ಎಲಿಮಲೆ ಶಾಲೆ: ಬಹುಮತ ಸಿಗದೆ ಸಮ್ಮಿಶ್ರ ಸರಕಾರಕ್ಕೆ ಜೈ!
Team Udayavani, Jun 17, 2018, 12:50 PM IST
ಸುಳ್ಯ : ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸಿದ್ದು ಮೂವರು. ಅವರ್ಯಾರಿಗೂ ಬಹುಮತ ಸಿಗಲಿಲ್ಲ. ಕೊನೆಗೆ ಸ್ಪರ್ಧಿಗಳಿಬ್ಬರ ಮಧ್ಯೆ ಪರಸ್ಪರ ಒಮ್ಮತ ಏರ್ಪಟ್ಟು ಸಮ್ಮಿಶ್ರ ಸರಕಾರಕ್ಕೆ ಜೈ ಅಂದು ಬಿಟ್ಟರು! ಇದು ಯಾವುದೋ ವಿಧಾನಸಭೆ ಅಥವಾ ಪಂಚಾಯತ್ ಮಟ್ಟದಲ್ಲಿ ನಡೆದ ಚುನಾವಣೆಯೊಂದರಲ್ಲಿ ಆದ ಬೆಳವಣಿಗೆ ಅಲ್ಲ. ಶಾಲೆಯೊಂದರ ಮಂತ್ರಿ ಮಂಡಲಕ್ಕೆ ನಡೆದ ಚುನಾವಣೆ ಫಲಿತಾಂಶವಿದು!
ಎಲಿಮಲೆ ಜ್ಞಾನದೀಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶೇಷ, ವಿಶಿಷ್ಟ ರೀತಿಯಲ್ಲಿ ಮಂತ್ರಿಮಂಡಲ ರಚಿಸಲಾಯಿತು. ಮುಖ್ಯಮಂತ್ರಿ ಸ್ಥಾನಕ್ಕೆ ಚುನಾವಣೆ, ಅಧಿಕಾರ ಹಂಚಿಕೆ ನಡೆದು ಗಮನ ಸೆಳೆಯಿತು. ಇಡೀ ವ್ಯವಸ್ಥೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆಸಲು ಇಲ್ಲಿನ ಶಿಕ್ಷಕ ವರ್ಗ ಸಿಬಂದಿಯಾಗಿ ಕರ್ತವ್ಯ ನಿರ್ವಹಿಸಿದರು.
ಮತ ನೀಡಲು ಪ್ರಚಾರ
ಮೂವರು ವಿದ್ಯಾರ್ಥಿಗಳು ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರಿಗೆ ಚಿಹ್ನೆ ನೀಡಲಾಯಿತು. ತನ್ನ ಬೆಂಬಲಿಗರೊಂದಿಗೆ ಎಲ್ಲ ತರಗತಿಯಲ್ಲಿ ಸಂಚರಿಸಿ ಮತ ಚಲಾಯಿಸುವಂತೆ ಪ್ರಚಾರ ನಡೆಸಿದರು. ಮತ ಚಲಾವಣೆಗೆ ಗುರುತಿನ ಚೀಟಿ ನೀಡಲಾಯಿತು. ಅನಂತರ ರಹಸ್ಯ ಮತದಾನ ನಡೆಯಿತು.
ಸಮ್ಮಿಶ್ರ ಸರಕಾರ..!
ಮತದಾನದ ಬಳಿಕ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಮೂವರು ಸ್ಪರ್ಧಿಗಳ ಪೈಕಿ ಯಾರಿಗೂ ಬಹುಮತ ಸಿಗದೆ ಅತಂತ್ರ ಸರಕಾರ ರಚನೆಯಾಯಿತು. ಈ ವೇಳೆ ಸ್ಪರ್ಧಿಗಳ ಪೈಕಿ ಹತ್ತನೇ ತರಗತಿಯ ವೀಕ್ಷಿತಾ ಮತ್ತು ಸ್ನೇಹಾ ಅವರಿಬ್ಬರು ಪರಸ್ಪರ ಒಪ್ಪಂದ ಮಾಡಿಕೊಂಡು, ಬಹುಮತ ಸಾಬೀತು ಪಡಿಸಿದರು. ಇಲ್ಲಿ ಒಬ್ಬ ಅಭ್ಯರ್ಥಿ ಮತ್ತೊಬ್ಬ ಅಭ್ಯರ್ಥಿಗೆ ತನಗೆ ಸಿಕ್ಕ ಮತಗಳ ಬೆಂಬಲ ವ್ಯಕ್ತಪಡಿಸಿ, ಬಹುಮತ ಶ್ರುತಪಡಿಸಿದರು. ಕೊನೆಗೆ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂತು.
ಅಧಿಕಾರ ಹಂಚಿಕೆ
ಮೊದಲ ಅವಧಿಯಲ್ಲಿ ವೀಕ್ಷಿತ್ ಎಂ.ಎನ್. ಮುಖ್ಯಮಂತ್ರಿಯಾದರೆ, ಎರಡನೆ ಅವಧಿಗೆ ಸ್ನೇಹಾ ಕೆ.ಎಂ. ಅವರು ಮುಖ್ಯ ಮಂತ್ರಿ ಆಗಿ ಕಾರ್ಯ ನಿರ್ವಹಿಸಲು ನಿರ್ಧರಿಸಲಾಯಿತು. ಪ್ರಥಮ ಅವಧಿಯಲ್ಲಿ ಸ್ನೇಹಾ ಅವರಿಗೆ ಗೃಹಮಂತ್ರಿ ಜವಾಬ್ದಾರಿ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದೂ ಆಯಿತು.
ಮಂಗಳವಾರ ಪ್ರಮಾಣವಚನ
ನೂತನ ಮುಖ್ಯಮಂತ್ರಿ ಮಂಗಳವಾರ ಪ್ರಮಾಣ ವಚನ ಮಾಡುತ್ತಾರೆ. ಇಲ್ಲಿ ಮುಖ್ಯಮಂತ್ರಿ ತನ್ನ ಅಧಿಕಾರದ ವ್ಯಾಪ್ತಿಯೊಳಗೆ 330 ಶಾಸಕರ ಪೈಕಿ ತನಗೆ ಸೂಕ್ತ ಎನಿಸಿದವರಿಗೆ ಮಂತ್ರಿ ಸ್ಥಾನ ನೀಡುತ್ತಾರೆ. ಅದು ಅವರ ವಿವೇಚನೆಗೆ ಬಿಟ್ಟದ್ದು.
330 ಶಾಸಕರು..!
ಇಲ್ಲಿ 330 ವಿದ್ಯಾರ್ಥಿಗಳಿದ್ದಾರೆ. ಅವರೆ ಲ್ಲರೂ, ಒಂದೊಂದು ಕ್ಷೇತ್ರದ ಶಾಸಕರಂತೆ ಅವರನ್ನು ಗುರುತಿಸಲಾಯಿತು. ಅವರು
ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಆರಿಸುವ ಹಕ್ಕು ಹೊಂದಿದ್ದರು. ಇಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಚುನಾವಣೆ ನಿಗದಿ ಪಡಿಸಲಾಯಿತು. 330 ಮತಗಳ ಪೈಕಿ 200 ಮತ ಪಡೆದ ಅಭ್ಯರ್ಥಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಅರ್ಹತೆ ಹೊಂದಿರುತ್ತಾನೆ ಎಂಬ ಮಾನದಂಡ ರೂಪಿಸಲಾಗಿತ್ತು.
ಮಾದರಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯುವ ರೀತಿಯಲ್ಲಿಯೇ ಶಾಲೆಯಲ್ಲಿಯೂ ಮಂತ್ರಿ ಮಂಡಲ ರಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಅದಕ್ಕೆ ತಕ್ಕಂತೆ ಆಯ್ಕೆ ಪ್ರಕ್ರಿಯೆ ನಡೆಸಲು ಒತ್ತು ನೀಡಿದ್ದೇವು.
- ಗದಾಧರ ಬಾಳುಗೋಡು
ಮುಖ್ಯಗುರು
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.