![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Nov 23, 2021, 6:50 AM IST
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕ್ಷೇತ್ರದಿಂದ ವಿಧಾನಪರಿಷತ್‌ನ ಎರಡು ಸ್ಥಾನಗಳಿಗೆ ಡಿ. 10ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಮಾಜಿ ಉಪಾಧ್ಯಕ್ಷ, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದಾಗಿ ಕಳೆದ ಕೆಲವು ದಿನಗಳಿಂದ ತಲೆದೋರಿದ್ದ ಕುತೂಹಲಕ್ಕೆ ತೆರೆಬಿದ್ದಿದೆ.
ದ.ಕ.-ಉಡುಪಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಅವಕಾಶ ಬಯಸಿ 11 ಮಂದಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಇನ್ನೊಂದು ಹೆಸರು ಸೇರ್ಪಡೆಯಾಗಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಹೊಸ ತಿರುವು ಪಡೆದುಕೊಂಡಿತ್ತು ಹಾಗೂ ಪಕ್ಷದ ಟಿಕೇಟಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಮಂಜುನಾಥ ಭಂಡಾರಿ ಅವರನ್ನು ಪಕ್ಷ ಆಯ್ಕೆ ಮಾಡಿದೆ.
ಇದನ್ನೂ ಓದಿ:ವಿಜಯಪುರ: ಪಕ್ಷೇತರ ಸ್ಪರ್ಧೆಯ ಭೀತಿ; ಸುನಿಲ ಗೌಡಗೆ ಕಾಂಗ್ರೆಸ್ ಟಿಕೇಟ್
ಮಂಗಳೂರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಾಗಿರುವ ಭಂಡಾರಿ ಅವರು ಎಂಜಿನಿಯರಿಂಗ್ ಪದವೀಧರಾಗಿದ್ದು ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಹಾಗೂ ಪಂಚಾಯತ್‌ರಾಜ್ ವ್ಯವಸ್ಥೆಯ ಬಗ್ಗೆ ಮಂಡಿಸಿರುವ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಈ ಹಿಂದೆ 2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚಿಕ್ಕಮಗಳೂರು ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷರಾಗಿ, ಯುವಕಾಂಗ್ರೆಸ್ ಅಖೀಲ ಭಾರತ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ನಾಮಪತ್ರ: ಇಂದು ಕೊನೆಯ ದಿನ
ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದೆ. ದ.ಕ.-ಉಡುಪಿ ಕ್ಷೇತ್ರದಿಂದ ಪರಿಷತ್‌ನ 2 ಸ್ಥಾನಗಳಿಗೆ ಈವರೆಗೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಪ್ರೀತ್ ಕುಮಾರ್ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ.
ನ. 24ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ನ. 26ರಂದು ಹಿಂದೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ.
You seem to have an Ad Blocker on.
To continue reading, please turn it off or whitelist Udayavani.