ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರವೆಲ್ಲಿ?
Team Udayavani, Jan 5, 2018, 3:55 PM IST
ಆಲಂಕಾರು: ಆರೋಗ್ಯ ಸಚಿವರು ಜಿಲ್ಲೆಯ ಎಂಡೋ ಸಂತ್ರಸ್ತರಿಗೆ ಆಲಂಕಾರಿನಲ್ಲಿ ಶಾಶ್ವತ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸುವುದಾಗಿ ಭರವಸೆ ನೀಡಿ ವರ್ಷ ಐದು ಕಳೆಯುತ್ತಾ ಬಂತು. ಆದರೆ, ಅನುಷ್ಠಾನ ಮಾತ್ರ ಗಗನ ಕುಸುಮವಾಗಿದೆ. ಸಿದ್ದರಾಮಯ್ಯ ಸರಕಾರದ ಅಧಿಕಾ ರಾವಧಿಯ ಕೊನೆಯಲ್ಲಾದರೂ ಶಾಶ್ವತ ಪುನರ್ವಸತಿ ಕೇಂದ್ರಕ್ಕೆ ಅನುದಾನ ಬಿಡುಗಡೆ ಆಗುತ್ತದೆಯೇ? ಎಂದು ಸಂತ್ರಸ್ತರು ಕಾಯುತ್ತಿದ್ದಾರೆ.
ಸರಕಾರ ಎಂಡೋ ಸಂತ್ರಸ್ತರ ಸಮರ್ಪಕ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಲು ಆಸ್ಥೆ ವಹಿಸಿದಂತೆ ಕಾಣುತ್ತಿಲ್ಲ.
ಅಂದಿನ ಆರೋಗ್ಯ ಸಚಿವ ಯು.ಟಿ. ಖಾದರ್ ಅಧಿಕಾರ ಸ್ವೀಕರಿಸಿದ ಒಂದು ವಾರದಲ್ಲೇ ಎಂಡೋ ಸಂತ್ರಸ್ತರ ಶಾಶ್ವತ
ಪುನರ್ವಸತಿ ಕೇಂದ್ರ ಸ್ಥಾಪನೆಗಾಗಿ ಮೀಸಲಿಟ್ಟಿದ್ದ ಆಲಂಕಾರು ಗ್ರಾಮ ಪಂಚಾಯತ್ ಅಧೀನದ ಜಾಗಕ್ಕೆ ಭೇಟಿ ನೀಡಿ, ಶಾಶ್ವತ ಪುನರ್ವಸತಿ ಕೇಂದ್ರವನ್ನು ಒಂದು ವರ್ಷದೊಳಗೆ ಆರಂಭಿಸಲಾಗುವುದು ಎಂದಿದ್ದರು. ಆದರೆ, ಸರಕಾರದ ವತಿಯಿಂದ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಆರೋಗ್ಯ ಇಲಾಖೆಯ ಆಯುಕ್ತ ಎಂ.ಬಿ. ಪಾಟೀಲ್ ಅವರೂ ಇಲ್ಲಿಗೆ ಭೇಟಿ ನೀಡಿ, ಆಲಂಕಾರನ್ನು ಕೇಂದ್ರವಾಗಿರಿಸಿ
ಕೊಂಡು ದ.ಕ. ಜಿಲ್ಲೆಗೆ ಒಂದು ಶಾಶ್ವತ ಪುನರ್ವಸತಿ ಕೇಂದ್ರವನ್ನು ಶೀಘ್ರದಲ್ಲಿಯೆ ತೆರೆಯಲಾಗುವುದು. ಎಂಟು ಪಾಲನ ಕೇಂದ್ರಗಳನ್ನು ಬೇರೆ ಬೇರೆ ಕಡೆಗಳಲ್ಲಿ ತೆರೆಯಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, 8 ಪಾಲನ ಕೇಂದ್ರಗಳ ಬಗ್ಗೆಯೂ ಈಗ ಸರಕಾರ ಸೊಲ್ಲೆತ್ತುತ್ತಿಲ್ಲ.
ಸ್ಪಂದಿಸಿದ ಶೋಭಾ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಬಂಟ್ವಾಳ ತಾಲೂಕುಗಳ 92 ಗ್ರಾಮಗಳಲ್ಲಿ ಗೇರು ತೋಟಗಳಿಗೆ 1978ರಿಂದ 2000ದ ತನಕ ಎಂಡೋ ಸಲ್ಫಾನ್ ಸಿಂಪಡಣೆಯಾಗಿತ್ತು. ಇದರ ಪರಿಣಾಮ ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳ ಜನನವಾಯಿತು. ಇದರಿಂದ ನೊಂದವರಿಗೆ ಸೂಕ್ತ ಪರಿಹಾರ ದೊರಕಿಸಬೇಕು ಎನ್ನುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಎಂಡೋ ಸಂತ್ರಸ್ತರ ಹೊರಾಟ ಸಮಿತಿಯೊಂದು ಅಸ್ತಿತ್ವಕ್ಕೆ ಬಂದು ಅಂದಿನ ಮುಖ್ಯಮಂತ್ರಿ ಧರಂಸಿಂಗ್ ಅವರಿಗೆ ಮನವಿ ನೀಡುತ್ತಾ ಬಂದಿತ್ತು. ಈ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಆಗ ವಿಧಾನ ಪರಿಷತ್ ಸದಸ್ಯರಾಗಿದ್ದ ಶೋಭಾ ಕರಂದ್ಲಾಜೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೊಕ್ಕಡಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿ, ಸರಕಾರಕ್ಕೆ ವರದಿ ನೀಡಿದರು. ಆ ಬಳಿಕ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪ ಅವರು ಮನವಿಗೆ ಸ್ಪಂದಿಸುವಂತೆ ಮಾಡಿದ್ದರು.
ಬೆಳ್ತಂಗಡಿ ತಾಲೂಕಿನ ನಿಡ್ಲೆ, ಪಟ್ರಮೆ, ಕೊಕ್ಕಡ ಈ ಮೂರು ಗ್ರಾಮಗಳ ಮತ್ತು ಪುತ್ತೂರು ತಾಲೂಕಿನ ಆಲಂಕಾರು ಗ್ರಾಮದ ಒಂದು ಕುಟುಂಬ ಸೇರಿದಂತೆ 211 ಕುಟುಂಬಗಳ 213 ಮಂದಿಗೆ ತಲಾ 50 ಸಾವಿರ ರೂ.ಗಳಂತೆ ಪರಿಹಾರಧನ ವಿತರಿಸಿ ಕೊಕ್ಕಡದಲ್ಲಿ ಎಂಡೋ ಪಾಲನ ಕೇಂದ್ರವನ್ನೂ ಸ್ಥಾಪಿಸಲಾಯಿತು.
ಆಲಂಕಾರಿನಲ್ಲೂ ಎಂಡೋ ವಿರೋಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದು ಆಲಂಕಾರಿಗೂ ಎಂಡೋಪಾಲನ ಕೇಂದ್ರ
ಹಾಗೂ ಶಾಶ್ವತ ಪುನರ್ವಸತಿ ಕೇಂದ್ರದ ಬೇಡಿಕೆ ಇಡಲಾಗಿತ್ತು. ಆಲಂಕಾರಿನಲ್ಲಿ ಸೂಕ್ತ ಕಟ್ಟಡದ ಕೊರತೆಯ ಹಿನ್ನೆಲೆಯಲ್ಲಿ ಎಂಡೋ ಪಾಲನ ಕೇಂದ್ರವನ್ನು ಕೊಯಿಲ ರೇಶ್ಮೆ ಇಲಾಖೆ ಕಟ್ಟಡದಲ್ಲಿ ತೆರೆಯಲಾಯಿತು. ಡಿ.ವಿ. ಸದಾನಂದ ಗೌಡರ ಸೂಚನೆಯಂತೆ ಅಂದಿನ ಜಿಲ್ಲಾಧಿಕಾರಿ ಡಾ| ಚೆನ್ನಪ್ಪ ಗೌಡ ಆಲಂಕಾರಿನಲ್ಲಿ ಜಾಗ ಮೀಸಲಿರಿಸುವಂತೆ ಕಂದಾಯ ಅಧಿಕಾರಿಗಳಿಗೆ ಆದೇಶ ನೀಡಿದರು. ಮೀಸಲಿಟ್ಟ ಜಾಗವನ್ನು ಅಂದಿನ ಆರೋಗ್ಯ ಸಚಿವರು ಪರಿಶೀಲಿಸಿ, ವರ್ಷದ ಒಳಗೆ ಆಲಂಕಾರಿನಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದ್ದರು. ಆದರೆ ಇದರ ಬಗ್ಗೆ ಇದೀಗ ಯಾವುದೇ ಪ್ರಸ್ತಾವನೆಗಳಾಗಲಿ, ಚರ್ಚೆಗಳಾಗಲಿ ಸರಕಾರದ ಮುಂದೆ ಇಲ್ಲ ಎಂಬುದು ಗಮನಾರ್ಹ.
ಹಿತರಕ್ಷಣೆ ಹೇಗೆ ಸಾಧ್ಯ?
ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಎಂಡೋ ಸಂತ್ರಸ್ತರಿದ್ದರು. ಹಲವರನ್ನು ಸರ್ವೆ ಪಟ್ಟಿಯಿಂದ ಕೈಬಿಡಲಾಗಿದೆ. ಕೆಲವರಿಗೆ ಮಾತ್ರ ಎಂಡೋ ಮಾಸಾಶನ ಸಿಗುತ್ತಿದೆ. ಸರಕಾರ ಸಂತ್ರಸ್ತರಿಗೆ ಉಚಿತ ಪಡಿತರದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಅದೂ ಈಡೇರಿಲ್ಲ. ಇವರಿಗೆ ನ್ಯಾಯ ಸಿಗಬೇಕಾದರೆ ಹೋರಾಟ ಸಮಿತಿಗಳು ಇನ್ನಷ್ಟು ಸಕ್ರಿಯವಾಗಬೇಕಿದೆ. ಆದರೆ ಸರಕಾರ ಮಾಡುವ ಎಡವಟ್ಟು, ತಪ್ಪುಗಳನ್ನು ಸಮರ್ಥವಾಗಿ ಎದುರಿಸಿ ನ್ಯಾಯ ಒದಗಿಸಬೇಕಾದ ಹೋರಾಟ ಸಮಿತಿಗಳು ಸರಕಾರದ ತಪ್ಪುಗಳನ್ನು ಸಮರ್ಥನೆ ಮಾಡಿಕೊಂಡಲ್ಲಿ ಎಂಡೋ ಸಂತ್ರಸ್ತರ ಹಿತರಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.
ಸದಾನಂದ ಆಲಂಕಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.