‘ಉದ್ಯೋಗ ಖಾತರಿ: ಕೂಲಿ ಪಾವತಿಗೆ ತಗಾದೆ’
Team Udayavani, Sep 30, 2017, 4:33 PM IST
ಕಬಕ: ಉದ್ಯೋಗ ಖಾತರಿ ಯೋಜನೆ ಕೂಲಿ ಪಾತಿಸಲು ಅನಾವಶ್ಯಕ ತಗಾದೆ ಉಂಟಾಗಿದ್ದು, ಕಬಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಕೆಲಸವಾದರೂ ಗ್ರಾಮಸ್ಥರಿಗೆ ವೇತನ ನೀಡಲು ಸಾಧ್ಯವಾಗದೇ ಯೋಜನೆ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾ.ಪಂ. ಕಾರ್ಯದರ್ಶಿ ಚಂದ್ರಮತಿ ಹೇಳಿದರು.
ಬುಧವಾರ ನಡೆದ ಕಬಕ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಉದ್ಯೋಗ ಖಾತರಿ ಯೋಜನೆ ಯಲ್ಲಿ ತೋಟಗಾರಿಕೆ ನಡೆಸಲು ಮಾನವ ಶಕ್ತಿ ಬಳಸಿ ತೆಗೆದ ಗುಂಡಿಗಳನ್ನು ಯಂತ್ರಗಳಿಂದ ಮಾಡಲಾಗಿದೆ. ಕಾಮಗಾರಿ ಎಂಜಿನಿಯರ್ ವರದಿ ನೀಡದ್ದರಿಂದ ಯೋಜನೆಗಳ ಫಲಾನುಭವಿಗಳಿಗೆ ವೇತನ ಪಾವತಿಸಲು ಅಡ್ಡಿಯಾಗುತ್ತಿದೆ. ಇದರಿಂದಾಗಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಗೊಳಿಸಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಡ್ಡಿ ಯಾಗುತ್ತಿದೆ ಎಂದು ಅವರು ತಿಳಿಸಿದರು.
ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಪ್ರೀತಾ ಬಿ., ರೈತರು ತೋಟದಲ್ಲಿ ನೆಟ್ಟ ಗಿಡಗಳಿಗೆ ಎರಡು ದಿವಸವಾಗುವಾಗಲೇ ತಪಾಸಣೆಗೆ ಎಂಜಿನಿಯರ್ ಬರುತ್ತಾರೆ. ನೆಟ್ಟ ಗಿಡ ಬಾಡಿ ಹೋಗಿದೆ ಎಂದು ವರದಿ ನೀಡಿ ಕೂಲಿ ಪಾವತಿಸದಂತೆ ಮಾಡುತ್ತಾರೆ. ಗಿಡ ನೆಟ್ಟ ಎರಡು ದಿನಗಳಲ್ಲಿ ಗಿಡಗಳಿಗೆ ಜೀವ ಹಿಡಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇಂಥ ಕ್ರಮ ಸರಿಯಲ್ಲ. ಇದರಿಂದಾಗಿ ಉದ್ಯೋಗ ಖಾತರಿ ಯೋಜನೆ ಜನರಿಗೆ ತಲುಪುವುದಿಲ್ಲ ಎಂದರು.
ಎಂಜಿನಿಯರ್ ವಿರುದ್ಧ ಇಲಾಖೆಗೆ ದೂರು ನೀಡಲು ನಿರ್ಣಯಿಸಲಾಯಿತು. ವಿದ್ಯಾಪುರ ಹೈಸ್ಕೂಲ್ ಹತ್ತಿರದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಸಾರ್ವಜನಿಕ ರಸ್ತೆಯನ್ನು ಮುಚ್ಚಲಾಗಿದೆ ಇದರಿಂದಾಗಿ ಅ ಭಾಗದಲ್ಲಿ ರುವ ದಲಿತರ ಮನೆಗಳಿಗೆ ಮತ್ತು ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಹತ್ತಿರ ಹೋಗಲು ರಸ್ತೆ ಇಲ್ಲದಂತಾಗಿದೆ ಇದರ ಬಗ್ಗೆ ಇಲಾಖೆ ಗಮನಕ್ಕೆ ತರಲು ನಿರ್ಣಯಿಸಲಾಯಿತು.
ಮರಳು ಕೊರತೆಯಿಂದಾಗಿ ಗ್ರಾಮದಲ್ಲಿ ಬಸವ ವಸತಿ ಯೋಜನೆಯ ಮನೆ ನಿರ್ಮಾಣಕ್ಕೆ ತೊಂದರೆ ಉಂಟಾಗಿದೆ, ದುಬಾರಿ ದರದಲ್ಲಿ ಪೂರೈಕೆಯಾಗುತ್ತಿರುವ ಮರಳು ಪಡೆಯಲು ಬಡವರಿಗೆ ಸಾಧ್ಯವಾಗುತ್ತಿಲ್ಲ ಮುಕ್ತ ಮರಳು ಸಿಗುವಂತೆ ಮಾಡಲು ಇಲಾಖೆಗೆ ಪತ್ರ ಬರೆಯಲು ಸದಸ್ಯರು ಆಗ್ರಹಿಸಿದರು.
ಶೇ. 3 ಬಡ್ಡಿ ದರದಲ್ಲಿ ಮನೆಸಾಲಯೋಜನೆ ನಗರ ಪ್ರದೇಶಕ್ಕೆ ಮಾತ್ರ ಮೀಸಲಿಟ್ಟ ಕೇಂದ್ರ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಈ ಯೋಜನೆ ಗ್ರಾಮಾಂತರ ಭಾಗಕ್ಕೂ ವಿಸ್ತರಿಸಬೇಕೆಂದು ಸದಸ್ಯ ಶಾಬ ಕೆ. ಅವರು ಹೇಳಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಗೂ ಈ ಯೋಜನೆ ವಿಸ್ತರಿಸಲು ಕೇಂದ್ರ ಸರಕಾರಕ್ಕೆ ಮನವಿ ಕಳುಹಿಸುವ ಎಂದು ಸದಸ್ಯ ವಿನಯ ಕುಮಾರ್ ಕಲ್ಲೇಗ ಪ್ರತಿಕ್ರಿಯಿಸಿದರು. ಗರ್ಭಿಣಿ ಮಹಿಳೆಯರಿಗೆ ಮತ್ತು ಬಾಣಂತಿಯರಿಗೆ ಅಂಗನವಾಡಿಯಲ್ಲಿ ಆಹಾರ, ಔಷಧಗಳನ್ನು ನೀಡುವ ಮಾತೃಪೂರ್ಣ, ಯೋಜನೆ ಅ. 2ರಿಂದ ಜಾರಿಯಾಗಲಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ವರದಿ ನೀಡಬೇಕಿದೆ ಎಂದು ವಿದ್ಯಾಪುರ ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೀತಾ ಬಿ. ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್‌ನ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷೆ ಶಂಕರಿ ಜಿ. ಭಟ್, ಸದಸ್ಯರಾದ ಬಾಲಕೃಷ್ಣ ಗೌಡ ಕಲಮೆಮಜಲು, ಶಾಬ ಕೆ., ಪ್ರಶಾಂತ್ ಮುರ, ವಿನಯ ಕುಮಾರ್ ಕಲ್ಲೇಗ, ವಿಠ್ಠಲ ಗೌಡ ಬನ, ಭಾನುಮತಿ ಹೆಗ್ಡೆ, ಹರಿಣಾಕ್ಷಿ, ಮಾಲತಿ, ರೂಪಾ ಡಿ. ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಾಮತಿ ಸ್ವಾಗತಿಸಿ, ಅನುರಾಧ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.