ತೋಟಗಳಿಗೆ ಕಾಡಾನೆ ಲಗ್ಗೆ : ಕೃಷಿಕರು ಕಂಗಾಲು!
Team Udayavani, Aug 6, 2018, 10:13 AM IST
ಸುಳ್ಯ : ಹಲವು ವರ್ಷಗಳಿಂದ ಆನೆ ದಾಳಿಗೆ ತತ್ತರಿಸಿರುವ ತಾಲೂಕಿನ ವಿವಿಧ ಭಾಗದ ಕೃಷಿ ತೋಟಗಳಲ್ಲಿ ನಿಯಂತ್ರಣ ರೇಖೆ ದಾಟಿ ಕಾಡಾನೆಗಳು ಮತ್ತೆ-ಮತ್ತೆ ನುಸುಳುತ್ತಿವೆ. ಒಂದು ವಾರದಿಂದ ಮೇನಾಲ, ಆಲೆಟ್ಟಿ, ಹಾಸ್ಪರೆ, ತುದಿಯಡ್ಕ ಮೊದಲಾದ ಪ್ರದೇಶಗಳ ಕೃಷಿ ತೋಟಗಳಿಗೆ ಲಗ್ಗೆ ಇಟ್ಟು, ಕೃಷಿ ನಷ್ಟ ಉಂಟು ಮಾಡಿದೆ. ಕೊಳೆರೋಗದ ಚಿಂತೆಯಲ್ಲಿರುವ ಕೃಷಿಕರಿಗೆ ಆನೆ ಕಾಟ ನಿದ್ದೆಗೆಡಿಸಿದೆ. ಆರು ತಿಂಗಳ ಹಿಂದೆ ಕಾಡಾನೆ ಅಟ್ಟುವ ಕಾರ್ಯಾಚರಣೆ ನಡೆದ ಅನಂತರ ಕೃಷಿ ತೋಟ ಕೊಂಚ ನಿರಾಳವಾಗಿತ್ತು. ಈಗ ಮತ್ತೆ ಅಂತಹ ಆತಂಕ ಕಾಡಿದೆ.
ಬಗೆಹರಿಯದ ಸಮಸ್ಯೆ
ಸಂಪಾಜೆ, ಅರಂತೋಡು, ಆಲೆಟ್ಟಿ, ಮಂಡೆಕೋಲು, ಮರ್ಕಂಜ, ಮಡಪ್ಪಾಡಿ, ಕಲ್ಮಕಾರು, ಕೊಲ್ಲಮೊಗ್ರು ಮೊದಲಾದ ಆನೆ ಬಾಧಿತ ಪ್ರದೇಶಗಳಲ್ಲಿ ವರ್ಷದ ಹಲವು ದಿನಗಳಲ್ಲಿ ಆನೆ ಕಾಟ ಸಾಮಾನ್ಯವಾಗಿದೆ. ಅರಣ್ಯ ಇಲಾಖೆ ಸಾಂಪ್ರದಾಯಿಕ ಪರಿಕರಗಳ ಮೂಲಕ ತಡೆ ಒಡ್ಡುವ ಪ್ರಯತ್ನ ನಡೆಸಿದ್ದರೂ ಅದರಿಂದ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಬಾಳೆ, ಅಡಿಕೆ, ತೆಂಗಿನ ತೋಟದಲ್ಲಿ ಫಸಲು ಭರಿತ ಗಿಡಗಳು ಆನೆ ದಾಳಿಗೆ ನಲುಗುತ್ತಿವೆ.
ಸೌರ ಬೇಲಿ
ಎರಡು ವರ್ಷಗಳ ಹಿಂದೆ ಭಸ್ಮಡ್ಕ ಬಳಿ ಕಾಡಾನೆ ಹಿಂಡು ಲಗ್ಗೆ ಇಟ್ಟಿತ್ತು. ನಗರದೊಳಗೆ ನುಸುಳಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದ ಜನಪ್ರತಿನಿಧಿಗಳು ಸೌರವಿದ್ಯುತ್ ಬೇಲಿ, ರೈಲ್ವೇ ಹಳಿ ಕಂಬ ಮೊದಲಾದ ಸುರಕ್ಷಾ ಕ್ರಮದ ಬಗ್ಗೆ ಭರವಸೆಯ ಮಳೆ ಹರಿಸಿದ್ದರು. ಅದು ಇನ್ನೂ ಈಡೇರಿಲ್ಲ. ಸೌರಬೇಲಿ ಅಳವಡಿಕೆ ವೆಚ್ಚ ದುಬಾರಿ ಆಗಿರುವ ಕಾರಣ ಕೃಷಿಕರ ಪಾಲಿಗದು ತ್ರಾಸವೆನಿಸಿತ್ತು. ಅರ್ಧ ಹಣ ಸಬ್ಸಿಡಿ ರೂಪದಲ್ಲಿ ಒದಗಿಸುವ ಭರವಸೆ ನೀಡಿ ದ್ದರೂ, 1 ಕಿ.ಮೀ. ಉದ್ದದ ಬೇಲಿಗೆ 1.15 ಲಕ್ಷ ರೂ. ವೆಚ್ಚವನ್ನು ಕೃಷಿ ಕರು ಭರಿಸುವುದು ಕಷ್ಟ.
ಗರ್ನಲ್ ಗತಿ
ಅರಣ್ಯ ಪ್ರದೇಶದಿಂದ ಕೃಷಿ ತೋಟಕ್ಕೆ ಕಾಡಾನೆ ಬಂದರೆ, ಅರಣ್ಯ ಇಲಾಖೆ ಬಳಿ ಆನೆ ಓಡಿಸಲು ಇರುವುದು ಗರ್ನಲ್ ಮಾತ್ರ. ಬೆಂಕಿ ಹಚ್ಚಿ ಓಡಿಸುವ ತಂತ್ರಗಾರಿಕೆ ಇನ್ನೊಂದೆಡೆ. ಇವೆರಡು ಹಳೆ ತಂತ್ರ ಬಿಟ್ಟರೆ ಹೊಸತೇನು ಇಲ್ಲ. ಹಾಗಾಗಿ ಕೃಷಿ ತೋಟಕ್ಕೆ ಆನೆ ಬಂದರೆ ಸ್ವತಃ ರೈತರೇ ಈ ತಂತ್ರ ಅನುಸರಿಸಬಹುದು. ಇಲ್ಲಿ ಅರಣ್ಯ ಇಲಾಖೆ ಸಿಬಂದಿ ಬಂದರೂ, ಹೆಚ್ಚೇನು ಪ್ರಯೋಜನ ಆಗದು ಅನ್ನುತ್ತಾರೆ ಕೃಷಿಕರು.
ಆನೆ ಅಗರ್
ಆನೆ ಅಗರ್ ಅಳವಡಿಸಿದ ಕಾಡಿನ ಬದಿಗಳಲ್ಲಿ ಒಂದಷ್ಟು ನಿಯಂತ್ರಣ ಸಾಧ್ಯವಾಗಿದೆ ಅನ್ನುವುದು ಇಲಾಖೆಯ ವಾದ. ಕೆಲವೆಡೆ ಆನೆ ಅಗರ್ ದಾಟಿದ್ದೂ ಇದೆ ಅನ್ನುತ್ತಾರೆ ಕೃಷಿಕರು. ಅರಣ್ಯ ಭಾಗದಲ್ಲಿ ಮನೆಗಳಿಗೆ ರಸ್ತೆ ಸಂಪರ್ಕ ಇರುವ, ತೋಡು ಹರಿದು ಹೋಗಿರುವ ಕಡೆಗಳಲ್ಲಿ ಆನೆ ನಿಯಂತ್ರಣ ಅರಣ್ಯ ಇಲಾಖೆಯ ಮತ್ತು ಕೃಷಿಕರ ಪಾಲಿಗೆ ಸಾಧ್ಯವಾಗುತ್ತಿಲ್ಲ. ಅಲ್ಲಿ ಚೂಪಾದ ಕಬ್ಬಿಣದ ಸಲಕರಣೆ ಅಳವಡಿಸುವ ಪ್ರಸ್ತಾಪ ಅರಣ್ಯ ಇಲಾಖೆ ಮುಂದಿರಿಸಿದ್ದರೂ ಅದಿನ್ನೂ ಕಾರ್ಯಗತವಾಗಿಲ್ಲ.
ಸಮಸ್ಯೆ ಆಲಿಸುವವರಿಲ್ಲ
ಪ್ರತಿ ವರ್ಷ ಆನೆ ಕಾಟ ತಪ್ಪುತ್ತಿಲ್ಲ. ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನ ಆಗುತ್ತಿಲ್ಲ. ಬೆಳೆ ನಷ್ಟದಿಂದ ಕೃಷಿಕರು ಸಂಕಷ್ಟಕ್ಕೆ ಈಡಾಗಿದ್ದಾರೆ.
– ಕೃಪಾಶಂಕರ ತುದಿಯಡ್ಕ ಕೃಷಿಕರು
ಪರಿಣಿತ ತಂಡದ ಬಳಕೆ
ಆರು ತಿಂಗಳ ಹಿಂದೆ ಆನೆ ಅಟ್ಟುವ ಕಾರ್ಯಾಚರಣೆ ಅನಂತರ ಈಗ ಮತ್ತೆ ಕೃಷಿ ತೋಟಕ್ಕೆ ಬಂದಿದೆ. ಮರಳಿ ಕಾಡಿಗೆ ಅಟ್ಟಲು ಪ್ರಯತ್ನ ನಡೆಸುತ್ತೇವೆ. ಅಗತ್ಯ ಬಿದ್ದರೆ ನಾಗರಹೊಳೆ ಭಾಗದಿಂದ ಪರಿಣಿತರ ತಂಡ ಕರೆಸಿ ಕಾರ್ಯಾಚರಣೆ ನಡೆಸಲಾಗುವುದು.
-ಮಂಜುನಾಥ ಎನ್.
ವಲಯ ಅರಣ್ಯಧಿಕಾರಿ, ಸುಳ್ಯ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.