ಚುನಾವಣೆ ನೀತಿ ಸಂಹಿತೆ ಪ್ರಭಾವ: ಕಾಮಗಾರಿ ಕುಂಠಿತ
Team Udayavani, May 16, 2019, 6:00 AM IST
ವಿಟ್ಲ: 2019ನೇ ಸಾಲಿನ ಮಾ. 10ರಂದು ಲೋಕಸಭೆ ಚುನಾವಣೆಯ ದಿನಾಂಕ ಮತ್ತು ಜತೆಯಲ್ಲೇ ನೀತಿಸಂಹಿತೆ ಘೋಷಣೆಯಾಗಿತ್ತು. ನೀತಿಸಂಹಿತೆ ಪ್ರಭಾವದಿಂದ, ಎಲ್ಲ ಕಾಮಗಾರಿಗಳು ಕುಂಠಿತಗೊಂಡು, ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ. ಅನಿವಾರ್ಯವಾಗಿ ನೀರಿಗೆ ಸ್ಪಂದಿಸಲಾಗುತ್ತಿದೆ. ಇನ್ನಾವುದೇ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತಿಲ್ಲ ಅಥವಾ ಹೊಸ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿಲ್ಲ. ಈ ಮಧ್ಯೆ ಸ್ಥಳೀಯ ಸಂಸ್ಥೆಯ ಚುನಾವಣೆಯೂ ಘೋಷಣೆಯಾಗಿರುವುದರಿಂದ ನೀತಿಸಂಹಿತೆ ಮುಂದುವರಿಯಲಿದೆ. ಪರಿಣಾಮವಾಗಿ ಹೊಸ ಯೋಜನೆಗಳು ಜಾರಿಗೆ ಬರಲಾರದು. ಇದು ತೀವ್ರ ಹಿನ್ನಡೆಗೆ ಕಾರಣವಾಗಿದೆ ಎಂದು ನಾಗರಿಕರು ಆಡಿಕೊಳ್ಳುತ್ತಿದ್ದಾರೆ.
ಸಾಮಾನ್ಯ ಸಭೆ ಇಲ್ಲ
ಗ್ರಾಮ ಪಂಚಾಯತ್ ಸಾಮಾನ್ಯ ಸಭೆ, ತಾ.ಪಂ. ಸಭೆ, ಜಿ.ಪಂ. ಸಭೆ ಗಳೂ ನಡೆಯುತ್ತಿಲ್ಲ. ಯಾವುದೇ ನಿರ್ಧಾರ ಗಳನ್ನು ಕೈಗೊಳ್ಳಲಾಗುತ್ತಿಲ್ಲ. ಜನ ಸಾಮಾನ್ಯರ ಅರ್ಜಿಯನ್ನೂ ಸ್ವೀಕರಿಸಿ ಕ್ರಮ ಕೈಗೊಳ್ಳುವಂತಿಲ್ಲ. ಇದು ಆಡಳಿತ ವ್ಯವಸ್ಥೆಗೆ ಕಗ್ಗಂಟಾಗಿದೆ. ಪಂಚಾಯತ್ ಪಿಡಿಒ, ಕಂದಾಯ ಇನ್ನಿತರ ಎಲ್ಲ ಸರಕಾರಿ ಇಲಾಖಾಧಿಕಾರಿಗಳಿಗೆ ಸ್ಥಳೀಯ ಆಡಳಿತ ವ್ಯವಸ್ಥೆಯತ್ತ ಗಮನಹರಿಸಲಾಗುತ್ತಿಲ್ಲ. ಎಂದು ಗ್ರಾ.ಪಂ.ಅಧ್ಯಕ್ಷರುದೂರುತ್ತಾರೆ. ಇದೀಗ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಬಳಸುವ ಸಮಯ. ಆದರೆ ಈ ಅನುದಾನದ ಯೋಜನೆ ರೂಪಿಸಲು, ಕಾಮಗಾರಿ ಆಯ್ಕೆ ಮಾಡುವುದಕ್ಕೆ ನೀತಿಸಂಹಿತೆಯೇ ಅಡ್ಡಿಯಾಗಿದೆ. ಪರಿಣಾಮವಾಗಿ ನಾಗರಿಕರಿಗೆ ಕಿರಿಕಿರಿಯುಂಟಾಗಿದೆ.
ರಸ್ತೆ ಕಾಮಗಾರಿ ಮುಂದುವರಿದಿದೆ
ಚುನಾವಣೆ ಪೂರ್ವದಲ್ಲಿ ಆರಂಭವಾದ ರಸ್ತೆ ಕಾಮಗಾರಿಗಳು ಮುಂದುವರಿದಿವೆ. ಕೆಲವೊಂದು ಪೂರ್ತಿಯಾಗಿವೆ. ಆದರೆ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗುತ್ತಿಲ್ಲ. ಕಾರಣ ನೀತಿಸಂಹಿತೆ! ಆದರೆ ಮಳೆಗಾಲದ ಸಿದ್ಧತೆಗೆ ಇಲಾಖೆ ಈಗಾಗಲೇ ಟೊಂಕ ಕಟ್ಟಿದೆ. ಅಧಿಕಾರಿಗಳು ಪ್ರತ್ಯೇಕ ಸಭೆ ಏರ್ಪಡಿಸಿ, ಚರ್ಚಿಸಿ, ಪೂರ್ವಸಿದ್ಧತೆ ಮಾಡತೊಡಗಿದ್ದಾರೆ.
ಮೇ 23ರಂದು ನೀತಿಸಂಹಿತೆ ಕೊನೆಯ ಹಂತವನ್ನು ತಲುಪಲಿದ್ದು, ಆ ಬಳಿಕ ಎಲ್ಲ ಕಾಮಗಾರಿಗಳೂ ವೇಗವನ್ನು ಪಡೆಯಲಿವೆ. ಈಗಾಗಲೇ ಇಲಾಖೆಗಳಲ್ಲಿ ಕಾರ್ಯಾರಂಭದ ಒತ್ತಡ ಆರಂಭವಾಗಿವೆ ಎಂದು ಲೋಕೋಪಯೋಗಿ ಇಲಾಖಾಧಿಕಾರಿಗಳು ತಿಳಿಸುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.