![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, May 23, 2019, 6:00 AM IST
ಸಾಂದರ್ಭಿಕ ಚಿತ್ರ
ಕಡಬ: ರಾಜ್ಯ ಸರಕಾರ ಹಮ್ಮಿಕೊಂಡಿರುವ ಆಂಗ್ಲ ಮಾಧ್ಯಮ ಶಿಕ್ಷಣ ಯೋಜನೆಗೆ ಆಯ್ಕೆಯಾಗಿರುವ ಶಾಲೆಗಳ ಪಟ್ಟಿಯಿಂದ ಕಡಬದ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯನ್ನು ಕೈ ಬಿಡಲಾಗಿದೆ. ಆಂಗ್ಲ ಮಾಧ್ಯಮ ಶಿಕ್ಷಣದ ತರಬೇತಿಗಾಗಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಆರಂಭದ 3 ದಿನ ಈ ಶಾಲೆಯಿಂದ ಯಾವುದೇ ಶಿಕ್ಷಕರು ಹಾಜರಾಗದೇ ಇರುವುದರಿಂದ ಅವಕಾಶ ಕೈತಪ್ಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
“ಉದಯವಾಣಿ’ ಎಚ್ಚರಿಸಿತ್ತು
2019-20ನೇ ಸಾಲಿನಲ್ಲಿ ಸರಕಾರಿ ಶಾಲೆಗಳಲ್ಲಿ ಆರಂಭಗೊಳ್ಳಲಿರುವ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸುವ ಕುರಿತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ತರಬೇತಿಗಾಗಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ಕಡಬ ಸರಕಾರಿ ಮಾದರಿ ಶಾಲೆಯಿಂದಲೂ ತರಬೇತಿಗೆ ಓರ್ವ ಶಿಕ್ಷಕರನ್ನು ಆಯ್ಕೆ ಮಾಡಲಾಗಿತ್ತು. ಆದರೆ 15 ದಿನಗಳ ಕಾಲ ನಡೆಯಲಿದ್ದ ತರಬೇತಿ ಮೇ 13ರಂದು ಆರಂಭಗೊಂಡಿದ್ದರೂ ಕಡಬ ಶಾಲೆ ಶಿಕ್ಷಕರು ಹಾಜರಾಗಿರಲಿಲ್ಲ. ಶಿಕ್ಷಣ ಇಲಾಖೆ ಈ ಕುರಿತು ಶಾಲೆಗೆ ಮತ್ತು ತರಬೇತಿಗೆ ಆಯ್ಕೆಯಾಗಿದ್ದ ಶಿಕ್ಷಕರಿಗೆ ಎಚ್ಚರಿಕೆ ನೋಟಿಸ್ ನೀಡಿದ ಬಳಿಕ ಮೇ 16ರಿಂದ (ತರಬೇತಿ ಆರಂಭವಾಗಿ 3 ದಿನಗಳ ಬಳಿಕ) ನಿಯೋಜನೆಯಾಗಿದ್ದ ಶಿಕ್ಷಕಿ ತರಬೇತಿಗೆ ಹಾಜರಾಗಿದ್ದರು.. ಈ ಕಾರಣ ಕಡಬ ಸರಕಾರಿ ಮಾದರಿ ಶಾಲೆಗೆ ಸಿಗಬೇಕಿದ್ದ ಆಂಗ್ಲ ಮಾಧ್ಯಮ ತರಗತಿಯ ಅವಕಾಶ ಕೈತಪ್ಪುವ ಸಾಧ್ಯತೆಗಳ ಬಗ್ಗೆ “ಉದಯವಾಣಿ’ ಸುದಿನ ಮೇ 19ರ ಸಂಚಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.
ಡಿಡಿಪಿಐ ಜತೆ ಚರ್ಚೆ
ಬಡ ವರ್ಗದ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಸಿಗುವುದಿದ್ದರೆ ಅದು ಸ್ವಾಗತಾರ್ಹ. ಆದರೆ ಯಾರದೋ ಬೇಜವಾಬ್ದಾರಿಯಿಂದಾಗಿ ನೂತನ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಶಾಲೆ ಈ ಅವಕಾಶ ಕಳೆದುಕೊಂಡರೆ ಅದು ಬಡ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯ. ಡಿಡಿಪಿಐ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದು.
-ಪಿ.ಪಿ. ವರ್ಗೀಸ್ ಜಿ.ಪಂ. ಸದಸ್ಯರು, ಕಡಬ
ಅವಕಾಶ ಇನ್ನೂ ಇದೆ
ನಮಗೆ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಆಸಕ್ತಿ ಇದೆ, ಕನಿಷ್ಠ 30 ವಿದ್ಯಾರ್ಥಿಗಳನ್ನು 1ನೇ ತರಗತಿಗೆ ದಾಖಲಿಸಿಕೊಳ್ಳಲು ಬದ್ಧರಿದ್ದೇವೆ ಎಂದು ಕಡಬ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ವತಿಯಿಂದ ಬೇಡಿಕೆ ಸಲ್ಲಿಸಿದರೆ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಅನುಮತಿ ನೀಡುವ ಅವಕಾಶ ಇನ್ನೂ ಇದೆ. ಜಿಲ್ಲೆಯ 43 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಅನುಮತಿ ಸಿಕ್ಕಿದೆ. ಹಲವಾರು ಶಾಲೆಗಳಿಂದ ಬೇಡಿಕೆ ಇದೆ. ಆ ನಿಟ್ಟಿನಲ್ಲಿ ನಾವು ಹೆಚ್ಚುವರಿಯಾಗಿ ಇನ್ನಷ್ಟು ಶಾಲೆಗಳಿಗೆ ಅವಕಾಶ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
– ವೈ. ಶಿವರಾಮಯ್ಯ ಡಿಡಿಪಿಐ, ಮಂಗಳೂರು
You seem to have an Ad Blocker on.
To continue reading, please turn it off or whitelist Udayavani.