150 ಮನೆಗಳಲ್ಲಿ ಮಕ್ಕಳು ನೀಡಿದ ಸಸಿಗಳ ನಗು
Team Udayavani, Aug 2, 2018, 11:13 AM IST
ಮಹಾನಗರ: ಐವರು ಮಕ್ಕಳ ತಂಡ ಕಟ್ಟಿಕೊಂಡು ಪರಿಸರ ಸಂರಕ್ಷಣೆಯ ಕ್ರಾಂತಿಗಿಳಿದ ಹನಿ ನೇತೃತ್ವದ ‘ಗ್ರೀನ್ ವಾರಿಯರ್’ ಚಿಣ್ಣರ ತಂಡ ಎರಡು ವರ್ಷ ಗಳಿಂದ ಸುಮಾರು 150ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಸಸಿಗಳನ್ನು ವಿತರಿಸಿ ಪರಿಸರ ರಕ್ಷಣೆಯ ಅರಿವು ಮೂಡಿಸಿ ಮಾದರಿಯಾಗಿದೆ. ಕಳೆದ ರವಿವಾರ ಈ ತಂಡವು ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಯೋಜನ ಕಾರಿಯಾಗಿರುವ ಲಕ್ಷ್ಮಣ ಫಲವನ್ನು ಜಪ್ಪಿನಮೊಗರು ವ್ಯಾಪ್ತಿಯ ಸುಮಾರು ಇಪ್ಪತೈದು ಮನೆಗಳಿಗೆ ನೀಡಿದೆ.
ಬಿಸಿಲಿನ ಝಳದಿಂದಾಗಿ ಆಟವಾಡಲು ಸಾಧ್ಯವಾಗದೆ ಮನೆಗೆ ಹಿಂತಿರುಗಿದ ಹನಿ ಎಚ್. ಆರ್. ಎಂಬ ಹುಡುಗಿ ತಾಯಿ ಬಳಿ ಅವಲತ್ತುಕೊಳ್ಳುತ್ತಾಳೆ. ಮರ ಗಿಡ ಕಡಿಯುವುದರಿಂದ ಪರಿಸರ ನಾಶಗೊಂಡು ಬಿಸಿಲು ಹೆಚ್ಚುತ್ತಿದೆ ಎಂದು ತಾಯಿ ಹೇಳಿದಾಗ ಅದಕ್ಕೆ ಪರಿಹಾರ ಹುಡುಕಿ ಹೊರಟ ಹನಿ, ತನ್ನ ಸ್ನೇಹಿತರ ಬಳಿ ಚರ್ಚಿಸುತ್ತಾಳೆ. ಕೊನೆಗೂ ಐವರು ಚಿಣ್ಣರ ತಂಡ ಕಟ್ಟಿಕೊಂಡು ಎರಡು ವರ್ಷಗಳ ಹಿಂದೆ ತಮ್ಮದೇ ಮನೆಗಳ ಮುಖಾಂತರ ಆರಂಭಿಸಿದ ಈ ಅಭಿಯಾನ ಈಗ ಜಪ್ಪಿನಮೊಗರು ಪ್ರದೇಶದ 150 ಮನೆಗಳವರೆಗೆ ತಲುಪಿದೆ. ಈ ತಂಡದಲ್ಲೀಗ ಮೂವತ್ತು ಮಕ್ಕಳಿದ್ದಾರೆ. ಒಟ್ಟು ಐದು ಪ್ರಾಜೆಕ್ಟ್ಗಳನ್ನು ಈಗಾಗಲೇ ಮುಕ್ತಾಯಗೊಳಿಸಿದೆ.
ಮಕ್ಕಳ ಈ ಪರಿಸರಪ್ರಜ್ಞೆ ಹಾಗೂ ಮೊದಲ ಮತ್ತು ಎರಡನೇ ಪ್ರಾಜೆಕ್ಟ್ (ಸಸಿ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ) ಪೂರ್ಣಗೊಳಿಸಿದರ ಬಗ್ಗೆ ಕಳೆದ ವರ್ಷ ‘ಉದಯವಾಣಿ-ಸುದಿನ’ ವರದಿ ಮಾಡಿತ್ತು. ಈಗ ಉಳಿದ ಮೂರು ಪ್ರಾಜೆಕ್ಟ್ಗಳಾದ ಬಡವರಿಗೆ ನೆರವು, ಮಣ್ಣಿನ ದೀಪ ವಿತರಣೆ ಹಾಗೂ ಲಕ್ಷ್ಮಣ ಗಿಡ ವಿತರಣೆ ಮಕ್ಕಳು ಮಾಡಿದ್ದಾರೆ.
ಬಡವರಿಗೆ ನೆರವು
ಈ ನಡುವೆ ಕೆಲ ತಿಂಗಳ ಹಿಂದೆ ಇದೇ ಗ್ರೀನ್ ವಾರಿಯರ್ ತಂಡವು, ಸಾರ್ವಜನಿಕರು ಬಳಸಿ ಬಿಸಾಡಿದ ಧರಿಸಲು ಯೋಗ್ಯವಾದ ವಸ್ತುಗಳನ್ನು ಆಯ್ದು ತಂದು ಶುಚಿಗೊಳಿಸಿ ಬಡವರಿಗೆ ನೀಡುವ ಮೂಲಕ ಮಾದರಿಯಾಗಿದೆ. ಪರಿಣಾಮ ಬೈಕಂಪಾಡಿಯ ಕಡು ಬಡವರು ವಾಸಿಸುವ ಪ್ರದೇಶವೊಂದಕ್ಕೆ ತೆರಳಿ ಅವರಿಗೆ ತಾವು ಸಂಗ್ರಹಿಸಿದ ಧರಿಸಲು ಯೋಗ್ಯವಾದ ವಸ್ತುಗಳನ್ನು ವಿತರಿಸಿದ್ದಾರೆ.
ಮಣ್ಣಿನ ದೀಪದೊಂದಿಗೆ ದೀಪಾವಳಿ
ವಿಶೇಷವೆಂದರೆ ಪರಿಸರಸ್ನೇಹಿ ದೀಪಾವಳಿಯನ್ನು ಆಚರಿಸಬೇಕೆಂಬ ನಿಟ್ಟಿನಲ್ಲಿ ತಮಗೆ ಹೆತ್ತವರು ನೀಡಿದ ಪಾಕೆಟ್ ಮನಿಯನ್ನೇ ಉಳಿಸಿಕೊಂಡು ಕಳೆದ ವರ್ಷ ದೀಪಾವಳಿಗೆ ಮನೆ ಮನೆಗೆ ತೆರಳಿ ಸುಮಾರು ಅರುವತ್ತು ಮಣ್ಣಿನ ದೀಪ ವಿತರಿಸಿದ್ದಾರೆ. ಜತೆಗೆ ಪಟಾಕಿ ಸಿಡಿಸುವುದರಿಂದ ಪ್ರಕೃತಿ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಅರಿವು ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ. ಮಕ್ಕಳ ಪರಿಸರ ಪ್ರಜ್ಞೆಗೆ ಮನಸೋತ ಜಪ್ಪಿನಮೊಗರು ಪ್ರದೇಶದ ಹಲವು ಮನೆಮಂದಿ ಪರಿಸರಸ್ನೇಹಿ ದೀಪಾವಳಿ ಆಚರಿಸಿರುವುದು ವಿಶೇಷ.
ಸಾರ್ಥಕ ಕೆಲಸ
ಅದೆಷ್ಟೋ ಮಂದಿ ಹೊಸ ಬಟ್ಟೆ, ಶೂ, ಫ್ಯಾನ್ಸಿ ಆಭರಣಗಳನ್ನೆಲ್ಲ ಖರೀದಿಸಿ ಒಂದೆರಡು ಬಾರಿ ಬಳಸಿ ಬಿಸಾಡುತ್ತಾರೆ. ಆದರೆ ತೀರಾ ಬಡ ವರ್ಗದವರಿಗೆ ಅಂತಹವುಗಳನ್ನು ಬಳಸಬೇಕೆಂಬ ಆಸೆ ಇದ್ದರೂ, ಖರೀದಿಸಲು ಹಣವಿರುವುದಿಲ್ಲ. ಶಾಲೆಗೆ ಹೋಗುವಾಗ ಅಥವಾ ಹೊರಗಡೆ ಹೋದಾಗ ಧರಿಸಲು ಯೋಗ್ಯವಾದ ಬಟ್ಟೆ ಅಥವಾ ಇತರ ವಸ್ತುಗಳು ಕಂಡರೆ ಅದನ್ನು ಆಯ್ದು ತಂದು ಸಂಗ್ರಹಿಸಿಡುತ್ತೇವೆ. ಅದನ್ನು ಶುಚಿಗೊಳಿಸಿ ಅರ್ಹರಿಗೆ ನೀಡುತ್ತೇವೆ. ಈ ಕೆಲಸದಿಂದ ಖುಷಿಯಾಗುತ್ತಿದೆ.
– ಹನಿ ಎಚ್. ಆರ್.
ಹೆಮ್ಮೆಯ ವಿಚಾರ
ಮಕ್ಕಳ ಕೆಲಸಕ್ಕೆ ಎಲ್ಲ ಹೆತ್ತವರು ಪ್ರೋತ್ಸಾಹ ನೀಡುತ್ತಿದ್ದಾರೆ. ಬಡವರಿಗೆ ಸಹಾಯ ಮಾಡುವ ಗುಣ ಅವರಿಗೆ ಒಲಿದದ್ದು, ಪ್ರತಿ ತಂದೆ ತಾಯಿಯೂ ಹೆಮ್ಮೆ ಪಡುವ ವಿಚಾರವೇ. ಅವರ ಪರಿಸರ ಪ್ರಜ್ಞೆ ಮೆಚ್ಚುವಂತಹದ್ದು.
– ಪವಿತ್ರಾ ರತನ್,
ಹನಿ ಅವರ ತಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.