದರ್ಶ ಗ್ರಾಮದಲ್ಲಿ ಎರಡೂ ರಸ್ತೆಗಳು ಹಾದುಹೋಗುತ್ತಿದ್ದರೂ ಅಭಿವೃದ್ಧಿಗೊಳಿಸದೆ ಬಾಕಿ ಉಳಿಸಿಕೊಂಡಿರುವ ಕುರಿತು ಜನರಲ್ಲಿ ನೋವಿದೆ. ಹೀಗಾಗಿ ಮತದಾನದ ವೇಳೆ ನೋಟಾ ಚಲಾವಣೆಯ ಸಾಮೂಹಿಕ ನಿರ್ಧಾರಕ್ಕೆ ಬಂದಿದ್ದಾರೆ.
ರಾಜಕೀಯ ಕೆಸರೆರಚಾಟ
ಸಂಸದ ನಳಿನ್‌ಕುಮಾರ್ ಕಟೀಲು ಅವರು ಬಳ್ಪವನ್ನು ಆದರ್ಶ ಗ್ರಾಮವೆಂದು ಆಯ್ಕೆ ಮಾಡಿ, ಅಭಿವೃದ್ಧಿಗೊಳಿಸಲು ಮುಂದಾಗಿದ್ದರು. ಸಂಘ-ಸಂಸ್ಥೆಗಳ ನೆರವಿನಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರು. ಆದರೂ ಮೂಲಸೌಕರ್ಯ ನಿರೀಕ್ಷಿತ ಪ್ರಮಾಣದಲ್ಲಿ ಒದಗದಿರುವ ಕುರಿತು ಸ್ಥಳೀಯರಲ್ಲಿ ಅಸಮಾಧಾನವಿದೆ. ಪ್ರಮುಖವಾಗಿ ಓಡತಕಡಪು ಎಂಬಲ್ಲಿ ಕಡಬ ಭಾಗವನ್ನು ಸಂಪರ್ಕಿಸಲು ಸೇತುವೆ ನಿರ್ಮಾಣ ಆಗಬೇಕಿದೆ. ಆದರ್ಶ ಗ್ರಾಮದಲ್ಲಿ ‘ನೋಟಾ’ ಚಲಾಯಿಸುವುದಾಗಿ ಗ್ರಾಮಸ್ಥರು ಬ್ಯಾನರ್‌ಗಳನ್ನು ಹಾಕಿದ್ದು, ಸಂಸದರು ಹಾಗೂ ಬಿಜೆಪಿಗೆ ಮುಜುಗರದ ಸನ್ನಿವೇಶ ಸೃಷ್ಟಿಸಿದೆ. ಈ ಮೂಲಕ ಅದು ರಾಜಕೀಯ ಕೆಸರೆರಚಾಟಕ್ಕೂ ವಸ್ತುವಾಗುವ ಸಾಧ್ಯತೆ ಇದೆ.
ವಿಂಗಡಿಸಿ ಹಂಚಲಾಗಿದೆ
ಗ್ರಾ.ಪಂ. ಅನುದಾನ ಸಹಿತ ಇತರೆ ಇಲಾಖೆಗಳ ಲಭ್ಯ ಅನುದಾನದಲ್ಲಿ ವಿಂಗಡಿಸಿ ಆ ಭಾಗದ ರಸ್ತೆಗಳಿಗೆ ಇರಿಸಲಾಗಿದೆ. ಕೆಲವು ಕಡೆಗಳಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿದೆ. ರಸ್ತೆಗಳ ಪೂರ್ಣ ಅಭಿವೃದ್ಧಿಗೆ ಹೆಚ್ಚು ಅನುದಾನ ಬೇಕಿದೆ.
-ಗಂಗಯ್ಯ,
ಬಳ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ
(ಪ್ರಭಾರ)
ಅಧಿಕಾರಿಗಳೇ ಬರಬೇಕು
ರಸ್ತೆ ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದೇವೆ. ಯಾರೊಬ್ಬರೂ ಅದರ ಕುರಿತು ಗಮನ ಹರಿಸಿಲ್ಲ. ಆದರ್ಶ ಗ್ರಾಮ ನೆಪಕ್ಕಷ್ಟೇ ಆಗಿದೆ. ಮೂಲ ಸೌಕರ್ಯಗಳು ಈಡೇರಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಲಿಖಿತವಾಗಿ ಭರವಸೆ ನೀಡಿದಲ್ಲಿ ಮಾತ್ರ ಮತ ಹಕ್ಕು ಚಲಾಯಿಸುತ್ತೇವೆ.
– ನೊಂದ ಫಲಾನುಭವಿಗಳು
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.