ವಿದ್ಯುತ್ ಖೋತಾ: ಡಿಸೆಂಬರ್‌ನಿಂದ ಲೋಡ್ ಶೆಡ್ಡಿಂಗ್ ಭೀತಿ
Team Udayavani, Nov 16, 2017, 3:42 PM IST
ಸುಳ್ಯ: ಬೇಸಗೆ ಬಿಸಿಲಿನ ತೀವ್ರತೆ ಏರುತ್ತಿದ್ದ ಹಾಗೇ ಸುಳ್ಯಕ್ಕೆ ವಿದ್ಯುತ್ ಅಭಾವದ ಬಿಸಿ ತಟ್ಟುವ ದಿನಗಳು ಹತ್ತಿರದಲ್ಲಿವೆ ಎಂದರ್ಥ. ಬಿಸಿಲು ಇದೇ ತೆರನಾಗಿ ಮುಂದುವರಿದರೆ, ಡಿಸೆಂಬರ್ ಪ್ರಥಮ ವಾರದಲ್ಲೇ ಕರೆಂಟ್ ಕಣ್ಣಾಮುಚ್ಚಾಲೆ ಕಟ್ಟಿಟ್ಟ ಬುತ್ತಿ. ಮೆಸ್ಕಾಂ ನೀಡಿದ ಮಾಹಿತಿ ಪ್ರಕಾರ, ಡಿಸೆಂಬರ್‌ನಿಂದ ತಾಲೂಕಿಗೆ ಪೂರೈಕೆಗೊಳ್ಳುವ ವಿದ್ಯುತ್ ಪ್ರಮಾಣದಲ್ಲಿ, 20
ಮೆಗಾ ವ್ಯಾಟ್ ವಿದ್ಯುತ್ ಕಡಿತಗೊಳ್ಳಲಿದೆ.
ಲೋಡ್ ಶೆಡ್ಡಿಂಗ್
ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಆಯಿತು ಅಂದರೆ ಪೂರೈಕೆಯಲ್ಲೂ ವ್ಯತ್ಯಯ ಆಗುತ್ತದೆ. ತಾಲೂಕು ಕೇಂದ್ರವಾಗಿದ್ದರೂ ಈಗಲೂ 33 ಕೆ.ವಿ. ಸಬ್‌ಸ್ಟೇಷನ್‌ನಲ್ಲಿ ದಿನ ದೂಡುತ್ತಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ಹೆಣಗಾಡುವ ಸ್ಥಿತಿ ಮೆಸ್ಕಾಂನದ್ದು.
ಡಿಸೆಂಬರ್‌ನಲ್ಲಿ ಮಳೆ ಬಾರದಿದ್ದರೆ, ಲೋಡ್ ಶೆಡ್ಡಿಂಗ್ ಅನಿವಾರ್ಯ. ಏಕೆಂದರೆ, ಕೃಷಿ ಪಂಪ್ ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಹರಿಸಬೇಕು. ಮನೆ ಸಂಪರ್ಕಕ್ಕೂ ಬೇಕು. ಬೇಡಿಕೆಗೆ ತಕ್ಕಂತೆ ಇವೆರೆಡಕ್ಕೆ ಸ್ಪಂದಿಸಲು ಇಲ್ಲಿ 110 ಕೆ.ವಿ. ಸಬ್ ಸ್ಟೇಷನ್ ವ್ಯವಸ್ಥೆಯೂ ಇಲ್ಲ, ಪೂರೈಕೆಯೂ ಇಲ್ಲ. ತ್ರಿಫೇಸ್ ಇಲ್ಲದೆ ತೋಟಕ್ಕೆ ನೀರಿಲ್ಲ, ಮನೆಗೆ ಕರೆಂಟಿಲ್ಲ ಎಂಬ ನೋವು ನಿರಂತರವಾಗಿದೆ.
ತಾಲೂಕಿನ ಸ್ಥಿತಿ
ತಾಲೂಕಿನಲ್ಲಿ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯದಲ್ಲಿ 33 ಕೆ.ವಿ. ಸಬ್ ಸ್ಟೇಷನ್‌ಗಳು, 18ಫೀಡರ್‌ಗಳಿವೆ. ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯಕ್ಕೆ ಪುತ್ತೂರು 110 ಕೆ.ವಿ. ಸಬ್ ಸ್ಟೇಷನ್‌ನಿಂದ ವಿದ್ಯುತ್ ಪೂರೈಸಲಾಗುತ್ತಿದೆ. ಸುಳ್ಯಕ್ಕೆ 22, ಬೆಳ್ಳಾರೆಗೆ 12, ಸುಬ್ರಹ್ಮಣ್ಯಕ್ಕೆ 5 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಕಳೆದ ಬಾರಿ ಬೆಳ್ಳಾರೆ ನೆಟ್ಟಮುಡ್ಲೂರು 220 ಕೆ.ವಿ.ಯಿಂದ ವಿದ್ಯುತ್ ಹರಿಸಲಾಗಿತ್ತು. ಇದರಿಂದ ಸುಳ್ಯದ ಹೊರೆ ಕೊಂಚ ಇಳಿದರೂ, ಲಾಭವಂತೂ ಇಲ್ಲ.
ಪೂರೈಕೆ ಕುಸಿತ
ತಾಲೂಕಿನಲ್ಲಿ 53 ಸಾವಿರಕ್ಕೂ ಅಧಿಕ ವಿದ್ಯುತ್ ಸಂಪರ್ಕಗಳಿವೆ. ಇದರಲ್ಲಿ 44 ಸಾವಿರ ಮನೆ, ವಾಣಿಜ್ಯ ಕಟ್ಟಡ, 12 ಸಾವಿರ ಕೃಷಿ ಪಂಪ್‌ಸೆಟ್‌ಗಳು ಸೇರಿವೆ. ಬೇಸಗೆಯಲ್ಲಿ ವಿದ್ಯುತ್ ಪೂರೈಕೆ ಕುಸಿತ ಕಾಣಲಿದ್ದು, ಸುಳ್ಯಕ್ಕೆ 15, ಬೆಳ್ಳಾರೆಗೆ 10 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಆಗಲಿದೆ. ಈಗಿರುವ ಕೊರತೆಯ ಜತೆಗೆ, ಬೇಸಗೆ ಕಾಲದ ಕೊರತೆಯೂ ಸೇರುತ್ತದೆ. ಪರಿಣಾಮ ಮುಂದಿನ ಮಳೆಗಾಲದ ತನಕ ಲೋಡ್ ಶೆಡ್ಡಿಂಗ್ ನೆಪದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಗ್ರಾಹಕರನ್ನು ಕಾಡುತ್ತದೆ.
ಆಗದ 110 ಕೆ.ವಿ. ಸಬ್‌ಸ್ಟೇಷನ್
ಇಡೀ ಸುಳ್ಯ ತಾಲೂಕಿಗೆ ವಿದ್ಯುತ್ ಪೂರೈ ಸುವುದು ಪುತ್ತೂರಿನ 110 ಕೆ.ವಿ. ಸಬ್‌ಸ್ಟೇಷನ್. ಸುಳ್ಯದಲ್ಲಿ 110 ಕೆ.ವಿ. ಸಬ್‌ಸ್ಟೇಷನ್ ನಿರ್ಮಾಣವಾದರೆ, ಪುತ್ತೂರಿನ ಹೊರೆ ಇಳಿಯುತ್ತದೆ. ಸುಳ್ಯಕ್ಕೂ 220 ಕೆ.ವಿ. ಸಬ್ ಸ್ಟೇಷನ್‌ನಿಂದ ನೇರ ವಿದ್ಯುತ್ ಹರಿಸಬೇಕು. ಇಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಸಂಗ್ರಹಿಸುವ ಸಾಮರ್ಥ್ಯವು ದೊರೆಯಲು ಸಾಧ್ಯವಿತ್ತು. 17 ವರ್ಷಗಳ ಹಿಂದೆ ಮಂಜೂರಾಗಿರುವ ಈ ಯೋಜನೆ ಸರ್ವೆ ಹಂತದಲ್ಲೇ ಮೊಟಕುಗೊಂಡಿದೆ.
ಲೈನ್ ಹಾದು ಹೋಗುವ ಮಾರ್ಗದಲ್ಲಿ ಕೃಷಿ ಭೂಮಿ ಮಾಲಕರ ಆಕ್ಷೇಪಣೆಗಳು ನ್ಯಾಯಾಲಯದಲ್ಲಿ ಇರುವುದು ವಿಳಂಬಕ್ಕೆ ಒಂದು ಕಾರಣವಾದರೆ, ಜನಪ್ರತಿನಿಧಿಗಳ ನಿರಾಸಕ್ತಿ ಮತ್ತೂಂದು ಪ್ರಮುಖ ಕಾರಣ.
ಲೈನ್ ಹಾದು ಹೋಗುವ ಮಾರ್ಗದ ಸರ್ವೆ ಕಾರ್ಯವನ್ನು ಕಳೆದ ವರ್ಷ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ನಡೆಸಿದ್ದರು. ಡಿ.ಸಿ. ಕೋರ್ಟ್‌ನಲ್ಲಿರುವ ಆಕ್ಷೇಪಣೆಗಳನ್ನು ತೆರವುಗೊಳಿಸುವ ಭರವಸೆ ನೀಡಿದ್ದರು. ಆದರೆ ಅವರ ವರ್ಗಾವಣೆ ಬಳಿಕ ಪ್ರಕ್ರಿಯೆ ಕುಂಠಿತಗೊಂಡಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಹಲವು ವರ್ಷಗಳಿಂದ ಬಿಜೆಪಿ-ಕಾಂಗ್ರೆಸ್ ಮಧ್ಯೆ ವಾಕ್ಸಮರ ನಡೆಯುತ್ತಿದೆ. ಚುನಾವಣೆ ಹತ್ತಿರದಲ್ಲಿರುವ ಕಾರಣ ಅದು ಇನ್ನಷ್ಟು ತೀವ್ರಗೊಳ್ಳಬಹುದು ಹೊರತು, ಅದರಿಂದ ತಾಲೂಕಿಗೆ ನಯಾಪೈಸೆ ಲಾಭವಿಲ್ಲ
ಸಚಿವರಿಗೆ ಕರೆ
ಪದೇ-ಪದೇ ವಿದ್ಯುತ್ ಕಡಿತದಿಂದ ಬೇಸತ್ತು ಕಳೆದ ಬಾರಿ ಬೆಳ್ಳಾರೆಯಲ್ಲಿ ಗ್ರಾಹಕರೊಬ್ಬರು ಇಂಧನ ಸಚಿವರಿಗೆ ಕರೆ ಮಾಡಿ, ಬಂಧನಕ್ಕೆ ಒಳಗಾದ ಪ್ರಕರಣವೊಂದು ರಾಷ್ಟ್ರಮಟ್ಟದಲ್ಲೇ ಸುದ್ದಿಯಾಗಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಸುಳ್ಯದ ಕತ್ತಲು ಬವಣೆ ದೂರ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕಳೆದ ಬಾರಿಯ ಕತ್ತಲು ಭಾಗ್ಯ ಈ ಬಾರಿಯು ಮರುಕಳಿಸಲಿದೆ.
ಲೋಡ್ ಶೆಡ್ಡಿಂಗ್ ಅನಿವಾರ್ಯ
ಇಲ್ಲಿಯ ತನಕ ಸಮಸ್ಯೆ ಆಗಿಲ್ಲ. ಡಿಸೆಂಬರ್‌ನಲ್ಲಿ ಮಳೆ ಬಾರದಿದ್ದರೆ ವಿದ್ಯುತ್ ಪೂರೈಕೆ ಕಡಿಮೆ ಆಗಲಿದೆ. ಲೋಡ್
ಶೆಡ್ಡಿಂಗ್ ಅನಿವಾರ್ಯ. ಕೃಷಿ ಆವೃತ್ತ ಪ್ರದೇಶ ಇದಾಗಿರುವುದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಬೇಕಿದೆ.
– ದಿವಾಕರ,
ಎ.ಇ., ಮೆಸ್ಕಾಂ, ಸುಳ್ಯ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.